ಮಂಗಳವಾರ, ಮೇ 11, 2021
19 °C

ಕಾಯ್ದೆ ತಿದ್ದುಪಡಿಗೆ ಸಮಿತಿ ರಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗುಲ್ಬರ್ಗ: ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಲೋಕಾಯುಕ್ತ ಕಾಯ್ದೆ ಉತ್ತಮವಾಗಿದ್ದು, ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಲೋಕಾಯುಕ್ತಕ್ಕೆ ಸರಿಯಾದ ಅಧಿಕಾರ ಒದಗಿಸಲು ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ಸಮಗ್ರ ತಿದ್ದುಪಡಿ ಅಗತ್ಯವಾಗಿದೆ ಎಂದು ಲೋಕಾಯುಕ್ತ ನ್ಯಾಯಮೂರ್ತಿ ಶಿವರಾಜ್ ವಿ. ಪಾಟೀಲ್ ತಿಳಿಸಿದರು.ಸೋಮವಾರ ಇಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕರ್ನಾಟಕ ಲೋಕಾಯುಕ್ತ ಕಾಯ್ದೆಗೆ ಸಮಗ್ರ ತಿದ್ದುಪಡಿ ತರಲು ಅನುವಾಗುವಂತೆ ಉಪ ಲೋಕಾಯುಕ್ತರ ಅಧ್ಯಕ್ಷತೆಯಲ್ಲಿ ಸಮಿತಿಯೊಂದನ್ನು ರಚಿಸಲಾಗಿದೆ ಎಂದರು.ವಿವಿಧ ಇಲಾಖೆಗಳ ಉನ್ನತಾಧಿಕಾರಿಗಳು ಸಮಿತಿಯಲ್ಲಿದ್ದು, ಅನುಭವದ ಆಧಾರದ ಮೇಲೆ ಸಮಗ್ರ ವರದಿಯನ್ನು ಆದಷ್ಟು ಶೀಘ್ರ ಸಲ್ಲಿಸಲು ತಿಳಿಸಲಾಗಿದೆ. ವರದಿಯ ಬಗ್ಗೆ ಸಮಗ್ರ ಚಿಂತನೆ ಮಾಡಿ ಸರ್ಕಾರಕ್ಕೆ ಸಲ್ಲಿಸಲಾಗುವುದು ಎಂದರು.“ಲೋಕಾಯುಕ್ತ ಸಂಸ್ಥೆಯಲ್ಲಿ ಭ್ರಷ್ಟರಿದ್ದರೆ ಅದನ್ನು ಸಹಿಸಲಾಗದು. ಪ್ರಾಮಾಣಿಕರಿಗೆ ಮಾತ್ರ ಸ್ಥಳಾವಕಾಶವಿದೆ. ಲೋಕಾಯುಕ್ತ ಸಂಸ್ಥೆಯಲ್ಲಿ ವಿಚಾರಣೆ, ಪೊಲೀಸ್ ಘಟಕಗಳಿದ್ದು, ಪ್ರಕರಣ ಪರಿಶೀಲಿಸಲು ಕ್ರಿಯಾಯೋಜನೆ ರೂಪಿಸಿ ಮಾರ್ಗ ನಕಾಶೆ ರೂಪಿಸಲಾಗಿದೆ. 1993ರಿಂದ ಸುಮಾರು 15,000 ಪ್ರಕರಣಗಳು ಲೋಕಾಯುಕ್ತದಲ್ಲಿ ಬಾಕಿಯಿದ್ದು, ಇವುಗಳ ಶೀಘ್ರ ವಿಲೇವಾರಿಗಾಗಿ ಅವಧಿ ರೂಪಿಸಲಾಗಿದೆ. ಈಗ ಇಬ್ಬರು ಉಪ ಲೋಕಾಯುಕ್ತರು ಇರುವುದರಿಂದ ಬೇಗನೆ ಇವುಗಳ ಇತ್ಯರ್ಥ ಸಾಧ್ಯವಾಗಲಿದೆ ಎಂದು ಅವರು ಹೇಳಿದರು.ಲೋಕಾಯುಕ್ತ ದಾಳಿಯಿಂದ ಅಮಾನತುಗೊಂಡ ಅಧಿಕಾರಿಗಳು ಮತ್ತು ಸಿಬ್ಬಂದಿ ಮರುನೇಮಕಾತಿ ಮಾಡುವ ಮುನ್ನ ಲೋಕಾಯುಕ್ತರ ಪೂರ್ವಾನುಮತಿ ಪಡೆಯವುದು, ದೃಢವಾದ ತನಿಖೆ ಮತ್ತು ಪರಿಣಾಮಕಾರಿ ಪ್ರಾಸಿಕ್ಯೂಶನ್ ತೀವ್ರಗೊಳಿಸಿ ತಪ್ಪಿತಸ್ಥರಿಗೆ ಶಿಕ್ಷೆ ನೀಡುವ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ವಾರದ ಹಿಂದಷ್ಟೇ ಪತ್ರ ಬರೆಯಲಾಗಿದೆ ಎಂದು ಲೋಕಾಯುಕ್ತರು ಹೇಳಿದರು.ಪ್ರಾದೇಶಿಕ ಆಯುಕ್ತ ಡಾ. ರಜನೀಶ್ ಗೋಯಲ್, ಲೋಕಾಯುಕ್ತ ಎಸ್‌ಪಿ ಬಿ.ಎನ್.ನೀಲಗಾರ್, ಡಿವೈಎಸ್ಪಿ ರವಿ ಪಾಟೀಲ್ ಹಾಜರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.