ಕಾರಂತರ ಹೊಸ ಸಾಹಸ!

7

ಕಾರಂತರ ಹೊಸ ಸಾಹಸ!

Published:
Updated:
ಕಾರಂತರ ಹೊಸ ಸಾಹಸ!

`ಸಂಭಾಷಣೆಕಾರನಾಗಿ ಹೆಚ್ಚು ಅನುಭವಿಸಿದ್ದು ನಿರಾಶೆಯನ್ನು...' ರಾಜೇಂದ್ರ ಕಾರಂತರ ದನಿಯಲ್ಲಿ ಬೇಸರ ಇಣುಕುತ್ತಿತ್ತು. ರಂಗಭೂಮಿಯ ಸುಮಾರು 17 ವರ್ಷದ ನಂಟಿನ ಜೊತೆಗೆ, ಸಿನಿಮಾ ರಂಗದಲ್ಲಿ ದಶಕದ ಹಾದಿ ಸವೆಸಿರುವ ಸಂಭಾಷಣೆಕಾರ ರಾಜೇಂದ್ರ ಕಾರಂತ ಸಿನಿಮಾ ನಿರ್ದೇಶಿಸುವ ದೀರ್ಘಕಾಲದ ತಮ್ಮ ಕನಸು ಈಡೇರಿದ ಸಂತಸದಲ್ಲಿದ್ದರು. ಅದರ ನಡುವೆ ವೃತ್ತಿ ಬದುಕಿನ ತೆಳುವಾದ ವಿಶ್ಲೇಷಣೆಯೂ ಇತ್ತು.ನಿರ್ದೇಶನದ ಮೊದಲ ಪ್ರಯತ್ನವಾಗಿ ಅವರು ಕೈಗೆತ್ತಿಕೊಂಡಿರುವುದು ಹಾಸ್ಯ ಪ್ರಧಾನ ಚಿತ್ರವನ್ನು. ರಮೇಶ್ ಅರವಿಂದ್, ರವಿಶಂಕರ್, ಹರ್ಷಿಕಾ ಪೂಣಚ್ಚ, ರಂಗಾಯಣ ರಘು ಮುಂತಾದವರು ನಟಿಸಿರುವ `ಮಂಗನ ಕೈಲಿ ಮಾಣಿಕ್ಯ' ಕಾರಂತರ ಚೊಚ್ಚಲ ಚಿತ್ರ. ಇದೇ ತಿಂಗಳ ಅಂತ್ಯಕ್ಕೆ ಚಿತ್ರವನ್ನು ತೆರೆಗಾಣಿಸುವ ಉತ್ಸಾಹ ಅವರದು. ಸಿನಿಮಾದೊಳಗೆ ಮತ್ತೊಂದು ಸಿನಿಮಾ ಇದೆ.

ಸಂಬಂಧಗಳನ್ನು ಸಿನಿಮಾದೊಳಗಿನ ನಿರ್ದೇಶಕನ ಮೂಲಕ ವಿಮರ್ಶಿಸುವ ವಿಶಿಷ್ಟ ಪ್ರಯತ್ನವನ್ನು ಅವರು ಮಾಡಿದ್ದಾರೆ.ಸಿನಿಮಾ ನಿರ್ದೇಶಿಸುವ ಬಯಕೆ ಹೊಂದಿದ್ದರೂ ವೃತ್ತಿಪರ ನಿರ್ಮಾಪಕರು ಸಿಗದೆ ಕಾರಂತ್ ಹಲವು ವರ್ಷ ಆಸೆಯನ್ನು ಹತ್ತಿಕ್ಕಿಕೊಂಡಿದ್ದರು. ಏಕೆಂದರೆ, ಅವರ ಬಳಿ ಬಂದ ಹೆಚ್ಚಿನ ನಿರ್ಮಾಪಕರು ಕೇಳಿದ್ದು `ನನ್ನ ಮಗನನ್ನೇ ಹೀರೋ ಮಾಡಿ' ಎಂದು.

ಒಮ್ಮೆ ಕಥೆಯ ತಿರುಳು ಕೇಳಿದ್ದ ನಟ ರಮೇಶ್ ಅರವಿಂದ್ ನಿರ್ಮಾಪಕ ಸಂದೇಶ್ ನಾಗರಾಜ್ ಜೊತೆ ಮಾತನಾಡಿದ್ದಲ್ಲದೆ, ನೀವೇ ನಿರ್ದೇಶಿಸಿ ಎಂದು ಕಾರಂತರ ಹೆಗಲಿಗೆ ಈ ಹೊಣೆ ಹೊರಿಸಿದರು. ವೃತ್ತಿಪರ ತಂಡದೊಂದಿಗೆ ಕೆಲಸ ಮಾಡಿದ ನೆಮ್ಮದಿ ಸಿಕ್ಕಿದೆ ಎನ್ನುವ ರಾಜೇಂದ್ರ ಕಾರಂತ್, ರಂಗಭೂಮಿಯ ಅನೇಕ ಕಲಾವಿದರನ್ನು ಸಿನಿಮಾ ರಂಗಕ್ಕೆ ಪರಿಚಯಿಸುತ್ತಿದ್ದಾರಂತೆ. ಚಿತ್ರಕಥೆ, ಸಂಭಾಷಣೆ ಮತ್ತು ಸಾಹಿತ್ಯದ ಜವಾಬ್ದಾರಿಯನ್ನೂ ಅವರು ನಿರ್ವಹಿಸಿದ್ದಾರೆ.ನಾಟಕ ಸ್ಪರ್ಧೆಗಳಲ್ಲಿಯೇ ಹೆಚ್ಚು ತೊಡಗಿಕೊಂಡಿದ್ದ ರಾಜೇಂದ್ರ ಕಾರಂತರನ್ನು ಜನ ಅದಕ್ಕೇ ಸೀಮಿತ ಎಂದು ಗುರುತಿಸತೊಡಗಿದಾಗ, ಅದರಿಂದ ಹೊರಬರುವ ಪ್ರಯತ್ನದಲ್ಲಿ ಅನೇಕ ವಿಭಿನ್ನ ರಂಗಪ್ರಯೋಗಗಳು ಮೂಡಿಬಂದವು. `ಮೂಕಜ್ಜಿಯ ಕನಸು', `ಮೈಸೂರ ಮಲ್ಲಿಗೆ', `ಗಂಗಾವತರಣ', `ಮರಣ ಮೃದಂಗ'ದಂಥ ಕಾವ್ಯಪ್ರಯೋಗ ನಾಟಕಗಳು ಅವರಿಗೆ ಅಂಟಿಕೊಂಡಿದ್ದ `ಇಮೇಜ್' ಅನ್ನು ದೂರಮಾಡಿದವು.

ಅವರನ್ನು ಸಿನಿಮಾ ರಂಗಕ್ಕೆ ಕರೆತಂದದ್ದು ರಮೇಶ್ ಅರವಿಂದ್. `ಬಿಸಿ ಬಿಸಿ' ಚಿತ್ರದಲ್ಲಿ ಸಂಭಾಷಣೆ ಮತ್ತು ಹಾಡಿಗೆ ಸಾಹಿತ್ಯ ಹೆಣೆಯುವ ಮೂಲಕ ಹೊಸ ದಾರಿಯಲ್ಲಿ ಹೆಜ್ಜೆ ಇರಿಸಿದ ಅವರಿಗೆ ಜನಪ್ರಿಯತೆ ತಂದುಕೊಟ್ಟದ್ದು `ರಾಮ ಶಾಮ ಭಾಮ' ಚಿತ್ರ. ಹೆಸರು ಮಾಡಿದ ಬಳಿಕ ಅವಕಾಶಗಳು ಸಾಲಾಗಿ ಬಂದರೂ ಆರಂಭದಲ್ಲಿ ಉಂಟಾಗಿದ್ದು ಕಹಿ ಅನುಭವಗಳೇ.

ಬರೆದುಕೊಟ್ಟ ಸಂಭಾಷಣೆಯಲ್ಲಿದ್ದ ಕಸುವು ಸಿನಿಮಾ ಹೊರಬರುವಾಗ ಇರುತ್ತಿರಲಿಲ್ಲ. ಇನ್ನು ಟೈಟಲ್‌ಕಾರ್ಡ್‌ನಲ್ಲಿಯೂ ಹೆಸರು ಕಾಣದ ಚಿತ್ರಗಳೇ ಹೆಚ್ಚು. ಈ ನಿರಾಶೆಗಳಿಂದಾಗಿ ಅನೇಕ ಚಿತ್ರಗಳಿಗೆ ಸಂಭಾಷಣೆ ಬರೆಯುವುದನ್ನು ಅವರು ನಿರಾಕರಿಸಿದ್ದರು. ಅಭಿರುಚಿಯಿಲ್ಲದ ನಿರ್ಮಾಪಕರ ಒಡನಾಟದಿಂದ ಅವರು ದೂರ.ರಮೇಶ್ ಅರವಿಂದ್ ಮತ್ತು ರಾಜೇಂದ್ರ ಕಾರಂತರ ಗೆಳೆತನ ದೀರ್ಘಕಾಲದ್ದು. ಇಬ್ಬರದೂ ಸಮಾನ ಆಸಕ್ತಿ, ಅಭಿರುಚಿ. ಹೀಗಾಗಿಯೇ ಇಷ್ಟು ಕಾಲ ಒಟ್ಟಿಗೆ ಸಿನಿಮಾ ಮಾಡಲು ಸಾಧ್ಯವಾಗಿರುವುದು ಎನ್ನುವ ಕಾರಂತರು, ರಮೇಶ್‌ರ ಒತ್ತಾಸೆಯಿಂದ `ಆಕ್ಸಿಡೆಂಟ್' ಚಿತ್ರದಲ್ಲಿ ಖಳನಟನಾಗಿ ಬಣ್ಣವನ್ನೂ ಹಚ್ಚಿದ್ದರು.

ನಾಟಕಕ್ಕಿಂತ ಸಿನಿಮಾ ನಿರ್ದೇಶನವೇ ಸುಲಭ ಎನ್ನುವುದು ಅವರ ಅನುಭವ.

ರಂಗಭೂಮಿಯ ಒಡನಾಟ ಸಿನಿಮಾದಲ್ಲೂ ಶಿಸ್ತು ಮತ್ತು ಬದ್ಧತೆ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಇದು ಸಂಪೂರ್ಣ ಮನರಂಜನೆ ನೀಡುವ ಹಾಸ್ಯಭರಿತ ಚಿತ್ರವಷ್ಟೆ. ಇಲ್ಲಿ ಯಾವ ಸಂದೇಶ ಅಥವಾ ನೀತಿ ಹೇಳಲು ಹೊರಟಿಲ್ಲ. ಹಾಸ್ಯ ಚಿತ್ರಗಳಿಂದ ಗುರುತಿಸಿಕೊಂಡ ಮಾತ್ರಕ್ಕೆ ನಾನು ಅದಕ್ಕೆ ಸೀಮಿತವಲ್ಲ.ರಂಗಭೂಮಿಯಲ್ಲೂ ಹಾಸ್ಯದ ಜೊತೆಗೆ, ಗಂಭೀರ, ಸಾಮಾಜಿಕ, ರಾಜಕೀಯ ನಾಟಕಗಳನ್ನು ನೀಡಿದ್ದೇನೆ. ಮೊದಲ ನಡಿಗೆಯೇ ಗಂಭೀರವಾಗಿರುವುದು ಬೇಡ. ಅದರಲ್ಲಿ ಎಡವುದೇ ಹೆಚ್ಚು. ಜನ ನನ್ನನ್ನು ಮೊದಲು ಗುರುತಿಸುವಂತಾಗಲಿ. ಅದಕ್ಕೆ ಹಾಸ್ಯವೇ ಸೂಕ್ತ ವೇದಿಕೆ. ಮುಂದಿನ ದಿನಗಳಲ್ಲಿ ಗಂಭೀರ ಎನಿಸುವ ವಸ್ತುಗಳನ್ನು ಹೆಕ್ಕಿಕೊಂಡು ವಿಭಿನ್ನ ಸಿನಿಮಾ ಮಾಡುತ್ತೇನೆ ಎನ್ನುತ್ತಾರೆ ರಾಜೇಂದ್ರ ಕಾರಂತ್.`ಮಂಗನ ಕೈಲಿ ಮಾಣಿಕ್ಯ' ಚಿತ್ರಕ್ಕೆ ಡಿ.ಟಿ.ಎಸ್

ಸಂದೇಶ್ ಕಂಬೈನ್ಸ್ ಲಾಂಛನದಲ್ಲಿ ಸಂದೇಶ್ ನಾಗರಾಜ್ ನಿರ್ಮಿಸುತ್ತಿರುವ `ಮಂಗನ ಕೈಲಿ ಮಾಣಿಕ್ಯ' ಚಿತ್ರಕ್ಕೆ ರಾಜೇಶ್‌ರಾಮನಾಥ್ ಸ್ಟುಡಿಯೋದಲ್ಲಿ ಡಿ.ಟಿ.ಎಸ್ ಅಳವಡಿಸಲಾಗುತ್ತಿದೆ. ರಮೇಶ್‌ಅರವಿಂದ್, ರವಿಶಂಕರ್‌ಗೌಡ, ರಂಗಾಯಣರಘು, ಹರ್ಷಿಕಾ ಪೂಣಚ್ಚ, ಸೋನಿಯಾಗೌಡ, ಸನಾತನಿ, ಖುಷಿ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.ಜೆ.ಜಿ.ಕೃಷ್ಣ ಛಾಯಾಗ್ರಹಣ, ರಾಜೇಶ್ ರಾಮನಾಥ್ ಸಂಗೀತ, ನಾಗೇಂದ್ರ ಅರಸ್ ಸಂಕಲನ, ಇಮ್ರಾನ್ ಸರ್ದಾರಿಯಾ ನೃತ್ಯನಿರ್ದೇಶನ ಹಾಗೂ ಇಸ್ಮಾಯಿಲ್ ಕಲಾ ನಿರ್ದೇಶನ `ಮಂಗನ ಕೈಲಿ ಮಾಣಿಕ್ಯ' ಚಿತ್ರಕ್ಕಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry