ಕಾರು ಮಾರಾಟ ದಾಖಲೆ ಪ್ರಗತಿ

7

ಕಾರು ಮಾರಾಟ ದಾಖಲೆ ಪ್ರಗತಿ

Published:
Updated:

ನವದೆಹಲಿ (ಪಿಟಿಐ): ಜನವರಿ ತಿಂಗಳಲ್ಲಿ ದೇಶಿ ಮಾರುಕಟ್ಟೆಯಲ್ಲಿ ಕಾರುಗಳ ಮಾರಾಟವು ಹೊಸ ದಾಖಲೆ ಬರೆದಿದ್ದರೆ, ಒಟ್ಟಾರೆ ವಾಹನಗಳ ಮಾರಾಟವು ಸಾಧಾರಣ ಪ್ರಮಾಣದ ಹೆಚ್ಚಳ ಕಂಡಿದೆ.ಭಾರತೀಯ ವಾಹನ ತಯಾರಕರ ಸಂಘ (ಎಸ್‌ಐಎಎಂ) ಬಿಡುಗಡೆ ಮಾಡಿರುವ ಅಂಕಿಅಂಶಗಳ ಪ್ರಕಾರ, ಜನವರಿ ತಿಂಗಳಲ್ಲಿ 1,84,332 ಕಾರುಗಳು ಮಾರಾಟಗೊಂಡಿವೆ. ಕಳೆದ ವರ್ಷದ ಇದೇ ಅವಧಿಯಲ್ಲಿ 1,45,971 ಕಾರುಗಳು ಮಾರಾಟಗೊಂಡಿದ್ದವು.ಕಳೆದ ವರ್ಷದ ಅಕ್ಟೋಬರ್‌ನಲ್ಲಿ 1,82,992 ಕಾರುಗಳು ಮಾರಾಟಗೊಂಡಿದ್ದವು. ಈ ದಾಖಲೆ ಮಾರಾಟ ಹೊರತುಪಡಿಸಿದರೆ, ಜನವರಿ ತಿಂಗಳಲ್ಲಿ ಗರಿಷ್ಠ ಕಾರುಗಳು ಮಾರಾಟಗೊಂಡಿವೆ. ಅಕ್ಟೋಬರ್ ತಿಂಗಳಲ್ಲಿ ಕಾರು ಮಾರಾಟವು ಶೇ 45ರಷ್ಟು ಏರಿಕೆಯಾಗಿದ್ದರೆ, ಈಗ ಅದು ಶೇ 18ರಷ್ಟಾಗಿದೆ. ಶೇ 30ರಷ್ಟು ಮಾರಾಟ ಹೆಚ್ಚಳವು ಸ್ಥಿರಗೊಂಡಿಲ್ಲ. ಅದು ಈಗ ಸಾಧಾರಣ ಮಟ್ಟದಲ್ಲಿಯೇ ಮುಂದುವರೆಯುವ ಸಾಧ್ಯತೆಗಳಿವೆ ಎಂದು ‘ಎಸ್‌ಐಎಎಂ’ನ ಹಿರಿಯ ನಿರ್ದೇಶಕ ಸುಗತೊ ಸೆನ್ ಅಭಿಪ್ರಾಯಪಟ್ಟಿದ್ದಾರೆ.ದೇಶದ ಅತಿ ದೊಡ್ಡ ಕಾರು ತಯಾರಿಕಾ ಸಂಸ್ಥೆ ಮಾರುತಿ ಸುಜುಕಿ ಇಂಡಿಯಾದ 86,285, ಹುಂಡೈ ಮೋಟಾರ್ ಇಂಡಿಯಾದ 30,301 ಕಾರುಗಳು  ಮಾರಾಟಗೊಂಡಿವೆ.ದ್ವಿಚಕ್ರ ವಾಹನ: ದ್ವಿಚಕ್ರ ವಾಹನಗಳ ಮಾರಾಟವು ಶೇ 15ರಷ್ಟು (7,47,818) ಹೆಚ್ಚಳಗೊಂಡಿದೆ.ಮೊದಲ ಸ್ಥಾನದಲ್ಲಿ ಇರುವ ಹೀರೊ ಹೊಂಡಾದ 4,23,434, (ಶೇ 16ರಷ್ಟು), ಪ್ರತಿಸ್ಪರ್ಧಿ ಸಂಸ್ಥೆ ಬಜಾಜ್ ಆಟೊದ 1,92,026 ಮತ್ತು ಟಿವಿಎಸ್ ಮೋಟಾರ್‌ನ  50,560 ವಾಹನಗಳು ಮಾರಾಟವಾಗಿವೆ.ಹುಂಡೈ: ಹುಂಡೈ ಮೋಟಾರ್ ಇಂಡಿಯಾ ಮುಂದಿನ ಮೂರು ವರ್ಷಗಳಲ್ಲಿ ಆರು ವಿಲಾಸಿ ಕಾರುಗಳನ್ನು ದೇಶಿ  ಮಾರುಕಟ್ಟೆಗೆ ಬಿಡುಗಡೆ ಮಾಡಲಿದೆ.ಈ ದುಬಾರಿ ಕಾರುಗಳ ಜತೆಗೆ ಈಗಿನ ಜನಪ್ರಿಯ ಮಾದರಿ ‘ಸ್ಯಾಂಟೊ’್ರವನ್ನು ಹೋಲುವ ಮತ್ತೊಂದು ಚಿಕ್ಕ ಕಾರು ಕೂಡ ಬಿಡುಗೆಯಾಗಲಿದೆ ಎಂದು ಹುಂಡೈ ಇಂಡಿಯಾ ಮಾರುಕಟ್ಟೆ ವ್ಯವಸ್ಥಾಪಕ ಅರವಿಂದ್ ಸಕ್ಸೇನಾ ತಿಳಿಸಿದ್ದಾರೆ.ಹುಂಡೈ, ‘ಐಸಿಸಿ ವಿಶ್ವಕಪ್’ ಕ್ರಿಕೆಟ್‌ನ ಅಧಿಕೃತ ಕಾರು ಪಾಲುದಾರ ಸಂಸ್ಥೆಯಾಗಿದೆ ಎಂದು ಸಕ್ಸೇನಾ ಹೇಳಿದ್ದಾರೆ. ಜಿಎಂ ಇಂಡಿಯಾ: ಜನರಲ್ ಮೋಟಾರ್ಸ್ (ಜಿಎಂ) ಇಂಡಿಯಾ ಮುಂದಿನ ಎರಡು ವರ್ಷಗಳಲ್ಲಿ ಆರು ಹೊಸ ಮಾದರಿ ಕಾರುಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆ ಹೊಂದಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.ಡಿಸೇಲ್ ಚಾಲಿತ ಷೆವರ್ಲೆಟ್ ಬೀಟ್, ಕ್ಯಾಪ್ಟಿವ ಮತ್ತು ತವೇರಾದ ಬಿಎಸ್-4 ಆವೃತ್ತಿಗಳೂ ಹೊಸ ಮಾದರಿಗಳಲ್ಲಿ ಸೇರಿದೆ. 2011ರ ಅಂತ್ಯದ ವೇಳೆಗೆ ಲಘು ವಾಣಿಜ್ಯ ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಯೋಜನೆ ಇದೆ ಎಂದು ‘ಜಿಎಂ’ ಇಂಡಿಯಾದ ಉಪಾಧ್ಯಕ್ಷ ಪಿ. ಬಾಲೇಂದ್ರನ್ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry