ಶನಿವಾರ, ಆಗಸ್ಟ್ 24, 2019
28 °C
ದ್ವಿಚಕ್ರ ವಾಹನ `ಹೀರೊ' ಸುಧಾರಣೆ

ಕಾರು ಮಾರಾಟ ಅಲ್ಪ ಚೇತರಿಕೆ

Published:
Updated:

ನವದೆಹಲಿ(ಪಿಟಿಐ): ತೈಲ ಬೆಲೆ ಏರಿಕೆ, ಹಣದುಬ್ಬರ, ಬಡ್ಡಿದರ ಹೆಚ್ಚಳ, ರೂಪಾಯಿ ಅಪಮೌಲ್ಯ ಇತ್ಯಾದಿ ಪ್ರತಿಕೂಲ ವಾತಾವರಣದ ನಡುವೆಯೂ ಕಾರು ಮಾರಾಟ ಜುಲೈನಲ್ಲಿ ಅಲ್ಪ ಚೇತರಿಕೆ ಕಂಡಿದೆ.ಮಾರುತಿ ಸುಜುಕಿ, ಫೋರ್ಡ್ ಇಂಡಿಯಾ, ಹೋಂಡಾ ಕಂಪೆನಿಗಳು ಮಾರಾಟದಲ್ಲಿ ಏರಿಕೆ ಕಂಡರೆ, ಟಾಟಾ ಮೋಟಾರ್ಸ್, ಮಹೀಂದ್ರಾ ಅಂಡ್ ಮಹೀಂದ್ರಾ, ಟೊಯೊಟಾ ಮತ್ತು ಜನರಲ್ ಮೋಟಾರ್ಸ್ ಇಳಿಕೆ ದಾಖಲಿಸಿವೆ.ಮಾರುತಿ ಸುಜುಕಿಯ ಸಣ್ಣ ಕಾರುಗಳ ಮಾರಾಟ ಶೇ 15.8ರಷ್ಟು ಹೆಚ್ಚಿದೆ. ಎಂ-800, ಆಲ್ಟೊ, ಎ-ಸ್ಟಾರ್, ವ್ಯಾಗನ್ ಆರ್ ಮತ್ತು ಸೆಡಾನ್ ಡಿಸೈರ್ ಕಾರು ಮಾರಾಟದಲ್ಲಿ ಹೆಚ್ಚಳವಾಗಿದೆ. ದೇಶೀಯ ಮಾರುಕಟ್ಟೆಯಲ್ಲಿ ಒಟ್ಟಾರೆ 75,145 ಕಾರು ಮಾರಾಟವಾಗಿದ್ದು, ಶೇ 5.8ರಷ್ಟು ಪ್ರಗತಿ ದಾಖಲಾಗಿದೆ.ಹೋಂಡಾ ಕಾರಿನ ಹೊಸ ಮಾದರಿ `ಅಮೇಜ್'ಗೆ ಬೇಡಿಕೆ ಹೆಚ್ಚಿದೆ. ಒಟ್ಟು 11,223 ಕಾರುಗಳು ಮಾರಾಟವಾಗಿದ್ದು, ಕಂಪೆನಿ ಎರಡೂವರೆ ಪಟ್ಟು ಮಾರಾಟ ಪ್ರಗತಿ ದಾಖಲಿಸಿದೆ.ಫೋರ್ಡ್ ಇಂಡಿಯಾದ `ಇಕೊ ಸ್ಫೋರ್ಟ್ಸ್' ಎಸ್‌ಯುವಿ ಮಾದರಿ  ಗ್ರಾಹಕರ ಮನ ಗೆದ್ದಿದೆ. ಕಂಪೆನಿ 6,236 ಕಾರುಗಳನ್ನು ಮಾರಾಟ ಮಾಡಿದ್ದು, ಶೇ 26.15ರಷ್ಟು ಪ್ರಗತಿ ಕಂಡಿದೆ.ರೆನೊ ಇಂಡಿಯಾ ಕಾರು ಮಾರಾಟ ಎರಡು ಪಟ್ಟು ಹೆಚ್ಚಿದೆ. ಜುಲೈನಲ್ಲಿ 3,763 ಕಾರುಗಳು ಮಾರಾಟವಾಗಿವೆ. ಟಾಟಾ ಮೋಟಾರ್ಸ್ 10,824 ಕಾರು ಮಾರಾಟ ಮಾಡಿದ್ದು ಶೇ 58.75ರಷ್ಟು ಕುಸಿತ ಕಂಡಿದೆ. ಮಹೀಂದ್ರಾ ಅಂಡ್ ಮಹೀಂದ್ರಾ ದೇಶೀಯ ಮಾರಾಟ ಶೇ 19.41ರಷ್ಟು ಇಳಿಕೆ ಕಂಡಿದೆ. ಕಂಪೆನಿ 34,490 ವಾಹನಗಳನ್ನು ಜುಲೈನಲ್ಲಿ ಮಾರಾಟ ಮಾಡಿದೆ.

ಟೊಯೊಟಾ ಕಿರ್ಲೋಸ್ಕರ್ ಕೂಡ ಶೇ 21ರಷ್ಟು ಇಳಿಕೆ ಕಂಡಿದೆ. ಜನರಲ್ ಮೋಟಾರ್ಸ್ 6,503 ಕಾರುಗಳನ್ನು ಮಾರಾಟ ಮಾಡಿದ್ದು ಶೇ 10.73ರಷ್ಟು ಕುಸಿತ ಕಂಡಿದೆ. ಫೋಕ್ಸ್‌ವ್ಯಾಗನ್ ಕಾರುಗಳ ಮಾರಾಟ ಶೇ 11.53ರಷ್ಟು ಇಳಿಕೆಯಾಗಿದೆ.ದ್ವಿಚಕ್ರ ವಾಹನ

ಹೀರೊ ಮೋಟೊ ಕಾರ್ಪ್ 4,87,545 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದೆ. ಆದರೆ, 2012ರ ಜುಲೈಗೆ ಹೋಲಿಸಿದಲ್ಲಿ ಈ ಬಾರಿ ಅಲ್ಪ ಪ್ರಗತಿ ಕಂಡಿದೆ. `ಟಿವಿಎಸ್' ಮೋಟಾರ್ ಮಾರಾಟ ಶೇ 10.17ರಷ್ಟು ಕುಸಿದಿದೆ. ಹೋಂಡಾ ಮೋಟಾರ್ ಸೈಕಲ್ ಅಂಡ್ ಸ್ಕೂಟರ್ ಇಂಡಿಯಾ (ಎಚ್‌ಎಂಎಸ್‌ಐ) 2,87,177 ವಾಹನ ಮಾರಾಟ ಮಾಡಿ, ಶೇ 20.11ರಷ್ಟು ಪ್ರಗತಿ ದಾಖಲಿಸಿದೆ. ಯಮಹಾ ಮೋಟಾರ್ ಇಂಡಿಯಾದ ಮಾರಾಟ ಶೇ 35ರಷ್ಟು ಹೆಚ್ಚಿದೆ. ಒಟ್ಟು 37,494 ಯಮಹಾ ಬೈಕ್‌ಗಳು ಮಾರಾಟವಾಗಿವೆ.

Post Comments (+)