ಕಾರವಾರಕ್ಕೆ ವಿಸ್ತರಿಸಿ- ಡಿವಿ ಆಗ್ರಹ

7

ಕಾರವಾರಕ್ಕೆ ವಿಸ್ತರಿಸಿ- ಡಿವಿ ಆಗ್ರಹ

Published:
Updated:

ಉಡುಪಿ: ಬೆಂಗಳೂರು-ಮಂಗಳೂರು ನಡುವೆ ದಿನಂಪ್ರತಿ ರಾತ್ರಿ ಸಂಚರಿಸುವ ರೈಲನ್ನು ಕಾರವಾರದವರೆಗೆ ವಿಸ್ತರಿಸುವಂತೆ ಸಂಸದ ಡಿ.ವಿ.ಸದಾನಂದ ಗೌಡ ಕೇಂದ್ರ ರೈಲ್ವೆ ಸಹಾಯಕ ಸಚಿವ ಕೆ.ಎಚ್.ಮುನಿಯಪ್ಪ ಅವರನ್ನು ಒತ್ತಾಯಿಸಿದ್ದಾರೆ.ಮಂಗಳವಾರ ಬೆಳಿಗ್ಗೆ ನವದೆಹಲಿ  ಯಲ್ಲಿ ಕೇಂದ್ರ ರೈಲ್ವೆ ಬಜೆಟ್ ಚರ್ಚೆಯ ಹಿನ್ನೆಲೆಯಲ್ಲಿ ರಾಜ್ಯದ ರೈಲ್ವೆ ಬೇಡಿಕೆಗಳ ವಿಚಾರದಲ್ಲಿ ಸಚಿವ ಮುನಿಯಪ್ಪ ಅವರನ್ನು ಭೇಟಿ ಮಾಡಿ ವಿವರವಾದ ಪತ್ರ ನೀಡಿದರು.ದಿನಂಪ್ರತಿ ಸಾವಿರಾರು ಪ್ರಯಾಣಿಕರು ಮತ್ತು ದೊಡ್ಡ ಪ್ರಮಾಣದಲ್ಲಿ ಸರಕು ಸಾಗಾಟದ ಈ ಮಾರ್ಗ ರೈಲ್ವೆಗೆ ಅತ್ಯಂತ ಲಾಭದಾಯಕ ಎಂದು ಇಲಾಖೆಯೇ ದೃಢಪಡಿಸಿದೆ. ರಾಜ್ಯದ ರಾಜಧಾನಿ ಬೆಂಗಳೂರನ್ನು ಸರ್ವಋತು ಬಂದರಾದ ಮಂಗಳೂರಿಗೆ ಸಂಪರ್ಕಿ  ಸುವ ಪ್ರಮುಖ ರೈಲಾದ ಬೆಂಗಳೂರು-ಮಂಗಳೂರು ರೈಲನ್ನು ಕಾರವಾರದವರೆಗೆ ವಿಸ್ತರಿಸುವ ಬದಲು ಕಣ್ಣೂರಿಗೆ ವಿಸ್ತರಿಸಿದ ಕ್ರಮದ ಬಗ್ಗೆ ಅವರು ಆಕ್ಷೇಪ ವ್ಯಕ್ತಪಡಿಸಿದರು.ಕರಾವಳಿ ಕರ್ನಾಟಕದ ಜನತೆ ರೈಲ್ವೆ ಸೌಕರ್ಯ ಹೊಂದುವ ಹಕ್ಕಿನಿಂದ ವಂಚಿತರಾಗಿದ್ದು ಈ ಭಾಗವನ್ನು ಇಲಾಖೆ ಕಡೆಗಣಿಸಿದೆ. ಹೀಗಾಗಿ ಬೆಂಗಳೂರು-ಮಂಗಳೂರು ರೈಲನ್ನು ಕಾರವಾರದವರೆಗೆ ತಕ್ಷಣದಿಂದಲೇ ವಿಸ್ತರಿಸುವಂತೆ ಸದಾನಂದ ಗೌಡ ಒತ್ತಾಯಿಸಿದರು.ಅನೇಕ ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ಕಡೂರು-ಚಿಕ್ಕಮಗಳೂರು ರೈಲ್ವೆ ಹಳಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವ ಅಗತ್ಯವನ್ನು ಪತ್ರದಲ್ಲಿ ವಿವರಿಸಿರುವ ಡಿವಿಎಸ್, 2010-11ನೇ ಸಾಲಿನಲ್ಲಿ ನೀಡಿರುವ ರೂ.40 ಕೋಟಿಗೆ ಹೆಚ್ಚುವರಿಯಾಗಿ ಪ್ರಸಕ್ತ ಬಜೆಟ್‌ನಲ್ಲಿ ಕೂಡ ರೂ.40 ಕೋಟಿ ಅನುದಾನ ನೀಡುವಂತೆ ಮುನಿಯಪ್ಪ ಅವರಿಗೆ ಮನವಿ ಮಾಡಿದರು.ಈ ಎರಡೂ ಬೇಡಿಕೆಗಳನ್ನು ಮಂಜೂರು ಮಾಡಿ ಪ್ರಸ್ತಾವಿತ ರೈಲ್ವೆ ಬಜೆಟ್‌ನಲ್ಲಿ ಸೇರಿಸುವಂತೆ ಗೌಡರು ಆಗ್ರಹಿಸಿದ್ದಾರೆ. ಅಲ್ಲದೇ ರೈಲ್ವೆ ಇಲಾಖೆ ತಾರತಮ್ಯ ಧೋರಣೆ ವಿರುದ್ಧ ಉಡುಪಿ-ಚಿಕ್ಕಮಗಳೂರು  ಲೋಕಸಭಾ ಕ್ಷೇತ್ರದ ಜನತೆ ಸಹನೆ ಕಳೆದುಕೊಳ್ಳುತ್ತಿರುವ ಬಗ್ಗೆ ರೈಲ್ವೆ ಇಲಾಖೆಯನ್ನು ಎಚ್ಚರಿಸಿದ್ದಾರೆ ಎಂದು ಸಂಸದರ ಕಚೇರಿ ಪ್ರಕಟಣೆ ತಿಳಿಸಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry