ಭಾನುವಾರ, ಆಗಸ್ಟ್ 25, 2019
20 °C
ತೀರ್ಥಹಳ್ಳಿ; ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಮನದಾಳ ಬಿಚ್ಚಿಟ್ಟ ಕಾಗೋಡು ತಿಮ್ಮಪ್ಪ

`ಕಾರೇಡಿ ಹಿಡಿದಿದ್ದೀನಿ, ಕುರಿ ಕಾದಿದ್ದೀನಿ'

Published:
Updated:

ತೀರ್ಥಹಳ್ಳಿ: ಸಮಾಜದ ದುರ್ಬಲತೆಯನ್ನು ಕಳಚಿಕೊಂಡು ಹೋಗುವುದೇ ಸಮಾಜದ ಏಳಿಗೆ. ಸಾಮಾಜಿಕ ನ್ಯಾಯದಿಂದ ಜಾತಿ ಎನ್ನುವ ಗೆರೆಯನ್ನು ಹರಿಯಬೇಕು. ಈಗ ಆ ಬದಲಾವಣೆಯ ದಿಕ್ಕನ್ನು ಕಾಣುತ್ತಿದ್ದೇವೆ ಎಂದು ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅಭಿಪ್ರಾಯಪಟ್ಟರು.ಪಟ್ಟಣದ ಕೋಳಿಕಾಲುಗುಡ್ಡದಲ್ಲಿರುವ ಆರ್ಯ ಈಡಿಗರ ಸಮುದಾಯ ಭವನದಲ್ಲಿ ಭಾನುವಾರ ಈಡಿಗರ ಸಂಘ ಏರ್ಪಡಿಸಿದ್ದ ದಿವಗಂತ ರುಕ್ಮಿಣಿ ರಮಾನಂದ್ ಸ್ಮರಣಾರ್ಥ ಪ್ರತಿಭಾ ಪುರಸ್ಕಾರ ಹಾಗೂ ನೂತನವಾಗಿ ಆಯ್ಕೆಯಾದ ಸಮಾಜದ ಶಾಸಕರಿಗೆ ಅಭಿನಂದನಾ ಕಾರ್ಯಕ್ರಮದಲ್ಲಿ ಅಭಿನಂದನೆ ಸ್ವೀಕರಿಸಿ ಅವರು ಮಾತನಾಡಿದರು.`ಬದಲಾವಣೆ ಆಗುತ್ತಿರುವ ಕಾಲ ಇದು. ಮನುಷ್ಯ ಸಮಾಜವನ್ನು ಹಾಳು ಮಾಡುತ್ತಿದ್ದಾನೆ. ಸಮಾಜದಲ್ಲಿ ಅನೇಕ ಏರಿಳಿತಗಳಿವೆ. ಜಾತಿ, ಆರ್ಥಿಕ ಸಮಸ್ಯೆಗಳನ್ನು ಕಳಚಿಕೊಂಡು ಹೋಗುವುದೇ ಅಭಿವೃದ್ಧಿ. ಸಾಮಾಜಿಕವಾಗಿ, ಆರ್ಥಿಕವಾಗಿ ಹಿಂದುಳಿದವರ ಕಷ್ಟಗಳ ನಿವಾರಣೆಗೆ ವಿದ್ಯೆ ಬೇಕು. ದುಡಿಯುವುದಕ್ಕೆ ಭೂಮಿ ಇರಬೇಕು ಎಂಬ ಸಿದ್ದಾಂತ ಕಾರ್ಯರೂಪಕ್ಕೆ ಬಂದಿದ್ದರಿಂದ ಇಂದು ಉಳುವವನು ಹೊಲದೊಡೆಯ ಆಗುವಂತಾಗಿದೆ' ಎಂದರು.`ನಾನು ಈ ಹಂತಕ್ಕೆ ಬರಬೇಕಾದರೆ ಕಾರೇಡಿ ಹಿಡಿದಿದ್ದೀನಿ, ಶಿಕಾರಿ ಮಾಡಿದ್ದೀನಿ, ಮೊಲ ಹೊಡೆದಿದ್ದೇನೆ. ಕುರಿ ಕಾದಿದ್ದೇನೆ. ಆಗನಮಗೆಲ್ಲಾ ಒಂದು ಗರಡಿ ಇತ್ತು. ಅದು ಗೋಪಾಲಗೌಡ ಗರಡಿ. ನ್ಯಾಯ ಕೊಡುವ ಸಂದರ್ಭದಲ್ಲಿ ಪ್ರಾಣ ಒತ್ತೆ ಇಟ್ಟು ಕೆಲಸ ಮಾಡಿದ್ದೇನೆ. ಅದೇ ನನಗೆ ದಾರಿ ತೋರಿಸಿದೆ' ಎಂದು ಕಾಗೋಡು ತಿಮ್ಮಪ್ಪ ನುಡಿದರು.`ಜನರು ಇಟ್ಟ ನಂಬಿಕೆ ವಿಶ್ವಾಸವನ್ನು ಇರುವಷ್ಟು ಕಾಲ ಉಳಿಸಿಕೊಂಡು ಹೋಗುವ ಪ್ರಯತ್ನ ಮಾಡುತ್ತೇನೆ. ಈಡಿಗರ ವಿದ್ಯಾರ್ಥಿನಿಲಯಕ್ಕೆ ಅನುದಾನ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು. ಮಹಿಳೆಯರು ಸ್ವಾವಲಂಬಿಗಳಾಗಲು ಸರ್ಕಾರದ ಯೋಜನೆಗಳನ್ನು ಬಳಸಿಕೊಳ್ಳಬೇಕು' ಎಂದರು.ಆರ್ಯ ಈಡಿಗ ಮಹಿಳಾ ಸಂಘದ ರಾಜ್ಯ ಘಟಕದ ಅಧ್ಯಕ್ಷೆ ನಳಿನಾಕ್ಷಿ ಸಣ್ಣಪ್ಪ ಮಾತನಾಡಿ, ಸಮಾಜದಲ್ಲಿ ಸೇವಾ ಮನೋಭಾವನೆ ಬೇಕು. ಹಿಂದುಳಿದವರು ಸರ್ಕಾರ ನೀಡುವ ಸೌಲಭ್ಯಗಳನ್ನು ಪಡೆಯುವ ಮೂಲಕ ಪ್ರಗತಿ ಹೊಂದಬೇಕು. ಮಹಿಳೆಯರನ್ನು ಗೌರವಿಸುವ ಮನೆ, ಸಮಾಜ ಉತ್ತಮವಾಗಿರುತ್ತದೆ. ಈಡಿಗರ ಮಹಿಳಾ ಸಂಘದಿಂದ ಹಳ್ಳಿಗಾಡಿನ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದರು.ಮಹಿಳೆಯರಿಗೆ ಮೀಸಲಾತಿ ಬಹಳ ಅಗತ್ಯ. ರಾಜ್ಯ ಸಚಿವ ಸಂಪುಟದಲ್ಲಿ ಒಬ್ಬ ಮಹಿಳೆಗೆ ಮಾತ್ರ ಮಂತ್ರಿ ಸ್ಥಾನ ನೀಡಲಾಗಿದೆ. ಇವರೊಬ್ಬರ ಬಳಿ ಮಹಿಳೆಯರೆಲ್ಲರ ಸಮಸ್ಯೆ ಹೇಳಿಕೊಳ್ಳಲು ಸಾಧ್ಯವೆ. ಮಹಿಳೆಯರಿಗೆ ಶೇ 33 ಮೀಸಲಾತಿ ನೀಡಿದ್ದರೂ ಶೇ 50 ರಷ್ಟನ್ನು ಕೇಳುವ ಹಕ್ಕಿದೆ ಎಂದರು.ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಕಿಮ್ಮನೆ ರತ್ನಾಕರ್ ಅವರು ಈಡಿಗರ ಸಂಘದ ಅಭಿವೃದ್ದಿಗೆ ್ಙ 3 ಲಕ್ಷ ಅನುದಾನ ನೀಡುವ ಭರವಸೆ ನೀಡಿ, ಸಮಾಜದ ಹಿತ ಕಾಪಾಡುವ ಕೆಲಸ ಮಾಡುತ್ತೇನೆ ಎಂದರು.ಸಮಾರಂಭದಲ್ಲಿ  ಅಭಿನಂದನೆ ಸ್ವೀಕರಿಸಿ ಮಾಜಿ ಶಾಸಕ ಬಿ.ಸ್ವಾಮಿರಾವ್, ಜಿ.ಪಂ. ಸದಸ್ಯ ಸುಂದರೇಶ್ ಮಾತನಾಡಿದರು.

ದಾನಿ ಹಾಗೂ ಉದ್ಯಮಿ ತೆಂಗಿನಕೆರೆ ಎಚ್.ಆರ್. ಸತೀಶ್ ಮಾತನಾಡಿದರು. ಎಸ್ಸೆಸ್ಸೆಲ್ಸಿ ಹಾಗೂ ಪಿಯು ಪರೀಕ್ಷೆಯಲ್ಲಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.ಸಮಾರಂಭದ ಅಧ್ಯಕ್ಷತೆಯನ್ನು ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಎಂ.ಜಿ.ರಾಮಚಂದ್ರ ವಹಿಸಿದ್ದರು.

ವೇದಿಕೆಯಲ್ಲಿ ಜಿ.ಪಂ. ಸದಸ್ಯ ಕಲಗೋಡು ರತ್ನಾಕರ್, ಹೊಸನಗರ ತಾಲ್ಲೂಕು ಆರ್ಯ ಈಡಿಗರ ಸಂಘದ ಅಧ್ಯಕ್ಷ ಬಿ.ಪಿ.ರಾಮಚಂದ್ರ, ಮಾಜಿ ಶಾಸಕರಾದ ಕಡಿದಾಳ್ ದಿವಾಕರ್, ಪಟಮಕ್ಕಿ ರತ್ನಾಕರ್ ಉಪಸ್ಥಿತರಿದ್ದರು. ಸಿ.ಜಿ. ವೆಂಕಟೇಶ್ ಪ್ರತಿಭಾ ಪುರಸ್ಕಾರ ನಡೆಸಿಕೊಟ್ಟರು. ಲತಾ ರಾಜಕುಮಾರ್ ಕಾರ್ಯಕ್ರಮ ನಿರೂಪಿಸಿದರು.

Post Comments (+)