ಕಾರಾಗೃಹ ಅಭಿವೃದ್ಧಿಗೆ ಒತ್ತು: ಗಗನ್‌ದೀಪ್

7

ಕಾರಾಗೃಹ ಅಭಿವೃದ್ಧಿಗೆ ಒತ್ತು: ಗಗನ್‌ದೀಪ್

Published:
Updated:

ಮೈಸೂರು: `ರಾಜ್ಯದ ಕಾರಾಗೃಹಗಳ ಅಭಿವೃದ್ಧಿಗೆ ಪ್ರಸಕ್ತ ಬಜೆಟ್‌ನಲ್ಲಿ ರೂ.88 ಕೋಟಿ ಬಿಡುಗಡೆಯಾಗಿದ್ದು, ಇದನ್ನು ಸದ್ಬಳಕೆ ಮಾಡಿಕೊಳ್ಳಲಾಗುತ್ತಿದೆ' ಎಂದು ರಾಜ್ಯ ಕಾರಾಗೃಹಗಳ ಮಹಾನಿರೀಕ್ಷಕ ಕೆ.ವಿ.ಗಗನ್‌ದೀಪ್ ತಿಳಿಸಿದರು.ನಗರದ ಕೇಂದ್ರ ಕಾರಾಗೃಹ ಕವಾಯತು ಮೈದಾನದಲ್ಲಿ ಬುಧವಾರ ನಡೆದ 40 ನೇ ತಂಡದ ಪ್ರಶಿಕ್ಷಣಾರ್ಥಿಗಳ ನಿರ್ಗಮನ ಪಥ ಸಂಚಲನದಲ್ಲಿ ಭಾಗವಹಿಸಿ ಅವರು ಮಾತನಾಡಿದರು.`ಈ ವಷದಲ್ಲಿ 417 ಮಂದಿ ವಾರ್ಡರ್ಸ್‌, 27 ಮಂದಿ ಜೈಲರ್‌ಗಳು, 14 ಮಂದಿ ಇನ್ಸ್‌ಸ್ಟ್ರಕ್ಟರ್‌ಗಳನ್ನು ನೇಮಕಾತಿ ಮಾಡಿಕೊಳ್ಳಲಾಗಿದೆ. ಬಂದಿಖಾನೆ ಇಲಾಖೆಗೆ ಅತಿ ಹೆಚ್ಚು ಹುದ್ದೆಗಳನ್ನು ಭರ್ತಿ ಮಾಡಿರುವುದು ಇತಿಹಾಸ. ಇಲಾಖೆಯಲ್ಲಿ ವಿವಿಧ ವಿಭಾಗಗಳಲ್ಲಿ ಸೇವೆ ಸಲ್ಲಿಸುತ್ತಿರುವ 212 ಮಂದಿಗೆ ಬಡ್ತಿ ನೀಡಲಾಗಿದೆ' ಎಂದು ಹೇಳಿದರು.500 ಸಿಬ್ಬಂದಿ ಕೊರತೆ:

`ಇಲಾಖೆಗೆ ಈ ವರ್ಷ ಹೆಚ್ಚು ಸಿಬ್ಬಂದಿ ನೇಮಕಾತಿ ಮಾಡಿದ್ದರೂ ಸಿಬ್ಬಂದಿ ಕೊರತೆ ನೀಗಿಲ್ಲ. ರಾಜ್ಯದಲ್ಲಿ ಒಟ್ಟು 515 ಸಿಬ್ಬಂದಿ ಕೊರತೆ ಇದೆ. ಹಂತ ಹಂತವಾಗಿ ಖಾಲಿ ಹುದ್ದೆಗಳನ್ನು ಭರ್ತಿ ಮಾಡಲಾಗುವುದು' ಎಂದು ತಿಳಿಸಿದರು.`ಮೈಸೂರು ಬೆಳಗಾವಿಯ ಕಾರಾಗೃಹಗಳಲ್ಲಿ ಬೇಕರಿ ಉತ್ಪನ್ನಗಳಿಂದ ಈ ವರ್ಷ ರೂ.20 ಲಕ್ಷ ಆದಾಯ ಬಂದಿದೆ. ಬೆಂಗಳೂರು ಕೇಂದ್ರ ಕಾರಾಗೃಹದಲ್ಲಿ ಸಿಹಿ ತಿನಿಸುಗಳು ಹಾಗೂ ಸಿದ್ಧ ಉಡುಪುಗಳನ್ನು ತಯಾರಿಸಲಾಗುತ್ತಿದೆ. ವಿಧಾನಸೌಧ ಮತ್ತು ರಾಜಭವನದಲ್ಲಿ ಮಳಿಗೆಯೊಂದನ್ನು ತೆರೆಯಲಾಗಿದ್ದು, ಕಾರಾಗೃಹದಲ್ಲಿ ಕೈದಿಗಳು ತಯಾರಿಸಿದ ವಸ್ತುಗಳನ್ನು ಮಾರಾಟ ಮಾಡಲಾಗುತ್ತಿದೆ' ಎಂದು ಹೇಳಿದರು.`ಇಲಾಖೆಗೆ ಸಿಕ್ಕ ಅನುದಾನದಲ್ಲಿ ರೂ.4 ಕೋಟಿ ವೆಚ್ಚದಲ್ಲಿ ಬೆಂಗಳೂರಿನಲ್ಲಿ ಕರ್ನಾಟಕ ಕಾರಾಗೃಹ ಅಕಾಡೆಮಿಯನ್ನು ಸ್ಥಾಪಿಸಲಾಗುತ್ತಿದೆ. ಇದಕ್ಕೆ ಈಗಾಗಲೇ ರೂ.2 ಕೋಟಿ ಹಣ ಬಿಡುಗಡೆಯಾಗಿದೆ. ಬೆಳಗಾವಿ ಕಾರಾಗೃಹದಲ್ಲಿ ಮೊಬೈಲ್ ಜಾಮರ್ ಅಳವಡಿಸಲಾಗಿದೆ. ತಿಹಾರ್ ಜೈಲಿನ ಮಾದರಿಯಲ್ಲಿ ಕಾರಾಗೃಹಗಳಿಗೆ ದೂರವಾಣಿ ವ್ಯವಸ್ಥೆ, ಟೆಲಿ ಮೆಡಿಸಿನ್ ವ್ಯವಸ್ಥೆ ಜಾರಿಗೊಳಿಸಲಾಗುತ್ತಿದೆ' ಎಂದು ತಿಳಿಸಿದರು.`ಕಾರಾಗೃಹಗಳಲ್ಲಿ ಆಗಾಗ್ಗೆ ಕೈದಿಗಳ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಆದರೆ ಇಲಾಖೆಗೆ ವೈದ್ಯರ ಕೊರತೆ ಇದೆ. ಕಾರಾಗೃಹ ಸಿಬ್ಬಂದಿಗೆ ಶೇ 15 ರ ವಿಶೇಷ ವೇತನವನ್ನು ಸರ್ಕಾರದ ಹಂತದಲ್ಲಿ ಬಾಕಿ ಇದೆ. ಈ ಬಗ್ಗೆ ಸರ್ಕಾರದ ಗಮನಕ್ಕೆ ತರಲಾಗುವುದು. ರೂ.5 ಕೋಟಿ ವೆಚ್ಚದಲ್ಲಿ ವಸತಿ ಸಮುಚ್ಚಯ ನಿರ್ಮಾಣ ಮತ್ತು ರಿಪೇರಿ ನಡೆಸಲಾಗುತ್ತಿದೆ.

ಕಾರಾಗೃಹಗಳಲ್ಲಿ ಸ್ವಚ್ಛತೆ ಕಾಪಾಡುವ ನಿಟ್ಟಿನಲ್ಲಿ ರೂ.3 ಕೋಟಿ ವೆಚ್ಚದಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗುತ್ತಿದೆ. ರಾಜ್ಯದ ಬಂದಿಖಾನೆಯು ದೇಶದಲ್ಲೇ ಉತ್ತಮ ಆಡಳಿತ ಮತ್ತು ನಿರ್ವಹಣೆ ಮಾಡುತ್ತಿದೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ' ಎಂದು ಹೇಳಿದರು.`ವರದಕ್ಷಿಣೆ ಸಾವು ಪ್ರಕರಣಗಳಿಂದಲೇ ರಾಜ್ಯದಲ್ಲಿ ಒಟ್ಟು 12,500 ಮಂದಿ ಕಾರಾಗೃಹದಲ್ಲಿ ಇದ್ದಾರೆ. ಈ ಪೈಕಿ 4 ಸಾವಿರ ಮಂದಿ ಶಿಕ್ಷೆಗೆ ಒಳಗಾಗಿದ್ದಾರೆ. ವರದಕ್ಷಿಣೆ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ 3 ಸಾವಿರ ಜನ ಶಿಕ್ಷೆ ಅನುಭವಿಸುತ್ತಿದ್ದಾರೆ.

ವರದಕ್ಷಿಣೆ ಕಿರುಕುಳ ಮತ್ತು ಸಾವಿನ ಪ್ರಕರಣಗಳು ದಾಖಲಾಗುವ ಸಂದರ್ಭದಲ್ಲಿ  ನಿರಪರಾಧಿಗಳ ಹೆಸರನ್ನು ಸೇರಿಸಲಾಗುತ್ತದೆ. ಇದರಿಂದ ನಿರಪರಾಧಿಗಳು ಸಹ ಶಿಕ್ಷೆಗೆ ಗುರಿಯಾಗಿ ಜೈಲಿಗೆ ಬರುತ್ತಾರೆ. ಹಾಗಾಗಿ ಕಾರಾಗೃಹ ಸಿಬ್ಬಂದಿ ಕಾರಾಗೃಹ ವಾಸಿಗಳನ್ನು ಚೆನ್ನಾಗಿ ನೋಡಿಕೊಳ್ಳಬೇಕು. ಕಾರಾಗೃಹದಿಂದ ಹೊರಹೋದ ಬಳಿಕ ಉತ್ತಮ ನಾಗರಿಕರಾಗುವಂತೆ ಮನ ಪರಿವರ್ತಿಸುವ ಜವಾಬ್ದಾರಿ ಸಿಬ್ಬಂದಿ ಮೇಲೆ ಇದೆ' ಎಂದು ಹೇಳಿದರು.ಕಾರಾಗೃಹಗಳ ಉಪ ಮಹಾ ನಿರೀಕ್ಷಕ ಎಂ.ಸಿ.ವಿಶ್ವನಾಥಯ್ಯ, ನಗರ ಕೇಂದ್ರ ಕಾರಾಗೃಹ ಮುಖ್ಯ ಅಧೀಕ್ಷಕ ಜಯಸಿಂಹ, ಸಹಾಯಕ ಅಧೀಕ್ಷಕ ಮಹೇಶ್‌ಕುಮಾರ್, ಜೈಲರ್‌ಗಳಾದ ಮರೀಗೌಡ, ಸುನಿಲ್, ಸುರೇಶ್ ಉಪಸ್ಥಿತರಿದ್ದರು. ಕಾರಾಗೃಹ ಅಧೀಕ್ಷಕಿ ಕೆ.ಸಿ.ದಿವ್ಯಶ್ರೀ ಸಿಬ್ಬಂದಿ ತರಬೇತಿ ಕುರಿತು ವರದಿ ವಾಚಿಸಿದರು.ಕಾರ್ಯಕ್ರಮಕ್ಕೂ ಮುನ್ನ ಕಾರಾಗೃಹ ಸಿಬ್ಬಂದಿ ಆಕರ್ಷಕ ಪಥ ಸಂಚಲನ ನಡೆಸಿ ಗಣ್ಯರಿಗೆ ಗೌರವ ವಂದನೆ ಸಲ್ಲಿಸಿದರು.ತರಬೇತಿ ಅವಧಿಯಲ್ಲಿ ಹೊರಾಂಗಣ ಮತ್ತು ಒಳಾಂಗಣ ವಿಷಯಗಳಲ್ಲಿ ಹೆಚ್ಚು ಅಂಕ ಗಳಿಸಿದವರಿಗೆ ಬಹುಮಾನಗಳನ್ನು ವಿತರಿಸಲಾಯಿತು.ಸರ್ವೋತ್ತಮ ಪ್ರಶಸ್ತಿ-ಆರ್.ಪ್ರದೀಪ್, ಎಡಿಜಿಪಿ ಐಜಿ ಪ್ರಶಸ್ತಿ ರಾಜೇಶ್ ನಾಯಕ್, ಹೊರಾಂಗಣ ವಿಭಾಗ: ರಾಜೇಶ್ ನಾಯಕ (ಪ್ರಥಮ), ಪಿ.ವಿ.ಕಾಂಬ್ಳೆ (ದ್ವಿತೀಯ), ಎಸ್.ವಿ.ಜಕಾತಿ (ತೃತೀಯ).ಒಳಾಂಗಣ ವಿಭಾಗ:ವಿನೋದಕುಮಾರ್ (ಪ್ರ), ಎಂ.ಸಂತೋಷ್ (ದ್ವಿ), ಕೆ.ಲಕ್ಷ್ಮಯ್ಯ (ತೃ). ಫೈರಿಂಗ್ ವಿಭಾಗ: ಎನ್.ದೇವ ಮತ್ತು ಎಂ.ಡಿ.ಬಡಿಗೇರ (ಪ್ರ), ಮಹೇಶ್ ಬಿ.ಗನಬಸಪ್ಪನವರ (ದ್ವಿ), ಕೆ.ಲಕ್ಷ್ಮಯ್ಯ (ತೃ). ಕರ್ನಾಟಕ ಕಾರಾಗೃಹಗಳ ಕೈಪಿಡಿ ಉತ್ತಮ-ಎಸ್.ಎಸ್.ಪುರುಷೋತ್ತಮ, ಕರ್ನಾಟಕ ಕಾರಾಗೃಹಗಳ ನಿಯಮಾವಳಿ ಮತ್ತು ಲಘು ವಾಹನಗಳು-ಆರ್.ಪ್ರದೀಪ್, ಭಾರತ ದಂಡ ಸಂಹಿತೆ ಮತ್ತು ಅಪರಾಧ ಪ್ರಕ್ರಿಯಾ ಸಂಹಿತೆ-ವಿನೋದ ಕುಮಾರ್, ಸಮಾಜಶಾಸ್ತ್ರ, ಮನಃಶಾಸ್ತ್ರ, ಅಪರಾಧ ಶಾಸ್ತ್ರ ಮತ್ತು ಭಾರತ ಸಂವಿಧಾನ-ವಿ.ಮುತ್ತಪ್ಪ, ವಸತಿ ನಿಲಯದ ಕೊಠಡಿ ಉತ್ತಮ ನಿರ್ವಹಣೆ -ರಾಘವೇಂದ್ರ ಈಶ್ವರಗೌಡ, ಸಿದ್ದಪ್ಪ ಹಲಕರ್ಣಿ, ಬಸವರಾಜ ಕಮತರ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry