ಭಾನುವಾರ, ಆಗಸ್ಟ್ 9, 2020
21 °C
ದ್ವಿಚಕ್ರ ವಾಹನ ಮಿಶ್ರ ಫಲಿತಾಂಶ

ಕಾರು ಮಾರಾಟ 8ನೇತಿಂಗಳೂ ಕುಸಿತ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರು ಮಾರಾಟ 8ನೇತಿಂಗಳೂ ಕುಸಿತ

ನವದೆಹಲಿ(ಪಿಟಿಐ): ದೇಶದ ವಾಹನ ಉದ್ಯಮ ಸತತವಾಗಿ 8ನೇ ತಿಂಗಳಲ್ಲಿಯೂ ಮಾರಾಟದಲ್ಲಿ ಕುಸಿತ ದಾಖಲಿಸಿದೆ. ಜೂನ್‌ನಲ್ಲಿ ಕಾರುಗಳ ಮಾರಾಟ ಮತ್ತಷ್ಟು ಇಳಿಮುಖವಾಗಿದೆ. ದ್ವಿಚಕ್ರ ವಾಹನ ವಿಭಾಗದಲ್ಲಿ ಮಿಶ್ರ ಫಲಿತಾಂಶ ಕಂಡು ಬಂದಿದೆ.ಮಾರುತಿ ಸುಜುಕಿ, ಟಾಟಾ ಮೋಟಾರ್ಸ್, ಟೊಯೊಟಾ ಮತ್ತು ಜನರಲ್ ಮೋಟಾರ್ಸ್ ಕಂಪೆನಿಯ ಕಾರುಗಳ ಮಾರಾಟ ಗಣನೀಯ ಪ್ರಮಾಣದಲ್ಲಿ ತಗ್ಗಿದೆ. ದೇಶದಲ್ಲಿನ ಮಂದಗತಿ ಆರ್ಥಿಕ ಪ್ರಗತಿ ಮತ್ತು ಗ್ರಾಹಕರಲ್ಲಿನ ಖರೀದಿ ನಿರಾಸಕ್ತಿಯ ಫಲವಾಗಿ ಕಾರುಗಳ ಮಾರುಕಟ್ಟೆ ನಕಾರಾತ್ಮಕ ಫಲಿತಾಂಶ ನೀಡುತ್ತಿದೆ ಎಂದು ಅರ್ಥೈಸಲಾಗಿದೆ.ಅಲ್ಪ ಸಾಧನೆ ಸಮಾಧಾನ

ಇದ್ದುದರಲ್ಲಿಯೇ ಹೋಂಡಾ ಕಾರ್ಸ್‌ ಇಂಡಿಯಾ ಕಂಪೆನಿ ಮಾತ್ರ ಉತ್ತಮ ಸಾಧನೆ ತೋರಿದೆ. 2012ರ ಜೂನ್‌ಗೆ(2,667 ಕಾರು) ಹೋಲಿಸಿದಲ್ಲಿ 2013 ಜೂನ್‌ನಲ್ಲಿ  ಮೂರು ಪಟ್ಟು ಹೆಚ್ಚು (9,297) ಕಾರುಗಳನ್ನು ಮಾರಾಟ ಮಾಡಿ ಹಿಗ್ಗುತ್ತಿದೆ. ಈ ಸಾಧನೆಗೆ ಕಳೆದ ತಿಂಗಳು ಹೋಂಡಾ ಸೆಡಾನ್ ಅಮೇಜ್ ಬಿಡುಗಡೆಯಾಗಿದ್ದು ಸಹ ಕಾರಣ.ಫೋರ್ಡ್ ಇಂಡಿಯಾ ಕಾರು ಮಾರಾಟದಲ್ಲಿ ಶೇ 14ರಷ್ಟು ಸಾಧನೆ ತೋರಿದೆ. ಜೂನ್‌ನಲ್ಲಿ ಅದರ ವಾಹನ ಮಾರಾಟ 6,267ರಿಂದ 7,145ಕ್ಕೇರಿದೆ.ಹುಂಡೈ ಮೋಟಾರ್ ಇಂಡಿಯಾ ಶೇ 0.52ರಷ್ಟು ಅಲ್ಪ ಪ್ರಗತಿ ದಾಖಲಿಸಿದೆ. ಜೂನ್ ಅವಧಿಯಲ್ಲಿ ಒಟ್ಟು ಕಾರುಗಳ ಮಾರಾಟವನ್ನು 30,450ರಿಂದ 30,610ಕ್ಕೆ ಹೆಚ್ಚಿಸಿಕೊಂಡಿದೆ.ಮಾರುತಿ ಸಂಕಷ್ಟ

2012ರ ಜೂನ್‌ನಲ್ಲಿ 83,531 ಕಾರುಗಳನ್ನು ಮಾರಿದ್ದ ಮಾರುತಿ ಸುಜುಕಿ ಇಂಡಿಯಾ(ಎಂಎಸ್‌ಐ), ಈ ಬಾರಿ 77,002 ಕಾರುಗಳಿಗಷ್ಟೇ ಹೊಸ ಗ್ರಾಹಕರನ್ನು ಪಡೆದಿದೆ. ಆ ಮೂಲಕ ಜೂನ್‌ನಲ್ಲಿ ಶೇ 7.8ರಷ್ಟು ಕುಸಿತ ಕಂಡಿದೆ.ಮಾರುತಿಯ ಜನಪ್ರಿಯ ಕಾರುಗಳಾದ ಎಂ-800, ಎ-ಸ್ಟಾರ್, ಆಲ್ಟೊ ಮತ್ತು ವ್ಯಾಗನ್-ಆರ್ ಮಾದರಿ ಕಾರುಗಳೂ ಈ ಬಾರಿ ಗ್ರಾಹಕರನ್ನು ಆಕರ್ಷಿಸುವಲ್ಲಿ ವಿಫಲವಾಗಿವೆ. ಈ ಸಣ್ಣ ಮತ್ತು ಮಧ್ಯಮ ಗಾತ್ರದ ಶ್ರೇಣಿಯಲ್ಲಿ 31,314 ಕಾರುಗಳನ್ನಷ್ಟೇ ಮಾರಾಟ ಮಾಡಲು ಸಾಧ್ಯವಾಗಿದೆ.

ಆ ಮೂಲಕ ಈ ವಿಭಾಗದ ವಾಹನ ಮಾರಾಟದಲ್ಲಿ `ಎಂಎಸ್‌ಐ' ಶೇ 8.4ರಷ್ಟು ಇಳಿಕೆ ದಾಖಲಿಸಿದೆ. ಎಸ್ಟಿಲೊ, ಸ್ವಿಫ್ಟ್, ರಿಟ್ಜ್ (ಕಾಂಪ್ಯಾಕ್ಟ್) ಕಾರುಗಳ ಮಾರಾಟವೂ ಶೇ 7.2ರಷ್ಟು ತಗ್ಗಿದೆ. ಮುಂಚೂಣಿಯಲ್ಲಿದ್ದ `ಡಿಸೈರ್' ಮಾದರಿಯೂ ಶೇ 8.7ರಷ್ಟು ಕುಸಿತ ಕಂಡಿದೆ.ಮಹೀಂದ್ರಾ ಆ್ಯಂಡ್ ಮಹೀಂದ್ರಾ 36,207 ವಾಹನ ಮಾರಾಟದೊಂದಿಗೆ ಶೇ 7.04ರಷ್ಟು ಹಿನ್ನಡೆ ಅನುಭವಿಸಿದೆ. ಕಳೆದ ವರ್ಷದ ಜೂನ್‌ನಲ್ಲಿ ಕಂಪೆನಿ 38,951 ವಾಹನ ಮಾರಿತ್ತು.ಟಾಟಾ ಮೋಟಾರ್ಸ್ ಅಂತೂ ಕಳಪೆ ಸಾಧನೆ ತೋರಿದೆ. ಜೂನ್‌ನಲ್ಲಿ ಕೇವಲ 11,804 ಕಾರು ಮಾರಾಟ ಮಾಡಿ ಶೇ 31ರಷ್ಟು ಭಾರಿ ಕುಸಿತ ದಾಖಲಿಸಿದೆ. 2012ರ ಜೂನ್‌ನಲ್ಲಿ ಟಾಟಾ ಮೋಟಾರ್ಸ್‌ನ 17,244 ಕಾರು ರಸ್ತೆಗಿಳಿದಿದ್ದವು. ಜರ್ಮನಿ ಮೂಲದ ಐಶಾರಾಮಿ ಕಾರು ಕಂಪೆನಿ ಫೋಕ್ಸ್ ವ್ಯಾಗನ್ ಕಾರು ಮಾರಾಟವೂ 5371ರಿಂದ 5356ಕ್ಕೆ ತಗ್ಗಿದೆ.ಟೊಯೊಟಾ ಶೇ19 ಕುಸಿತ

ಟೊಯೊಟಾ ಕಿರ್ಲೋಸ್ಕರ್ ಮೋಟಾರ್ ಭಾರತದ ಮಾರುಕಟ್ಟೆ ಯಲ್ಲಿ ಈ ಬಾರಿ ಶೇ 19.45 ಕುಸಿತ ಕಂಡಿದೆ. ಕಳೆದ ವರ್ಷದ ಜೂನ್‌ನಲ್ಲಿ 17,140 ಕಾರು ಮಾರಿದ್ದರೆ, ಈ ಬಾರಿ 13,805 ಸಂಖ್ಯೆಗೇ ಕಂಪೆನಿ ತೃಪ್ತಿಪಟ್ಟಿದೆ.ಜನರಲ್ ಮೋಟಾರ್ಸ್ ಇಂಡಿಯಾ (ಜಿಎಂಐ) ಸಹ ಶೇ 10.71 ಕುಸಿತ ಕಂಡಿದೆ. `ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯಲ್ಲಿ ಪದೇ ಪದೇ ಹೆಚ್ಚಳವಾಗಿದ್ದು ಹಾಗೂ ವಾಹನ ಸಾಲದ ಬ್ಯಾಂಕ್ ಬಡ್ಡಿದರ ತಗ್ಗದೇ ಹೋಗಿದ್ದೇ ದೇಶದ ಕಾರು ಮಾರುಕಟ್ಟೆ ಸತತ ಕುಸಿತ ಕಾಣಲು ಕಾರಣ' ಎಂದು `ಜಿಎಂಐ'ನ ಉಪಾಧ್ಯಕ್ಷ ಬಾಲೇಂದ್ರನ್ ಅಭಿಪ್ರಾಯಪಟ್ಟಿದ್ದಾರೆ.ದ್ವಿಚಕ್ರ ವಾಹನ

ದೇಶದ ದ್ವಿಚಕ್ರ ವಾಹನ ಮಾರುಕಟ್ಟೆ ಮಾತ್ರ ಹಿಗ್ಗುತ್ತಲೇ ಇದೆ. ತಿಂಗಳಿಂದ ತಿಂಗಳಿಗೆ ಮೋಟಾರ್ ಬೈಕ್ ಮತ್ತು ಸ್ಕೂಟರ್‌ಗಳ ಮಾರಾಟ ಪ್ರಮಾಣ ಗಣನೀಯ ಪ್ರಮಾಣದಲ್ಲಿ ಹೆಚ್ಚುತ್ತಿದೆ.ಯಮಹಾ ಮೋಟಾರ್ ಇಂಡಿಯ ಕಂಪೆನಿ ಶೇ 46.23ರಷ್ಟು ಗರಿಷ್ಠ ಸಾಧನೆ ತೋರಿದೆ. ಜೂನ್‌ನಲ್ಲಿನ ಮಾರಾಟವನ್ನು 24,318 ದ್ವಿಚಕ್ರ ವಾಹನಗಳಿಂದ 35,561ಕ್ಕೆ ಹೆಚ್ಚಿಸಿಕೊಂಡಿದೆ.ಹೋಂಡಾ ಮೋಟಾರ್ ಸೈಕಲ್ ಆ್ಯಂಡ್ ಸ್ಕೂಟರ್ ಇಂಡಿಯಾ ಕಂಪೆನಿ ಜೂನ್‌ನಲ್ಲಿ 2,52,114 ದ್ವಿಚಕ್ರ ವಾಹನ ಮಾರುವ ಮೂಲಕ ಶೇ 11.09ರಷ್ಟು ಸಾಧನೆ ತೋರಿದೆ.ಟಿವಿಸ್ ಮೋಟಾರ್ ಕಂಪೆನಿಯ ದ್ವಿಚಕ್ರ ವಾಹನ ಮಾರಾಟ ಶೇ 11.09ರಷ್ಟು ಕುಸಿದಿದೆ. ಕಳೆದ ವರ್ಷ ಜೂನ್‌ನಲ್ಲಿ 1,47,893 ದ್ವಿಚಕ್ರ ವಾಹನ ಮಾರಿದ್ದ ಕಂಪೆನಿ, ಈ ಬಾರಿ 1,37,331 ವಾಹನ ಮಾರಾಟ ಮಾಡಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.