ಕಾಯಕ ನಿಷ್ಠೆಯ ಕರ್ಮಯೋಗಿ: ಸ್ವಾಮೀಜಿ

7

ಕಾಯಕ ನಿಷ್ಠೆಯ ಕರ್ಮಯೋಗಿ: ಸ್ವಾಮೀಜಿ

Published:
Updated:
ಕಾಯಕ ನಿಷ್ಠೆಯ ಕರ್ಮಯೋಗಿ: ಸ್ವಾಮೀಜಿ

ದಾವಣಗೆರೆ: ಆರೋಗ್ಯದ ಸಮಸ್ಯೆ ತೀವ್ರವಾಗಿ ಕಾಡುತ್ತಿದ್ದ ಸಂದರ್ಭದಲ್ಲೂ ಮಠದ ನೂತನ ಕಟ್ಟಡ ನಿರ್ಮಾಣದ ಸ್ಥಳಕ್ಕೆ ಆಗಮಿಸುವುದನ್ನು ಒಂದು ದಿನವೂ ತಪ್ಪಿಸುತ್ತಿರಲಿಲ್ಲ. ಶೀಘ್ರ ಮಠ ಪೂರ್ಣಗೊಳಿಸಬೇಕು ಎನ್ನುವುದೇ ಅವರ ಧ್ಯೇಯವಾಗಿತ್ತು. ಬೇರೆಯವರ ಕಷ್ಟಕ್ಕೆ ಸದಾ ಮರುಗುತ್ತಿದ್ದರು. ಭವಿಷ್ಯದಲ್ಲಿ ಸಮಾಜವನ್ನು ಹೇಗೆ ಸಂಘಟಿಸಬೇಕು ಎನ್ನುವುದನ್ನು ತೋರಿಸಿ ಹೋದರು. ಅವರು ನನಗೆ ಹಿರಿಯ ಗುರುಗಳಿಗಿಂತ ಹೆಚ್ಚಾಗಿ ತಂದೆಯ  ಸ್ಥಾನದಲ್ಲಿದ್ದರು...-ಇದು ಹರಿಹರ ಸಮೀಪದ ವೀರಶೈವ ಲಿಂಗಾಯತ ಪಂಚಮಸಾಲಿ ಪೀಠದಲ್ಲಿ ಮಂಗಳವಾರ ನಡೆದ ಡಾ.ಮಹಾಂತ ಶಿವಾಚಾರ್ಯ ಶ್ರೀಗಳ ಕ್ರಿಯಾಸಮಾಧಿಗೂ ಮುನ್ನ ಮಾತನಾಡಿದ ಮಠದ ಚರಪೀಠಾಧಿಪತಿ ಸಿದ್ದಲಿಂಗೇಶ್ವರ ಶ್ರೀಗಳ ಅಂತರಾಳದ ಮಾತು.ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನಕ್ಕೆ ಆಗಮಿಸಿದ ಅಪಾರ ಸಂಖ್ಯೆಯ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಅವರು, ಮನಗೂಳಿ ಹಿರೇಮಠದ ಉಸ್ತುವಾರಿ ವಹಿಸಿಕೊಂಡು ಅದನ್ನು ಬಲಿಷ್ಠವಾಗಿಸಿದ್ದ ಶ್ರೀಗಳು, ಪಂಚಮಸಾಲಿ ಪೀಠಾಧಿಪತಿಯಾದ ನಂತರ ಅವರ ಗುರಿ ಸಮಾಜವನ್ನು ಸದೃಢವಾಗಿ ಸಂಘಟಿಸುವುದು ಹಾಗೂ ಬಲಿಷ್ಠ ಮಠವನ್ನು ಕಟ್ಟುವುದಾಗಿತ್ತು. ಕೊನೆಯ ದಿನಗಳವರೆಗೂ ಮಠದ ಕಟ್ಟಡ ನಿರ್ಮಾಣ ಶೀಘ್ರ ಪೂರ್ಣಗೊಳಿಸಬೇಕು ಎಂದು ಆಶಯ ಹೊಂದಿದ್ದರು. ಅವರ ಆಸೆ ಶೀಘ್ರದಲ್ಲೇ ನೆರವೇರಿಸಲಾಗುವುದು ಎಂದು ಘೋಷಿಸಿದರು.ಸಿರಿಗೆರೆ ತರಳಬಾಳು ಮಠದ ಡಾ.ಶಿವಮೂರ್ತಿ ಸ್ವಾಮೀಜಿ ಮಾತನಾಡಿ, ಶ್ರೀಗಳ ನಿಧನದಿಂದ ಅಘಾತವಾಗಿದೆ. ಇಡೀ ಸಮಾಜ ಬೆಚ್ಚಿ ಬೀಳುವಂತಾಗಿದೆ. ಸಾವು ಯಾರನ್ನೂ ಬಿಟ್ಟಿಲ್ಲ. ಸಾವನ್ನು ಜಯಿಸಿದವನೇ ನಿಜ ಶರಣ. ಅವರ ದೇಹ ಮಾತ್ರ ನಮ್ಮಿಂದ ದೂರವಾಗಿದೆ. ಅವರ ಆಚಾರ-ವಿಚಾರ ನಮ್ಮ ಜತೆ ಸದಾ ಇರುತ್ತವೆ. ಸಮಾಜದ ದುಃಖದಲ್ಲಿ ತಾವೂ ಬಾಗಿ ಎಂದರು.ಮಹಾಂತ ಸ್ವಾಮೀಜಿ ಜತೆಗಿನ ತಮ್ಮ ದೀರ್ಘಕಾಲದ ಒಡನಾಟವನ್ನು ಸ್ಮರಿಸಿದ ಅವರು, `ಶ್ರೀಗಳ ಸಮಾಧಿ ಪಂಚಮಸಾಲಿ ಸಮಾಜಕ್ಕೆ ಭದ್ರ ಬುನಾದಿ ಆಗಲಿ' ಎಂದು ಆಶಿಸಿದರು.ಪಂಚಮಸಾಲಿ ಸಮಾಜದ ಅಧ್ಯಕ್ಷ ಬಸವರಾಜ ದಿಂಡೂರು ಮಾತನಾಡಿ, ಶ್ರೀಗಳು ಪಂಚಮಸಾಲಿ ಸಮಾಜಕ್ಕೆ ಧಾರ್ಮಿಕ ಸ್ವಾತಂತ್ರ್ಯ ನೀಡಿದ ಮಹಾನ್ ದಾರ್ಶನಿಕರು, ಅವರ ಸಹಕಾರ ಇಲ್ಲದಿದ್ದರೆ ಪೀಠ ಸ್ಥಾಪನೆಯ ಕನಸು ನನಸಾಗುತ್ತಿರಲಿಲ್ಲ ಎಂದು ಸ್ಮರಿಸಿದರು.ಲಿಂಗಾಯತ ಪಂಚಮಸಾಲಿ ಪೀಠದ ಜಯಮೃತ್ಯುಂಜಯ ಸ್ವಾಮೀಜಿ, ಪಾಂಡೋಮಟ್ಟಿ ಗುರುಬಸವ ಸ್ವಾಮೀಜಿ, ಸೊನ್ನದ ಶಿವಾನಂದ ಶ್ರೀ, ಬೆಕ್ಕಿನ ಕಲ್ಮಠದ ಮಲ್ಲಿಕಾರ್ಜುನ ಶ್ರೀ, ಹೆಬ್ಬಾಳು ಮಹಾಂತಶ್ರೀ, ಸಿದ್ದಾರೂಢ ಶ್ರೀ, ವಾಲ್ಮೀಕಿ ಪ್ರಸನ್ನಾನಂದ ಶ್ರೀ, ಕಾಗಿನೆಲೆ ಕನಕ ಪೀಠದ ನಿರಂಜನಾನಂದ ಶ್ರೀ, ಭೋವಿ ಗುರುಪೀಠದ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ವಚನಾನಂದ ಶ್ರೀ, ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಚಿವ ಮುರುಗೇಶ ನಿರಾಣಿ, ಎಸ್.ಕೆ. ಬೆಳ್ಳುಬ್ಬಿ, ಶಾಸಕ ಬಿ.ಪಿ. ಹರೀಶ್, ಸಾರ್ವಭೌಮ ಬಗಲಿ, ಮಾಜಿ ಶಾಸಕ   ಎಚ್.ಎಸ್. ಶಿವಶಂಕರ್, ಮಾಜಿ ಸಚಿವ ಸಿದ್ದನಗೌಡರ್, ಬಸವರಾಜ ಪಾಟೀಲ್ ಯತ್ನಾಳ್, ಪ್ರಭಣ್ಣ ಹುಣಸೇಕಟ್ಟಿ, ಶಿವರಾಮೇಗೌಡ, ಮೋತಿ ವೀರಣ್ಣ, ಎಚ್. ಆಂಜನೇಯ, ಚಿಕ್ಕನ ಗೌಡರ್ ಭಾಗವಹಿಸಿದ್ದರು. ಜಿಲ್ಲಾಧಿಕಾರಿ ಎಸ್.ಎಸ್. ಪಟ್ಟಣಶೆಟ್ಟಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಾಭೂರಾಂ, ತಹಶೀಲ್ದಾರ್ ಜಿ. ನಜ್ಮಾ ಸುಗಮ ಕಾರ್ಯನಿರ್ವಹಣೆಯ ಹೊಣೆ ನಿರ್ವಹಿಸಿದರು.ಹರಿದು ಬಂದ ಜನ ಸಾಗರ...

ಶ್ರೀಗಳ ಕ್ರಿಯಾ ಸಮಾಧಿ ಕಾರ್ಯಕ್ರಮದಲ್ಲಿ ಭಾಗವಹಿಸಲು ರಾಜ್ಯದ ಮೂಲೆಮೂಲೆಗಳಿಂದ ಅಪಾರ ಸಂಖ್ಯೆ ಭಕ್ತರು ಆಗಮಿಸಿದ್ದರು. ಅದರಲ್ಲೂ ಉತ್ತರ ಕರ್ನಾಟಕದ ಜನರು ಹೆಚ್ಚು ಆಗಮಿಸಿದ್ದರು. ಬಂದ ಜನರಿಗೆ ಜಿಲ್ಲಾಡಳಿತ, ತಾಲ್ಲೂಕು ಆಡಳಿತ ಹಾಗೂ ಮಠದ ವತಿಯಿಂದ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿತ್ತು. ಬಂದ ಭಕ್ತರಿಗೆ ಉಪಾಹಾರದ ವ್ಯವಸ್ಥೆ ಮಾಡಲಾಗಿತ್ತು. ಜನ ಜಂಗುಳಿ ನಿಯಂತ್ರಣಕ್ಕೆ ಜಿಲ್ಲಾ ಪೊಲೀಸರು ಸೂಕ್ತ ವ್ಯವಸ್ಥೆ ಮಾಡಿದ್ದರು.14ರಿಂದ ಭಾವೈಕ್ಯ ಸಮಾವೇಶ

ಪಂಚಮಸಾಲಿ ಪೀಠ ಅಸ್ತಿತ್ವಕ್ಕೆ ಬಂದ ಫೆಬ್ರುವರಿ ತಿಂಗಳನ್ನು ಸಮಾಜದ  ಜನರು ಧಾರ್ಮಿಕ ಸ್ವಾತಂತ್ರವನ್ನಾಗಿ ಆಚರಿಸಬೇಕು ಎಂದು ಕರೆ ನೀಡಿದ್ದರು. 5ನೇ ಪೀಠಾರೋಹಣ ಸಮಾರಂಭ ಫೆ. 14ರಿಂದ 18ರವರೆಗೆ ಹಗರಿ ಬೊಮ್ಮನಹಳ್ಳಿಯಲ್ಲಿ ನಡೆಯಬೇಕು ಎಂದು ಆದೇಶ ನೀಡಿದ್ದರು. ಅವರ ಆಶಯದಂತೆ 14ರಿಂದ 5ದಿನಗಳ ಕಾಲ ಅದ್ದೂರಿಯಾಗಿ ಪಟ್ಟಾಭಿಷೇಕ ಮಹೋತ್ಸವ ನಡೆಸಲಾಗುವುದು ಎಂದು ಸಿದ್ದಲಿಂಗೇಶ್ವರ ಶ್ರೀ ತಿಳಿಸಿದರು.11ಕ್ಕೆ ಸ್ಮರಣೋತ್ಸವ

ಶ್ರೀಗಳ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಫೆ. 11ರಂದು ಬೆಳಿಗ್ಗೆ 11ಕ್ಕೆ ಹರಿಹರ ಸಮೀಪದ ಪೀಠದ ಆವರಣದಲ್ಲಿ ಹಮ್ಮಿಕೊಳ್ಳಲಾಗಿದೆ. ಎಲ್ಲ ಭಕ್ತರು ಆಗಮಿಸಬೇಕು ಎಂದು ಮಠದ ಮುಖಂಡರು ಕೋರಿದ್ದಾರೆ.ಹೆದ್ದಾರಿ ಬಂದ್; ಮಾರ್ಗ ಬದಲು

ಪಂಚಮಸಾಲಿ ಪೀಠದಲ್ಲಿ ಮಂಗಳವಾರ ಶ್ರೀಗಳ ಕ್ರಿಯಾ ಸಮಾಧಿ ಇದ್ದ ಕಾರಣ ಹರಿಹರ- ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿ ಸಂಚರಿಸುವ ವಾಹನಗಳ ಮಾರ್ಗ ಬದಲಿಸಲಾಗಿತ್ತು. ವಾಹನಗಳು ಬೆಳ್ಳೂಡಿ, ಹನಗವಾಡಿ ಬೈಪಾಸ್ ಮೂಲಕ ಸಂಚರಿಸಿದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry