ಕಾರಾಗೃಹದಲ್ಲಿ ಸಿಬ್ಬಂದಿ ಕೊರತೆ

7
ಕೈದಿಗಳ ಚಲನವಲನ: ರಾತ್ರಿ ಪಹರೆಗೆ ತೊಂದರೆ

ಕಾರಾಗೃಹದಲ್ಲಿ ಸಿಬ್ಬಂದಿ ಕೊರತೆ

Published:
Updated:

ಬಳ್ಳಾರಿ: ಕೈದಿಗಳ ಚಲನವಲನದ ಮೇಲೆ ನಿಗಾ ಇರಿಸಲು, ಪರಾರಿಯಾಗದಂತೆ ಕಟ್ಟೆಚ್ಚರ ವಹಿಸಲು ಅಗತ್ಯವಿರುವ ಸಿಬ್ಬಂದಿಯ ಕೊರತೆ ಹೆಚ್ಚಿರುವುದರಿಂದ, ಬಳ್ಳಾರಿಯ ಕೇಂದ್ರ ಕಾರಾಗೃಹದಲ್ಲಿ ಈಗಿರುವ ಕನಿಷ್ಠ ಸಿಬ್ಬಂದಿ ಪರದಾಡುವ ಪರಿಸ್ಥಿತಿ ಎದುರಾಗಿದೆ.ಬೆಂಗಳೂರಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಿಂದ ಸೈಕೋ ಜೈಶಂಕರ್‌ ಇತ್ತೀಚೆಗಷ್ಟೇ ಪರಾರಿಯಾದ ಪ್ರಕರಣ ನಡೆದ ನಂತರ ಕಟ್ಟೆಚ್ಚರ ವಹಿಸುವಂತೆ ಸೂಚಿಸಿರುವ ಬಂದೀಖಾನೆ ಇಲಾಖೆ ಮುಖ್ಯಸ್ಥರು, ಅಗತ್ಯ ಸಿಬ್ಬಂದಿ ನೇಮಿಸುವತ್ತ ಗಮನ ನೀಡದಿರುವುದು ಸಮಸ್ಯೆಗೆ ಕಾರಣವಾಗಿದೆ.ಕೈದಿಗಳ ಮೇಲುಸ್ತುವಾರಿಯೂ ಒಳಗೊಂಡಂತೆ ರಾತ್ರಿ ಕಾವಲು ಮತ್ತು ಪಹರೆಗಾಗಿ ಮಂಜೂರಾಗಿರುವ ಒಟ್ಟು 75 ಹುದ್ದೆಗಳಲ್ಲಿ 25ಕ್ಕೂ ಅಧಿಕ  ಹುದ್ದೆಗಳು ಖಾಲಿ ಇರುವುದರಿಂದ ಈಗಿರುವ 45ರಿಂದ 50 ಜನ ಸಿಬ್ಬಂದಿಯೇ ಪಹರೆ ಮತ್ತು ಕಟ್ಟೆಚ್ಚರದ ಕೆಲಸ ಮಾಡುತ್ತಿದ್ದಾರೆ.ಕಾರಾಗೃಹದ ಅನ್ಯ ಕೆಲಸ ಕಾರ್ಯಗಳನ್ನೂ ಲಭ್ಯ ಸಿಬ್ಬಂದಿಯೇ ನಿರ್ವಹಿಸುತ್ತಿದ್ದು, ಅವರಿಗೆ ವಾರದ ರಜೆ ಹಾಗೂ ಸುದೀರ್ಘ ರಜೆ ತೆಗೆದುಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಅನೇಕ ವರ್ಷಗಳಿಂದ ಖಾಲಿ ಇರುವ ಹುದ್ದೆಗಳ ನೇಮಕಕ್ಕೆ ಕ್ರಮ ಕೈಗೊಳ್ಳಬೇಕು ಎಂಬುದ ಅಧಿಕಾರಿಗಳ ಕೋರಿಕೆಯಾಗಿದೆ.ಒಟ್ಟು 747 ಕೈದಿಗಳನ್ನು ಇರಿಸಲು ಅವಕಾಶ ಇರುವ ಈ ಕಾರಾಗೃಹದಲ್ಲಿ ಪ್ರಸ್ತುತ 780 ಕೈದಿಗಳಿದ್ದು, ನಿಗಾ ಇರಿಸಲು ಅಗತ್ಯ ಸಿಬ್ಬಂದಿಯ ನೇಮಕಾತಿ ಮಾಡಿಕೊಂಡಲ್ಲಿ ಮಾತ್ರ ಸಮಸ್ಯೆ ದೂರವಾಗಲಿದೆ.ನಿರುಪಯುಕ್ತ ಸೆಲ್‌ಗಳು: ನಗರದ ಹೃದಯ ಭಾಗದಲ್ಲಿ ಒಟ್ಟು 40 ಎಕರೆ ಪ್ರದೇಶದಲ್ಲಿರುವ ಈ ಕಾರಾಗೃಹದ  ಹಿಂಭಾಗದಲ್ಲಿನ ಮುಚ್ಚಿದ ಬಂದೀಖಾನೆ (ಕ್ಲೋಸ್‌ ಪ್ರಿಸನ್‌)ಯಲ್ಲಿರುವ ಒಟ್ಟು 150 ಕೊಠಡಿಗಳು (ಸೆಲ್‌ಗಳು) ಶಿಥಿಲಗೊಂಡು ನಿರುಪಯುಕ್ತವಾಗಿರುವ ಹಿನ್ನೆಲೆ­ಯಲ್ಲಿ, ಒಳ ಭಾಗದ ಸೆಲ್‌ಗಳಲ್ಲೇ ಎಲ್ಲ ಕೈದಿ­ಗಳನ್ನು ಇರಿಸಲಾಗಿದೆ. ಜಾಗೆಯ ಕೊರತೆಯೂ ತೀವ್ರವಾಗಿದೆ ಎಂದು ಕಾರಾಗೃಹದ ಮೂಲಗಳು ‘ಪ್ರಜಾವಾಣಿ’ಗೆ ತಿಳಿಸಿವೆ.ಎರಡು ವರ್ಷಗಳ ಹಿಂದೆಯೇ ಈ ಕೊಠಡಿಗಳ ದುರಸ್ತಿಗಾಗಿ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಸರ್ಕಾರ ರೂ.2 ಕೋಟಿ ಅನುದಾನ ಮಂಜೂರು ಮಾಡಿ, ಆ ಪೈಕಿ ರೂ.1 ಕೋಟಿ ಅನುದಾನವನ್ನು ಬಿಡುಗಡೆ ಮಾಡಿದೆ. ಆದರೂ ಲೋಕೋಪ­ಯೋಗಿ ಇಲಾಖೆಯ ವಿಳಂಬ ನೀತಿಯಿಂದಾಗಿ ದುರಸ್ತಿ ಕಾರ್ಯ ಆರಂಭವಾಗಿಲ್ಲ. ಈ ಕೊಠಡಿಗಳು ದುರಸ್ತಿಯಾದ ನಂತರ ಪ್ರತಿ ಕೊಠಡಿಯಲ್ಲಿ ಇಬ್ಬರಂತೆ 300 ಜನ ಕೈದಿಗಳನ್ನು ಇರಿಸಬಹುದಾಗಿದೆ.ದುರಸ್ತಿ ಕಾರ್ಯದ ಗುತ್ತಿಗೆಗಾಗಿ ಟೆಂಡರ್‌ ಪ್ರಕ್ರಿಯೆ ಇನ್ನಷ್ಟೇ ಆರಂಭವಾಗಲಿದ್ದು, ಈ ಸೆಲ್‌ಗಳು ಕೈದಿಗಳನ್ನು ಇರಿಸಲು ಮುಕ್ತವಾಗಲಿವೆ. ನಂತರ ಆ ಭಾಗಕ್ಕೆ ಹೆಚ್ಚುವರಿ ಸಿಬ್ಬಂದಿ ನಿೊಯೋಜಿಸಬೇಕಾಗುತ್ತದೆ. ಆದಷ್ಟು ಶೀಘ್ರ ಸಿಬ್ಬಂದಿ ನೇಮಿಸಿದಲ್ಲಿ ಸಮಸ್ಯೆ ನೀಗಲಿದೆ.ಕಾರಾಗೃಹದಲ್ಲಿ ಅಕ್ರಮ ಚಟುವಟಿಕೆ ನಡೆಯದಂತೆ ತಡೆಯಲು ಇಲಾಖೆಯು ಮೊಬೈಲ್‌ ಜಾಮರ್‌ ಹಾಗೂ ಸಿ.ಸಿ ಕ್ಯಾಮೆರಾ ಅಳವಡಿಸುವ ನಿಟ್ಟಿನಲ್ಲಿ ಸಮೀಕ್ಷೆ ಕಾರ್ಯವನ್ನೂ ಪೂರ್ಣಗೊಳಿಸಿ ತಿಂಗಳುಗಳೇ ಕಳೆಯುತ್ತ ಬಂದರೂ ಕಾಮಗಾರಿ ಆರಂಭವಾಗಿಲ್ಲ.ಕುಖ್ಯಾತ ಕೈದಿಗಳನ್ನು ಇರಿಸಿರುವ ಕಾರಾಗೃಹದ ಭದ್ರತೆ ಮತ್ತು ಇತರ ಕೈದಿಗಳ ಸುರಕ್ಷತೆ ದೃಷ್ಟಿಯಿಂದ ಅಗತ್ಯ ಸಿಬ್ಬಂದಿಯ ನೇಮಕಕ್ಕೆ ಒತ್ತು ನೀಡುವ ಮೂಲಕ ಸಂಭವನೀಯ ಅವಗಡಗಳನ್ನು ತಡೆಯಬೇಕಿದೆ ಎಂದೂ ಮೂಲಗಳು ಅಭಿಪ್ರಾಯಪಟ್ಟಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry