ಮಂಗಳವಾರ, ಮೇ 11, 2021
27 °C

ಕಾಯಕಲ್ಪದ ನಿರೀಕ್ಷೆಯಲ್ಲಿ ಹೂಲಿ ದೇವಾಲಯ

ಇಮಾಮಹುಸೇನ್ ಎಂ. ಗೂಡುನವರ Updated:

ಅಕ್ಷರ ಗಾತ್ರ : | |

ಕರ್ನಾಟಕ ಪ್ರಾಚೀನ ವಾಸ್ತುಶಿಲ್ಪವನ್ನು ನೋಡಬೇಕೆ? ಹಾಗಾದರೆ ಬೆಳಗಾವಿ ಜಿಲ್ಲೆಯ ಸವದತ್ತಿ ತಾಲ್ಲೂಕಿನ ಹೂಲಿ ಗ್ರಾಮಕ್ಕೆ ಬನ್ನಿ...!

ಹೂಲಿ ಶಿಲ್ಪಕಲೆ, ವಾಸ್ತುಶಿಲ್ಪ, ಶಾಸನಗಳನ್ನು ಹೊಂದಿರುವ ಗ್ರಾಮವಾಗಿದೆ. ಸರ್ವಧರ್ಮ ಸಮನ್ವಯತೆ ಸಾಧಿಸಿದ ಹಾಗೂ ಸಾಂಸ್ಕೃತಿಕ ಪರಂಪರೆಯನ್ನು ಎತ್ತಿ ಹಿಡಿದ ಆ ಕಾಲದ ವಾಸ್ತುಶಿಲ್ಪಗಳು ಇಲ್ಲಿವೆ.ಈ ಗ್ರಾಮದಲ್ಲಿ ಮಧನೇಶ್ವರ, ಅಂಧಕೇಶ್ವರ, ತಾರಕೇಶ್ವರ, ಬನಶಂಕರಿ, ರಾಮೇಶ್ವರ, ನಾರಾಯಣ, ವೀರಭದ್ರ, ಕಲ್ಮೇಶ್ವರ, ಕರಿಸಿದ್ಧೇಶ್ವರ, ಪಂಚಲಿಂಗೇಶ್ವರ ಸೇರಿದಂತೆ ವಾಸ್ತುಶಿಲ್ಪಗಳಿಂದ ಕೂಡಿದ ಹಲವಾರು ಪ್ರಾಚೀನ ದೇವಾಲಯಗಳಿವೆ.ಈ ದೇವಾಲಯಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ವಾಸ್ತುಶಿಲ್ಪ ಕಲೆಯಲ್ಲಿ ಈ ಭಾಗದ ಶಿಲ್ಪಿಗಳು ಪರಿಣಿತರಷ್ಟೇ ಅಲ್ಲ, ಪ್ರಬುದ್ಧರೂ ಆಗಿದ್ದರು ಎನ್ನುವದು ನಿಜ ಎನಿಸುತ್ತದೆ. ಐತಿಹಾಸಿಕ ಮತ್ತು ಕಲೆಗಳ ದೃಷ್ಟಿಯಿಂದ ಮಹತ್ವ ಪಡೆದ ಇಲ್ಲಿನ ಅಮೂಲ್ಯ ಶಿಲ್ಪಕಲಾಕೃತಿಗಳು ಈ ಭಾಗದ ಜನರ ಇತಿಹಾಸದ ತಿಳಿವಳಿಕೆಯ ಕೊರತೆಯಿಂದಾಗಿ ಇಂದು ಅವಸಾನದ ಅಂಚಿಗೆ ತಲುಪುತ್ತಿವೆ.ಹೂಲಿ ಗ್ರಾಮ ಪ್ರಾಚೀನ ಕಾಲದಲ್ಲಿ ಬೆಳವುಲ ದೇಶದ ಮಹಾರಾಜರು ಆಡಳಿತ ನಡೆಸುತ್ತಿದ್ದ ಕೇಂದ್ರವಾಗಿದ್ದು, ಹದಿನೆಂಟು ಅಗ್ರಹಾರಗಳ ಮುಕುಟ ರತ್ನದಂತಿತ್ತು ಎಂದು ವರ್ಣಿಸಲಾಗಿದೆ. ಗ್ರಾಮದ ಉತ್ತರ ದಿಕ್ಕಿನಲ್ಲಿ ಗುಡ್ಡದ ಪಕ್ಕದಲ್ಲಿ ಅನೇಕ ವಿರೂಪಗೊಂಡ ದೇವಾಲಯಗಳಿದ್ದು, ಋಷಿಮುನಿಗಳು ಇಲ್ಲಿ ಯಜ್ಞ- ಯಾಗಾದಿಗಳನ್ನು ನಡೆಸಿದ್ದಾರೆ ಎಂಬುದಕ್ಕೆ ಕುರುಹಾಗಿ ಹಾಳಾದ ಅನೇಕ ಯಜ್ಞಕುಂಡ ಸ್ತಂಭಗಳು ಕಾಣ ಸಿಗುತ್ತವೆ.ಇಲ್ಲಿನ ದೇವಾಲಯಗಳು ಕಲ್ಯಾಣ ಚಾಲುಕ್ಯ, ರಾಷ್ಟ್ರಕೂಟ, ವಿಜಯನಗರದ ಅರಸರ ಶಿಲ್ಪಕಲಾ ಪರಂಪರೆಗೆ ಬುನಾದಿಯಂತಿವೆ. ಒಂದು ಕಾಲದಲ್ಲಿ ಹೂಲಿ ಗ್ರಾಮವು ನೂರಕ್ಕೂ ಹೆಚ್ಚು ದೇವಾಲಯ ಹಾಗೂ ಬಾವಿಗಳನ್ನು ಹೊಂದಿತ್ತು ಎಂಬುದು ಪ್ರತೀತಿಯಲ್ಲಿದೆ. ಇಲ್ಲಿ ದೊರೆಯುವ ದೇವಾಲಯಗಳಲ್ಲಿನ ವಾಸ್ತುಶಿಲ್ಪ ಕಲೆಯನ್ನು ನೋಡಿದರೆ ಇದನ್ನು ಶಿಲ್ಪಕಲೆಯ ರಾಜಧಾನಿ ಎಂದು ಕರೆಯಬಹುದು.ಪಂಚಲಿಂಗೇಶ್ವರ ದೇವಾಲಯ

ಜೈನ ಮೂಲದ ಬಸದಿಯಾಗಿರಬಹುದಾದ ಪಂಚಲಿಂಗೇಶ್ವರ ದೇವಾಲಯ ವಾಸ್ತುಶಿಲ್ಪ ದೃಷ್ಟಿಯಿಂದ ಅತಿ ಪ್ರಾಮುಖ್ಯತೆ ಪಡೆದಿದ್ದು, ದೇಗುಲಗಳ ಚಕ್ರವರ್ತಿಯೆಂದೆ ಹೆಸರುವಾಸಿಯಾಗಿದೆ. ಈ ದೇವಾಲಯದ ಶಿಲ್ಪಕಲಾ ಸೌಂದರ್ಯ ಎಂಥವರನ್ನು ವಿಸ್ಮಯರನ್ನಾಗಿಸುತ್ತದೆ. ಗರ್ಭಗುಡಿಯಲ್ಲಿ ಮೂರು ಬೃಹದಾಕಾರದ ಲಿಂಗಗಳು ಹಾಗೂ ಸಭಾಮಂಟಪದಲ್ಲಿರುವ ಎರಡು ಗರ್ಭಗುಡಿಗಳಲ್ಲಿ ಎರಡು ಲಿಂಗಗಳು ಇರುವುದರಿಂದ ಇದಕ್ಕೆ ಪಂಚಲಿಂಗೇಶ್ವರ ದೇವಾಲಯ ಎಂದು ಕರೆಯುವರು.ಇದು ವಿಶಾಲವಾದ ಸಭಾಮಂಟಪ ಹೊಂದಿದ್ದು, ಒಟ್ಟು 35 ಕಂಬಗಳಿವೆ. ಈ ದೇವಾಲಯದಲ್ಲಿ ನಾಲ್ಕು ಶಾಸನಗಳನ್ನು ಕಾಣಬಹುದು. ಈ ಶಾಸನಗಳು ಕ್ರಿ.ಶ. 1181ರ ಕಾಲದ್ದು ಎಂದು ಹೇಳಲಾಗಿದೆ. ಈ ದೇವಾಲಯವನ್ನು ಕೇಂದ್ರೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯು ರಕ್ಷಿತ ಸ್ಮಾರಕವೆಂದು ಘೋಷಿಸಿದೆ. ದೇವಾಲಯದ ಪ್ರಾಂಗಣದಲ್ಲಿ ಗ್ರಾಮದಲ್ಲಿ ದೊರೆತ ವೀರಗಲ್ಲು, ಹಲವಾರು ಶಿಲ್ಪವುಳ್ಳ ಮೂರ್ತಿ ಶಾಸನಗಳು ಇಡಲಾಗಿದೆ.ಕಲ್ಲಿನ ಕೋಟೆ: ಗ್ರಾಮದ ಉತ್ತರ ದಿಕ್ಕಿನಲ್ಲಿ ಗುಡ್ಡದ ಮೇಲೆ ಒಂದು ಚಿಕ್ಕದಾದ ಕಲ್ಲಿನ ಕೋಟೆ ಇದೆ. ಇದು ಕಲ್ಯಾಣ ಚಾಲುಕ್ಯರದೆಂದು ಹೇಳಲಾಗುತ್ತಿದೆ. ಈ ಕೋಟೆಯ ವಿಸ್ತೀರ್ಣ ಸುಮಾರು 5 ಎಕರೆಗಳಷ್ಟಿದ್ದು, ಗೋಡೆಯ ರಚನೆಯನ್ನು ಮೂರು ಹಂತಗಳಲ್ಲಿ ಮಾಡಲಾಗಿದೆ. ಕೋಟೆಯಲ್ಲಿ 10 ಬುರುಜುಗಳಿವೆ. ಕೋಟೆಯೊಳಗಿರುವ ಮದ್ದು, ಶಸ್ತ್ರಸಂಗ್ರಹದ ಹೊಂಡ ಈಗಲೂ ಸುಸ್ಥಿತಿಯಲ್ಲಿವೆ. ಕೋಟೆಯ ಪ್ರವೇಶದ್ವಾರದ ಎದುರು ಶಿಥಿಲಗೊಂಡ ಚಿಕ್ಕ ದೇವಾಲಯದ ಅವಶೇಷವಿದ್ದು, ಅದರ ಲಿಂಗದ ಪೀಠವನ್ನು ಮಾತ್ರ ನಾವಿಂದು ಕಾಣಬಹುದು. ಸೈನಿಕರ ಬಿಡಾರ, ಧಾನ್ಯ ಗೋದಾಮು ಸೇರಿದಂತೆ ಅನೇಕ ಕಟ್ಟಡಗಳ ಅವಶೇಷಗಳನ್ನು ಕಾಣಬಹುದಾಗಿದೆ. ಕೋಟೆಗೆ ಹೋಗಲು ಸರಿಯಾದ ಮಾರ್ಗವಿಲ್ಲ. ಈ ಕೆಂಪು ಕಲ್ಲಿನ ಕೋಟೆಯು ಮುಂದಿನ ಪೀಳಿಗೆಗೆ ದಂತಕಥೆಯಾಗಿ ಉಳಿಯಲಿದೆಯೇ ಎಂಬ ಅನುಮಾನ ಎಲ್ಲರನ್ನೂ ಕಾಡುತ್ತಿದೆ.ಹೂಲಿ ಗ್ರಾಮವನ್ನು ಪ್ರವೇಶಿಸಿದರೆ ಇದು ಶಿಲ್ಪಕಲಾವಶೇಷಗಳ ಸಮುಚ್ಛಯವೆನೋ ಎನಿಸುತ್ತದೆ. ಅವಶೇಷಗಳಾಗಿ ನಿಂತಿರುವ ಇಲ್ಲಿನ ದೇವಾಲಯ ಹಾಗೂ ಕೆರೆಗಳನ್ನು ನೋಡಿದರೆ ಹಿಂದೆ ಎಷ್ಟು ವೈಭವದಿಂದ ಈ ಗ್ರಾಮ ಮೆರೆದಿರಬಹುದು ಎಂದು ಊಹಿಸಬಹುದಾಗಿದೆ. ರಘುವಾಂಕ ಕಾವ್ಯದ ಲೇಖಕ ಚಿಕ್ಕನಂದೇಶ ಈ ಗ್ರಾಮದವರಾಗಿದ್ದಾರೆ. ಇವರು ಹೂಲಿ ಗ್ರಾಮವನ್ನು ಪುವಲ್ಲಿ ಎಂದು ಬಣ್ಣಿಸಿದ್ದಾರೆ. ಇಲ್ಲಿನ ಶಾಸನಗಳು ಬಿಜ್ಜಳನ ಮಗ ಅಹವ ಮಲ್ಲದೇವ, ತ್ರಿಭುವನ ಮಲ್ಲದೇವನ ಕುರಿತದ್ದಾಗಿವೆ.ಇಷ್ಟೊಂದು ಐತಿಹಾಸಿಕ ಹಿನ್ನೆಲೆಯನ್ನು ಹೊಂದಿರುವ ಹೂಲಿ ಗ್ರಾಮದಲ್ಲಿರುವ ವಾಸ್ತುಶಿಲ್ಪ ಕಲೆಯುಳ್ಳ ದೇವಾಲಯಗಳು, ವೀರಗಲ್ಲು, ಕೋಟೆ, ಶಾಸನಗಳು ಎಲ್ಲರ ನಿರ್ಲಕ್ಷ್ಯದಿಂದಾಗಿ ಇಂದು ಭಗ್ನಾವಸ್ಥೆಗೆ ತಲುಪಿದ್ದು, ಕಾಯಕಲ್ಪದ ನಿರೀಕ್ಷೆಯಲ್ಲಿವೆ. ಇವುಗಳನ್ನು ಸಂರಕ್ಷಿಸಲು ಸಂಬಂಧಪಟ್ಟ ಇಲಾಖೆಯವರು ಮುಂದಾಗಬೇಕು ಎಂಬುದು ಹೂಲಿ ಗ್ರಾಮಸ್ಥರ ಆಶಯವಾಗಿದೆ.`ಹೂಲಿ ಗ್ರಾಮದಲ್ಲಿ ಅನೇಕ ಐತಿಹಾಸಿಕ ವಾಸ್ತುಶಿಲ್ಪವನ್ನು ದೇವಾಲಯಗಳು, ಸ್ಮಾರಕಗಳು, ವೀರಗಲ್ಲು, ಶಾಸನಗಳಿವೆ. ಹೀಗಾಗಿ ಇದಕ್ಕೆ ಕರ್ನಾಟಕದ ಶಿಲ್ಪಕಲೆಯ ರಾಜಧಾನಿ ಎಂದೂ ಕರೆಯುತ್ತಾರೆ. ಆದರೆ, ಎಲ್ಲರ ನಿರ್ಲಕ್ಷ್ಯದಿಂದಾಗಿ ಇವು ಅವನತಿಯ ಅಂಚಿಗೆ ತಲುಪುತ್ತಿವೆ. ಪರಿಸ್ಥಿತಿ ಹೀಗೆ ಮುಂದುವರಿದೆ ಹೂಲಿ ಗ್ರಾಮವು ಮುಂಬರುವ ದಿನಗಳಲ್ಲಿ ಒಂದು ದಂತಕಥೆಯಾಗಿ ಉಳಿಯುವದು ನಿಶ್ಚಿತ. ಹಾಗಾಗದಂತೆ ಸಂಬಂಧಪಟ್ಟ ಇಲಾಖೆಯವರು ಶೀಘ್ರವಾಗಿ ಎಚ್ಚೆತ್ತುಕೊಂಡು ಅವುಗಳನ್ನು ಸಂರಕ್ಷಿಸುವತ್ತ ಆಸಕ್ತಿ ತೋರಬೇಕು' ಎಂದು ಹೂಲಿಯ ಇತಿಹಾಸ ಸಂಶೋಧಕ ಶ್ರೀಧರ ಕುಲಕರ್ಣಿ `ಪ್ರಜಾವಾಣಿ'ಗೆ ತಿಳಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.