ಭಾನುವಾರ, ಜೂನ್ 13, 2021
21 °C

ಕಾರು ಮಾರಾಟ ಹೆಚ್ಚಳ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರು ಮಾರಾಟ ಹೆಚ್ಚಳ

ನವದೆಹಲಿ (ಪಿಟಿಐ): ಬಜೆಟ್ ನಂತರ ಕಾರುಗಳ ಬೆಲೆ ಹೆಚ್ಚಾಗುತ್ತದೆ ಎನ್ನುವ ಭಯದಿಂದ  ಫೆಬ್ರುವರಿ ತಿಂಗಳಲ್ಲೇ ಹೆಚ್ಚಿನ ಗ್ರಾಹಕರು ಕಾರು ಖರೀದಿಗೆ ಮುಂದಾದ ಹಿನ್ನೆಲೆಯಲ್ಲಿ, ಈ ಅವಧಿಯಲ್ಲಿ ಮಾರಾಟ ಶೇ 13ರಷ್ಟು ಪ್ರಗತಿ ಕಂಡಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಫೆಬ್ರುವರಿ ತಿಂಗಳಲ್ಲಿ ಒಟ್ಟು 2,11,402 ಕಾರುಗಳು ಮಾರಾಟವಾಗಿದ್ದು, ಇದೇ ಮೊದಲ ಬಾರಿಗೆ  ತಿಂಗಳ ಮಾರಾಟ 2 ಲಕ್ಷದ ಗಡಿ ದಾಟಿದೆ. ಜಾಗತಿಕ ಆರ್ಥಿಕ ಹಿಂಜರಿತದಿಂದ 2008-09ನೇ ಸಾಲಿನಲ್ಲಿ ಕಾರುಗಳಿಗೆ ನೀಡಲಾಗಿದ್ದ ಶೇ 2ರಷ್ಟು ಅಬಕಾರಿ ತೆರಿಗೆ ವಿನಾಯ್ತಿಯನ್ನು ಪ್ರಸಕ್ತ ಬಜೆಟ್‌ನಲ್ಲಿ ಹಿಂದಕ್ಕೆ ಪಡೆಯಬಹುದು ಎನ್ನುವ ಆತಂಕವೇ ಕಾರು ಖರೀದಿ ಹೆಚ್ಚಲು ಪ್ರಮುಖ ಕಾರಣ. ಮತ್ತೊಂದೆಡೆ ಸರ್ಕಾರ, ಡೀಸೆಲ್ ಕಾರುಗಳಿಗೆ ಹೆಚ್ಚುವರಿ ತೆರಿಗೆ ವಿಧಿಸಲಿದೆ ಎನ್ನುವ ಸಂಗತಿಯೂ ಬಜೆಟ್ ಪೂರ್ವ ಬುಕ್ಕಿಂಗ್ ಹೆಚ್ಚಲು ಕಾರಣ ಎಂದು ಭಾರತೀಯ ವಾಹನ ತಯಾರಕರ ಸಂಘದ (ಎಸ್‌ಐಎಎಂ) ಮಹಾನಿರ್ದೇಶಕ ವಿಷ್ಣು ಮಾಥುರ್ ಹೇಳಿದ್ದಾರೆ. 

ದೇಶದ ಮುಂಚೂಣಿ ಕಾರು ತಯಾರಿಕೆ ಕಂಪೆನಿ ಮಾರುತಿ ಸುಜುಕಿ ಈ ಅವಧಿಯಲ್ಲಿ ಒಟ್ಟು 94,118 ಕಾರುಗಳನ್ನು ಮಾರಾಟ ಮಾಡಿದ್ದು, ಶೇ 7ರಷ್ಟು ಪ್ರಗತಿ ಕಂಡಿದೆ.ಪ್ರತಿಸ್ಪರ್ಧಿ ಕಂಪೆನಿ ಹುಂಡೈ ಮೋಟಾರ್  ಶೇ 12ರಷ್ಟು ಪ್ರಗತಿಯೊಂದಿಗೆ 36,658 ಕಾರುಗಳನ್ನು ಮಾರಾಟ ಮಾಡಿದೆ. ಟಾಟಾ ಮೋಟಾರ್ಸ್‌ನ ಮಾರಾಟ ಶೇ. 5ರಷ್ಟು ಹೆಚ್ಚಿದ್ದು, ಒಟ್ಟು 28,236 ಕಾರುಗಳು ಮಾರಾಟವಾಗಿವೆ.

ದ್ವಿಚಕ್ರವಾಹನ: ಒಟ್ಟಾರೆ ದ್ವಿಚಕ್ರ ವಾಹನ ಮಾರಾಟ ಫೆಬ್ರುವರಿ ತಿಂಗಳಲ್ಲಿ ಶೇ 11ರಷ್ಟು ಪ್ರಗತಿ ಕಂಡಿದ್ದು, 11,44,500 ವಾಹನಗಳು ಮಾರಾಟವಾಗಿವೆ. ಮಾರುಕಟ್ಟೆಯಲ್ಲಿ ಮುಂಚೂಣಿಯಲ್ಲಿರುವ ಹೀರೊ ಮೋಟೊ ಕಾರ್ಫ್  4,70,994 ದ್ವಿಚಕ್ರ ವಾಹನಗಳನ್ನು ಮಾರಾಟ ಮಾಡಿದ್ದು, ಶೇ 9ರಷ್ಟು ಪ್ರಗತಿ ಕಂಡಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಬಜಾಜ್ ಆಟೊ ಕಂಪೆನಿಯ ತಿಂಗಳ ಮಾರಾಟ ಶೇ 0.59ರಷ್ಟು ಇಳಿಕೆ ಕಂಡಿದೆ. ಹೋಂಡಾ ಮೋಟಾರ್ ಸೈಕಲ್ ಮತ್ತು ಸ್ಕೂಟರ್ ಇಂಡಿಯಾ ಶೇ 39ರಷ್ಟು ಪ್ರಗತಿ ದಾಖಲಿಸಿದ್ದು, ಒಟ್ಟು 75,110 ವಾಹನಗಳನ್ನು ಮಾರಾಟ ಮಾಡಿದೆ. `ಟಿವಿಎಸ್~ನ ತಿಂಗಳ ಮಾರಾಟ  ಶೇ 6ರಷ್ಟು ಇಳಿಕೆಯಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.