ಕಾರದ ಪುಡಿ ಎರಚಿ ಏಳು ಲಕ್ಷ ದರೋಡೆ

7

ಕಾರದ ಪುಡಿ ಎರಚಿ ಏಳು ಲಕ್ಷ ದರೋಡೆ

Published:
Updated:

ಬೆಂಗಳೂರು: ದುಷ್ಕರ್ಮಿಗಳು ಮೀನು ವ್ಯಾಪಾರಿಯ ಕಣ್ಣಿಗೆ ಕಾರದ ಪುಡಿ ಎರಚಿ ಏಳು ಲಕ್ಷ ನಗದು ದರೋಡೆ ಮಾಡಿರುವ ಘಟನೆ ಶಿವಾಜಿನಗರದ ರಸೆಲ್ ಮಾರುಕಟ್ಟೆ ಆವರಣದಲ್ಲಿ ಭಾನುವಾರ ರಾತ್ರಿ ನಡೆದಿದೆ.ತಮಿಳುನಾಡು ಮೂಲದ ಶರವಣ ದರೋಡೆಗೆ ಒಳಗಾದವರು. ಸಗಟು ಮೀನು ವ್ಯಾಪಾರಿಯಾದ ಅವರು, ನಗರದ ವಿವಿಧ ಹೋಟೆಲ್‌ಗಳು ಹಾಗೂ ಅಂಗಡಿಗಳಿಗೆ ಮೀನು ಸರಬರಾಜು ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಭಾನುವಾರ ಬೆಳಿಗ್ಗೆ ನಗರಕ್ಕೆ ಬಂದಿದ್ದ ಅವರು, ವಿವಿಧ ಅಂಗಡಿಗಳಲ್ಲಿ ಮೀನು ವಹಿವಾಟಿನ ಹಣ ವಸೂಲಿ ಮಾಡಿಕೊಂಡು ರಾತ್ರಿ ಒಂಬತ್ತು ಗಂಟೆ ಸುಮಾರಿಗೆ ರಸೆಲ್ ಮಾರುಕಟ್ಟೆಗೆ ಬಂದಿದ್ದರು. ಮಾರುಕಟ್ಟೆಯ ಮಳಿಗೆಗಳಲ್ಲಿ ವಹಿವಾಟಿನ ಹಣ ಪಡೆದುಕೊಂಡ ಅವರು ಕಮರ್ಷಿಯಲ್ ಸ್ಟ್ರೀಟ್‌ನ ಹೋಟೆಲ್‌ಗೆ ಹಿಂದಿರುಗುವ ಯತ್ನದಲ್ಲಿದ್ದಾಗ ನಾಲ್ಕೈದು ಮಂದಿ ದುಷ್ಕರ್ಮಿಗಳು ಕಣ್ಣಿಗೆ ಕಾರದ ಪುಡಿ ಎರಚಿ ಮತ್ತು ಚಾಕುವಿನಿಂದ ಹಲ್ಲೆ ನಡೆಸಿ, ಹಣವಿದ್ದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಘಟನೆಯಲ್ಲಿ ಶರವಣ ಅವರ ಎಡಗೈಗೆ ಗಾಯವಾಗಿದೆ. ಆರೋಪಿಗಳ ಬಗ್ಗೆ ಯಾವುದೇ ಸುಳಿವು ಸಿಕ್ಕಿಲ್ಲ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಶಿವಾಜಿನಗರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.ಡಿಕ್ಕಿ: ವ್ಯಕ್ತಿ ಸಾವು


ಕೆ.ಆರ್.ಪುರ ಸಮೀಪದ ಟಿ.ಸಿ.ಪಾಳ್ಯ ಮುಖ್ಯರಸ್ತೆಯಲ್ಲಿ ಸೋಮವಾರ ಮಧ್ಯಾಹ್ನ ಲಾರಿ ಮತ್ತು ಬೈಕ್ ನಡುವೆ ಸಂಭವಿಸಿದ ಅಪಘಾತದಲ್ಲಿ ಮಹಮ್ಮದ್ ಸರ್ಫುದ್ದೀನ್ ಅಹಮ್ಮದ್ (50) ಎಂಬುವರು ಮೃತಪಟ್ಟಿದ್ದಾರೆ.

ಶೇಷಾದ್ರಿಪುರ ನಿವಾಸಿಯಾದ ಮಹಮ್ಮದ್, ಸಿವಿಲ್ ಗುತ್ತಿಗೆದಾರರಾಗಿದ್ದರು. ಅವರು ಕೆಲಸದ ನಿಮಿತ್ತ ಬೈಕ್‌ನಲ್ಲಿ ರಾಮಮೂರ್ತಿನಗರಕ್ಕೆ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.ಲಾರಿ, ಮಹಮ್ಮದ್ ಅವರ ಬೈಕ್‌ಗೆ ಎದುರಿನಿಂದ ಡಿಕ್ಕಿ ಹೊಡೆದಿದೆ. ಈ ವೇಳೆ ಕೆಳಗೆ ಬಿದ್ದ ಅವರ ಮೇಲೆ ಅದೇ ಲಾರಿಯ ಚಕ್ರ ಹರಿದು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.ಬೌರಿಂಗ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿ ಶವವನ್ನು ಕುಟುಂಬ ಸದಸ್ಯರಿಗೆ ಒಪ್ಪಿಸಲಾಗಿದೆ. ಚಾಲಕ ಪರಾರಿಯಾಗಿದ್ದು, ಲಾರಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ. ಕೆ.ಆರ್.ಪುರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಆತ್ಮಹತ್ಯೆ

ಕಮರ್ಷಿಯಲ್ ಸ್ಟ್ರೀಟ್ ಬಳಿಯ ಇಬ್ರಾಹಿಂ ರಸ್ತೆ ನಿವಾಸಿ ನದೀಂ (34) ಎಂಬುವರು ಭಾನುವಾರ ರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಶಿವಾಜಿನಗರದಲ್ಲಿನ ಚಪ್ಪಲಿ ಮಾರಾಟ ಮಳಿಗೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ನದೀಂ, ಪತ್ನಿ ಮತ್ತು ಮಕ್ಕಳೊಂದಿಗೆ ಇಬ್ರಾಹಿಂ ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.ಪತ್ನಿ ಮತ್ತು ಮಕ್ಕಳು ಹೊರಗೆ ಹೋಗಿದ್ದ ಸಂದರ್ಭದಲ್ಲಿ ಅವರು ಮನೆಯಲ್ಲೇ ನೇಣು ಹಾಕಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ಕಮರ್ಷಿಯಲ್ ಸ್ಟ್ರೀಟ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ವ್ಯಕ್ತಿಯ ಕೊಲೆ

ವ್ಯಕ್ತಿಯೊಬ್ಬರಿಗೆ ಸ್ನೇಹಿತರೆ ಚಾಕುವಿನಿಂದ ಇರಿದು ಕೊಲೆ ಮಾಡಿರುವ ಘಟನೆ ಆವಲಹಳ್ಳಿ ಮುಖ್ಯರಸ್ತೆ ಸಮೀಪದ ಹರಿನಗರ ಕ್ರಾಸ್‌ನಲ್ಲಿ ಭಾನುವಾರ ರಾತ್ರಿ ನಡೆದಿದೆ.ಹರಿನಗರ ಕ್ರಾಸ್ ನಿವಾಸಿ ಧನಂಜಯ್ (24) ಕೊಲೆಯಾದವರು. ಅವರು ಪೇಂಟಿಂಗ್ ಕೆಲಸ ಮಾಡುತ್ತಿದ್ದರು ಎಂದು ಪೊಲೀಸರು ಹೇಳಿದ್ದಾರೆ.ಧನಂಜಯ್, ಆನಂದ್ ಮತ್ತು ಶಿವ ಎಂಬ ಸ್ನೇಹಿತರೊಂದಿಗೆ ಬಾರ್ ಒಂದರಲ್ಲಿ ಸಂಜೆ ಮದ್ಯಪಾನ ಮಾಡುತ್ತಿದ್ದಾಗ ಪರಸ್ಪರರ ನಡುವೆ ವಾಗ್ವಾದ ನಡೆದು ಜಗಳವಾಗಿತ್ತು. ಆ ನಂತರ ಧನಂಜಯ್ ಮನೆಗೆ ಬಂದಿದ್ದ. ಬಳಿಕ ಆನಂದ್ ಮತ್ತು ಶಿವ, ಆತನ ಮೊಬೈಲ್‌ಗೆ ಕರೆ ಮಾಡಿ ಹರಿನಗರ ಕ್ರಾಸ್ ಬಳಿ ಕರೆಸಿಕೊಂಡು ಎದೆ ಹಾಗೂ ಹೊಟ್ಟೆಗೆ ಚಾಕುವಿನಿಂದ ಇರಿದು ಪರಾರಿಯಾಗಿದ್ದಾರೆ.

 

ತೀವ್ರ ರಕ್ತಸ್ರಾವವಾಗಿ ಅಸ್ವಸ್ಥಗೊಂಡ ಆತನನ್ನು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ ಮಧ್ಯೆ ಮೃತಪಟ್ಟ ಎಂದು ಪೊಲೀಸರು ತಿಳಿಸಿದ್ದಾರೆ. ಸುಬ್ರಹ್ಮಣ್ಯಪುರ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry