ಭಾನುವಾರ, ಜೂನ್ 13, 2021
26 °C

ಕಾರು ಅಪಘಾತ: ವಿಂಡೀಸ್ ಕ್ರಿಕೆಟಿಗ ರುನಾಕೊ ದುರ್ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಪೋರ್ಟ್ ಆಫ್ ಸ್ಪೇನ್ (ಐಎಎನ್‌ಎಸ್): ವೆಸ್ಟ್ ಇಂಡೀಸ್ ಕ್ರಿಕೆಟ್ ತಂಡದ ಆಟಗಾರ ರುನಾಕೊ ಮೋರ್ಟನ್ ಭಾನುವಾರ ರಾತ್ರಿ ಟ್ರಿನಿಡಾಡ್‌ನಲ್ಲಿ ನಡೆದ ಕಾರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಈ ಘಟನೆ ಕೆರಿಬಿಯನ್ ನಾಡಿನ ಕ್ರಿಕೆಟ್ ಪ್ರೇಮಿಗಳಿಗೆ ಆಘಾತ ಉಂಟುಮಾಡಿದೆ.33ರ ಹರೆಯದ ಆಟಗಾರ ಚಾಲನೆ ಮಾಡುತ್ತಿದ್ದ ಕಾರು ನಿಯಂತ್ರಣ ತಪ್ಪಿ ಕಂಬವೊಂದಕ್ಕೆ ಡಿಕ್ಕಿ ಹೊಡೆದು ಅಪಘಾತ ನಡೆದಿದೆ. ಅವರು ಸ್ಥಳದಲ್ಲೇ ಮೃತಪಟ್ಟರು ಎಂದು ವರದಿಗಳು ತಿಳಿಸಿವೆ. ಪಂದ್ಯವೊಂದರಲ್ಲಿ ಪಾಲ್ಗೊಂಡು ಮನೆಗೆ ಮರಳುತ್ತಿದ್ದ ಸಂದರ್ಭ ಸ್ಥಳೀಯ ಕಾಲಮಾನ ರಾತ್ರಿ 11 ಗಂಟೆಗೆ ದುರ್ಘಟನೆ ನಡೆದಿದೆ.ರುನಾಕೊ 15 ಟೆಸ್ಟ್ ಹಾಗೂ 56 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ವಿಂಡೀಸ್ ತಂಡವನ್ನು ಪ್ರತಿನಿಧಿಸಿದ್ದಾರೆ. ಅದೇ ರೀತಿ ಏಳು ಟ್ವೆಂಟಿ-20 ಪಂದ್ಯಗಳನ್ನೂ ಆಡಿದ್ದಾರೆ. 2002 ರಲ್ಲಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು. 2010ರ ಫೆಬ್ರುವರಿಯಲ್ಲಿ ಸಿಡ್ನಿಯಲ್ಲಿ ನಡೆದ ಆಸ್ಟ್ರೇಲಿಯಾ ವಿರುದ್ಧದ ಟ್ವೆಂಟಿ-20 ಪಂದ್ಯದ ಬಳಿಕ ರುನಾಕೊ ವಿಂಡೀಸ್ ಪರ ಯಾವುದೇ ಅಂತರರಾಷ್ಟ್ರೀಯ ಪಂದ್ಯವನ್ನಾಡಿಲ್ಲ.ಟೆಸ್ಟ್‌ನಲ್ಲಿ 22.03 ಸರಾಸರಿಯಲ್ಲಿ 573 ಹಾಗೂ ಏಕದಿನ ಪಂದ್ಯಗಳಲ್ಲಿ 33.75ರ ಸರಾಸರಿಯಲ್ಲಿ 1519 ರನ್ ಪೇರಿಸಿದ್ದಾರೆ. 2006ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದಲ್ಲಿ ಅಜೇಯ 90 ರನ್ ಗಳಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದ್ದು ಅವರ ಜೀವನದ ಸ್ಮರಣೀಯ ಇನಿಂಗ್ಸ್ ಎನಿಸಿದೆ. ರುನಾಕೊ ನಿಧನಕ್ಕೆ ಕ್ರಿಕೆಟ್ ಆಟಗಾರರು ಆಘಾತ ವ್ಯಕ್ತಪಡಿಸಿದ್ದಾರೆ.ಕ್ರಿಸ್ ಗೇಲ್ ಮತ್ತು ಕೆವಿನ್ ಪೀಟರ್‌ಸನ್ ಒಳಗೊಂಡಂತೆ ಹಲವು ಆಟಗಾರರು `ಟ್ವಿಟರ್~ನಲ್ಲಿ ಶೋಕ ಸಂದೇಶ ಬರೆದಿದ್ದಾರೆ. `ರುನಾಕೊ ನಿಧನದಿಂದ ನಾವು ನಿಜವಾದ ಹೋರಾಟಗಾರನೊಬ್ಬನನ್ನು ಕಳೆದುಕೊಂಡಿದ್ದೇವೆ. ಅವರ ಆತ್ಮಕ್ಕೆ ಶಾಂತಿ ಲಭಿಸಲಿ~ ಎಂದು ಗೇಲ್ ಬರೆದಿದ್ದಾರೆ. ಮೋರ್ಟನ್ ಅವರು ಗೇಲ್ ನಾಯಕತ್ವದಲ್ಲಿ ಆಡಿದ್ದರು.`ಇದೊಂದು ದುಃಖದ ಸುದ್ದಿ. ರುನಾಕೊ ಒಬ್ಬ ಸಭ್ಯ ವ್ಯಕ್ತಿ ಹಾಗೂ ಪ್ರಬಲ ಸ್ಪರ್ಧಿಯಾಗಿದ್ದರು~ ಎಂದು ಇಂಗ್ಲೆಂಡ್‌ನ ಬ್ಯಾಟ್ಸ್‌ಮನ್ ಪೀಟರ್‌ಸನ್ `ಟ್ವಿಟರ್~ನಲ್ಲಿ ಬರೆದಿದ್ದಾರೆ.ದೇಸಿ ಕ್ರಿಕೆಟ್‌ನಲ್ಲಿ ಟ್ರಿನಿಡಾಡ್ ಹಾಗೂ ಲೀವಾರ್ಡ್ ಐಲ್ಯಾಂಡ್ ತಂಡಗಳನ್ನು ಪ್ರತಿನಿಧಿಸಿದ್ದ ಈ ಆಟಗಾರ ಪ್ರಥಮ ದರ್ಜೆ ಪಂದ್ಯಗಳಲ್ಲಿ ಒಟ್ಟು 5980 ರನ್ ಪೇರಿಸಿದ್ದಾರೆ.ರುನಾಕೊ ವೃತ್ತಿಜೀವನ ವಿವಾದಗಳಿಂದ ಹೊರತಾಗಿರಲಿಲ್ಲ. ಅಶಿಸ್ತು ತೋರಿದ್ದಕ್ಕೆ ಅವರನ್ನು 2001ರ ಜುಲೈನಲ್ಲಿ ವೆಸ್ಟ್‌ಇಂಡೀಸ್ ಕ್ರಿಕೆಟ್ ಅಕಾಡೆಮಿಯಿಂದ ಕೈಬಿಡಲಾಗಿತ್ತು. 2002 ಸೆಪ್ಟೆಂಬರ್‌ನಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯ ವೇಳೆ ಸುಳ್ಳು ಕಾರಣ ನೀಡಿ ತಂಡದಿಂದ ಹೊರನಡೆದಿದ್ದರು. 2004ರ ಜನವರಿಯಲ್ಲಿ ಇರಿತದ ಪ್ರಕರಣವೊಂದರಲ್ಲಿ ಇವರನ್ನು ಬಂಧಿಸಲಾಗಿತ್ತಾದರೂ, ಆರೋಪ ದೃಢಗೊಳ್ಳದ ಕಾರಣ ಬಿಡುಗಡೆ ಮಾಡಲಾಗಿತ್ತು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.