ಸೋಮವಾರ, ನವೆಂಬರ್ 18, 2019
27 °C

ಕಾಯಕಲ್ಪ ಅಗತ್ಯ

Published:
Updated:

ಆಸ್ಪತ್ರೆಯಲ್ಲಿ ವೈದ್ಯರಿಲ್ಲದ ಕಾರಣ ಗರ್ಭಿಣಿಯೊಬ್ಬರು ಹೆರಿಗೆ ನೋವಿನಿಂದ ನರಳುತ್ತಾ ಬೀದಿಬದಿಯಲ್ಲಿ ಕಾಯಬೇಕಾಗಿ ಬಂದ ಸ್ಥಿತಿ ನಮ್ಮ ಸರ್ಕಾರಿ ಆಸ್ಪತ್ರೆಗಳ ಅವ್ಯವಸ್ಥೆಗೆ ಕನ್ನಡಿ ಹಿಡಿಯುತ್ತದೆ. ಪಾವಗಡ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿರುವ ಈ ಘಟನೆಗೆ ನಮ್ಮ ಆರೋಗ್ಯ ವ್ಯವಸ್ಥೆಯಲ್ಲಿರುವ ದೋಷಗಳೇ ಮೂಲ ಕಾರಣ. `ನಾನೇನು ಮಾಡಲಿ? ಎಲ್ಲರೂ ರಜೆ ಹಾಕಿ ಹೋಗಿದ್ದಾರೆ. ಇದು ಕೇವಲ ನಮ್ಮ ಆಸ್ಪತ್ರೆ ಸಮಸ್ಯೆಯಲ್ಲ. ಇಡೀ ರಾಜ್ಯದಲ್ಲಿ ಇಂಥದ್ದೇ ವಾತಾವರಣವಿದೆ' ಎಂದು ಹೇಳಿದ್ದ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಮರುದಿನ ತದ್ವಿರುದ್ಧ ಹೇಳಿಕೆಯನ್ನು ನೀಡಿ, `ಗರ್ಭಿಣಿಯ ಸ್ಥಿತಿ ಕ್ಲಿಷ್ಟವಿದ್ದುದರಿಂದ ಮುಂಜಾಗ್ರತಾ ಕ್ರಮವಾಗಿ ಅವರನ್ನು ತಜ್ಞ ವೈದ್ಯರ ಬಳಿಗೆ ಕಳಿಸಲಾಯಿತು. ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆಯಾಗಿದ್ದು ಮಗು ಮತ್ತು ತಾಯಿ ಆರೋಗ್ಯವಾಗಿದ್ದಾರೆ' ಎಂದು ಸಮರ್ಥಿಸಿಕೊಂಡಿದ್ದಾರೆ. ಒಟ್ಟಾರೆ, ಸರ್ಕಾರಿ ಆಸ್ಪತ್ರೆಗಳಲ್ಲಿ ಎಲ್ಲವೂ ಸರಿಯಿಲ್ಲ ಎಂಬುದು ಮೇಲ್ನೋಟಕ್ಕೆ ಈ ಘಟನೆಯಿಂದ ಗೋಚರವಾಗುತ್ತದೆ. ಸಣ್ಣ ಸಣ್ಣ ಊರುಗಳಲ್ಲೂ ಖಾಸಗಿ ಆಸ್ಪತ್ರೆಗಳು ಸಾಧಿಸಿರುವ ಮೇಲುಗೈಗೂ ಇದೊಂದು ಉದಾಹರಣೆ.ಗ್ರಾಮೀಣ ಪ್ರದೇಶಗಳಲ್ಲಿ ಆರೋಗ್ಯ ಪಾಲನೆ ಕುರಿತಂತೆ ಸರ್ಕಾರದ ನೀತಿಗಳ ಬಗ್ಗೆ ಇಲ್ಲಿ ಪ್ರಶ್ನೆಗಳೇಳುತ್ತವೆ. ಈಗಿರುವ ಕಾನೂನಿನ ಪ್ರಕಾರ, ವೈದ್ಯರಿಗೆ ಗ್ರಾಮೀಣ ಸೇವೆ ಕಡ್ಡಾಯ. ಆದರೆ ಗ್ರಾಮೀಣ ಭತ್ಯೆಯನ್ನು ಪಡೆದುಕೊಂಡೂ ಹಳ್ಳಿಗಳಲ್ಲಿ ವಾಸ್ತವ್ಯ ಹೂಡದ ವೈದ್ಯರ ವಿರುದ್ಧ ಕಳೆದ ವರ್ಷ ಕ್ರಿಮಿನಲ್ ಪ್ರಕರಣಗಳು ದಾಖಲಾಗಿದ್ದನ್ನು ಸ್ಮರಿಸಿಕೊಳ್ಳಬಹುದು. ಗ್ರಾಮೀಣ ಪ್ರದೇಶಗಳಿಗೆ ವೈದ್ಯರ ನೇಮಕಾತಿ ಸಮರ್ಪಕ ರೀತಿಯಲ್ಲಿ ಆಗದೇ ಇರುವುದರಿಂದ ಇರುವ ಕಡಿಮೆ ಸಂಖ್ಯೆಯ ವೈದ್ಯರಿಗೇ ಕೆಲಸದ ಹೊರೆ ಹೆಚ್ಚಾಗುತ್ತಿದೆ ಎಂಬಂಥ ದೂರು ಬಹಳ ಮುಖ್ಯವಾದದ್ದು. ರಾಜ್ಯದಲ್ಲಿ ಇಷ್ಟೆಲ್ಲಾ ವೈದ್ಯ ಕಾಲೇಜುಗಳಿದ್ದರೂ ಗ್ರಾಮೀಣ ಪ್ರದೇಶಗಳಲ್ಲಿ ವೈದ್ಯರ ಕೊರತೆ ಏಕೆ ಎಂಬುದು ಪ್ರಶ್ನೆ. ವಾಸ್ತವವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ಸಲ್ಲಿಸಲು ವೈದ್ಯರು ಹಿಂಜರಿಯಲು ಮುಖ್ಯ ಕಾರಣ ಮೂಲಸೌಕರ್ಯಗಳ ಕೊರತೆ. ಸೂಕ್ತ ಕಟ್ಟಡ ಇಲ್ಲದಿರುವುದು, ಮಂಚ ಹಾಸಿಗೆಗಳ ಕೊರತೆ, ಉಪಚರಿಸಲು ಬೇಕಾದ ಗುಣಮಟ್ಟದ ಉಪಕರಣಗಳ ಕೊರತೆ, ಹೀಗೆ ಅನೇಕ ಸಮಸ್ಯೆಗಳು ಸರ್ಕಾರಿ ಆಸ್ಪತ್ರೆಗಳನ್ನು ಕಾಡುತ್ತಿವೆ. 

ಸೇವಾಗುಣಮಟ್ಟವಾಗಲಿ, ಹೆಚ್ಚಿನ ಪರಿಣತಿ ಪಡೆಯಲಾಗಲಿ ಅಥವಾ ಉನ್ನತ ವಿದ್ಯಾಭ್ಯಾಸಕ್ಕೆ ಅನುಕೂಲಕರ ಅವಕಾಶಗಳನ್ನು ಹೊಂದುವುದಾಗಲಿ ಗ್ರಾಮೀಣ ಸೇವೆಗೆ ಒಳಪಡುವ ವೈದ್ಯಸಮುದಾಯಕ್ಕೆ ಸಾಧ್ಯವಿಲ್ಲ ಎಂಬಂಥ ಭಾವನೆಯೂ ಇದೆ. ಹೀಗಾಗಿ, ಗ್ರಾಮೀಣ ಸೇವೆಗೆ ಉತ್ತೇಜನಕಾರಿ ಸಂಬಳ ನೀಡಿದರೂ ನಗರಗಳ ಆಕರ್ಷಣೆಯೇ ವೈದ್ಯರಿಗೆ ಹೆಚ್ಚಿದೆ. ಮಾರುಕಟ್ಟೆ ಸಂಸ್ಕೃತಿಯಿಂದಾಗಿ ಹಣ ಸಂಪಾದನೆಯೇ ಮುಖ್ಯವಾಗಿ ಸೇವಾಮನೋಭಾವ ಹಿನ್ನೆಲೆಗೆ ಸರಿಯುತ್ತಿರುವುದೂ ವಾಸ್ತವವೇ. ಈ ಎಲ್ಲದರ ಜೊತೆಗೆ ವೈದ್ಯರು ಹಾಗೂ ಸರ್ಕಾರದ ನಡುವಿನ ತಿಕ್ಕಾಟ ಮುಂದುವರಿದಿದೆ. ಕಳೆದ ಫೆಬ್ರುವರಿ ತಿಂಗಳ್ಲ್ಲ್ಲ್ಲಲಷ್ಟೇ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ ಸರ್ಕಾರಿ ವೈದ್ಯರು ನಡೆಸಿದ ಮುಷ್ಕರ, ಸಾರ್ವಜನಿಕ ಆರೋಗ್ಯ ಸೇವೆಯನ್ನೇ ಸ್ಥಗಿತಗೊಳಿಸಿತ್ತು. ರಾಷ್ಟ್ರಕ್ಕೆ ಸ್ವಾತಂತ್ರ್ಯ ಲಭಿಸಿ ಆರು ದಶಕಗಳು ಕಳೆದರೂ, ಮೂಲಭೂತ ಅವಶ್ಯಕತೆಯಾದ ಆರೋಗ್ಯ ಕ್ಷೇತ್ರಕ್ಕೆ ಸುಧಾರಣೆ ಆಗದಿರುವುದು ದುರದೃಷ್ಟಕರ. ಹೀಗಾಗಿ ಜನಸಾಮಾನ್ಯರ ಆರೋಗ್ಯರಕ್ಷಣೆಗೆಗಾಗಿ, ಸಾರ್ವಜನಿಕ ಆರೋಗ್ಯ ವ್ಯವಸ್ಥೆಗೆ ತುರ್ತು ಕಾಯಕಲ್ಪ ಅಗತ್ಯ.

ಪ್ರತಿಕ್ರಿಯಿಸಿ (+)