ಸೋಮವಾರ, ಆಗಸ್ಟ್ 10, 2020
24 °C

ಕಾಯಕಲ್ಪಕ್ಕೆ ಕಾದಿರುವ ಆನೆಕೆರೆ

ಟಿ.ಜಿ.ಪ್ರೇಮಕುಮಾರ್ Updated:

ಅಕ್ಷರ ಗಾತ್ರ : | |

ಕಾಯಕಲ್ಪಕ್ಕೆ ಕಾದಿರುವ ಆನೆಕೆರೆ

ಕುಶಾಲನಗರ: ಜಿಲ್ಲೆಯಲ್ಲಿ ಅರಣ್ಯ ಪ್ರದೇಶ ಕ್ಷೀಣಿಸಿದಂತೆ ಕೆರೆಗಳು ಕೂಡ ಅವನತಿಯತ್ತ ಸಾಗಿವೆ. ಅದರಲ್ಲಿ ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿಯ ಚಿಕ್ಕತ್ತೂರು - ಬಸವನತ್ತೂರು ಬಳಿ ಇರುವ ಪುರಾತನ `ಆನೆಕೆರೆ~ ಜೀವಂತ ಸಾಕ್ಷಿ.ಕುಶಾಲನಗರ ಕಡೆಯಿಂದ ಹಾರಂಗಿ ಕಡೆಗೆ ತೆರಳುವ ಮಾರ್ಗ ಮಧ್ಯೆ ಚಿಕ್ಕತ್ತೂರು ಬಳಿ ಬಲಪಾರ್ಶ್ವದಲ್ಲಿ ಕಾಣಸಿಗುವ ಈ ವಿಶಾಲ ಕೆರೆಯ ಜಾಗ ಒತ್ತುವರಿಯಾಗಿದೆ. ಈ ಹಿಂದೆ ಕೆರೆಯ ನೀರನ್ನು ಬಳಸಿ ಕೂಡಿಗೆ ಕೃಷಿ ಫಾರಂನಲ್ಲಿ ವಿವಿಧ ಕೃಷಿ ಚಟುವಟಿಕೆಗಳು ಮತ್ತು ಬೆಳೆ ಬೆಳೆಯಲಾಗುತ್ತಿತ್ತು. ಕೃಷಿಫಾರಂನಲ್ಲಿ ಕೊಳವೆ ಬಾವಿ ನಿರ್ಮಾಣಗೊಂಡ ಬಳಿಕ ಕೆರೆಯ ನೀರಿನ ಬಳಕೆ ನಿಂತಿತು. ಕ್ರಮೇಣ ಕೆರೆಯ ಒತ್ತುವರಿಯಾಗಿ ಕೆರೆಯಲ್ಲಿ ನೀರಿನ ಸಂಗ್ರಹ ಕೂಡ ಕ್ಷೀಣಿಸಿತು. ಈಗ ಕೆರೆಯಲ್ಲಿ ವಿಪರೀತ ಹೂಳು ತುಂಬಿಕೊಂಡಿದ್ದು, ಜಲ ಮಟ್ಟ ಕೂಡ ತೀವ್ರವಾಗಿ ಕುಸಿದಿದೆ.ನಾಲ್ಕೈದು ದಶಕಗಳ ಹಿಂದೆ ಕಾಡಾನೆಗಳಿಗೆ ಆಶ್ರಯ ತಾಣವಾಗಿದ್ದ ಈ ಕೆರೆಯು ಕಾಲಘಟ್ಟದಲ್ಲಿ ಬಯಲು ಪ್ರದೇಶವಾಗಿ ಮಾರ್ಪಟ್ಟು ವಿಸ್ತಾರ ಕೂಡ ಕ್ಷೀಣಿಸಿದೆ. 45-50 ವರ್ಷಗಳ ಹಿಂದೆ ಸುತ್ತಮುತ್ತ ಬಿದಿರಿನ ಹಿಂಡಿಲುಗಳು ಇದ್ದ ಕಾರಣ ಕಾಡಾನೆಗಳು ನೀರು ಕುಡಿಯಲು `ಆನೆಕೆರೆ~ಯನ್ನೇ ಅವಲಂಬಿಸಿದ್ದವು. ಆಗ ಕೆರೆ ವಿಸ್ತೀರ್ಣ 18 ಎಕರೆ ಪ್ರದೇಶವಾಗಿತ್ತು. ನಂತರ ಚಿಕ್ಕತ್ತೂರು ವ್ಯಾಪ್ತಿಯಲ್ಲಿ ಕಾಡು ಕ್ರಮೇಣ ನಾಡಾಗಿ ಪರಿವರ್ತನೆಗೊಂಡ ಬಳಿಕ ಕೆರೆಯ ಸುತ್ತಲಿನ ಪ್ರದೇಶದಲ್ಲಿ ಕೃಷಿ ಚಟುವಟಿಕೆ ಆರಂಭಗೊಂಡಂತೆ ಕೆರೆಯ ಒತ್ತುವರಿ ಅವ್ಯಾಹತವಾಗಿ ನಡೆದಿದೆ ಎಂದು ಸ್ಥಳೀಯರು ದೂರಿದ್ದಾರೆ. ಕೆರೆ ರಕ್ಷಣೆ ಮಾಡಬೇಕಾದ ಕಂದಾಯ ಹಾಗೂ ಸಣ್ಣ ನೀರಾವರಿ ಇಲಾಖೆಯ ನಿರ್ಲಕ್ಷ್ಯದಿಂದಾಗಿ ಕೆರೆಯು ಒತ್ತುವರಿಯಾಗಿದೆ. ಕೆರೆಯಲ್ಲಿ ವಿಪರೀತ ಹೂಳು ತುಂಬಿದೆ. ಇದರಿಂದ ಕೆರೆಯಲ್ಲಿ ಅಂತರ್ಜಲ ಕೂಡ ಕ್ಷೀಣಿಸಿದೆ. ಕೆರೆಯನ್ನು ರಕ್ಷಣೆ ಮಾಡುವಲ್ಲಿ ಗ್ರಾಮ ಪಂಚಾಯಿತಿ ಆಡಳಿತ ಮಂಡಳಿ ವಿಫಲವಾಗಿದೆ ಎಂದು ನಾಗರಿಕ ಹಿತರಕ್ಷಣಾ ವೇದಿಕೆಯ ಪ್ರಮುಖರಾದ ಚಿಕ್ಕತ್ತೂರಿನ ಸಿ.ವಿ.ನಾಗೇಶ್ ತಿಳಿಸಿದರು.ಕೆರೆಯನ್ನು ಅಭಿವೃದ್ಧಿಪಡಿಸಿದರೆ ಜಲಚರಗಳ ರಕ್ಷಣೆಯೊಂದಿಗೆ ಅಂತರ್ಜಲ ವೃದ್ಧಿಯಾಗಲಿದೆ. ಜತೆಗೆ ಕೆರೆಯಲ್ಲಿ ಮೀನು ಸಾಕಾಣಿಕೆ, ದೋಣಿ ವಿಹಾರ ಮತ್ತಿತರ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳಬಹುದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.ಈ ಹಿಂದೆ ಜಿಲ್ಲಾ ಪಂಚಾಯಿತಿ ಮತ್ತು ಸಣ್ಣ ನೀರಾವರಿ ಇಲಾಖೆ ವತಿಯಿಂದ ರಸ್ತೆ ಬದಿಯ ಏರಿ ನಿರ್ಮಿಸಿರುವುದನ್ನು ಬಿಟ್ಟರೆ ಕೆರೆಯಲ್ಲಿ ತುಂಬಿರುವ ಹೂಳನ್ನು ಪೂರ್ಣ ಪ್ರಮಾಣದಲ್ಲಿ ತೆಗೆದಿಲ್ಲ. ಈ ಹಿಂದೆ ಕೆರೆಯು ವಿಶಾಲವಾಗಿದ್ದಾಗ ಕೆರೆಯಲ್ಲಿ ನೀರು ತುಂಬಿದಾಗ ಸುತ್ತಮುತ್ತಲಿನ ಕೃಷಿಕರಿಗೆ ಹೆಚ್ಚು ಅನುಕೂಲವಾಗಿತ್ತು. ಈಗ ಕೆರೆ ಒತ್ತುವರಿಯಾದ ನಂತರ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿದೆ ಎಂದು ಸ್ಥಳೀಯರಾದ ಕೆ.ಸುಬ್ಬಣ್ಣ ಹೇಳಿದರು.ಈ ಕೆರೆಯನ್ನು ಅಭಿವೃದ್ಧಿಪಡಿಸುವ ಕುರಿತು ಗ್ರಾಮ ಪಂಚಾಯಿತಿ ಆಡಳಿತ ಮಂಡಳಿಯಲ್ಲಿ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಕೂಡುಮಂಗಳೂರು ಗ್ರಾಮ ಪಂಚಾಯ್ತಿ ಅಧ್ಯಕ್ಷೆ ಹೇಮಾವತಿ ತಿಳಿಸಿದರು.

 

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.