ಮಂಗಳವಾರ, ನವೆಂಬರ್ 12, 2019
28 °C

ಕಾಯಿ ಕಟ್ಟದ ಬೀನ್ಸ್: ರೈತರ ಅಳಲು

Published:
Updated:

ಗುಬ್ಬಿ: ಬೆಂಗಳೂರಿನ ಪ್ರತಿಷ್ಠಿತ ಸೀಡ್ಸ್ ಕಂಪೆನಿ ನೀಡಿದ ಬೀನ್ಸ್ ತರಕಾರಿ ಕಳಪೆ ಬೀಜ ಬಿತ್ತನೆಯಿಂದ ತಾಲ್ಲೂಕಿನ ಸೋಮಲಾಪುರ, ತಿಪ್ಪೂರು ಸುತ್ತಮುತ್ತಲ ಗ್ರಾಮಸ್ಥರು ನಷ್ಟಕ್ಕೀಡಾಗಿದ್ದಾರೆ.ನಿಟ್ಟೂರಿನ ಖಾಸಗಿ ರಸಗೊಬ್ಬರದ ಅಂಗಡಿ ಮೂಲಕ ಬೆಂಗಳೂರಿನ ಅಶೋಕ್ ಸೀಡ್ಸ್ ಕಂಪೆನಿ ರೈತರಿಗೆ ಬೀಜ ವಿತರಿಸಿದೆ. ಪ್ರತಿ ಕೆ.ಜಿ.ಗೆ 800 ರೂಪಾಯಿ ನೀಡಿ ಪಡೆದ   ಬೀನ್ಸ್ ತರಕಾರಿ ಬೀಜ ಬಿತ್ತನೆ ಮಾಡಿ 65 ದಿನ ಸಂದರೂ ಬೆಳೆ ಹೋಗಲಿ ಹೂ ಕೂಡ ಬಿಟ್ಟಿಲ್ಲ ಎಂದು ರೈತರು ದೂರಿದರು.ಬೀಜ ಬಿತ್ತಿದ ಒಂದೂವರೆ ತಿಂಗಳಿಗೆ ಮೊದಲ ಬೀನ್ಸ್ ತರಕಾರಿ ಕಟಾವು ಆರಂಭವಾಗಬೇಕಿತ್ತು. ಅದಾದ ನಂತರ ಪ್ರತಿ ಐದು ದಿನಕೊಮ್ಮೆ ಕಟಾವು ಮಾಡುವ ಮೂಲಕ ಇಲ್ಲಿ ತನಕ ಐದು ಕಟಾವು ಪೂರ್ಣಗೊಳಿಸಬೇಕಿತ್ತು. ಆದರೆ ಎರಡು ತಿಂಗಳ ಮೇಲೆ ಐದು ದಿವಸ ಕಳೆದರೂ ಹೂ ಅರಳಿಲ್ಲ. ಕಾಯಿ ಬಿಟ್ಟಿಲ್ಲ ಎಂದು ತಾಲ್ಲೂಕಿನ ಸೋಮಲಾಪುರ ಗ್ರಾಮದ ಪ್ರವೀಣ್ `ಪ್ರಜಾವಾಣಿ'ಗೆ ತಿಳಿಸಿದರು.`ಬೆಳೆ ಬರೋ ಟೈಮ್‌ಗೆ ಬೆಳೆ ಸಿಗ್ತಿಲ್ಲ ಅಂತ ಹದಿನೈದು ದಿನದ ಹಿಂದೆ ಸೀಡ್ಸ್ ಕಂಪೆನಿಗೆ ದೂರವಾಣಿ ಕರೆ ಮಾಡಿ ಸಮಸ್ಯೆ ತಿಳಿಸಿದ್ದೆವು. ಆದರೆ ಇತ್ತ ತಿರುಗಿಯೂ ನೋಡಿಲ್ಲ. ಸ್ಥಳ ಪರಿಶೀಲಿಸುತ್ತೇವೆ ಎನ್ನುವ ಉತ್ತರವನ್ನು ಇಲ್ಲಿವರೆಗೂ ಹೇಳುತ್ತಲೇ ಇದ್ದಾರೆ. ಪ್ರತಿ ಎಕರೆಗೆ 80 ಸಾವಿರ ಖರ್ಚಾಗಿದೆ. ಹಣ ಕಳೆದುಕೊಂಡು ಬೆಳೆ ಬಾರದೆ ದಿಕ್ಕು ತೋಚದಾಗಿದೆ' ಎಂದು ಪ್ರವೀಣ್ ದೂರಿದರು.ಕಂಪೆನಿ ಬೀಜವನ್ನು ನಿಟ್ಟೂರಿನ ಖಾಸಗಿ ರಸಗೊಬ್ಬರದ ಅಂಗಡಿ ಮೂಲಕ ಮಾರಾಟ ಮಾಡಿದ್ದು, ರೈತರು ಕಾದು ನೋಡುವ ತಂತ್ರ ಅನುಸರಿಸಿದ್ದಾರೆ. ಸ್ಪಂದಿಸದಿದ್ದರೆ ಪ್ರತಿಭಟನೆ ಅನಿವಾರ್ಯ ಎಂದು ರೈತರಾದ ಪ್ರವೀಣ್, ಸೀಬೇಗೌಡ್ರು, ನಾಗರಾಜ್, ಸೋಮಶೇಖರ್, ಗಿರೀಶ್ ತಿಳಿಸಿದರು.

ಪ್ರತಿಕ್ರಿಯಿಸಿ (+)