ಶುಕ್ರವಾರ, ನವೆಂಬರ್ 22, 2019
20 °C

`ಕಾಯಿಲೆಯೇ ಇಲ್ಲ; ಸರ್ಜರಿ ಬೇಕಿಲ್ಲ'

Published:
Updated:
`ಕಾಯಿಲೆಯೇ ಇಲ್ಲ; ಸರ್ಜರಿ ಬೇಕಿಲ್ಲ'

ಬೆಂಗಳೂರು: `ಕೆಎಂಎಫ್‌ಗೆ ಯಾವ ಕಾಯಿಲೆಯೂ ಇಲ್ಲ, ಹೀಗಾಗಿ ಅದಕ್ಕೆ ಸರ್ಜರಿಯ ಅವಶ್ಯಕತೆಯೇ ಇಲ್ಲ' ಎನ್ನುತ್ತಾರೆ ಸಂಸ್ಥೆಯ ಪ್ರಭಾರ ವ್ಯವಸ್ಥಾಪಕ ನಿರ್ದೇಶಕ (ಎಂ.ಡಿ) ಎ.ಎಸ್.ಪ್ರೇಮನಾಥ್. ನಿಕಟಪೂರ್ವ ಎಂ.ಡಿ. ಹರ್ಷಗುಪ್ತ ಅವರು ಕೆಎಂಎಫ್‌ನ ಅವ್ಯವಸ್ಥೆ ಮತ್ತು ಸುಧಾರಣೆ ಕುರಿತು ಸರ್ಕಾರಕ್ಕೆ ಬರೆದಿರುವ ಸುದೀರ್ಘ ಪತ್ರದ ಹಿನ್ನೆಲೆಯಲ್ಲಿ `ಪ್ರಜಾವಾಣಿ' ನಡೆಸಿದ ಸಂದರ್ಶನದಲ್ಲಿ ಅವರು ಹೀಗೆ ಪ್ರತಿಕ್ರಿಯಿಸಿದ್ದಾರೆ.ಸಂದರ್ಶನದ ಆಯ್ದ ಭಾಗ ಇಲ್ಲಿದೆ

* ಕೆಎಂಎಫ್‌ನ ಅವ್ಯವಸ್ಥೆ ಕುರಿತ ಹರ್ಷ ಗುಪ್ತ ಟೀಕೆಗೆ ಏನು ಹೇಳುತ್ತೀರಿ?

ಹರ್ಷ ಗುಪ್ತ ಅವರು ಒಳ್ಳೆಯ ಅಧಿಕಾರಿ ಎಂಬುದರಲ್ಲಿ ಎರಡು ಮಾತಿಲ್ಲ. `ಸಾವಿಲ್ಲದ ಮನೆಯನ್ನು ಹುಡುಕಿ ಸಾಸಿವೆ ತರಲು ಸಾಧ್ಯವಿಲ್ಲ' ಎಂಬ ಮಾತಿನಂತೆ ಇಲ್ಲೂ ಕೆಲವು ಸಮಸ್ಯೆಗಳು ಇರಬಹುದು. ಆದರೆ ಅದನ್ನೇ ದೊಡ್ಡದು ಮಾಡಲಾಗದು. ಅವರು ಸಂಸ್ಥೆಯ ಬಗ್ಗೆ ಪೂರ್ಣ ಅಧ್ಯಯನ ಮಾಡದೆ ಅರೆಬರೆ ಮಾಹಿತಿ ತಿಳಿದು ಆರೋಪಗಳನ್ನು ಮಾಡಿದ್ದಾರೆ.ನಾವು ಮಾಡುತ್ತಿರುವುದು ರೈತರು, ಜಾನುವಾರುಗಳ ಸೇವೆ ಮಾಡುವ ಪುಣ್ಯದ ಕೆಲಸ. `ನಂದಿನಿ' ಅತ್ಯಂತ ನಂಬಿಕಾರ್ಹ ಬ್ರಾಂಡ್ ಎಂದು ರಾಷ್ಟ್ರೀಯ ನಿಯತಕಾಲಿಕದ ಸಮೀಕ್ಷೆಯೊಂದು ಗುರುತಿಸಿದೆ. ಹಸುಗಳ ಸಂತಾನೋತ್ಪತ್ತಿಯಲ್ಲಿ ಸಂಸ್ಥೆ ದೇಶದಲ್ಲೇ ಮೊದಲ ಸ್ಥಾನದಲ್ಲಿದೆ. ಇಲ್ಲಿನ ವೀರ್ಯ ನಳಿಕೆಗಳು ಹೊರ ರಾಜ್ಯಗಳಿಗೆ ಸರಬರಾಜಾಗುತ್ತಿವೆ. ಶಿವಮೊಗ್ಗ, ರಾಮನಗರದಲ್ಲೂ ಮೇವು ತಯಾರಿಕಾ ಘಟಕಗಳನ್ನು ಆರಂಭಿಸಲು ಯೋಜನೆ ಸಿದ್ಧವಾಗಿದೆ.`ಅಮುಲ್'ಗೆ ಐಸ್‌ಕ್ರೀಂ, ಮೊಸರನ್ನು ನಾವು ಉತ್ಪಾದಿಸಿ ಕೊಡುತ್ತಿದ್ದೇವೆ. ಸೇನೆಗೆ, ಬಾಂಗ್ಲಾ, ಶ್ರೀಲಂಕಾ, ಸಿಂಗಪುರಕ್ಕೆ `ಯುಎಚ್‌ಟಿ' ಹಾಲು ಪೂರೈಸುತ್ತಿದ್ದೇವೆ. ತಿರುಪತಿಗೆ 250- 350 ಟನ್ ತುಪ್ಪ ಹೋಗುತ್ತಿದೆ. ನಮ್ಮ ಸಿಹಿ ತಿಂಡಿಗಳು ವಿದೇಶಗಳಿಗೆ ರಫ್ತಾಗುತ್ತಿವೆ.

* ಕೋಟ್ಯಂತರ ರೂಪಾಯಿ ನಷ್ಟ ಹೇಗೆ ಸರಿದೂಗಿಸುವಿರಿ?

ಕೆಎಂಎಫ್‌ಗೆ ಆಗಿರುವ ನಷ್ಟ ತಾತ್ಕಾಲಿಕ ಕಾರ್ಮೋಡದಂತೆ. ಕ್ರಮೇಣ ಈ ಕಾರ್ಮೋಡ ಕರಗಿಹೋಗುತ್ತದೆ.* ಹಾಲಿನ ಕೊಡು- ಕೊಳ್ಳುವಿಕೆ ದರದ ಬಗ್ಗೆ ರೈತರು- ಗ್ರಾಹಕರಿಗೆ ಇರುವ ಅಸಮಾಧಾನ ಸರಿಪಡಿಸುವ ಬಗೆ?

ನಮ್ಮ ಹಾಲು ಮಾರಾಟ ದರ ದೇಶದಲ್ಲೇ ಅತ್ಯಂತ ಕಡಿಮೆ. ತಮಿಳುನಾಡಿನಲ್ಲಿ 2011ರಿಂದಲೇ ಹಾಲಿನ ದರ  ರೂ. 27  ಇದೆ. ದಿನಕ್ಕೆ ಸಂಗ್ರಹವಾಗುವ 50 ಲಕ್ಷ ಲೀಟರ್ ಹಾಲಿನಲ್ಲಿ ಮಾರಾಟ ಆಗುವುದು ಕೇವಲ 30 ಲಕ್ಷ ಲೀಟರ್. ಇನ್ನುಳಿದ ಹೆಚ್ಚುವರಿ ಹಾಲಿಗೆ ಇತ್ತೀಚಿನ  ರೂ. 3  ಬೆಲೆ ಹೆಚ್ಚಳ ಅನ್ವಯ ಆಗುವುದಿಲ್ಲ.`ಹಾಲಿನ ರಜೆ' ಇಲ್ಲ: ಹೊರ ರಾಜ್ಯಗಳಲ್ಲಿ ಹೆಚ್ಚುವರಿ ಹಾಲು ಸಂಗ್ರಹವಾದರೆ ವಾರಕ್ಕೆ ಒಂದು ದಿನ `ಹಾಲಿನ ರಜೆ' ಘೋಷಿಸುತ್ತಾರೆ. ಆದರೆ 1985ರಿಂದೀಚೆಗೆ ಕೆಎಂಎಫ್ ಅಂತಹ ಕ್ರಮಕ್ಕೆ ಮುಂದಾಗಿಲ್ಲ. ರೈತರಿಗೆ ಕೊಡುವ ದರದಲ್ಲಿ ಗುಜರಾತ್ ರೂ. 7  , ಆಂಧ್ರ ಪ್ರದೇಶ ರೂ. 9 ಮಾರ್ಜಿನ್ ಇಟ್ಟುಕೊಂಡಿವೆ. ಖಾಸಗಿ ಕಂಪೆನಿಗಳಂತೂ ರೂ.10- 11  ಮಾರ್ಜಿನ್ ಇಟ್ಟುಕೊಳ್ಳುತ್ತಿವೆ. ನಾವು ಲೀಟರ್‌ಗೆ ಕೇವಲ ರೂ.3 ರಲ್ಲಿ ಕಾರ್ಯ ನಿರ್ವಹಿಸುತ್ತಿದ್ದೇವೆ. ಸಾಗಾಣಿಕೆ, ಸಂಸ್ಕರಣೆ, ಪ್ಯಾಕಿಂಗ್, ಏಜೆಂಟ್ ಕಮಿಷನ್ ಎಲ್ಲವನ್ನೂ ಇದರಲ್ಲೇ ಸರಿದೂಗಿಸುತ್ತಿದ್ದೇವೆ. ಇದರಲ್ಲಿ ಪ್ರಚಾರದ ವೆಚ್ಚ ಸೇರಿಲ್ಲ. ನಮ್ಮ ಕೋರಿಕೆಯ ಮೇರೆಗೆ, ದಿ. ಡಾ. ರಾಜ್‌ಕುಮಾರ್, ಪುನೀತ್, ಉಪೇಂದ್ರ ಅವರೆಲ್ಲರೂ ಸಂಸ್ಥೆಯ ಉತ್ಪನ್ನಗಳ ಜಾಹೀರಾತುಗಳಲ್ಲಿ ಯಾವುದೇ ಸಂಭಾವನೆ ಪಡೆಯದೆ ಕಾಣಿಸಿಕೊಂಡಿದ್ದಾರೆ.ಬೆಳಿಗ್ಗೆ ಮತ್ತು ಸಂಜೆ ಹಾಲು ಶೇಖರಿಸಲು ಒಟ್ಟು 2120 ವಾಹನಗಳು 3.60 ಲಕ್ಷ ಕಿ.ಮೀ ಓಡಾಡುತ್ತವೆ. ಇದಕ್ಕೆ 52 ಸಾವಿರ ಲೀಟರ್ ಡೀಸೆಲ್ ಬೇಕು. ಇನ್ನು ವಿತರಣೆಗೆ 885 ವಾಹನಗಳು 1.56 ಲಕ್ಷ ಕಿ.ಮೀ. ಕ್ರಮಿಸುತ್ತವೆ. ಇದಲ್ಲದೆ 200 ಹಾಲಿನ ಟ್ಯಾಂಕರ್‌ಗಳೂ ಇವೆ.* ಎಂ.ಡಿ ಸ್ಥಾನಕ್ಕೆ ಐಎಎಸ್ ಅಧಿಕಾರಿಗಳನ್ನು ನೇಮಿಸುವುದಕ್ಕೆ ವಿರೋಧ ಯಾಕೆ?

1993ರಿಂದ ಐಎಎಸ್ ಅಧಿಕಾರಿಗಳನ್ನು ನೇಮಿಸುವ ಪರಿಪಾಠ ಸ್ಥಗಿತಗೊಂಡಿದ್ದರಿಂದಲೇ ಸಂಸ್ಥೆ ಬೆಳೆಯಲು ಸಾಧ್ಯವಾಯಿತು. `ಅಮುಲ್'ನಲ್ಲಿ ಐಎಎಸ್ ಅಧಿಕಾರಿಗಳಿಲ್ಲ. ನಾವು ಎರಡನೇ ಸ್ಥಾನಕ್ಕೆ ಏರುವುದೆಂದರೆ ಮ್ಯಾಜಿಕ್ ಮಾಡಿದಂತಲ್ಲ. ತಮಿಳುನಾಡು, ಆಂಧ್ರ, ಕೇರಳ ಹಾಲು ಮಹಾಮಂಡಳಗಳಲ್ಲಿ ಐಎಎಸ್ ಆಡಳಿತ ಇದೆ. ಅಧಿಕಾರಶಾಹಿಯ ನಿರ್ವಹಣೆಗೆ ಒಳಪಟ್ಟಿರುವುದರಿಂದಲೇ ಅಲ್ಲಿ ಅಭಿವೃದ್ಧಿ ಸಾಧ್ಯವಾಗಿಲ್ಲ.* ಮಾರುಕಟ್ಟೆ ವಿಸ್ತರಣೆಗೆ ಯುವ ಪರಿಣತರನ್ನು ನೇಮಿಸಲು ಗುಪ್ತ ಅವರು ಸಲಹೆ ನೀಡಿದ್ದಾರಲ್ಲ?

ಗುಪ್ತ ಅವರು ಹೇಳುವಂತೆ ಐಐಎಂನಲ್ಲಿ ಕಲಿತವರನ್ನು ಮಾರುಕಟ್ಟೆ ವಿಭಾಗಕ್ಕೆ ನೇಮಕ ಮಾಡಿಕೊಂಡರೆ ಸಾಕಷ್ಟು ಸಮಸ್ಯೆಗಳಾಗುತ್ತವೆ. ಮೊದಲಾಗಿ ಅವರಿಗೆ ನಮ್ಮ ಭಾಷೆ ಬರದು. ಹೇಳಿಕೇಳಿ ನಾವು ಹೆಚ್ಚು ವ್ಯವಹರಿಸಬೇಕಾಗಿರುವುದು ರೈತರೊಂದಿಗೆ. ಅಲ್ಲದೆ ಅವರು ಕೇಳುವ ಲಕ್ಷಗಟ್ಟಲೆ ಸಂಬಳವನ್ನು ನಾವು ಕೊಡಲಿಕ್ಕಾಗದು. ಎಂ.ಡಿ.ಗೇ ಸಂಬಳ ಸಾವಿರದಲ್ಲಿ ಇರುವಾಗ ಎಂಬಿಎ ಓದಿದವರು ಲಕ್ಷದಲ್ಲಿ ಕೇಳುವ ಸಂಬಳವನ್ನು ಹೇಗೆ ಕೊಡುವುದು?* ಪಶು ಆಹಾರ ದರ ಮತ್ತು ಗುಣಮಟ್ಟದ ಬಗ್ಗೆ ಅಪಸ್ವರ ಕೇಳಿಬರುತ್ತಿದೆಯಲ್ಲ?

ತಿಂಗಳಿಗೆ 40 ಸಾವಿರ ಟನ್ ಉತ್ತಮ ಗುಣಮಟ್ಟದ ಪಶು ಆಹಾರವನ್ನು ಸಂಸ್ಥೆ ರೈತರಿಗೆ ಸಾಧ್ಯವಾದಷ್ಟೂ ರಿಯಾಯಿತಿ ದರದಲ್ಲೇ ನೀಡಿ ಬೃಹತ್ ನಷ್ಟವನ್ನು ತಲೆಮೇಲೆ ಹೊತ್ತುಕೊಳ್ಳುತ್ತಿದೆ. ದಿನದಿಂದ ದಿನಕ್ಕೆ ಕಚ್ಚಾ ಸಾಮಗ್ರಿಗಳ ಬೆಲೆ ಹೆಚ್ಚುತ್ತಿರುವುದು ತೀವ್ರ ಆರ್ಥಿಕ ಸಮಸ್ಯೆ ತಂದೊಡ್ಡಿದೆ. ಕಚ್ಚಾ ಸಾಮಗ್ರಿಗಳನ್ನು ಬಿಎಎಸ್ ನಿಗದಿತ ಗುಣಮಟ್ಟದಂತೆ ಇ- ಟೆಂಡರ್‌ನಡಿ ಖರೀದಿಸಲಾಗುತ್ತಿದೆ. ಕಚ್ಚಾ ಸಾಮಗ್ರಿಗಳ ಮಾದರಿಯನ್ನು ನಮ್ಮ ಗುಣಮಟ್ಟ ನಿಯಂತ್ರಣ ವಿಭಾಗದಲ್ಲಿ ಮಾತ್ರವಲ್ಲದೆ ಎನ್‌ಡಿಆರ್‌ಐ/ ಎನ್‌ಡಿಡಿಬಿ ಪ್ರಯೋಗಾಲಯಗಳಿಗೂ ಕಳುಹಿಸಿ ಕಟ್ಟುನಿಟ್ಟಾಗಿ ಪರಿಶೀಲಿಸಲಾಗುತ್ತಿದೆ. ಆದ್ದರಿಂದ ಯಾರೇ ಆಗಲಿ ನಮ್ಮ ಪಶು ಆಹಾರದ ಗುಣಮಟ್ಟದ ಬಗ್ಗೆ ಅಪನಂಬಿಕೆ ಹೊಂದುವುದು ಸರಿಯಲ್ಲ.* ರಾಜಕೀಯ ಹಸ್ತಕ್ಷೇಪದ ಬಿಸಿ ಸಂಸ್ಥೆಗೆ ಹೇಗೆ ತಟ್ಟುತ್ತಿದೆ?

ಸಂಸ್ಥೆಯಲ್ಲಿ ಸರ್ಕಾರದ ಹಸ್ತಕ್ಷೇಪ ಇಲ್ಲ. ಆಂತರಿಕ ಕಾರಣಗಳಿಂದ ಎಂ.ಡಿ ಹುದ್ದೆಗೆ ಬದಲಾವಣೆ ಆಗಿದೆ ಹೊರತು ಯಾವುದೇ ರಾಜಕೀಯ ನಾಯಕರ ಒತ್ತಡದಿಂದಲ್ಲ. ಅಕ್ಟೋಬರ್‌ನಲ್ಲಿ ಕೆಲವು ವಿದ್ಯಮಾನಗಳಿಂದ ಬೇಸತ್ತು ರಾಜೀನಾಮೆ ನೀಡಿ ಹೊರನಡೆದಿದ್ದ ನಾನು, ಸಂಸ್ಥೆಯಲ್ಲಿ ಹಿರಿಯ ಹಾಗೂ ಅನುಭವಿ ಅಧಿಕಾರಿಗಳ ಕೊರತೆಯಿಂದಾಗಿ ಮತ್ತೊಮ್ಮೆ ಪ್ರಭಾರ ಎಂ.ಡಿ. ಆಗಿ ಕಾರ್ಯಭಾರ ವಹಿಸಿಕೊಂಡಿದ್ದೇನೆ. ಇಲ್ಲದಿದ್ದರೆ ಹೆಚ್ಚುವರಿ ಹಾಲು ಉತ್ಪನ್ನಗಳ ದಾಸ್ತಾನು, ಪಶು ಆಹಾರ ಮಾರಾಟದಲ್ಲಿ ಕೋಟಿಗಟ್ಟಲೆ ನಷ್ಟ, ಜೊತೆಯಲ್ಲಿ ಆಗಿಂದಾಗ್ಗೆ ಹುದ್ದೆಯಿಂದ ಬದಲಾವಣೆ ಮಾಡಿದಾಗ ಆಗುವ ಮಾನಸಿಕ ಆಘಾತದಂತಹ ಸಮಸ್ಯೆಗಳು ಜ್ವಲಂತವಾಗಿ ಇರುವಾಗ ಈ ಸ್ಥಾನದಲ್ಲಿ ಕೂರಲು ಯಾರಿಗೂ ಆಸಕ್ತಿ ಇರುವುದಿಲ್ಲ. ಕಾಯಂ ಎಂ.ಡಿ. ನಿಯೋಜನೆ ಸಾಧ್ಯವಾಗದೆ ಆಡಳಿತಾತ್ಮಕ ಅಡೆತಡೆಗಳು ಉಂಟಾಗುತ್ತಿವೆ. ಶೀಘ್ರದಲ್ಲಿ ಈ ಸಮಸ್ಯೆ ಬಗೆಹರಿಸಲು ಆಡಳಿತ ಮಂಡಳಿ ಯೋಜಿಸಿದೆ.ಕ್ರಮಿಸಬೇಕಾದ ಹಾದಿ ದೂರ...

ಸಂಸ್ಥೆಯ ಈ ಎಲ್ಲ ತಾಂತ್ರಿಕ ಸ್ಪಷ್ಟನೆಗಳ ನಡುವೆಯೂ, ಅದು ಕ್ರಮಿಸಬೇಕಾದ ಹಾದಿ ಬಹು ದೂರ ಇದೆ ಎಂಬುದನ್ನು ಯಾರೂ ಅಲ್ಲಗಳೆಯುವುದಿಲ್ಲ. `ಎಲ್ಲರಿಗೂ ಸಾರಾಸಗಟಾಗಿ ಪ್ರೋತ್ಸಾಹಧನ ನೀಡುವುದಕ್ಕಿಂತ, ಗುಣಮಟ್ಟಕ್ಕೆ ತಕ್ಕಂತೆ ವಿತರಿಸಿದರೆ ರೈತರಲ್ಲಿ ಹಾಲಿನ ಗುಣಮಟ್ಟದ ಬಗ್ಗೆ ಜಾಗೃತಿ ಮೂಡುತ್ತದೆ' ಎನ್ನುವ ಇಟಗಿಯ ಜಗದೀಶ ಪಾಟೀಲ್, `ಬೆಂಗಳೂರು ಜಿಲ್ಲೆ ವ್ಯಾಪ್ತಿಯಲ್ಲಿ ಮಾತ್ರ ಇರುವ ಹಸುಗಳ ಗುಂಪು ವಿಮಾ ಯೋಜನೆ ರಾಜ್ಯದಾದ್ಯಂತ ಜಾರಿಯಾಗಬೇಕು' ಎನ್ನುವ ಕೆಎಂಎಫ್ ಬೆಂಗಳೂರು ನಿರ್ದೇಶಕ ಪಿ.ನಾಗರಾಜ್, `ನಮ್ಮೂರಿನ ಚೆನ್ನಮ್ಮ ತನ್ನ ಹಸು ಕರೆಯುವ ಕೇವಲ 200 ಗ್ರಾಂ ಹಾಲನ್ನೇ ತಂದು ಸೊಸೈಟಿಗೆ ಹಾಕ್ತಾಳೆ. ಏನಮ್ಮ ಇಷ್ಟೇ ಇಷ್ಟು ಹಾಲನ್ನೂ ಹಾಕ್ತೀಯಲ್ಲ, ಕಾಯಿಸಿಕೊಂಡು ಕುಡೀಬಾರದಾ ಎಂದರೆ, ಅಯ್ಯೋ ಬಿಡಪ್ಪ ಬಂದಷ್ಟು ಬರಲಿ ಬಟ್ಟೆಸೋಪು ಕೊಳ್ಳಕ್ಕಾದ್ರೂ ದುಡ್ಡಾಗುತ್ತೆ ಎನ್ನುತ್ತಾಳೆ' ಎಂದು ಹಳ್ಳಿಗಳ ನೈಜ ಚಿತ್ರಣವನ್ನು ತೆರೆದಿಡುವ ಮಂಡ್ಯದ ಕೃಷ್ಣೇಗೌಡ, `ಯಾವ ಕಡೆ ಹೋದ್ರೂ ರೈತ್ರಿಗೆ ಶೋಷಣೆ ತಪ್ಪಿದ್ದಲ್ಲ. ಸೊಸೈಟಿ ಕಾರ್ಯದರ್ಶಿಗಳ್ನ ಬಂದು ನೋಡಿ. ಎಷ್ಟೇ ಬಡವ ಆಗಿದ್ರೂ ಐದ್ ವರ್ಷ ಆ ಕೆಲ್ಸ ಮಾಡಿದ್ರೂ ಸಾಕು ಲಕ್ಷಾಧೀಶ ಆಗ್‌ಬಹ್ದು.ಫ್ಯಾಟ್ ಇಲ್ಲ, ಎಸ್‌ಎನ್‌ಎಫ್ ಇಲ್ಲ ಅಂತ ರೈತ್ರಿಗೆ ಕಿರಿಕಿರಿ ಮಾಡ್ಕೊಂಡೇ ಲೀಟರ್‌ಗಟ್ಲೆ ಹಾಲು ಹೊಡ್ಕೊಂಡು ದುಡ್ಡು ಮಾಡ್ಕೊಂಡವ್ರ ಎಷ್ಟ್ ಜನ ಬೇಕು ಬನ್ನಿ ತೋರಿಸ್ತೀನಿ' ಎಂದು ಸವಾಲು ಹಾಕುವ ಚನ್ನಪಟ್ಟಣದ ನಾಗರಾಜ ಮುಂತಾದವರು ವಾಸ್ತವ ಸ್ಥಿತಿಗೆ ಕನ್ನಡಿ ಹಿಡಿಯುತ್ತಾರೆ.ಸಂಸ್ಥೆ ಉಳಿಯಲು ಸಲಹೆ: ಹಾಲು ಉತ್ಪಾದಕ ಸೊಸೈಟಿಗಳಿಗೆ ಸ್ವಂತ ಕಟ್ಟಡ, ಪ್ರತಿ ಹಳ್ಳಿಯಲ್ಲೂ ಬಲ್ಕ್ ಮಿಲ್ಕ್ ಕೂಲರ್‌ಗಳ ಸ್ಥಾಪನೆ, ಹಾಲು ಹಿಂಡುವ ಯಂತ್ರಗಳ ವಿತರಣೆ, ಹಸುಗಳ ರೋಗ ಪತ್ತೆ ಪ್ರಯೋಗಾಲಯಗಳು, ನಾಟಿ ಹಸುಗಳಿಗೆ ಉತ್ತೇಜನ, ಅಧಿಕಾರಿಗಳ ವಿರುದ್ಧದ ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಕ್ರಮ, ರಾಜಕೀಯ ಹಸ್ತಕ್ಷೇಪಕ್ಕೆ ತಡೆ, ಕಾರ್ಯದರ್ಶಿಗಳಿಗೆ ನಿಗದಿತ ಸಂಬಳ, ಕಂಪ್ಯೂಟರ್ ತರಬೇತಿ, ಗೋಮಾಳಗಳ ಉಳಿವಿಗೆ ಕೋರ್ಟ್ ಆದೇಶದ ಕಟ್ಟುನಿಟ್ಟು ಪಾಲನೆ, ಪ್ರತಿ ಅಂಗಡಿಯಲ್ಲೂ ನಂದಿನಿ ಉತ್ಪನ್ನ ಲಭ್ಯವಾಗುವಂತಹ ಸುವ್ಯವಸ್ಥಿತ ಮಾರುಕಟ್ಟೆ ವ್ಯವಸ್ಥೆ... ಒಂದೇ ಎರಡೇ. ಸಂಸ್ಥೆಯ ಆಳಕ್ಕಿಳಿದರೆ ಇಂತಹ ಹತ್ತಾರು, ನೂರಾರು ಸಲಹೆಗಳು, ಅಸಮಾಧಾನ, ಅವ್ಯವಸ್ಥೆ, ಸಂಸ್ಥೆ ಉಳಿಯಲೇಬೇಕು ಎನ್ನುವ ಕಳಕಳಿ ಬಗೆದಷ್ಟೂ ಮೇಲೆದ್ದು ಬರುತ್ತವೆ.ಇಷ್ಟಾದರೂ ಕಾಲ ಮಿಂಚಿಲ್ಲ. ಏಕೆಂದರೆ ಸಹಕಾರಿ ತತ್ವದ ಆಶಯವೇ ಅಂಥಾದ್ದು. ಅಷ್ಟು ಸುಲಭದಲ್ಲಿ ಅದನ್ನು ಕೊಡವಿಕೊಳ್ಳಲು ಸಾಧ್ಯವೂ ಇಲ್ಲ. ಕೆಎಂಎಫ್ ಕೇಂದ್ರ ಕಚೇರಿಯಲ್ಲಿರುವ ವ್ಯವಸ್ಥಾಪಕ ನಿರ್ದೇಶಕರ `ಹಾಟ್‌ಸೀಟ್'ನಲ್ಲಿ ಕೂರುವವರು ಆಗಿಂದಾಗ್ಗೆ ಬದಲಾಗುತ್ತಲೇ ಇರಬಹುದು; ಆದರೆ, ಪಕ್ಕದ ಕಪಾಟಿನ ಮೇಲೆ ಇಟ್ಟಿರುವ ದೇಶದ ಹೈನೋದ್ಯಮದ ಪಿತಾಮಹ ಡಾ. ವರ್ಗೀಸ್ ಕುರಿಯನ್ ಅವರ ಭಾವಚಿತ್ರ ಮಾತ್ರ, ಯಾರು ಬಂದು ಹೋದರೂ ಬದಲಾಗದೆ ಹಾಗೇ ಉಳಿದಿರುವುದೇ ಇದಕ್ಕೆ ಸಾಕ್ಷಿ.(ಮುಗಿಯಿತು)

 

ಪ್ರತಿಕ್ರಿಯಿಸಿ (+)