ಭಾನುವಾರ, ಮೇ 22, 2022
23 °C

ಕಾಯಕಲ್ಪಕ್ಕೆ ಕಟಿಬದ್ಧವಾದ ಮಾದರಿ ವ್ಯವಸ್ಥೆ!

ತುರುವೇಕೆರೆ ಪ್ರಸಾದ್ Updated:

ಅಕ್ಷರ ಗಾತ್ರ : | |

ತುಮಕೂರು ಜಿಲ್ಲೆ ತುರುವೇಕೆರೆಯಲ್ಲಿ ಕಳೆದ ಸೆಪ್ಟೆಂಬರ್‌ನಲ್ಲಿ ರಸ್ತೆ ಸಾರಿಗೆ ಸಂಸ್ಥೆಯ ನೂತನ ಬಸ್ ನಿಲ್ದಾಣ ಉದ್ಘಾಟನೆಯಾಯಿತು. ಇದರ ನಿರ್ಮಾಣ ವೆಚ್ಚ ರೂ. 1.32 ಕೋಟಿ. ನೆನೆಗುದಿಗೆ ಬಿದ್ದಿದ್ದ ಈ ಭಾಗದ ಜನರ ದಶಕಗಳ ಕನಸೊಂದು ನನಸಾದ ತೃಪ್ತಿ ತಂದಿತು ಎಂಬುದೇನೋ ನಿಜ. ಆದರೆ ಘಟಕದಲ್ಲಿನ  95 ಬಸ್ಸುಗಳು 92 ಮಾರ್ಗಗಳಲ್ಲಿ ಸಂಚರಿಸುತ್ತಿದ್ದರೂ ಇಲ್ಲಿನ ರಸ್ತೆ ಸಾರಿಗೆ ಸಂಸ್ಥೆಯ ಘಟಕ ನಿರಂತರ ನಷ್ಟದಲ್ಲಿತ್ತು. ನೂತನ ಹೈಟೆಕ್ ಬಸ್ ನಿಲ್ದಾಣ ನಿರ್ಮಾಣವಾದ ನಂತರ ಪರಿಸ್ಥಿತಿ ಸುಧಾರಿಸಬಹುದೇನೋ ಎಂದು ಭಾವಿಸಲಾಗಿತ್ತು. ವಿಪರ್ಯಾಸವೆಂದರೆ ಹೊಸ ನಿಲ್ದಾಣ ಚಾಲನೆಗೊಂಡ ನಂತರ ನಷ್ಟದ ಪ್ರಮಾಣ ಹೆಚ್ಚುತ್ತಲೇ ಹೋಯಿತು. ಕಳೆದ ಆಗಸ್ಟ್‌ನಲ್ಲಿ ರೂ1.45 ಕೋಟಿಗಳಷ್ಟಿದ್ದ ಮಾಸಿಕ ಆದಾಯ, ಬಸ್‌ನಿಲ್ದಾಣ ಸ್ಥಳಾಂತರಗೊಂಡ ಸೆಪ್ಟೆಂಬರ್ ತಿಂಗಳಲ್ಲಿ ರೂ 1.37ಕೋಟಿಗೆ ಇಳಿದು ರೂ. 8ಲಕ್ಷ  ನಷ್ಟ ಅನುಭವಿಸಿತು. ಒಟ್ಟಾರೆ ಕಳೆದ ನವೆಂಬರ್‌ವರೆಗೆ ರೂ.58.22 ಲಕ್ಷ ನಷ್ಟ ಅನುಭವಿಸಿದ್ದ ಘಟಕ ಪ್ರತಿ ತಿಂಗಳೂ ನಷ್ಟದಲ್ಲಿಯೇ ನಡೆದು ಕಳೆದ ಫೆಬ್ರುವರಿಯ ವೇಳೆಗೆ ನೂತನ ಬಸ್ ನಿಲ್ದಾಣದ ನಿರ್ಮಾಣ ವೆಚ್ಚದಷ್ಟೇ ಅಂದರೆ ರೂ.1.32 ಕೋಟಿಗೆ ತಲುಪಿ  ಸಾರಿಗೆ ಇಲಾಖೆಯ ಅಧಿಕಾರಿಗಳು ತೀವ್ರ ಮುಜುಗರ ಅನುಭವಿಸುವಂತಾಯಿತು.ಆದಾಯದಲ್ಲಿನ ಕುಸಿತವೇ ಇದಕ್ಕೆ ಕಾರಣವಾಗಿತ್ತು. ‘ವೇಗದೂತ’ (ಎಕ್ಸ್‌ಪ್ರೆಸ್) ಗಳಿಂದ ಸಾಕಷ್ಟು ಆದಾಯವಿದ್ದರೂ ಸ್ಥಳೀಯ ಮಾರ್ಗಗಳಿಂದಲೇ ನಷ್ಟ ಉಂಟಾಗುತ್ತಿತ್ತು. ದಿನವಹಿ 14 ಸಾವಿರ ಕಿ.ಮೀ ಓಡಿಸಿದರೂ ಸಹ ಪರಿಸ್ಥಿತಿ ಲಾಭದಾಯಕವಾಗಿರಲಿಲ್ಲ.ಅದರಲ್ಲೂ 20 ಕಿ.ಮೀ. ವ್ಯಾಪ್ತಿಯ ಮಾರ್ಗಗಳಲ್ಲಿ ಅತಿ ಹೆಚ್ಚು ಅಂದರೆ ಪ್ರತಿ ಕಿ.ಮೀಗೆ ಶೇ. 2.59 ಕುಸಿತ ಉಂಟಾಗಿತ್ತು. ಬಸ್ ನಿಲ್ದಾಣ ಜನನಿಬಿಡ ಜಾಗದಿಂದ ದೂರಕ್ಕೆ ಸ್ಥಳಾಂತರಗೊಂಡು ಖಾಸಗಿ ಬಸ್‌ಗಳು ಪಟ್ಟಣದ ಮಧ್ಯ ಭಾಗದಲ್ಲೇ ನಿಲ್ಲುತ್ತಿದ್ದುದರಿಂದ ಜನ ಖಾಸಗಿ ಬಸ್‌ಗಳನ್ನು ಹತ್ತುತ್ತಿದ್ದರು. ಹಲವಾರು ವರ್ಷಗಳಿಂದ ಈ ಖಾಸಗಿ ಬಸ್ಸುಗಳು ಸಾರಿಗೆ ಸಂಸ್ಥೆ ಬಸ್‌ಗಳಿಗೆ ತೀವ್ರ ಸ್ಪರ್ಧೆಯೊಡ್ಡಿದ್ದವು. ದಿನವಹಿ ಆದಾಯ ಸಂಗ್ರಹದಲ್ಲಿ ಸಾರಿಗೆ ಸಂಸ್ಥೆಯನ್ನು ಹಿಂದಿಕ್ಕಿ ಏಕಸ್ವಾಮ್ಯ ಮೆರೆದಿದ್ದವು. ಪ್ರಯಾಣ ದರ ಕಡಿಮೆ ಮಾಡುವ ಮೂಲಕ ಸಾರಿಗೆ ಸಂಸ್ಥೆ ಬಸ್‌ಗಳಿಗೆ ದುಃಸ್ವಪ್ನವಾಗಿದ್ದವು. ಇದನ್ನು ಪೋಷಿಸಿಕೊಂಡು ಬಂದ ಒಂದು ವ್ಯವಸ್ಥಿತ ಲಾಬಿಯೇ ಇತ್ತು. ಗ್ರಾಮಾಂತರ ಪ್ರದೇಶದಲ್ಲಿ ಸಂಚರಿಸುವಂತೆ ಮಾರ್ಗಸೂಚಿ ನೀಡಿ ಪರವಾನಗಿ ನೀಡಿದ್ದರೂ ಸಹ ಯಾವುದೇ ಪ್ರತಿರೋಧವನ್ನು ಲೆಕ್ಕಿಸದೆ, ಕಾನೂನಿಗೆ ಸೊಪ್ಪು ಹಾಕದೆ ಖಾಸಗಿ ಬಸ್‌ಗಳು ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ಸಮಾನಾಂತರವಾಗಿ ತಮ್ಮ ಮಾರ್ಗಗಳನ್ನು ರೂಪಿಸಿಕೊಂಡಿದ್ದವು. ಇದರ ಜೊತೆಗೆ  ಆಟೋಗಳ ಅತಿಯಾದ ಹಾವಳಿ. ಬಹಳಷ್ಟು ಸರಕು ಸಾಗಣೆ ಆಟೋಗಳು ಅಕ್ರಮವಾಗಿ ಸುತ್ತಮುತ್ತಲ ಹಳ್ಳಿಗಳಿಗೆ ಜನರನ್ನು ತುಂಬಿಕೊಂಡು ದಿನಕ್ಕೆ ಹತ್ತಾರು ಟ್ರಿಪ್ ಓಡಿಸುತ್ತಿದ್ದವು. ಹಲವಾರು ಅಪಘಾತಗಳಾಗಿದ್ದರೂ,  ಸಹ ಇದು ನಿಯಂತ್ರಣಕ್ಕೆ ಬಂದಿರಲಿಲ್ಲ. ಈ ಎಲ್ಲಾ ಸಮಸ್ಯೆಗಳಿಂದ ಸಾರಿಗೆ ಸಂಸ್ಥೆ ತೀವ್ರ ನಷ್ಟ ಅನುಭವಿಸುವಂತಾಗಿತ್ತು. ಆದರೆ ಬೆಕ್ಕಿಗೆ ಗಂಟೆ ಕಟ್ಟುವವರಾರು ಎನ್ನುವುದೇ ಪ್ರಶ್ನೆಯಾಗಿತ್ತು.ಪತ್ರಿಕೆಯಲ್ಲಿ ಸಾರಿಗೆ ಸಂಸ್ಥೆಯ ಪರಿಸ್ಥಿತಿ ಬಗ್ಗೆ ಬಂದ ಲೇಖನ ವ್ಯವಸ್ಥೆಯ ಕಣ್ಣು ತೆರೆಸಿತು. ಸ್ಥಳೀಯ ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳು ನಾಗರಿಕರನ್ನು ಕರೆದು ಚರ್ಚೆ ನಡೆಸಿದರು. ಸಾರಿಗೆ ಸಂಸ್ಥೆಯ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಿ ಅದಕ್ಕೆ ಪುನಶ್ಚೇತನ ನೀಡಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಜೊತೆಯಲ್ಲಿ ನಗರಕ್ಕೆ ಹೊಸದೊಂದು ರೂಪ ಕೊಡಬೇಕೆಂಬ ನಿರ್ಧಾರಕ್ಕೂ ಬರಲಾಯಿತು. ಇತರೆ ಇಲಾಖೆಗಳು ನಿಷ್ಠುರ ಕ್ರಮಕ್ಕೆ ಹಿಂದೆ ಮುಂದೆ ನೋಡಿದಾಗ ಪೊಲೀಸ್ ಇಲಾಖೆ ಅವರ ಬೆನ್ನಿಗೆ ನಿಂತಿತು.ಕಾರ್ಯಾಚರಣೆ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ಹಲವಾರು ಅಡ್ಡಿ ಆತಂಕಗಳು ಎದುರಾದವು. ಅವುಗಳನ್ನು ಲೆಕ್ಕಿಸದೆ ಅಕ್ರಮ ಅಂಗಡಿ, ಮುಂಗಟ್ಟುಗಳನ್ನು ಖಾಲಿ ಮಾಡಿಸಲಾಯಿತು. ಎಲ್ಲೆಂದರಲ್ಲಿ ನಿಲ್ಲುತ್ತಿದ್ದ ವಾಹನಗಳಿಗೆ ನಿರ್ದಿಷ್ಟ ಜಾಗ ನಿಗದಿ ಮಾಡಲಾಯಿತು. ವಾಹನ ಸಂಚಾರದ ನಿಯಮಗಳನ್ನು ಉಲ್ಲಂಘಿದವರನ್ನು ನಿರ್ದಾಕ್ಷಿಣ್ಯವಾಗಿ ಶಿಕ್ಷೆಗೆ ಒಳಪಡಿಸಿ ದಂಡ ವಸೂಲಿ ಮಾಡಲಾಯಿತು. ನಿಗದಿತ ಮಾರ್ಗಗಳನ್ನು ಉಲ್ಲಂಘಿಸಿ ಬರುವ ಖಾಸಗಿ ಬಸ್‌ಗಳನ್ನು ವಶಕ್ಕೆ ಪಡೆದು ದಂಡ ಹಾಕಲಾಯಿತು. ಪೊಲೀಸ್ ಇಲಾಖೆ ಹಿಡಿದ ಛಲ ಬಿಡದೆ ಹಗಲು ರಾತ್ರಿ ನಿದ್ರಾಹಾರಗಳನ್ನು ಬಿಟ್ಟು ಬೀದಿಗೆ ಬಂದು ನಿಂತಿತ್ತು. ಸ್ವತಃ ವೃತ್ತ ನಿರೀಕ್ಷಕರೇ ಸಿಬ್ಬಂದಿಯ ಜೊತೆ ಕೈಯ್ಯಲ್ಲಿ ಕರಪತ್ರ ಹಿಡಿದು ನಾಗರಿಕರಲ್ಲಿ ಸಂಚಾರಿ ನಿಯಮಗಳ ಬಗ್ಗೆ ಜಾಗೃತಿ ಮೂಡಿಸಲು ಟೊಂಕ ಕಟ್ಟಿ ನಿಂತರು. ಸ್ಥಳೀಯ ಸಂಸ್ಥೆಗಳ ಕೆಲವು ಜನಪ್ರತಿನಿಧಿಗಳು ಅಧಿಕಾರಿಗಳ ವಿರುದ್ಧ ತಿರುಗಿ ಬಿದ್ದರು. ಧರಣಿ, ಪ್ರತಿಭಟನೆ ಮಾಡುವ ಬೆದರಿಕೆ ಹಾಕಿದರು. ಅಧಿಕಾರಿಗಳನ್ನು ಎತ್ತಂಗಡಿ ಮಾಡಿಸುವ ಬೆದರಿಕೆ ಹಾಕಿದರು. ಆದರೆ ಅಧಿಕಾರಿಗಳು ಇದಕ್ಕೆಲ್ಲ ಹೆದರದೆ ಎರಡು ತಿಂಗಳಲ್ಲಿ ರೂ 2.5 ಲಕ್ಷಕ್ಕೂ ಹೆಚ್ಚು ದಂಡ ವಸೂಲಿ ಮಾಡಿದರು. ಇದಕ್ಕಿಂತ ಹೆಚ್ಚಾಗಿ ಸ್ಥಳೀಯ ಶಾಸಕರು ಪೊಲೀಸ್ ಅಧಿಕಾರಿಗಳ ಬೆಂಬಲಕ್ಕೆ ನಿಂತರು.ಪೊಲೀಸ್ ಮತ್ತು ಪಟ್ಟಣ ಪಂಚಾಯಿತಿ ಅಧ್ಯಕ್ಷರು, ಸದಸ್ಯರು ಹಾಗೂ ಅಧಿಕಾರಗಳ ಸತತ ಪರಿಶ್ರಮದಿಂದ ಇಂದು ಪಟ್ಟಣ ಒಂದು ಸುಂದರ ರೂಪ ಪಡೆದಿದೆ. ಹಿಂದಿದ್ದ ಅವ್ಯವಸ್ಥೆ ಮಾಯವಾಗಿದೆ. ಸಂಚಾರಿ ನಿಯಮಗಳನ್ನು ಜನ ಸ್ವಪ್ರೇರಣೆಯಿಂದ ಪಾಲಿಸುವುದನ್ನು ರೂಢಿಸಿಕೊಂಡಿದ್ದಾರೆ.  ಪರವಾನಗಿ ಇಲ್ಲದೆ ಅಕ್ರಮವಾಗಿ ಓಡಾಡುತ್ತಿದ್ದ ಖಾಸಗಿ ಬಸ್‌ಗಳಿಗೆ, ಸರಕು ಸಾಗಣೆ ವಾಹನಗಳಿಗೆ ಕಡಿವಾಣ ಬಿದ್ದಿದೆ. ಇವರೆಲ್ಲರ ಪರಿಶ್ರಮದ ಫಲವಾಗಿ ಕೋಟ್ಯಂತರ ರೂಪಾಯಿ ನಷ್ಟದಲ್ಲಿ ತೊಳಲಾಡುತ್ತಿದ್ದ ಸಾರಿಗೆ ಸಂಸ್ಥೆ ಪ್ರತಿದಿನ 50 ರಿಂದ 75 ಸಾವಿರ ರೂಪಾಯಿ ಆದಾಯ ಗಳಿಸುತ್ತಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.