ಬುಧವಾರ, ಜೂನ್ 16, 2021
21 °C

ಕಾಯಂ ತಹಸೀಲ್ದಾರ್: ಗ್ರಾಮಸಭೆ ಆಗ್ರಹ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಡಬ (ಉಪ್ಪಿನಂಗಡಿ):  ಕಡಬ ನಾಡ ಕಚೇರಿಯಲ್ಲಿ ಕಾಯಂ ತಹಸೀಲ್ದಾರ್ ಇಲ್ಲದೆ ಜನಸಾಮಾನ್ಯರು ತೀವ್ರ ಸಮಸ್ಯೆ ಎದುರಿಸುವಂತಾಗಿದೆ. ಗ್ರಾಮಸ್ಥರ ಅನುಕೂಲವಾಗುವಂತೆ ಶೀಘ್ರ ಇಲ್ಲಿಗೆ ಪೂರ್ಣಕಾಲಿಕ ತಹಸೀಲ್ದಾರರನ್ನು ನೇಮಕ ಮಾಡುವಂತೆ ಗ್ರಾಮಸ್ಥರು ಗ್ರಾಮ ಸಭೆಯಲ್ಲಿ ಆಗ್ರಹಿಸಿದ್ದಾರೆ.ಕಡಬ ಗ್ರಾಮ ಪಂಚಾಯಿತಿ ಅಧ್ಯಕ್ಷೆ ನೀಲಾವತಿ ಶಿವರಾಮ ಅಧ್ಯಕ್ಷತೆಯಲ್ಲಿ ಸೋಮವಾರ ನಡೆದ ಗ್ರಾಮ ಸಭೆಯಲ್ಲಿ ಈ ಸಂಬಂಧ ನಿರ್ಣಯ ಅಂಗೀಕರಿಸಲಾಯಿತು.ಸಭೆಯಲ್ಲಿ ವಿಷಯ ಪ್ರಸ್ತಾಪಿಸಿದ ಗ್ರಾಮಸ್ಥರು ಇಲ್ಲಿ ಕಾಯಂ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ತಹಶೀಲ್ದಾರರನ್ನು ಏಕಾಏಕಿ ವರ್ಗಾವಣೆ ಮಾಡಿದ್ದು, ಈಗ ಪ್ರಭಾರ ನೆಲೆಯಲ್ಲಿ ನಿಯೋಜಿಸಲಾಗಿದೆ. ಇದರಿಂದ ಹೋಬಳಿಯ ಜನತೆಗೆ ತೊಂದರೆ ಉಂಟಾಗುತ್ತಿದೆ ಅಲ್ಲದೆ ಕಡಬ ನಾಡಕಚೇರಿಯಲ್ಲಿ ಗ್ರಾಮಕರಣಿಕರನ್ನು ಕೂರಿಸಿ ಕೆಲಸ ಮಾಡಲಾಗುತ್ತಿದೆ. ಇದರಿಂದ ಅವರಿಗೆ ನಾಡಕಚೇರಿಯ ಕೆಲಸವೂ ಇಲ್ಲ. ಇತ್ತ ಗ್ರಾಮದ ಕೆಲಸವೂ ಇಲ್ಲ ಎಂಬಂತಾಗಿದೆ. ಮುಂದಿನ ದಿನಗಳಲ್ಲಿ ಕಡಬಕ್ಕೆ ಕಾಯಂ ತಹಸೀಲ್ದಾರ್ ನೇಮಕವಾಗದಿದ್ದರೆ ಉಗ್ರ ಹೋರಾಟ ಮಾಡುತ್ತೇವೆ ಎಂದು ಗ್ರಾಮಸ್ಥರು ಸಭೆಯಲ್ಲಿ ಎಚ್ಚರಿಕೆ ನೀಡಿದರು.ನಾಮಫಲಕದಲ್ಲಿ ಮಾತ್ರ!:

ಕಡಬ ಸಮುದಾಯ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ತ್ರಿಮೂರ್ತಿ ಇಲಾಖೆಯ ಮಾಹಿತಿ ನೀಡುತ್ತಿದ್ದ ವೇಳೆ ಮಾತನಾಡಿದ ಗ್ರಾಮಸ್ಥರು ಸಮುದಾಯ ಆರೋಗ್ಯ ಕೇಂದ್ರ ನಾಮಫಲಕದಲ್ಲಿ ಮಾತ್ರ ಮೇಲ್ದರ್ಜೆಗೇರಿದೆ. ಇಲ್ಲಿ ಸಿಬ್ಬಂದಿ ಕೊರತೆಯಿದೆ. ಮಾತ್ರವಲ್ಲ, ಶಸ್ತ್ರಚಿಕಿತ್ಸೆಗೆ ಬೇಕಾದ ಸೌಲಭ್ಯಗಳೂ ಇಲ್ಲ ಎಂಬ ದೂರಿದರು.ತಾಲ್ಲೂಕು ಕೇಂದ್ರವಾಗಲಿರುವ ಕಡಬದಲ್ಲಿ ಪದವಿ ಕಾಲೇಜು, ತಾಂತ್ರಿಕ ಕಾಲೇಜು ತೆರೆಯಬೇಕು. ಈಗಾಗಲೇ ಈ ಭಾಗದ ವಿದ್ಯಾರ್ಥಿಗಳು ಉಪ್ಪಿನಂಗಡಿ, ಸುಬ್ರಹ್ಮಣ್ಯವನ್ನು ಅವಲಂಭಿಸುವಂತಾಗಿದೆ ಎಂಬ ಕುಂದುಕೊರತೆ  ಮೇರೆಗೆ ಕಾಲೇಜು ಮಂಜೂರಾತಿ ಮಾಡುವಂತೆ ಸರ್ಕಾರವನ್ನು ಕೋರಿ ನಿರ್ಣಯ ಅಂಗೀಕರಿಸಲಾಯಿತು.ಪಂಚಾಯತ್ ರಾಜ್ ಎಂಜಿನಿಯರಿಂಗ್ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪುಟ್ಟರಾಜು ನೋಡೆಲ್ ಅಧಿಕಾರಿಯಾಗಿದ್ದರು. ಜಿಲ್ಲಾ ಪಂಚಾಯಿತಿ ಸದಸ್ಯೆ ಕುಮಾರಿ ವಾಸುದೇವನ್, ತಾಪಂ ಸದಸ್ಯೆ ಮೀನಾಕ್ಷಿ, ಗ್ರಾಮ ಪಂಚಾಯಿತಿ ಸದಸ್ಯರಾದ ಫಝಲ್, ಸುದರ್ಶನ್, ನಾರಾಯಣ ಪೂಜಾರಿ, ಜನಾರ್ದನ ಗೌಡ, ಕೆ.ಎಂ.ಹನೀಫ್, ಗ್ರಾಪಂ. ಅಭಿವೃದ್ಧಿ ಅಧಿಕಾರಿ ಚೆನ್ನಪ್ಪ ಗೌಡ ಮಾತನಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.