ಭಾನುವಾರ, ಮೇ 9, 2021
26 °C

ಕಾರಹುಣ್ಣಿಮೆ: ಈ ಬಾರಿ ಬಲು ಜೋರು

ಪ್ರಕಾಶ ಮಸಬಿನಾಳ Updated:

ಅಕ್ಷರ ಗಾತ್ರ : | |

ಅಣ್ಣ ಬಸವಣ್ಣನ ನಾಡಿನಲ್ಲಿ ಕಾರಹುಣ್ಣಿಮೆಯನ್ನು ಇದೇ 23ರಂದು ಸಂಭ್ರಮದಿಂದ ಆಚರಿಸಲಾಗುತ್ತದೆ.ಸಂಪ್ರದಾಯದಂತೆ ಕಾರಹುಣ್ಣಿಮೆ ದಿನ ರೈತರು ತಮ್ಮ ಎತ್ತುಗಳನ್ನು ಅಲಂಕರಿಸಿ ಅವುಗಳಿಗೆ ಪೂಜೆ ಸಲ್ಲಿಸುತ್ತಾರೆ.ಕಾರಹುಣ್ಣಿಮೆ ದಿನದಂದು ಬೆಳಿಗ್ಗೆ ಎತ್ತುಗಳ ಮೈತೊಳೆದು ಅವುಗಳ ಕೋಡುಗಳಿಗೆ ಅಂದ ಬರುವ ಹಾಗೆ ಉಜ್ಜಿ ಬಣ್ಣ ಹಚ್ಚುತ್ತಾರೆ. ಅಲ್ಲದೆ ಕೊಡುಗಳಿಗೆ ರಿಬ್ಬನ್ ಹಾಗೂ ಗೊಂಡೆ ಕಟ್ಟುತ್ತಾರೆ. ಕೊರಳಲ್ಲಿ ಗೆಜ್ಜೆ ಸರ, ಹಣೆಪಟ್ಟಿ ಕಟ್ಟಿ  ಹೊಸ ಮೂಗುದಾರ ಹಾಕಿ ಅವುಗಳನ್ನು ಅಲಂಕರಿಸಿ ಸಂಭ್ರಮಪಡುತ್ತಾರೆ. ಎತ್ತುಗಳಿಗೆ ದೃಷ್ಟಿತಾಗದಿರಲಿ ಎಂದು ಕಾಲಿಗೆ ಕರಿ ದಾರ ಕಟ್ಟುತ್ತಾರೆ. ಅಂದಿನ ದಿನ ವಿಶೇಷವಾಗಿ ಶೇಂಗಾ ಹೋಳಿಗೆ, ಕರಿಗಡಬು, ಕಿಚಡಿ ಸೇರಿದಂತೆ ವಿವಿಧ ಬಗೆಯ ಖಾದ್ಯ ತಯಾರಿಸಿ ಎತ್ತುಗಳಿಗೆ ಪೂಜೆ ಸಲ್ಲಿಸಿ ನೈವೇದ್ಯ ಹಿಡಿದು ಅದನ್ನು ಎತ್ತುಗಳಿಗೆ ತಿನ್ನಿಸುತ್ತಾರೆ.ಸಂಜೆ ಅಗುತ್ತಿದ್ದಂತೆ ರೈತರು ತಮ್ಮ ಹೋರಿಗಳನ್ನು ಹಿಡಿದುಕೊಂಡು ಊರ ಮುಂದಿನ ವಿಶಾಲ ಮೈದಾನ, ಗ್ರಾಮದ ಅಗಸಿ ಮುಂದೆ ಇಲ್ಲವೇ ರಸ್ತೆಯ ಒಂದು ತುದಿಯಲ್ಲಿ  ನಿಲ್ಲಿಸುತ್ತಾರೆ. ಅಕ್ಕಪಕ್ಕದಲ್ಲಿ ನೆರದ ಜನರ ಘೋಷಣೆ ಕೂಗಾಟದ ಮಧ್ಯೆ ಎತ್ತುಗಳ ಕೊರಳಿಗೆ ಕೊಬ್ಬರಿ ಕಟ್ಟಿ ಒಂದು ಬಿಳಿ ಹಾಗೂ ಒಂದು ಕೆಂದು ಬಣ್ಣದ ಹೋರಿಯನ್ನು ಓಡಿಸುತ್ತಾರೆ. ಓಟದಲ್ಲಿ ಬಿಳಿ ಎತ್ತು ಮುಂದೆ ಬಂದರೆ ಬಿಳಿ ಜೋಳ ಚೆನ್ನಾಗಿ ಬೆಳೆಯುತ್ತದೆ. ಕೆಂದೆತ್ತು ಮುಂದೆ ಬಂದರೆ ಮುಂಗಾರು ಬೆಳೆ ಚೆನ್ನಾಗಿ ಬರುತ್ತದೆ ಎಂಬ ನಂಬಿಕೆ ರೈತರಲ್ಲಿ ಹಿಂದಿನಿಂದಲೂ ಇದೆ.ಪಟ್ಟಣದ ಬಸವೇಶ್ವರ ದೇವಾಲಯದ ಎದುರಿಗೆ ಕಾರಹುಣ್ಣಿಮೆಗೆ ಬೇಕಾದ ವಸ್ತುಗಳನ್ನು ಮಾರಾಟ ಮಾಡಲು ಹತ್ತಾರು ಅಂಗಡಿಗಳನ್ನು ಹಾಕಲಾಗಿದೆ. ಅಂಗಡಿಗಳಲ್ಲಿ ಎತ್ತುಗಳಿಗೆ ಶೃಂಗಾರ ಮಾಡಲು ಬೇಕಾದ ಹಣೆಕಟ್ಟು, ಮೂಗುದಾರ, ಹಣಿಹಗ್ಗ, ಜತ್ತಗಿ, ಬಾರ್, ಮಗಡ, ಬಾರಕೋಲು, ನೂಲಿನ ಲಡ್ಡು, ನೂಲಿನ ಗೊಂಡೆ, ಗೆಜ್ಜೆ ಸರ, ಹಗ್ಗ ಹೀಗೆ ವಿವಿಧ ವಸ್ತುಗಳನ್ನು ಮಾರಾಟಕ್ಕೆ ಇಡಲಾಗಿದೆ. ಈ ವರ್ಷ ವಸ್ತುಗಳ ಬೆಲೆ ಸ್ವಲ್ಪ ಹೆಚ್ಚಾಗಿದ್ದರೂ ರೈತರ ಖರೀದಿ ಭರಾಟೆ ಜೋರಾಗಿದೆ.`ಕಾರಹುಣ್ಣಿಮೆಗೆ ಬೇಕಾದ ವಸ್ತುಗಳ ಬೆಲೆ ಹೆಚ್ಚಳವಾಗಿದ್ದರೂ ರೈತರು ಖರೀದಿಸುವುದನ್ನು ಬಿಡುವುದಿಲ್ಲ. ರೈತರು ಕಾರಹುಣ್ಣಿಮೆಯನ್ನು ಸಂಭ್ರಮದಿಂದ ಆಚರಿಸುತ್ತಾರೆ. ನಾವು ಪ್ರತಿ ವರ್ಷ ದನಕರುಗಳಿಗೆ ಬೇಕಾದ ವಸ್ತುಗಳನ್ನು ಸಗಟು ವ್ಯಾಪಾರಸ್ಥರಿಂದ ಉದ್ರಿ ಖರೀದಿಸುತ್ತೇವೆ. ವಸ್ತುಗಳು ಮಾರಾಟವಾದ ನಂತರ ಹೋಲ್‌ಸೇಲ್ ಅಂಗಡಿ ಮಾಲೀಕರ ಬಾಕಿ ತೀರಿಸುತ್ತೇವೆ. ಪ್ರತಿ ವರ್ಷದಂತೆ ಈ ವರ್ಷವು ಸಾಕಷ್ಟು ವಸ್ತುಗಳನ್ನು ಖರೀದಿಸುತ್ತಿದ್ದಾರೆ. ನಮಗೆ ಅಷ್ಟಾಗಿ ಲಾಭ ಇಲ್ಲದಿದ್ದರೆ ನಾವು ಹಾಕಿದ ಬಂಡವಾಳಕ್ಕೆ ಹಾನಿಯಾಗುವುದಿಲ್ಲ ಎಂಬ ನಂಬಿಕೆ ಇದೆ' ಎಂದು ಅಂಗಡಿಗಳ ಮಾಲೀಕ ದಾವಲಸಾಬ್ ಅತ್ತಾರ ಹೇಳುತ್ತಾರೆ.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.