ಮಂಗಳವಾರ, ನವೆಂಬರ್ 12, 2019
19 °C
ಬಡ್ಡಿ ದರ, ತೈಲ ಬೆಲೆ ಏರಿಕೆ ಪರಿಣಾಮ

ಕಾರು, ದ್ವಿಚಕ್ರ ವಾಹನ ಮಾರಾಟ ಕುಸಿತ

Published:
Updated:

ನವದೆಹಲಿ(ಪಿಟಿಐ): ಆರ್ಥಿಕ ಮತ್ತು ರಾಜಕೀಯ ಅಸ್ಥಿರತೆ, ಬಡ್ಡಿ ದರ ಹಾಗೂ ತೈಲ ಬೆಲೆ ಏರಿಕೆ ಮೊದಲಾದ ಪ್ರತಿಕೂಲ ಸಂಗತಿಗಳಿಂದಾಗಿ ಕಾರು ಮತ್ತು ದ್ವಿಚಕ್ರ ವಾಹನಗಳ ಮಾರಾಟ ಮಾರ್ಚ್‌ನಲ್ಲಿ ಗಣನೀಯ ಕುಸಿತ ಕಂಡಿದೆ.



ಮಾರುತಿ ಸುಜುಕಿ, ಹುಂಡೈ ಮೋಟಾರ್, ಟಾಟಾ ಮೋಟಾರ್ಸ್, ಹೋಂಡಾ ಕಾರ್ಸ್, ಫೋರ್ಡ್ ಇಂಡಿಯಾ, ಜನರಲ್ ಮೋಟಾರ್ಸ್‌ನ ಕಾರುಗಳ ಮಾರ್ಚ್‌ನಲ್ಲಿನ ಮಾರಾಟದಲ್ಲಿ ಕುಸಿತ ಕಂಡಿವೆ. ಆದರೆ, ಮಹೀಂದ್ರಾ ಆ್ಯಂಡ್ ಮಹೀಂದ್ರಾ, ಟೊಯೊಟಾ ಕಿರ್ಲೊಸ್ಕರ್ ಕಂಪೆನಿ ತುಸು ಏರಿಕೆ ದಾಖಲಿಸಿವೆ.



ದ್ವಿಚಕ್ರ ವಾಹನ ವಿಭಾಗದಲ್ಲಿ ಹೋಂಡಾ ಮೋಟಾರ್ ಸೈಕಲ್ ಮತ್ತು ಯಮಹಾ ಇಂಡಿಯಾ ಏರಿಕೆ ದಾಖಲಿಸಿವೆ. ಆದರೆ, ಮಾರುಕಟ್ಟೆ ಮುಂಚೂಣಿಕಂಪೆನಿಗಳಿಸಿದ್ದ ಹೀರೊ ಮೋಟೊ ಕಾರ್ಪ್, ಟಿವಿಎಸ್ ಮೋಟಾರ್ ಕಂಪೆನಿಗಳ ಮಾರಾಟದಲ್ಲಿ ಇಳಿಕೆಯಾಗಿದೆ.



ದೇಶದ ಪ್ರಮುಖ ಕಾರು ತಯಾರಿಕಾ ಕಂಪೆನಿ ಮಾರುತಿ ಸುಜುಕಿ ಮಾರ್ಚ್‌ನಲ್ಲಿ  1.19 ಲಕ್ಷ ಕಾರುಗಳನ್ನು ಮಾರಾಟ ಮಾಡಿದೆ. ಆದರೆ, ಹಿಂದಿನ ವರ್ಷದ ಇದೇ ಅವಧಿಗೆ ಹೋಲಿಸಿದರೆ ಮಾರಾಟ ಶೇ 5ರಷ್ಟು ಕುಸಿದಿದೆ. ಕಾರ್ಮಿಕರ ಮುಷ್ಕರ, ಮಾರುಕಟ್ಟೆ ಅಸ್ಥಿರತೆ ನಡುವೆಯೂ ಕಂಪೆನಿ 2012-13ನೇ ಸಾಲಿನಲ್ಲಿ ಒಟ್ಟು 11.71 ಲಕ್ಷ ಕಾರುಗಳನ್ನು ಮಾರಾಟ ಮಾಡಿ, ಶೇ 3ರಷ್ಟು ವಾರ್ಷಿಕ ಮಾರುಕಟ್ಟೆ ಪ್ರಗತಿ ಕಾಯ್ದುಕೊಂಡಿದೆ.



ಕಾರು ತಯಾರಿಕೆಯಲ್ಲಿ ದೇಶದ ಎರಡನೇ ಅತಿ ದೊಡ್ಡ ಕಂಪೆನಿಯಾಗಿರುವ ಹುಂಡೈ ಮೋಟಾರ್ ಇಂಡಿಯಾ(ಎಚ್‌ಎಂಐಎಲ್) ಮಾರ್ಚ್‌ನಲ್ಲಿ ಶೇ 13ರಷ್ಟು ಕುಸಿತ ಅನುಭವಿಸಿದೆ. ಒಟ್ಟು 33,858 ಕಾರುಗಳನ್ನು `ಎಚ್‌ಎಂಐಎಲ್' ಮಾರಾಟ ಮಾಡಿದೆ. ಆರ್ಥಿಕ ಅಸ್ಥಿರತೆಯೇ ಮಾರಾಟ ಕುಸಿತಕ್ಕೆ ಮುಖ್ಯ ಕಾರಣ ಎಂದು ಕಂಪೆನಿ ಉಪಾಧ್ಯಕ್ಷ ರಾಕೇಶ್ ಶ್ರೀವಾಸ್ತವ ಅಭಿಪ್ರಾಯಪಟ್ಟಿದ್ದಾರೆ. ಮಾರ್ಚ್‌ನಲ್ಲಿ ಟಾಟಾ ಮೋಟಾರ್ಸ್ ನ 12,347 ಪ್ರಯಾಣಿಕ ವಾಹನಗಳು ಮಾರಾಟವಾಗಿವೆ. ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಕಂಪೆನಿ ಶೇ 67ರಷ್ಟು ಭಾರಿ ಕುಸಿತ ಕಂಡಿದೆ.



ಟಾಟಾ ಪ್ರತಿಸ್ಪರ್ಧಿ ಮಹೀಂದ್ರಾ ಆ್ಯಂಡ್ ಮಹೀಂದ್ರಾದ `ಎಸ್‌ಯುವಿ' ಮಾದರಿ ವಾಹನಗಳಿಗೆ ಬೇಡಿಕೆ ಹೆಚ್ಚಿದೆ. ಸ್ಕಾರ್ಫಿಯೊ, ಎಕ್ಸ್‌ಯುವಿ 500, ಝೈಲೊ, ಬೊಲೆರೊ ಸೇರಿದಂತೆ ಒಟ್ಟು 25,847 ವಾಹನಗಳನ್ನು ಮಾರ್ಚ್‌ನಲ್ಲಿ ಮಾರಾಟ ಮಾಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಶೇ 13ರಷ್ಟು ಏರಿಕೆ ದಾಖಲಿಸಿದೆ. ಟೊಯೊಟಾ ಕಿರ್ಲೊಸ್ಕರ್ 19,452 ವಾಹನಗಳನ್ನು ಮಾರಿದ್ದು, ಶೇ 7ರಷ್ಟು ಪ್ರಗತಿ ಕಂಡಿದೆ.`ಬಜೆಟ್‌ನಲ್ಲಿ `ಎಸ್‌ಯುವಿ' ಮಾದರಿವಾಹನಗಳಿಗೆ ತೆರಿಗೆ ಹೆಚ್ಚಿಸಿರುವುದರಿಂದ ಮತ್ತು ಕೆಲವು ರಾಜ್ಯಗಳಲ್ಲಿ ರಸ್ತೆ ತೆರಿಗೆ ಏರಿಕೆ ಮಾಡಿರುವುದರಿಂದ ಮಾರ್ಚ್‌ನಲ್ಲಿ ಬಜೆಟ್ ಪೂರ್ವ ಬುಕ್ಕಿಂಗ್ ಹೆಚ್ಚಿನ ಮಟ್ಟದಲ್ಲಿತ್ತು' ಎನ್ನುತ್ತಾರೆ ಟೊಯೊಟಾ ಕಿರ್ಲೊಸ್ಕರ್‌ನ ಸಹಾಯಕ ವ್ಯವಸ್ಥಾಪಕ ನಿರ್ದೇಶಕ ಸಂದೀಪ್ ಸಿಂಗ್. ರೆನೊ ಇಂಡಿಯಾ 8,232 ಕಾರುಗಳನ್ನು ಮಾರಾಟ ಮಾಡಿದ್ದು, ಶೇ 8ರಷ್ಟು ಪ್ರಗತಿ ಕಂಡಿದೆ.



ದ್ವಿಚಕ್ರ ವಾಹನ

ದ್ವಿಚಕ್ರ ವಾಹನ ತಯಾರಿಕಾ ಕ್ಷೇತ್ರದ ದೇಶದ ಅತಿ ದೊಡ್ಡ ಕಂಪೆನಿ `ಹೀರೋ ಮೋಟೊ ಕಾರ್ಪ್' ಮಾರ್ಚ್‌ನಲ್ಲಿ ಒಟ್ಟು 4.68 ಲಕ್ಷ ಮೋಟಾರ್ ಬೈಕ್‌ಗಳನ್ನು ಮಾರಾಟ ಮಾಡಿದೆ. ಹಿಂದಿನ ವರ್ಷಕ್ಕೆ ಹೋಲಿಸಿದರೆ ಬೈಕ್ ಮಾರಾಟದಲ್ಲಿ ಶೇ 11ರಷ್ಟು ಕುಸಿತ ಕಂಡಿದೆ. ಪ್ರತಿಸ್ಪರ್ಧಿ ಕಂಪೆನಿ `ಹೋಂಡಾ ಮೋಟಾರ್ ಸೈಕಲ್' 2.52 ಲಕ್ಷ ಬೈಕ್‌ಗಳನ್ನು ಮಾರಾಟ ಮಾಡಿ ಶೇ 15ರಷ್ಟು ಪ್ರಗತಿ ದಾಖಲಿಸಿದೆ. ಯಮಹಾ ಇಂಡಿಯಾ ಮಾರಾಟ ಶೇ 20ರಷ್ಟು ಹೆಚ್ಚಿದೆ. `ಟಿವಿಎಸ್' ಸಹ ಶೇ 11ರಷ್ಟು ಹಿನ್ನಡೆ ಅನುಭವಿಸಿದೆ.



ವಾಹನ ಸಾಲದ ಬಡ್ಡಿದರ ಏರಿಕೆ ಮತ್ತು ಹಣದುಬ್ಬರ ಬೈಕ್ ಮಾರಾಟ ಕುಸಿಯಲು ಮುಖ್ಯ ಕಾರಣ ಎಂದು ಹೀರೊ ಮೋಟೊ ಕಾರ್ಪ್ ಹೇಳಿದೆ.

ಪ್ರತಿಕ್ರಿಯಿಸಿ (+)