ಸೋಮವಾರ, ಅಕ್ಟೋಬರ್ 21, 2019
24 °C

ಕಾರು ಚಾಲಕ ಆತ್ಮಹತ್ಯೆ

Published:
Updated:

ಬೆಂಗಳೂರು: ಕಾರು ಚಾಲಕರೊಬ್ಬರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ವಿವೇಕನಗರ ಸಮೀಪದ ಈಜಿಪುರದಲ್ಲಿ ಗುರುವಾರ ನಡೆದಿದೆ. ಈಜಿಪುರ 21ನೇ ಅಡ್ಡರಸ್ತೆ ನಿವಾಸಿ ಶ್ರೀನಿವಾಸ್ (36) ಆತ್ಮಹತ್ಯೆ ಮಾಡಿಕೊಂಡವರು. ಶೋಭಾ ಎಂಬುವರನ್ನು ವಿವಾಹವಾಗಿದ್ದ ಅವರಿಗೆ ಯಶವಂತ್ ಎಂಬ ಮಗನಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಶೋಭಾ ಅವರು ಮಗನ ಜತೆ ಜ.10ರಂದು ತಮಿಳುನಾಡಿಗೆ ಹೋಗಿದ್ದರು. ಮನೆಯಲ್ಲೇ ಒಬ್ಬರೇ ಇದ್ದ ಶ್ರೀನಿವಾಸ್ ರಾತ್ರಿ ನೇಣು ಹಾಕಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ಹೇಳಿದ್ದಾರೆ. ವಿವೇಕನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಕಳವು

ನಗರದ ಕಾಮಾಕ್ಷಿಪಾಳ್ಯ ಮತ್ತು ಜೆ.ಪಿ.ನಗರ ಠಾಣೆ ವ್ಯಾಪ್ತಿಯಲ್ಲಿ ಗುರುವಾರ ನಡೆದ ಪ್ರತ್ಯೇಕ ಪ್ರಕರಣಗಳಲ್ಲಿ ದುಷ್ಕರ್ಮಿಗಳು ಎರಡು ಮನೆಗಳಲ್ಲಿ ಹಣ ಹಾಗೂ ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣ ಕಳವು ಮಾಡಿದ್ದಾರೆ. ನಕಲಿ ಬೀಗದ ಕೀ ಬಳಸಿ ಮನೆಗೆ ನುಗ್ಗಿದ ದುಷ್ಕರ್ಮಿಗಳು, ರೂ. 1.70 ಲಕ್ಷ ನಗದು ಹಾಗೂ ಆಭರಣಗಳನ್ನು ಕಳವು ಮಾಡಿರುವ ಘಟನೆ ಜೆ.ಪಿ.ನಗರ ಎರಡನೇ ಹಂತದ ಕೆ.ಆರ್.ಲೇಔಟ್‌ನಲ್ಲಿ ನಡೆದಿದೆ.ಕೆ.ಆರ್.ಲೇಔಟ್ ಏಳನೇ ಅಡ್ಡರಸ್ತೆ ನಿವಾಸಿ ಸಹರಾ ಎಂಬುವರು ಈ ಸಂಬಂಧ ದೂರು ಕೊಟ್ಟಿದ್ದಾರೆ. ಅವರು ಸಂಜೆ ಮನೆಯಿಂದ ಹೊರಗೆ ಹೋಗಿದ್ದಾಗ ದುಷ್ಕರ್ಮಿಗಳು ಮನೆಗೆ ನುಗ್ಗಿ ಚಿನ್ನದ ಎರಡು ಸರಗಳು, ಓಲೆಗಳು, ಎರಡು ಲ್ಯಾಪ್‌ಟಾಪ್ ಮತ್ತು ಹಣ ಕಳವು ಮಾಡಿದ್ದಾರೆ. ಕಳವಾಗಿರುವ ವಸ್ತುಗಳ ಒಟ್ಟು ಮೌಲ್ಯ 2.50 ಲಕ್ಷ ರೂಪಾಯಿ ಎಂದು ಪೊಲೀಸರು ಹೇಳಿದ್ದಾರೆ. ಜೆ.ಪಿ.ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.ಮತ್ತೊಂದು ಪ್ರಕರಣ

ಸುಂಕದಕಟ್ಟೆ ಸಮೀಪದ ಹೆಗ್ಗನಹಳ್ಳಿ ರಸ್ತೆ ನಿವಾಸಿ ಪಾರ್ವತಮ್ಮ ಎಂಬುವರ ಮನೆ ಬೀಗ ಮುರಿದು ಒಳ ನುಗ್ಗಿದ ದುಷ್ಕರ್ಮಿಗಳು, 40 ಗ್ರಾಂ ಚಿನ್ನಾಭರಣ ಹಾಗೂ 5,300 ರೂಪಾಯಿ ಹಣವನ್ನು ಕಳವು ಮಾಡಿದ್ದಾರೆ.ಪಾರ್ವತಮ್ಮ ಮತ್ತು ಕುಟುಂಬ ಸದಸ್ಯರು ಮನೆಗೆ ಬೀಗ ಹಾಕಿಕೊಂಡು ಹೊರಗೆ ಹೋಗಿದ್ದಾಗ ಕಿಡಿಗೇಡಿಗಳು ಈ ಕೃತ್ಯ ಎಸಗಿದ್ದಾರೆ. ದುಷ್ಕರ್ಮಿಗಳು ಹಣ ಸೇರಿದಂತೆ 95 ಸಾವಿರ ರೂಪಾಯಿ ಮೌಲ್ಯದ ವಸ್ತುಗಳನ್ನು ಕಳವು ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾಮಾಕ್ಷಿಪಾಳ್ಯ ಠಾಣೆಯಲ್ಲಿ ದೂರು ದಾಖಲಾಗಿದೆ. ತಡೆಗೋಡೆಗೆ ಬಸ್ ಡಿಕ್ಕಿ

 ಬ್ರೇಕ್ ವೈಫಲ್ಯದಿಂದಾಗಿ ಅಡ್ಡಾದಿಡ್ಡಿ ಚಲಿಸಿದ ಬಿಎಂಟಿಸಿ ಬಸ್ ಬಿಬಿಎಂಪಿ ಕೇಂದ್ರ ಕಚೇರಿಯ ತಡೆಗೋಡೆಗೆ ಡಿಕ್ಕಿ ಹೊಡೆದ ಘಟನೆ ಶುಕ್ರವಾರ ಬೆಳಿಗ್ಗೆ ನಡೆದಿದೆ.ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಸುಮಾರು 40 ಪ್ರಯಾಣಿಕರು ಬಸ್‌ನಲ್ಲಿದ್ದರು. ಘಟನೆಯಲ್ಲಿ ಯಾವುದೇ ಸಾವು ನೋವು ಸಂಭವಿಸಿಲ್ಲ. ಆದರೆ ಪಾಲಿಕೆ ಕಚೇರಿಯ ತಡೆಗೋಡೆಗೆ ಹಾನಿಯಾಗಿದೆ ಎಂದು ಹಲಸೂರು ಗೇಟ್ ಸಂಚಾರ ಠಾಣೆ ಪೊಲೀಸರು ತಿಳಿಸಿದ್ದಾರೆ.ಮೆಜೆಸ್ಟಿಕ್‌ನಿಂದ ಉತ್ತರಹಳ್ಳಿಗೆ ಹೋಗುತ್ತಿದ್ದ (ಮಾರ್ಗ ಸಂಖ್ಯೆ- 12ಬಿ) ಬಿಎಂಟಿಸಿ ಬಸ್ ಪಾಲಿಕೆಯ ಕೇಂದ್ರ ಕಚೇರಿ ಬಳಿ ಬರುತ್ತಿದ್ದಂತೆ ಬ್ರೇಕ್‌ನಲ್ಲಿ ದೋಷ ಕಾಣಿಸಿಕೊಂಡಿತು. ಬಸ್ ಚಾಲಕ ಸೋಮಶೇಖರ್ ವಾಹನವನ್ನು ನಿಲ್ಲಿಸಲು ಯತ್ನಿಸಿದರೂ ನಿಯಂತ್ರಣಕ್ಕೆ ಸಿಗದ ಬಸ್ ಅಡ್ಡಾದಿಡ್ಡಿ ಚಲಿಸಲಾರಂಭಿಸಿತು. ಈ ವೇಳೆ ಮುಂಭಾಗದಲ್ಲಿ ನಿಂತಿದ್ದ ಇತರೆ ವಾಹನಗಳಿಗೆ ಬಸ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸುವ ಯತ್ನದಲ್ಲಿ ಸೋಮಶೇಖರ್, ಪಾಲಿಕೆ ಕಚೇರಿಯ ತಡೆ ಗೋಡೆಗೆ ವಾಹನ ಗುದ್ದಿಸಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.`ಬಸ್ ಡಿಕ್ಕಿಯಿಂದಾಗಿ ಕಚೇರಿಯ ತಡೆಗೋಡೆಗೆ ಹಾನಿಯಾಗಿ ಸುಮಾರು 1.50 ಲಕ್ಷ ರೂಪಾಯಿ ನಷ್ಟ ಸಂಭವಿಸಿದೆ~ ಎಂದು ಬಿಬಿಎಂಪಿ ಕಾರ್ಯನಿರ್ವಾಹಕ ಎಂಜಿನಿಯರ್ ಎಲ್.ಚಂದ್ರಶೇಖರ್ ಅವರು ದೂರು ಕೊಟ್ಟಿದ್ದಾರೆ. ಪ್ರಕರಣ ದಾಖಲಿಸಿಕೊಂಡು ವಾಹನವನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Post Comments (+)