ಸೋಮವಾರ, ಆಗಸ್ಟ್ 26, 2019
28 °C

ಕಾರು ಡಿಕ್ಕಿ: ಯುವಕ ದುರ್ಮರಣ

Published:
Updated:

ಬೆಂಗಳೂರು: ನೈಸ್ ರಸ್ತೆಯ ಚನ್ನಸಂದ್ರ ಸೇತುವೆ ಬಳಿ ಭಾನುವಾರ ಸಂಜೆ ಕಾರು ಡಿಕ್ಕಿ ಹೊಡೆದು ಕುಮಾರ್ (19) ಎಂಬುವರು ಸಾವನ್ನಪ್ಪಿದ್ದು, ಬಾಣಸವಾಡಿ ವರ್ತುಲ ರಸ್ತೆಯಲ್ಲಿ ಸಂಭವಿಸಿದ ಕಾರು ಅಪಘಾತದಲ್ಲಿ ಹರ್ಷ (25) ಎಂಬುವರು ಮೃತಪಟ್ಟಿದ್ದಾರೆ.ತಮಿಳುನಾಡು ಮೂಲದ ಕುಮಾರ್, ಲಾರಿಯೊಂದರಲ್ಲಿ ಕ್ಲೀನರ್ ಆಗಿದ್ದರು. ಲಾರಿಯ ಚಾಲಕ ಅಯ್ಯಪ್ಪನ್ ಮತ್ತು ಕುಮಾರ್, ಯಶವಂತಪುರದಲ್ಲಿ ಈರುಳ್ಳಿ ತುಂಬಿಕೊಂಡು ತಮಿಳುನಾಡಿಗೆ ಹೋಗುತ್ತಿದ್ದಾಗ ಈ ದುರ್ಘಟನೆ ನಡೆದಿದೆ.ಚನ್ನಸಂದ್ರ ಸೇತುವೆ ಬಳಿ ಸಂಜೆ ಲಾರಿ ನಿಲ್ಲಿಸಿದ ಅವರು ವಾಹನಕ್ಕೆ ಟಾರ್ಪಲ್ ಹೊದಿಸುವ ಯತ್ನದಲ್ಲಿದ್ದರು. ಕುಮಾರ್, ಲಾರಿಯ ಬಲ ಭಾಗದಲ್ಲಿ ರಸ್ತೆ ಪಕ್ಕ ನಿಂತುಕೊಂಡು ವಾಹನಕ್ಕೆ ಹಗ್ಗ ಕಟ್ಟುತ್ತಿದ್ದರು. ಈ ವೇಳೆ ಅದೇ ಮಾರ್ಗವಾಗಿ ಕಾರಿನಲ್ಲಿ ಬಂದ ದಾವೂದ್ ಎಂಬಾತ ಅವರಿಗೆ ವಾಹನ ಗುದ್ದಿಸಿದ್ದಾನೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ಸುಮಾರು 50 ಮೀಟರ್ ದೂರ ಹೋಗಿ ಬಿದ್ದ ಕುಮಾರ್ ಅವರಿಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಕುಮಾರ್‌ಗೆ ಡಿಕ್ಕಿ ಹೊಡೆದ ನಂತರ ಅಡ್ಡಾದಿಡ್ಡಿ ಚಲಿಸಿದ ಕಾರು ರಸ್ತೆ ವಿಭಜಕಕ್ಕೆ ಗುದ್ದಿ, ಪಕ್ಕದ ರಸ್ತೆಗೆ ನುಗ್ಗಿ ಮಗುಚಿ ಬಿದ್ದಿದೆ. ಈ ವೇಳೆ ದಾವೂದ್ ಮತ್ತು ಆತನ ಜತೆ ಕಾರಿನಲ್ಲಿದ್ದ ಸ್ನೇಹಿತರಾದ ದರ್ಶನ್, ಮಿಥುನ್ ಮತ್ತು ಆರ್. ದರ್ಶನ್ ಅವರು ಗಾಯಗೊಂಡಿದ್ದಾರೆ. ಆ ನಾಲ್ಕೂ ಮಂದಿ ನಗರದ ಖಾಸಗಿ ಕಾಲೇಜಿನಲ್ಲಿ ಬಿಬಿಎಂ ಓದುತ್ತಿದ್ದಾರೆ. ವೈಟ್‌ಫೀಲ್ಡ್ ನಿವಾಸಿಯಾದ ದಾವೂದ್, ಘಟನೆ ನಂತರ ವಾಹನ ಬಿಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.ಮತ್ತೊಂದು ಪ್ರಕರಣ: ಹೊಸೂರು ರಸ್ತೆ ಬಳಿಯ ಬೊಮ್ಮನಹಳ್ಳಿ ನಿವಾಸಿಯಾದ ಹರ್ಷ, ಅಶೋಕ್ ಮತ್ತು ರಾಹುಲ್ ಎಂಬ ಸ್ನೇಹಿತರೊಂದಿಗೆ ದೇವನಹಳ್ಳಿಯ ಹೋಟೆಲ್ ಒಂದರಲ್ಲಿ ರಾತ್ರಿ ಊಟ ಮಾಡಿಕೊಂಡು ಕಾರಿನಲ್ಲಿ ಮನೆಗೆ ವಾಪಸ್ ಬರುತ್ತಿದ್ದಾಗ ಅಪಘಾತ ಸಂಭವಿಸಿದೆ.ಪಾನಮತ್ತರಾಗಿ ಕಾರು ಚಾಲನೆ ಮಾಡುತ್ತಿದ್ದ ಹರ್ಷ, ಕಲ್ಯಾಣನಗರದ ಬಿಎಂಟಿಸಿ ಬಸ್ ಡಿಪೊ ಬಳಿ ನಿಯಂತ್ರಣ ತಪ್ಪಿ ರಸ್ತೆ ವಿಭಜಕಕ್ಕೆ ವಾಹನ ಗುದ್ದಿಸಿದ್ದಾರೆ. ಈ ವೇಳೆ ಕಾರು ಮಗುಚಿ ಬಿದ್ದು ತೀವ್ರವಾಗಿ ಗಾಯಗೊಂಡ ಹರ್ಷ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ಹೇಳಿದ್ದಾರೆ.ಯುವತಿ ಆತ್ಮಹತ್ಯೆ

ಬೆಂಗಳೂರು:
ಹಂಸಲತಾ (23) ಎಂಬುವರು ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಜಯನಗರದಲ್ಲಿ ಸೋಮವಾರ ನಡೆದಿದೆ.ಮೂಲತಃ ತುಮಕೂರು ಜಿಲ್ಲೆ ತುರುವೇಕೆರೆಯ ಹಂಸಲತಾ ಮೂರು ತಿಂಗಳ ಹಿಂದೆ ಜಯನಗರ ಆರನೇ ಹಂತದ ಕಾರ್ತಿಕ್ ಅವರನ್ನು ವಿವಾಹವಾಗಿದ್ದರು.ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಅವರು ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣ ಗೊತ್ತಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Post Comments (+)