ಭಾನುವಾರ, ಮೇ 16, 2021
28 °C

ಕಾಯಕವೇ ಕೈಲಾಸ ತತ್ವ ಎಲ್ಲರಿಗೂ ಮಾರ್ಗದರ್ಶಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೀದರ್: `ಮನುಷ್ಯನ ಮೌಢ್ಯ, ಅಸಮಾನತೆ, ಕಂದಾಚಾರದ ಸ್ಥಿತಿಯ ಬಗೆಗೆ ಸಮರ ಸಾರಿದ ಮಾನವತಾವಾದಿ. ಪುರೋಹಿತಶಾಹಿ ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತಿ ದೊಡ್ಡ ಆಂದೋಲನ ಉಂಟು ಮಾಡಿದ ಕ್ರಾಂತಿಕಾರಿ ಬಸವಣ್ಣ ಅವರ ಕಾಯಕವೇ ಕೈಲಾಸ ಎಂಬ ತತ್ವ ಎಲ್ಲರಿಗೂ ಮಾರ್ಗದರ್ಶಿ ಎಂದು  ಜಿಲ್ಲಾ ಉಸ್ತುವಾರಿ ಸಚಿವ ರೇವು ನಾಯಕ ಬೆಳಮಗಿ ಅಭಿಪ್ರಾಯಪಟ್ಟರು.ಮಂಗಳವಾರ ಇಲ್ಲಿನ ರಂಗಮಂದಿರದಲ್ಲಿ ಜಿಲ್ಲಾಡಳಿತ ಮತ್ತು ನಗರಸಭೆ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಜಂಟಿಯಾಗಿ ಆಯೋಜಿಸಿದ್ದ ಬಸವಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

 ಬಸವಣ್ಣ ಸಾಮಾಜಿಕ ಸಮಾನತೆಯನ್ನು ಪ್ರಾಯೋಗಿಕವಾಗಿ ಜಾರಿಗೆ ತಂದರು. ಹುಟ್ಟಿನಿಂದ ಯಾರೂ ಮೇಲು ಕೀಳಲ್ಲ. ಗುಣ, ಶೀಲ, ನಡತೆಗಳೇ ವ್ಯಕ್ತಿಯ ಶ್ರೇಷ್ಟತೆಯ ಅಳತೆಗೋಲು ಎಂದು ಸಾರಿದರು ಎಂದರು.ಅಧ್ಯಕ್ಷತೆ ವಹಿಸಿದ್ದ ಶಾಸಕ ರಹೀಮ ಖಾನ್ ಅವರು, ಬಸವಣ್ಣ ಅವರ ಮಾರ್ಗದರ್ಶನದಂತೆ ನಾವು ನಡೆಯುತ್ತಿದ್ದೇವೆಯೇ ಎಂದು ಆತ್ಮವಿಮರ್ಶೆ ಮಾಡಿಕೊಳ್ಳಬೇಕು. ಬಸವೇಶ್ವರ ಅವರ ವಿಚಾರಧಾರೆಯ ಬಗ್ಗೆ ಸರಿಯಾಗಿ ಅರಿತುಕೊಳ್ಳಬೇಕಾಗಿದೆ ಎಂದರು.ವಿಶೇಷ ಉಪನ್ಯಾಸ ನೀಡಿದ ಗುಲ್ಬರ್ಗಾ ಕೇಂದ್ರೀಯ ವಿಶ್ವವಿದ್ಯಾಲಯದ ಸಹ ಪ್ರಾಧ್ಯಾಪಕ ಡಾ. ವಿಕ್ರಂ ವಿಸಾಜಿ ಅವರು, ಬಸವಣ್ಣ ಅವರು ಮಾತು ಮತ್ತು ಕೃತಿಯನ್ನು ಒಂದೇ ರೀತಿ ಇರುವಂತೆ ನೋಡಿಕೊಂಡ ದಾರ್ಶನಿಕ. ಬಸವಣ್ಣ ಅವರೇ ಒಂದು ಸಂಕೇತ. ಆದರೆ, ಬಸವಣ್ಣ ಅವರ ತತ್ವ, ಆದರ್ಶಗಳನ್ನು ಮುಂದುವರಿಸಿದ್ದೇವೆಯೋ ಎಂದು ಆತ್ಮಾವಲೋಕನ ಮಾಡಿಕೊಂಡರೆ ಬೇಸರವಾಗಲಿದೆ ಎಂದರು.ಯಾವುದೇ ಸಂಗತಿಯನ್ನು ಅರ್ಥ ಮಾಡಿಕೊಂಡು ವಿಮರ್ಶೆ ಮಾಡುತ್ತಿದ್ದ ಅವರು, ಅದಕ್ಕೆ ಪರ್ಯಾಯವನ್ನು ಸೂಚಿಸುತ್ತಿದ್ದರು. ಬಸವಣ್ಣ ಅವರ ತತ್ವಾದರ್ಶಗಲು ಇಂದಿಗೂ ಪ್ರಸ್ತುತವಾಗಿವೆ ಎಂದರು.  ಜಿಲ್ಲಾ ಪಂಚಾಯತ್ ಅಧ್ಯಕ್ಷ ಬಾಬುರಾವ್ ಶಂಕರ ಕಾರಬಾರಿ, ಜಿಲ್ಲಾ ಪಂಚಾಯಿತಿ ಸದಸ್ಯ ಶೈಲೇಂದ್ರ ಬೆಲ್ದಾಳೆ, ಅತಿಥಿಗಳಾದ ಕಾಶಪ್ಪ ಧನ್ನೂರೆ, ಹೆಚ್ಚುವರಿ ಜಿಲ್ಲಾಧಿಕಾರಿ ಪ್ರಕಾಶ್ ನಿಟ್ಟಾಲಿ ಅವರಿದ್ದರು.ಮೆರವಣಿಗೆ: ಇದಕ್ಕೂ ಮುನ್ನ ಬಸವೇಶ್ವರ ವತ್ತದಲ್ಲಿ ಬಸವೇಶ್ವರ ಮೂರ್ತಿಗೆ ಗೌರವ ಸಲ್ಲಿಸುವ ಮೂಲಕ ಸಚಿವರು ಭವ್ಯ ಮೆರವಣಿಗೆಗೆ ಚಾಲನೆ ನೀಡಿದರು. ಬಸವೇಶ್ವರ ಭಾವಚಿತ್ರದ ಮೆರವಣಿಗೆ ಭಗತ್ ಸಿಂಗ್ ವತ್ತ, ಅಂಬೇಡ್ಕರ್ ವತ್ತ, ಜನರಲ್ ಕಾರಿಯಪ್ಪ ವತ್ತದ ಮೂಲಕ ರಂಗಮಂದಿರ ತಲುಪಿತು. ಜಿಲ್ಲಾಧಿಕಾರಿ ಸಮೀರ್ ಶುಕ್ಲ ಮತ್ತಿತರರು ಇದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.