ಮಂಗಳವಾರ, ಜೂನ್ 15, 2021
22 °C
ಅಬಕಾರಿ ಸುಂಕ ಕಡಿತದ ಪರಿಣಾಮ

ಕಾರು ಮಾರಾಟ ಚೇತರಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ನವದೆಹಲಿ(ಪಿಟಿಐ): ಮಧ್ಯಾಂತರ ಬಜೆಟ್‌ನಲ್ಲಿ ಅಬಕಾರಿ ಸುಂಕವನ್ನು ಶೇ 12ರಿಂದ ಶೇ 8ಕ್ಕೆ  ತಗ್ಗಿಸಿದ ಪರಿಣಾಮ, ಫೆಬ್ರುವರಿ­ಯಲ್ಲಿ ಕಾರು ಮಾರಾಟ ಗಣನೀಯ ಚೇತರಿಕೆ ಕಂಡಿದೆ. ಮಾರುತಿ ಸುಜುಕಿ ಮತ್ತು ಹುಂಡೈ ಮೋಟಾರ್‌ ಕಾರುಗಳ ಮಾರಾಟ ಏರಿಕೆಯಾಗಿದೆ. ಫೋರ್ಡ್‌ ಇಂಡಿಯಾ ಮತ್ತು ಹೋಂಡಾ ಕಾರುಗಳ ಮಾರಾಟವಂತೂ ದ್ವಿಗುಣಗೊಂಡಿದೆ.ಕಾರು ತಯಾರಿಕೆ ಕಂಪೆನಿಗಳು ಅಬಕಾರಿ ಸುಂಕ ಕಡಿತದ ಲಾಭವನ್ನು ತಕ್ಷಣವೇ ಗ್ರಾಹಕರಿಗೆ ವರ್ಗಾ­ಯಿಸಿವೆ. ಗ್ರಾಹಕರೂ ಕಾರು ಖರೀದಿಸಲು ಉತ್ಸಾಹ ತೋರಿಸಿದ್ದಾರೆ. ಇದರಿಂದ ಫೆಬ್ರುವರಿ ಕೊನೆ ವಾರದಲ್ಲಿ ಮಾರಾಟ ಹೆಚ್ಚಿದೆ. ಮಾರ್ಚ್‌ನಲ್ಲಿ ಬೇಡಿಕೆ ಇನ್ನೂ ಹೆಚ್ಚಬಹುದು ಎಂದು ‘ಭಾರತೀಯ ವಾಹನ ತಯಾರಿಕಾ ಕಂಪೆನಿಗಳ ಒಕ್ಕೂಟ’ (ಎಸ್‌ಎಐಎಂ) ಹೇಳಿದೆ.ಆದರೆ, ಟಾಟಾ ಮೋಟಾರ್ಸ್‌, ಮಹೀಂದ್ರಾ ಅಂಡ್‌ ಮಹೀಂದ್ರಾ ಮಾರಾ­ಟದಲ್ಲಿ ಕುಸಿತ ದಾಖಲಿಸಿವೆ. ದ್ವಿಚಕ್ರ ವಾಹನ ತಯಾರಿಕಾ ಕಂಪೆನಿ­ಗಳಾದ ಹೋಂಡಾ ಮತ್ತು ಟಿವಿಎಸ್‌ ಮಾರಾಟದಲ್ಲಿ ಏರಿಕೆ ದಾಖಲಿಸಿವೆ. ಕಾರು ತಯಾರಿಕೆಯಲ್ಲಿ ದೇಶದ ಅತಿ ದೊಡ್ಡ ಕಂಪೆನಿಯಾದ ಮಾರುತಿ ಸುಜುಕಿ ಇಂಡಿಯಾ, ಫೆಬ್ರುವರಿಯಲ್ಲಿ ಒಟ್ಟು 99,758 ಕಾರು­ಗಳನ್ನು ಮಾರಾಟ ಮಾಡಿದ್ದು, ಶೇ 1.8ರಷ್ಟು ಪ್ರಗತಿ ದಾಖಲಿಸಿದೆ. ಮಾರುತಿ 800, ಆಲ್ಟೊ, ಎ–ಸ್ಟಾರ್‌, ವ್ಯಾಗನ್‌–ಆರ್‌ ಬೇಡಿಕೆ ಶೇ 9.6ರಷ್ಟು ಕುಸಿದಿದೆ. ಆದರೆ, ಸ್ವಿಫ್ಟ್‌, ಎಸ್ಟಿಲೊ, ರಿಟ್ಜ್‌  ಮಾದರಿಗಳಿಗೆ ಬೇಡಿಕೆ ಶೇ 19.4­ರಷ್ಟು ಹೆಚ್ಚಿದೆ ಎಂದು ಕಂಪೆನಿ ಹೇಳಿದೆ.ಇದೇ ಅವಧಿಯಲ್ಲಿ ಹುಂಡೈ ಮೋಟಾರ್‌ 34,005 ಕಾರುಗಳನ್ನು ಮಾರಾಟ ಮಾಡಿದ್ದು, ಶೇ 2ರಷ್ಟು ಏರಿಕೆ ದಾಖಲಿಸಿದೆ. ಕಾರುಗಳ ಬೆಲೆಯಲ್ಲಿ ಇಳಿಕೆ­ಯಾ­ಗಿರುವುದರಿಂದ ಗ್ರಾಹಕರ ಖರೀದಿ ಉತ್ಸಾಹ ಹೆಚ್ಚಿದೆ ಎಂದು ಕಂಪೆನಿಯ ಮಾರುಕಟ್ಟೆ ಮುಖ್ಯಸ್ಥ ರಾಕೇಶ್‌್ ಶ್ರೀವಾಸ್ತವ ಅಭಿಪ್ರಾಯಪಟ್ಟಿದ್ದಾರೆ. ಹೋಂಡಾ ಕಾರುಗಳ ಮಾರಾಟ ಎರಡು ಪಟ್ಟು ಹೆಚ್ಚಿದೆ. ಒಟ್ಟು 14,543 ಕಾರು ಮಾರಾಟ­ವಾಗಿವೆ.  ಫೋರ್ಡ್‌ ಇಂಡಿಯಾ ಮಾರಾಟ ಶೇ 51.42ರಷ್ಟು ಹೆಚ್ಚಿದೆ.ಟಾಟಾ ಮೋಟಾರ್ಸ್‌ ಮಾರಾಟ ಶೇ 35.56ರಷ್ಟು ಕುಸಿತ ಕಂಡಿದೆ. ಕಂಪೆನಿ ಒಟ್ಟು 39,951 ಕಾರುಗಳನ್ನು ಮಾರಾಟ ಮಾಡಿದೆ. ಮಹೀಂದ್ರಾ ಅಂಡ್‌ ಮಹೀಂದ್ರಾ 39,338 ವಾಹನ­ಗಳನ್ನು ಮಾರಾಟ ಮಾಡಿದ್ದು, ಕಳೆದ ತಿಂಗಳಿಗೆ ಹೋಲಿಸಿದರೆ ಶೇ 11.39­ರಷ್ಟು ಕುಸಿತ ದಾಖಲಿಸಿದೆ.‘ಅಬಕಾರಿ ಸುಂಕ ಕಡಿತವು ವಾಹನ ಉದ್ಯಮಕ್ಕೆ ಚೇತರಿಕೆ ನೀಡಿದೆ. ಆದರೆ, ಹಣದುಬ್ಬರ ಮತ್ತು ಬಡ್ಡಿ ದರ ಇನ್ನೂ ಗರಿಷ್ಠ ಮಟ್ಟದಲ್ಲಿರುವ ಗ್ರಾಹಕರ ಆತ್ಮವಿಶ್ವಾಸ ತಗ್ಗಿಸಿದೆ’ ಎಂದು ಕಂಪೆನಿಯ ಕಾರ್ಯನಿರ್ವಾಹಕ ಅಧಿಕಾರಿ ಪ್ರವೀಣ್‌ ಷಾ ಹೇಳಿದ್ದಾರೆ.ದ್ವಿಚಕ್ರ ವಾಹನ

ಹೋಂಡಾ ಮೋಟಾರ್ ಸೈಕಲ್‌ ಅಂಡ್‌ ಸ್ಕೂಟರ್‌ ಇಂಡಿಯಾ (ಎಚ್‌ಎಂ­ಎಸ್‌ಐ) ಫೆಬ್ರುವರಿಯಲ್ಲಿ ಒಟ್ಟು 3.28 ಲಕ್ಷ ವಾಹನ­ಗಳನ್ನು ಮಾರಾಟ ಮಾಡಿ, ಶೇ 44ರಷ್ಟು ಏರಿಕೆ ಕಂಡಿದೆ. ಟಿವಿಎಸ್‌ ಕಂಪೆನಿಯ ಒಟ್ಟಾರೆ ದ್ವಿಚಕ್ರ ವಾಹನ ಮಾರಾಟ ಶೇ 7ರಷ್ಟು ಹೆಚ್ಚಿದ್ದು, 1.77 ಲಕ್ಷ ವಾಹನಗಳು ಮಾರಾಟವಾಗಿವೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.