ಶುಕ್ರವಾರ, ನವೆಂಬರ್ 15, 2019
22 °C

ಕಾಯಕಲ್ಪಕ್ಕೆ ಕಾದಿರುವ ಶತಮಾನದ ಪ್ರವಾಸಿ ಮಂದಿರ

Published:
Updated:
ಕಾಯಕಲ್ಪಕ್ಕೆ ಕಾದಿರುವ ಶತಮಾನದ ಪ್ರವಾಸಿ ಮಂದಿರ

ಬ್ರಹ್ಮಾವರ: ಸಾಲಿಗ್ರಾಮ ಕೋಟ ಮಧ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾಗುವಾಗ ಸಿಗುವ ಶತಮಾನದಷ್ಟು ಹಳೆಯದಾದ ಪ್ರವಾಸಿ ಮಂದಿರ ಯಾರಿಗೂ ಬೇಡವಾಗಿದ್ದು, ಶಿಥಿಲಾವಸ್ಥೆಗೆ ತಲುಪಿದೆ.ಉಡುಪಿ ತಾಲ್ಲೂಕು ಪಂಚಾಯ್ತಿಯ ಅಧೀನದಲ್ಲಿರುವ ಈ ಪ್ರವಾಸಿ ಮಂದಿರಕ್ಕೆ ಹಿಂದೆ ಸಾಕಷ್ಟು ಜನರು ಬರುತ್ತಿದ್ದರೂ ಈಗ ಯಾರೊಬ್ಬರೂ ಇಲ್ಲಿ ಬರುತ್ತಿಲ್ಲ. ದಿನವೊಂದಕ್ಕೆ 50 ರೂಪಾಯಿ ಬಾಡಿಗೆ ಪಡೆದು, ತಿಂಗಳಿಗೆ 200ರಿಂದ 500ರೂಪಾಯಿವರೆಗೆ ಆದಾಯ ಬರುತ್ತಿದ್ದರೂ ಇದರ ಉಸ್ತುವಾರಿ  ನೋಡಿಕೊಳ್ಳಲು ಯಾರೂ ಇಲ್ಲದ ಕಾರಣ ಇಂದು ಯಾರಿಗೂ ಬೇಡವಾಗಿದೆ.ಪ್ರವಾಸಿ ಮಂದಿರವನ್ನು ರಿಪೇರಿ ಮಾಡದೇ ಹಲವು ವರ್ಷಗಳು ಕಳೆದಿವೆ. ಪ್ರವಾಸಿಗರು ಬಂದರೂ ಸರಿಯಾದ ನೀರಿನ ವ್ಯವಸ್ಥೆ, ಊಟದ ವ್ಯವಸ್ಥೆಗೆ ಇಲ್ಲಿ ಪರದಾಡಬೇಕಾಗುವ ಸ್ಥಿತಿ ಇದೆ. ಪ್ರವಾಸಿ ಮಂದಿರದ ಬಾಗಿಲುಗಳಿಗೆ ಗೆದ್ದಲು ಹಿಡಿದಿದೆ. ಕೇವಲ ಒಂದು ರೂಂ ಅನ್ನು ಹೊಂದಿದ್ದರೂ ಇದರ ಸ್ಥಿತಿಗತಿಯ ಬಗ್ಗೆ ತಾಲ್ಲೂಕು ಪಂಚಾಯ್ತಿ ಗಮನವೇ ನೀಡುವುದಿಲ್ಲ ಎನ್ನುವುದಕ್ಕೆ ಇಲ್ಲಿನ ಪರಿಸರವೇ ಸಾಕ್ಷಿ.ಬಾವಿಯ ನೀರು ಕಲುಷಿತಗೊಂಡಿದ್ದು, ಬಾವಿಯನ್ನು ಸ್ವಚ್ಛಗೊಳಿಸದೇ ಹಲವು ದಶಕಗಳೇ ಕಳೆದಂತಿದೆ. ಬಾವಿಯಲ್ಲಿಯೇ ಕೊಡಪಾನ, ಬಕೆಟ್ ಮುಂತಾದ ಪರಿಕರಗಳು ಬಿದ್ದಿದ್ದು, ಇದನ್ನು ಮೇಲೆತ್ತುವ ಗೋಜಿಗೆ ಕೂಡಾ ಇದುವರೆಗೆ ಯಾರೂ ಹೋಗಿಲ್ಲ. ಇದರ ಉಸ್ತುವಾರಿಯನ್ನು ವೃದ್ಧರೊಬ್ಬರಿಗೆ ವಹಿಸಲಾಗಿತ್ತಾದರೂ ಇಲ್ಲಿ ಯಾರೊಬ್ಬರೂ ಬಾರದ ಕಾರಣ ಈಗ ಇದನ್ನು ನೋಡಿಕೊಳ್ಳವವರೂ ಯಾರೂ ಇಲ್ಲ.ಶತಮಾನಕ್ಕೂ ಹಳೆಯದಾದ ಪ್ರವಾಸಿ ಮಂದಿರ: ಇಲ್ಲಿಯ ಪ್ರವಾಸಿ ಮಂದಿರಕ್ಕೆ ಶತಮಾನ ಕಳೆದಿದೆ. ಇಲ್ಲಿನ ಕಟ್ಟಡದ ಮೇಲ್ಛಾವಣಿಗೆ ಹಾಕಿರುವ ಹೆಂಚುಗಳು, ನೀರು ಸಂಗ್ರಹಕ್ಕೆ ಬಳಸುತ್ತಿರುವ ತಾಮ್ರದ ಹಂಡೆ, ಚೆಂಬುಗಳು ಇದಕ್ಕೆ ಸಾಕ್ಷಿಯಾಗಿವೆ. ಪ್ಲಾಸ್ಟಿಕ್ ಬಕೆಟ್‌ಗಳು, ಸ್ಟೀಲ್ ಕೊಡಪಾನದ ಈ ಸಮಯದಲ್ಲಿ ದೊಡ್ಡ ತಾಮ್ರದ ಹಂಡೆ ಇಲ್ಲಿ ಇಂದಿಗೂ ಬಳಸುತ್ತಿರುವುದು ಇಲ್ಲಿನ ಪ್ರವಾಸಿ ಮಂದಿರದ ವಿಶೇಷ.ಕೋಟ ಶಿವರಾಮ ಕಾರಂತರ ಹುಟ್ಟೂರ್ಲ್ಲಲಿ ಪ್ರವಾಸಿ ಮಂದಿರದ ಅಗತ್ಯವಿದೆಯಾದರೂ ಇದರ ದುರಸ್ತಿಗೆ ಸಂಬಂಧಪಟ್ಟ ಇಲಾಖೆಗಳು ಮುಂದೆ ಬಾರದೇ ಇರುವುದು ಬೇಸರದ ಸಂಗತಿ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ.

 

ಪ್ರತಿಕ್ರಿಯಿಸಿ (+)