ಕಾರಂತರ ಮರು ಅಧ್ಯಯನವಾಗಲಿ

7

ಕಾರಂತರ ಮರು ಅಧ್ಯಯನವಾಗಲಿ

Published:
Updated:

ಉಡುಪಿ: `ನಮ್ಮ ನೆಲದ ಜನಜೀವನದ ಕಲ್ಪನೆಯನ್ನು ಯಥಾವತ್ತಾಗಿ ಚಿತ್ರಿಸಿದ ವಾಸ್ತವವಾದಿ ಸಾಹಿತಿ ಕೋಟ ಶಿವರಾಮ ಕಾರಂತರು~ ಎಂದು ಹಿರಿಯ ವಿಮರ್ಶಕ ರಾಮಚಂದ್ರ ದೇವ ಇಲ್ಲಿ ಅಭಿಪ್ರಾಯಪಟ್ಟರು. ಇಲ್ಲಿನ ಎಂ.ಜಿ.ಎಂ ಕಾಲೇಜಿನಲ್ಲಿ ಸೋಮವಾರ ಆಯೋಜಿಸಿದ್ದ ಕಾರಂತರ ಜನ್ಮದಿನಾಚರಣೆ ಉದ್ಘಾಟಿಸಿ ಅವರು ಮಾತನಾಡಿದರು.`ವಿದೇಶದ ಆಂಗ್ಲಭಾಷಾ ಸಾಹಿತಿಗಳಲ್ಲಿ ಕೆಲವರು ಅಲ್ಲಿನ ಮಣ್ಣಿನಗುಣಗಳನ್ನು ಪೋಷಿಸಿ, ಕೃತಿ ರಚಿಸಿಕೊಂಡು ಬಂದಂತೆಯೇ ಕಾರಂತರು ಇಲ್ಲಿನ ಬದುಕಿನ ವಾಸ್ತವತೆಗಳನ್ನು ಕಟ್ಟಿಕೊಟ್ಟರು. ಜನರ ನಂಬಿಕೆ ಮತ್ತು ಜಾನಪದಗಳನ್ನು ಮೇಳೈಸಿಕೊಂಡು ವಾಸ್ತವವಾದಿಯಗಿ ಬರೆದರು~ ಎಂದರು.`ಅವರ ಮರಳಿ ಮಣ್ಣಿಗೆ, ಮೂಕಜ್ಜಿಯ ಕನಸು ಮತ್ತಿತರ ಕೃತಿಗಳನ್ನು ಮತ್ತೆ ಮತ್ತೆ ಓದಬೇಕು ಎನ್ನಿಸುವುದು ಈ ಕಾರಣಕ್ಕೆ. ಹೀಗಾಗಿ ಅವುಗಳ ಮರು ಅಧ್ಯಯ ಕೂಡ ಬಹಳ ಅಗತ್ಯ~ ಎಂದರು.`ಕಾರಂತರ ರಂಗಭೂಮಿ ವ್ಯಕ್ತಿತ್ವ ಬೇರೇಯೇ ಇದೆ. 1930-1980ರವರೆಗೆ ಅವರು ರಂಗಭೂಮಿಯಲ್ಲಿ ಮಾಡಿದ ಪ್ರಯೋಗ ಅಪರೂಪದ್ದು. ಅವರು ಬಿತ್ತಿದ ಪ್ರಯೋಗ ಎಂಬ ಬೀಜಗಳು ಈಗ ಹೆಮ್ಮರವಾಗಿ ಬೆಳೆದಿದೆ. ಅವರ ರಂಗಭೂಮಿ ವ್ಯಕ್ತಿತ್ವ 20 ನೇ ಶತಮಾನದ ಎಲ್ಲ ರಂಗಭೂಮಿ ಪ್ರಯೋಗಗಳ ಬೀಜರೂಪದಂತೆ ಕಾಣಸಿಗುತ್ತವೆ. ಅದರೆ ಕಾರಂತರ ರಂಗಭೂಮಿ ಪ್ರಯೋಗಗಳನ್ನೆಲ್ಲ ನಾವು ಸರಿಯಾಗಿ ಗಮನಿಸಿಲ್ಲ ಎಂದು ಭಾಸವಾಗುತ್ತದೆ~ ಎಂದರು.`ಕಾರಂತರಿಂದ ಈಗಲೂ ಪಡೆಯುವಂಥದ್ದು ಕಲಿಯುಂಥದ್ದು ಬಹಳವಿದೆ. ಅವರೊಂದು ದೊಡ್ಡ ಮೌಲ್ಯ. ಅಷ್ಟೇ ಅಲ್ಲ ಜನರ ಜೀವನದ ಮೌಲ್ಯ ಬೆಳೆಸಿದರು. ದೇಸಿ ಮೌಲ್ಯ ಬೆಳೆಸಿದರು. ಈ ಸಂದರ್ಭದಲ್ಲಿ ಕಾರಂತರನ್ನು ಮರಳಿ ಅಧ್ಯಯನ ಮಾಡಬೇಕಾದ ಅಗತ್ಯವಿದೆ~ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಹಿರಿಯ ಯಕ್ಷಗಾನ ಕಲಾವಿದ ಹಿರಿಯಡ್ಕ ಗೋಪಾಲ ರಾವ್‌ ಕಾರಂತರೊಂದಿಗಿನ ನೆನಪುಗಳನ್ನು ಹಂಚಿಕೊಂಡರು.`ಕರ್ಮಯೋಗಿ ಕಾರಂತರ ಹಲವು ಮುಖಗಳಿಂದ ಜಿಲ್ಲೆಯ ಕೀರ್ತಿಪತಾಕೆಯನ್ನು ಬಹಳ ಹಿಂದೆಯೇ ವಿದೇಶಗಳಿಗೂ ಪಸರಿಸಿತ್ತು. ವಿದೇಶದವರು ಕಾರಂತರ ಪ್ರತಿಭೆಯನ್ನು ಗುರುತಿಸಿ ಅವರಿಂದ ಹಲವು ವಿಷಯ ಕಲಿಯಲು ಇಲ್ಲಿಗೆ ಬಂದ ಮೇಲೆ ನಮ್ಮ ಸರ್ಕಾರಗಳು ಕಾರಂತರನ್ನು ಗುರುತಿಸಿದವು~ ಎಂದರು.ಕಾಲೇಜಿನ ಪ್ರಾಂಶುಪಾಲ ಡಾ.ಪಿ.ವಿ.ಗೌಡ, ಕಸಾಪ ಜಿಲ್ಲಾ ಘಟಕದ ಅಧ್ಯಕ್ಷ ಅಂಬಾತನಯ ಮುದ್ರಾಡಿ, ಪ್ರೊ.ರಾಮದಾಸ್, ಎ.ಈಶ್ವರಯ್ಯ ಮತ್ತಿತರರು ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry