ಸೋಮವಾರ, ಆಗಸ್ಟ್ 26, 2019
20 °C

ಕಾರುಗಳವು: 8 ಜನ ಬಂಧನ

Published:
Updated:

ಯಲಹಂಕ: ಬೆಂಗಳೂರು ನಗರದ ವಿವಿಧೆಡೆ ನಡೆದಿದ್ದ ಕಾರುಗಳವು ಪ್ರಕರಣಗಳನ್ನು ಪತ್ತೆ ಹಚ್ಚಿರುವ ಈಶಾನ್ಯ ವಿಭಾಗ ಪೊಲೀಸರು, 8 ಜನ ಅಂತರರಾಜ್ಯ ಆರೋಪಿಗಳನ್ನು ಬಂಧಿಸಿ, 1.10 ಕೋಟಿ ಮೌಲ್ಯದ 21 ಕಾರುಗಳನ್ನು ವಶಪಡಿಸಿಕೊಂಡಿದ್ದಾರೆ.ಗುರುವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ನಗರ ಪೊಲೀಸ್ ಕಮಿಷನರ್ ರಾಘವೇಂದ್ರ ಔರಾದ್‌ಕರ್, `ಬೆಂಗಳೂರು ನಗರದಲ್ಲಿ ಕಳವಾಗಿದ್ದ 20 ಹಾಗೂ ಮೈಸೂರಿದಲ್ಲಿ ಕಳವು ಮಾಡಿದ್ದ ಒಂದು ಕಾರನ್ನು ವಶಪಡಿಸಿಕೊಳ್ಳಲಾಗಿದೆ' ಎಂದು ತಿಳಿಸಿದರು.ಪಾರ್ಕಿಂಗ್ ಮಾಡಿದ ಕಾರಿನ ಬಾಗಿಲುಗಳ ಗಾಜುಗಳನ್ನು ಸ್ಕ್ರೂ ಡ್ರೈವರ್‌ನಿಂದ ಮೀಟಿ ವಾಹನದೊಳಗೆ ಹೋಗುತ್ತಿದ್ದ ಆರೋಪಿಗಳು, ಮೊದಲು ಅಲಾರಾಂ ವೈರ್‌ಗಳನ್ನು ಕತ್ತರಿಸುತ್ತಿದ್ದರು. ನಂತರ ಸ್ಕ್ರೂ ಡ್ರೈವರ್ ಮತ್ತು ಆ್ಯಕ್ಸಲ್ ಬ್ಲೇಡ್‌ನಿಂದ ಸ್ಟೇರಿಂಗ್ ಲಾಕ್ ಅನ್ನು ತೆಗೆದು ಕಾರನ್ನು ಕಳವು ಮಾಡಿಕೊಂಡು ಹೊರರಾಜ್ಯಗಳಿಗೆ ತೆರಳುತ್ತಿದ್ದರು.

ಕಳವು ಮಾಡಿದ ಕಾರುಗಳ ನಂಬರ್ ಪ್ಲೇಟ್ ಬದಲಾಯಿಸಿ, ಕೇರಳ, ತಮಿಳುನಾಡು  ಮತ್ತು ಆಂಧ್ರಪ್ರದೇಶ ರಾಜ್ಯಗಳಲ್ಲಿನ ದಳ್ಳಾಳಿಗಳಿಗೆ ಮಾರಾಟ ಮಾಡುತ್ತಿದ್ದರು.ಮಾರಾಟವಾಗದ ಕಾರುಗಳನ್ನು ಗೊತ್ತಿರುವ ಗ್ಯಾರೇಜ್‌ಗಳಲ್ಲಿ ನಿಲ್ಲಿಸುತ್ತಿದ್ದರು. ಪ್ರಕರಣಗಳಿಗೆ ಸಂಬಂಧಿಸಿದಂತೆ ಶಾಹಿದ್ ಹಂಸ ಅಲಿಯಾಸ್ ಸೋಡಾಬಾಬು, ವಿನೋದ್‌ಕುಮಾರ್, ವೀರಕುಟ್ಟಿ, ಅಬ್ದುಲ್ ಕರೀಂ ಅಲಿಯಾಸ್ ಕರೀಂ, ಸುಜೋಯ್.ಕೆ.ವಿ., ರಿಯಾಜ್ ಅಲಿಯಾಸ್ ಶರೀಫ್, ಚಿಂತಾಮರೈ ಹಾಗೂ ಅನಿಲ್‌ಕುಮಾರ್ ಎಂಬ ಅಂತರರಾಜ್ಯ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ವಿವರಿಸಿದರು.

Post Comments (+)