ಗುರುವಾರ , ನವೆಂಬರ್ 14, 2019
22 °C

ಕಾಯಕಲ್ಪಕ್ಕಾಗಿ ಕಾದಿರುವ ಹೊಸ ರಾಮಾಪುರ ಗ್ರಾಮ

Published:
Updated:

ಗಜೇಂದ್ರಗಡ: ಜನಪ್ರತಿನಿಧಿಗಳಿಲ್ಲದ ಗ್ರಾಮಗಳು ಕನಿಷ್ಠ ಅಭಿವೃದ್ಧಿಯಿಂದ ವಂಚಿತವಾಗುತ್ತವೆ ಎಂಬುದಕ್ಕೆ ಹೊಸ ರಾಮಾಪುರ ಗ್ರಾಮವೇ ಸಾಕ್ಷಿ..!  ಗಜೇಂದ್ರಗಡದಿಂದ ಕೇವಲ 6 ಕಿ.ಮೀ ದೂರದಲ್ಲಿರುವ ಹೊಸ ರಾಮಾಪುರ ಗ್ರಾಮ ಇಂದಿಗೂ ಸರ್ಕಾರದ ಕನಿಷ್ಠ ಅಭಿವೃದ್ಧಿ ಕಾರ್ಯಗಳಿಂದ ದೂರ ಉಳಿದು ಕುಗ್ರಾಮದಂತೆ ನರಳುತ್ತಿದೆ. ಪರಿಣಾಮ ಗ್ರಾಮಸ್ಥರು ಹೊರ ಜಗತ್ತಿನ ಸಂಪರ್ಕದಿಂದ ಬಹು ದೂರ ಉಳಿದು ನರಕ ಸದೃಶ್ಯದ ಬದುಕು ಸವೆಸುತ್ತಿರುವುದು ವಿಪರ್ಯಾಸವೇ ಸರಿ. ಕುರುಬ ಸಮುದಾಯಕ್ಕೆ ಸೇರಿದ ಕುಟುಂಬಗಳೇ ನೆಲೆಸಿರುವ ಹೊಸ ರಾಮಾಪುರದಲ್ಲಿ 55 ಕುಟುಂಬಗಳಿದ್ದು, 280 ಜನಸಂಖ್ಯೆ ಹೊಂದಿದೆ. ತಲೆಮಾರುಗಳಿಂದಲ್ಲೂ ಕನಿಷ್ಠ ನಾಗರಿಕ ಸೌಕರ್ಯಗಳಿಗಾಗಿ ಪರಿತಪಿಸುತ್ತಾ ಬಂದಿರುವ ಗ್ರಾಮಸ್ಥರಿಗೆ ಇಂದಿಗೂ ಗಟಾರು, ಸಿ.ಸಿ ರಸ್ತೆ, ಪ್ರಾಥಮಿಕ ಆರೋಗ್ಯ ಕೇಂದ್ರ, ಸಮರ್ಪಕ ಬೀದಿ ವಿದ್ಯುತ್ ದ್ವೀಪ, ಸಾರ್ವಜನಿಕ ನಲ್ಲಿ, ಸಾರಿಗೆ ವ್ಯವಸ್ಥೆ, ಮಹಿಳಾ ಸಮುದಾಯ ಶೌಚಾಲಯ ಸೇರಿದಂತೆ ಮುಂತಾದ ಕನಿಷ್ಠ ಸೌಲಭ್ಯಗಳ ಕೊರತೆಯಿದೆ.ಶಾಪವಾದ ಅನಕ್ಷರತೆ: ಜೀವನಾವಶ್ಯಕ ವಸ್ತುಗಳನ್ನು ಪಡೆಯಲು ಕಾಲ್ನಡಿಗೆಯಲ್ಲಿ ಕನಿಷ್ಠ ಮೂರು ಆರು ಕಿ.ಮೀ ಕ್ರಮಿಸಿ ರಾಮಾಪುರ ಇಲ್ಲವೇ ಆರು ಕಿ.ಮೀ ಕ್ರಮಿಸಿ ಗಜೇಂದ್ರಗಡಕ್ಕೆ ಹೋಗಿ ತರಬೇಕಾದ ಅನಿವಾರ್ಯತೆ ಗ್ರಾಮಸ್ಥರಿಗೆ ತಲೆಮಾರುಗಳಿಂದ ಇದೆ. ನಿವಾರಣೆಯಾಗದ ಸಮಸ್ಯೆಗಳು: ಗ್ರಾಮದಿಂದ ಮೂರು ಕಿ.ಮೀ ಅಂತರದ ರಾಮಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಹೊಸ ರಾಮಾಪುರ ಗ್ರಾಮದಲ್ಲಿ ಅನಿರೀಕ್ಷಿತವಾಗಿ ಉಂಟಾಗುವ  ವಿದ್ಯುತ್, ಕುಡಿಯುವ ನೀರಿನ ಸಮಸ್ಯೆ ತಲೆದೊರಿದರೆ ತಕ್ಷಣ ಸ್ಪಂದನೆ ದೊರೆಯುವುದಿಲ್ಲ. ಕನಿಷ್ಠ ಆರೇಳು ದಿನಗಳಾದರೂ ರಾಮಾಪುರ ಗ್ರಾ.ಪಂ ಗೆ ಅಲೆದಾಡಿದ ಬಳಿಕ ಕಾಟಾಚಾರದ ಸ್ಪಂದನೆ ದೊರಕುತ್ತದೆ.ಶಾಸಕ ಕಳಕಪ್ಪ ಬಂಡಿ ಅವರು ಗ್ರಾಮಕ್ಕೆ ರಸ್ತೆ ಭಾಗ್ಯವನ್ನು ಕರುಣಿಸಿದ್ದನ್ನು ಹೊರತು ಪಡಿಸಿದರೆ, ತಾಲ್ಲೂಕಿನ ಯಾವೊಬ್ಬ ಜನಪ್ರತಿನಿಧಿಯೂ ಗ್ರಾಮಕ್ಕೆ ಏನನ್ನು ಕೊಡುಗೆಯಾಗಿ ನೀಡಿಲ್ಲ. ಹೀಗಾಗಿಯೇ ಗ್ರಾಮ ಇಂದಿಗೂ ಕುಗ್ರಾಮವಾಗಿಯೇ ಉಳಿದಿದೆ ಎನ್ನುತ್ತಾರೆ ದ್ಯಾಮಣ್ಣ ಸಕ್ರಿ, ಮರಿಯಪ್ಪ ದೋಣಿ.     ದಕ್ಕದ ಗ್ರಾ.ಪಂ ಸದಸ್ಯ ಸ್ಥಾನ: ತಲೆಮಾರುಗಳಿಂದಲ್ಲೂ ಹೊಸ ರಾಮಾಪುರ ಗ್ರಾಮಕ್ಕೆ ಗ್ರಾ.ಪಂ ಸದಸ್ಯ ಸ್ಥಾನ ದೊರೆತಿಲ್ಲ. ಒಂದು ಪುಟ್ಟ ಗ್ರಾಮ ವಾರ್ಡ್ ಆಗಿ ಹೊರ ಹೊಮ್ಮಬೇಕಾದರೆ ಕನಿಷ್ಠ 400 ಜನ ಸಂಖ್ಯೆ ಹೊಂದಿರಬೇಕು. ಆದರೆ, ಹೊಸ ರಾಮಾಪುರ 280 ಜನ ಸಂಖ್ಯೆ ಹೊಂದಿದೆ. ಹೀಗಾಗಿ ಗ್ರಾಮಕ್ಕೆ ವಾರ್ಡ್ ಜೊತೆಗೆ ಸದಸ್ಯ ಸ್ಥಾನವು ಮರೀಚಿಕೆಯಾಗಿಯೇ ಉಳಿದಿದೆ.ಗ್ರಾ.ಪಂ ಚುನಾವಣೆ ಸಂದರ್ಭದಲ್ಲಿ ಹೊಸ ರಾಮಾಪುರ ಗ್ರಾಮಸ್ಥರು ಒಮ್ಮತದ ಅಭ್ಯರ್ಥಿಗಳನ್ನು ಚುನಾವಣೆ ಕಣಕಿಳಿಸಲು ಮುಂದಾದರೂ ಹೊಸ ರಾಮಾಪುರ ಗ್ರಾಮಸ್ಥರಿಗೆ ರಾಮಾಪುರ ಗ್ರಾಮಸ್ಥರು ಮತಗಳನ್ನು ನೀಡುವುದಿಲ್ಲ.ಪರಿಣಾಮ  ಅಭ್ಯರ್ಥಿಗಳಿಗೆ ಸೋಲು ಕಟ್ಟಿಟ ಬುತ್ತಿ ಎಂಬ ಕಹಿ ಸತ್ಯವನ್ನು ಅರಿತ ಗ್ರಾಮಸ್ಥರು ಪ್ರತಿ ಬಾರಿ ಗ್ರಾ.ಪಂ ಚುನಾವಣೆಗಳು ಎದುರಾದಾಗಲ್ಲೂ `ಈ ಬಾರಿಯಾದರೂ ನಾವು ನಿಮಗೆ ಮತ ನೀಡುತ್ತೆವೆ. ನಮ್ಮ ಗ್ರಾಮಕ್ಕೆ ಏನಾದ್ರು ಕೆಲಸ ಮಾಡಿಕೊಡ್ರಿ... ಎಂದು ಅಂಗಲಾಚಿ ಬೇಡಿಕೊಂಡಾಗ ಆಯ್ತಿ ಎನ್ನುವ ರಾಮಾಪುರ ಗ್ರಾಮದ ಅಭ್ಯರ್ಥಿಗಳು ಚುನಾವಣೆಯಲ್ಲಿ ಗೆಲುವು ಸಾಧಿಸಿದ ಬಳಿಕ ಹೊಸ ರಾಮಾಪುರನತ್ತ ತಿರುಗಿ ನೋಡುವುದಿಲ್ಲ ಎಂಬುದು ಯಮನಪ್ಪ ಕೊಡಿಕೆರಿ, ರಾಮಣ್ಣ ದೋಣಿ ಅಳಲು.

 

ಪ್ರತಿಕ್ರಿಯಿಸಿ (+)