ಕಾರುಗಳ ಸೋಲಿನ ಚರಿತ್ರೆ!

7

ಕಾರುಗಳ ಸೋಲಿನ ಚರಿತ್ರೆ!

Published:
Updated:
ಕಾರುಗಳ ಸೋಲಿನ ಚರಿತ್ರೆ!

ಪಾಲ್ ಪ್ಯೂಜೊ 309 (1994-1997)

ಅತ್ಯುತ್ತಮ ಕಾರು ಇದಾಗಿದ್ದರೂ ಕಂಪೆನಿ ತನ್ನ ಅಸ್ತಿತ್ವ ಕಳೆದುಕೊಂಡಿದ್ದರಿಂದ ಇದು ವಿಫಲವಾಯಿತು. ಪ್ರೀಮಿಯರ್ ಆಟೊಮೊಬೈಲ್ ಲಿಮಿಟೆಡ್ (ಪಿಎಎಲ್) ಕಂಪೆನಿಯು 1994ರಲ್ಲಿ ಪ್ಯೂಜೊ 309 ಕಾರನ್ನು ಭಾರತಕ್ಕೆ ಪರಿಚಯಿಸಿತು. ಈ ಕಾರು ಕಾಲಿಡುತ್ತಿದ್ದಂತೆ ಗರಿಗರಿ ದೋಸೆಯಂತೆ ಖರ್ಚಾಗಿದ್ದು ಇದರ ಸಾಮರ್ಥ್ಯವನ್ನು ಸಾರುತ್ತದೆ.

ಚಿಕ್ಕಮಗಳೂರಿನಲ್ಲಿ ಕಾರು ತಂದ ಒಂದೇ ದಿನದಲ್ಲಿ ಅಷ್ಟೂ ಕಾರುಗಳು ಮಾರಾಟವಾದ ಉದಾಹರಣೆಯೂ ಇದೆ. 1.5ಲೀ ಸಾಮರ್ಥ್ಯದ ಡೀಸಲ್ ಎಂಜಿನ್ 75ಬಿಎಚ್‌ಪಿ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು.

ಪ್ಯೂಜೊ ಕಂಪೆನಿಯ 58ಬಿಎಚ್‌ಪಿ ಡೀಸಲ್ ಎಂಜಿನ್ ಅನ್ನು ಮಾರುತಿ ಎಸ್ಟೀಮ್ ಹಾಗೂ ಝೆನ್ ಡೀಸಲ್ ಕಾರುಗಳಲ್ಲಿ ಮಾತ್ರವಲ್ಲ, ಹ್ಯುಂಡೈ ಅಸ್ಸೆಂಟ್ ಡೀಸಲ್‌ನಲ್ಲೂ ಬಳಕೆಯಾಗುವ ಮೂಲಕ ಅದರ ಬೇಡಿಕೆಯನ್ನು ಸೃಷ್ಟಿಸಿತ್ತು.ಶಕ್ತಿ ಶಾಲಿ ಎಂಜಿನ್, ಗಟ್ಟಿಮುಟ್ಟಾದ ದೇಹ, ಉತ್ತಮ ಗ್ರೌಂಡ್ ಕ್ಲಿಯರೆನ್ಸ್ ಇದ್ದದ್ದರಿಂದ ಬೇಡಿಕೆಯೂ ಹೆಚ್ಚಿತ್ತು. ಆದರೂ ಕಾರು ಭಾರತೀಯ ಮಾರುಕಟ್ಟೆಯಲ್ಲಿ ವೈಫಲ್ಯ ಕಾಣಲು ಬಹುಮುಖ್ಯ ಕಾರಣ ನೌಕರರ ಕೊರತೆಯಿಂದಾಗಿ ಪಿಎಎಲ್ ಜತೆಗಿನ ಮೈತ್ರಿ ಮುರಿದುಬಿದ್ದದ್ದು. ಜತೆಗೆ ಮಾರಾಟದ ನಂತರ ಸೇವೆ ನೀಡುವಲ್ಲಿ ಕಂಪೆನಿ ವಿಫಲವಾಗಿದ್ದರಿಂದ ಒಂದು ಅತ್ಯುತ್ತಮ ಕಾರು ಮರೆಯಾಯಿತು.ಸ್ಯಾನ್ ಸ್ಟಾರ್ಮ್ (1998-ಇಂದಿಗೂ ಇದೆ)

ಕಡಿಮೆ ಶಕ್ತಿ, ಕಳಪೆ ಮಾರಾಟ ವ್ಯವಸ್ಥೆ ಹಾಗೂ ಮಾರಾಟ ಜಾಲ ಮತ್ತು ಅತ್ತ ಸ್ಪೋರ್ಟ್ಸ್ ಕಾರೂ ಅಲ್ಲದೆ ಇತ್ತ ಸಾಮಾನ್ಯ ಕಾರೂ ಅಲ್ಲದ ನೋಟ ಇದರ ವೈಫಲ್ಯಕ್ಕೆ ಕಾರಣ.ವಿಜಯ್ ಮಲ್ಯ ಅವರ ಕಿಂಗ್‌ಫಿಷರ್ ಕಂಪೆನಿಯು ಕೂಪ್ ಮಾದರಿಯ ಸ್ಪೋರ್ಟ್ಸ್ ಕಾರೊಂದರ ತಯಾರಿಗೆ ತೊಡಗಿಕೊಂಡು ಗೋವಾದಲ್ಲಿ ಸ್ಯಾನ್ ಮೋಟಾರ್ಸ್ ಹೆಸರಿನ ಕಂಪೆನಿಯನ್ನು 1998ರಲ್ಲಿ ಹುಟ್ಟುಹಾಕಿದರು. ಎರಡು ಆಸನಗಳ ಹಾಗೂ ಫೈಬರ್ ಗಾಜಿನಿಂದ ತಯಾರಿಸಲಾದ ಹಗುರವಾದ ಕಾರು ಇದು.

ರಿನಾಲ್ಟ್ ಅವರ 1.2ಲೀ ಸಾಮರ್ಥ್ಯದ 60 ಬಿಎಚ್‌ಪಿ ಉತ್ಪಾದಿಸುವ ಎಂಜಿನ್ ಅನ್ನು ಇದು ಹೊಂದಿತ್ತು. ಹ್ಯಾಚ್‌ಬ್ಯಾಕ್‌ಗಿಂತ ಕೊಂಚ ಉತ್ತಮವಾಗಿದ್ದ ಸ್ಯಾನ್ ಸ್ಟಾರ್ಮ್ ಸ್ಪೋರ್ಟ್ಸ್ ಕಾರಿನ ಗುಣಲಕ್ಷಣ ಅಷ್ಟಾಗಿ ಇರಲಿಲ್ಲ.

ಸಾಮಾನು ಸರಂಜಾಮು ಇಡಲು ಕಡಿವೆು ಸ್ಥಳಾವಕಾಶವಿರುವ ಸ್ಯಾನ್ ಸ್ಟಾರ್ಮ್ ಕಾರು ಕಳೆದ ಕೆಲವು ವರ್ಷಗಳಿಂದ ಕೇವಲ ಕೆಲವೇ ಕೆಲವು ಕಾರುಗಳನ್ನು ಮಾರಾಟ ಮಾಡಿದೆ. ಆದರೆ ಈಗಲೂ ಬೇಕೆಂದವರು ಇದನ್ನು ಖರೀದಿಸಬಹುದಾಗಿದೆ.

ಒಪೆಲ್ ವೆಕ್ಟ್ರಾ (2002-2004)

ಕಾರಿನಲ್ಲಿ ಬಳಸಿದ್ದ ಚಮತ್ಕಾರಿ ಎಲೆಕ್ಟ್ರಾನಿಕ್ ಉಪಕರಣಗಳು ಆ ಕಾಲಕ್ಕೆ ತುಸು ಹೆಚ್ಚೆನಿಸಿದ್ದೇ ಕಾರು ವೈಫಲ್ಯ ಕಾಣಲು ಕಾರಣ. ಭಾರತದಲ್ಲಿ ಬಿಡುಗಡೆಗೊಂಡ `ಡಿ' ವಿಭಾಗದ ಕಾರುಗಳಲ್ಲಿ ಅತ್ಯಂತ ಯಶಸ್ವಿ ಹಾಗೂ ಅತ್ಯುತ್ತಮ ಸೌಲಭ್ಯವಿದ್ದ ವಿಲಾಸಿ ಕಾರು ಒಪೆಲ್ ವೆಕ್ಟ್ರಾ. 2002ರಲ್ಲಿ ರಸ್ತೆಗಿಳಿದ ಈ ಕಾರಿನ ಬೆಲೆ 16 ಲಕ್ಷ ರೂಪಾಯಿ ಇತ್ತು.

2.2 ಲೀ ಸಾಮರ್ಥ್ಯದ 146ಬಿಎಚ್‌ಪಿ ಪೆಟ್ರೋಲ್ ಎಂಜಿನ್ ಹೊಂದಿದ್ದರೂ ಇದರ ಕ್ಲಿಷ್ಟಕರವಾದ ಎಲೆಕ್ಟ್ರಾನಿಕ್ ಉಪಕರಣಗಳು ಬಳಕೆದಾರರಿಗೆ ಹೆಚ್ಚು ಕಿರಿಕಿರಿಯನ್ನುಂಟು ಮಾಡಿತ್ತು. ಕಾರಿನ ಪ್ರತಿಯೊಂದು ಭಾಗವನ್ನು ಓದಬಲ್ಲ ಆನ್‌ಬೋರ್ಡ್ ಡಯಾಗ್ನಾಸ್ಟಿಕ್ ಸಾಫ್ಟ್‌ವೇರ್ ಹೊಂದಿತ್ತು.

ಇದು ಭಾರತೀಯರಿಗೆ ತೀರಾ ಹೊಸತಾದ್ದರಿಂದ ಕಾರು ತನ್ನ ಬಹುಪಾಲು ಸಮಯವನ್ನು ಸೇವಾ ಕೇಂದ್ರಗಳಲ್ಲೇ ಕಳೆಯಬೇಕಾಗಿತ್ತು. ಈ ಕಾರನ್ನು ಕೆಲವೇ ವರ್ಷಗಳ ಹಿಂದೆ ಜನರಲ್ ಮೋಟಾರ್ಸ್ ಖರೀದಿಸಿ ಅದನ್ನು ಷವರ್ಲೆ ಬ್ರಾಂಡ್ ಅಡಿಯಲ್ಲಿ ಬಿಡುಗಡೆ ಮಾಡಿದೆ.

 

ಫೋರ್ಡ್ ಮಾಂಡಿಯೊ (2002-2007)

ದುಬಾರಿ ಬೆಲೆ ಹಾಗೂ ಪಕ್ವವಲ್ಲದ ಕಾಲದಲ್ಲಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಬಿಡುಗಡೆಗೊಂಡಿದ್ದು ಇದರ ವೈಫಲ್ಯಕ್ಕೆ ಕಾರಣ.ವಿಲಾಸಿ ಕಾರುಗಳ ಮೂಲಕ ಭಾರತಕ್ಕೆ ಕಾಲಿಟ್ಟ ಫೋರ್ಡ್ ಜಯಗಳಿಸಿದ್ದು ಕಡಿಮೆಯೇ. ಮಾಂಡಿಯೊ ಕಾರು ಜಾಗತಿಕ ಮಾರುಕಟ್ಟೆಯಲ್ಲಿ ಜಯಗಳಿಸಿದ್ದರೂ ಭಾರತದ ಗ್ರಾಹಕರು ಇದರತ್ತ ಅಷ್ಟಾಗಿ ಆಕರ್ಷಿತರಾಗಲಿಲ್ಲ.

2002ರಲ್ಲಿ ಮಾಂಡಿಯೊ ಕಾರನ್ನು ಆಮದು ಮಾಡಿಕೊಂಡಾಗ ಚಾಲಕ ಸ್ನೇಹಿ, ಐಷಾರಾಮಿ ಸೌಲಭ್ಯ ಎಂದು ಎಲ್ಲರ ಹುಬ್ಬೇರಿಸಿತ್ತು.

ಆದರೆ ಅದೇ ಸಂದರ್ಭದಲ್ಲಿ ಭಾರತಕ್ಕೆ ಕಾಲಿಟ್ಟಿದ್ದ ಜಪಾನ್ ಮೂಲಕ ಹೊಂಡಾ ಅಕಾರ್ಡ್ ಹಾಗೂ ಟೊಯೊಟಾ ಕ್ಯಾಮ್ರಿ ಕಾರುಗಳನ್ನು ಕಂಡಿದ್ದ ಭಾರತೀಯರು `ಮಾಂಡಿಯೊ ಹಣಕ್ಕೆ ತಕ್ಕ ಕಾರಲ್ಲ' ಎಂದು ತೀರ್ಮಾನಿಸಿದಂತಿತ್ತು.

2ಲೀ ಸಾಮರ್ಥ್ಯದ ಪೆಟ್ರೋಲ್ ಎಂಜಿನ್ ಹೊಂದಿದ್ದ ಮಾಂಡಿಯೊ 142ಬಿಎಚ್‌ಪಿ ಶಕ್ತಿ ಉತ್ಪಾದಿಸುವ ಸಾಮರ್ಥ್ಯ ಹೊಂದಿತ್ತು. ಇದೇ ಮಾದರಿಯಲ್ಲಿ 2ಲೀ, 128 ಬಿಎಚ್‌ಪಿ ಎಂಜಿನ್ ಕಾರು ಕೂಡಾ ಮಾರುಕಟ್ಟೆಗೆ ಬಿಡಲಾಗಿತ್ತು.

ಡುರಾಟಾರ್ಕ್, ಡೀಸಲ್ ಕಾರು ಅಧಿಕ ಇಂಧನ ಕ್ಷಮತೆಯನ್ನು ಹೊಂದಿತ್ತು. ಆದರೆ ಪೆಟ್ರೋಲ್ ಮಾದರಿ ಓಡಿಸಲು ಹೆಚ್ಚು ಆನಂದ ನೀಡುತ್ತಿದ್ದದ್ದನ್ನು ಅದನ್ನು ಖರೀದಿಸಿದವರು ಹೇಳುತ್ತಾರೆ.

ಷೆವರ್ಲೆ ಎಸ್‌ಆರ್‌ವಿ (2006-2009)

ಅತ್ಯಂತ ದುಬಾರಿ ಬೆಲೆಯ ಹ್ಯಾಚ್‌ಬ್ಯಾಕ್ ಎಂಬ ಕಾರಣದಿಂದ ಭಾರತೀಯ ಗ್ರಾಹಕರಿಂದ ಇದು ದೂರವಾಯಿತು. ಷೆವರ್ಲೆ ಕಂಪೆನಿಯ ಆಪ್ಟ್ರಾ ಹ್ಯಾಚ್‌ಬ್ಯಾಕ್ ಮಾದರಿಯು ಭಾರತದಲ್ಲಿ 2006ರಲ್ಲಿ ಪರಿಚಯಗೊಂಡಿತು.

ಆ ಕಾಲದಲ್ಲಿದ್ದ ಹ್ಯಾಚ್‌ಬ್ಯಾಕ್‌ಗಳಿಗಿಂತ ತೀರಾ ವಿಭಿನ್ನವಾಗಿ ಹಾಗೂ ಅತ್ಯಾಧುನಿಕವಾಗಿದ್ದ ಎಸ್‌ಆರ್‌ವಿಗೆ 7ಲಕ್ಷ ರೂಪಾಯಿ ನಿಗದಿಪಡಿಸಲಾಗಿತ್ತು. 100 ಬಿಎಚ್‌ಪಿ ಶಕ್ತಿಯನ್ನು ಉತ್ಪಾದಿಸುತ್ತಿದ್ದ ಈ ಕಾರಿನಲ್ಲಿ 1.6ಲೀ ಸಾಮರ್ಥ್ಯ ಎಂಜಿನ್ ಅಳವಡಿಸಲಾಗಿತ್ತು.ಇದರಲ್ಲಿ ಬಳಸಿದ್ದ ಪ್ರತಿಯೊಂದು ಮೆಕ್ಯಾನಿಕಲ್ ಬಿಡಿಭಾಗಗಳೂ ಸಹ ಆಪ್ಟ್ರಾದಿಂದ ಎರವಲು ಪಡೆಯಲಾಗಿತ್ತು. ಕಾರಿನ ಒಳಭಾಗದಲ್ಲಿ ವಿಶಾಲ ಸ್ಥಳಾವಕಾಶ, ಸಾಮಾನು ಸರಂಜಾಮು ಇಡಲು ಅಗತ್ಯಕ್ಕಿಂತ ಹೆಚ್ಚಿನ ಸ್ಥಳದಿಂದಾಗಿ ಕಾರು ದೊಡ್ಡದಾಗಿತ್ತು. ಆದರೆ ತುಸು ಹೆಚ್ಚೆನಿಸುವ ಬೆಲೆಯ ಜತೆಗೆ ಭಾರತೀಯ ಗ್ರಾಹಕರು ಇಷ್ಟು ದೊಡ್ಡ ಹ್ಯಾಚ್‌ಬ್ಯಾಕ್‌ಗೆ ಆ ಕಾಲದಲ್ಲಿ ತಯಾರಿಲ್ಲದಿದ್ದದ್ದರಿಂದ ಕಾರು ಮರೆಯಾಯಿತು.

ಮೂರು ವರ್ಷಗಳ ನಂತರ ಕೆಲವೇ ಕೆಲವು ಕಾರುಗಳು ಮಾರಾಟವಾದ್ದರಿಂದ ಕಂಪೆನಿ ಕಾರಿನ ತಯಾರಿಕೆಯನ್ನು ಸ್ಥಗತಿಗೊಳಿಸಿತು. ಆದರೆ ಸೆಡಾನ್ ಮಾದರಿಯ ಆಪ್ಟ್ರಾ ಕಾರು ತಯಾರಿಕೆ ಇನ್ನೂ ಇರುವುದರಿಂದ ಎಸ್‌ಆರ್‌ವಿ ಕಾರಿನ ಬಿಡಿಭಾಗಗಳಿಗೆ ಯಾವುದೇ ತೊಂದರೆ ಇಲ್ಲ ಎನ್ನುವುದು ಸಮಾಧಾನ.ಇಲ್ಲಿ ಪಟ್ಟಿ ಮಾಡಿರುವ ಕಾರುಗಳು ಮಾತ್ರವಲ್ಲ, ಟಾಟಾ ಎಸ್ಟೇಟ್ ಎಂಬ ಸ್ಟೇಷನ್ ವ್ಯಾಗನ್, ಪ್ರೀಮಿಯರ್ ಪದ್ಮಿನಿ, ಮಹೀಂದ್ರಾ ಸ್ಕಾರ್ಪಿಯೋ ಪೆಟ್ರೋಲ್ ರೆವ್ 116 ಇತ್ಯಾದಿ ಕಾರುಗಳು ವೈಫಲ್ಯ ಕಂಡಿವೆ. ತಯಾರಾಗುತ್ತಿರುವ ಕಾರುಗಳಲ್ಲಿ ಮಾರುತಿ ಗ್ರ್ಯಾಂಡ್ ವೆಟೆರಾ, ಮಿಟ್ಸುಬಿಷಿ ಔಟ್‌ಲ್ಯಾಂಡರ್ ಕೂಡಾ ಅಷ್ಟಾಗಿ ಮಾರಾಟ ಕಾಣದೆ ಅವಸಾನದ ಅಂಚಿನಲ್ಲಿವೆ. 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry