ಮಂಗಳವಾರ, ಮೇ 24, 2022
25 °C

ಕಾರ್ಕಳ ರಸ್ತೆ ವಿಸ್ತರಣೆಗೆ ನಾಗರಿಕರ ಸಹಕಾರ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಕಳ: ಇಲ್ಲಿನ ಪ್ರಧಾನ ರಸ್ತೆಯ ಮುಖ್ಯ ರಥಬೀದಿ ವಿಸ್ತರಣೆಗೆ ಸ್ಥಳೀಯರು ಸ್ವಯಂಪ್ರೇರಿತರಾಗಿ ತಮ್ಮ ಸ್ವಂತ ಕಟ್ಟಡಗಳನ್ನು ತೆರವುಗೊಳಿಸುವ ಮೂಲಕ ಮಂಗಳವಾರ ಚಾಲನೆ ನೀಡಿದರು. ಹಲವು ಸಮಯದಿಂದ ಪಟ್ಟಣದ ರಸ್ತೆ ವಿಸ್ತರಣೆ ಕುರಿತಂತೆ ನಾಗರಿಕರಲ್ಲಿ ಹಲವಾರು ಊಹಾಪೋಹಗಳು, ಗೊಂದಲಗಳೂ ಇದ್ದವು. ಜಿಲ್ಲಾಧಿಕಾರಿ ಹೇಮಲತಾ ಅವರು ತಿಂಗಳಲ್ಲಿ ಎರಡು ಬಾರಿ ಪಟ್ಟಣದ ನಾಗರಿಕರ ಮತ್ತು ವ್ಯಾಪಾರಸ್ಥರ ಸಭೆ ಕರೆದು ಅಭಿಪ್ರಾಯ ಸಂಗ್ರಹಿಸಿದ್ದರು. ಯಾರಿಗೂ ತೊಂದರೆಯಾಗದಂತೆ ವಿಶ್ವಾಸಕ್ಕೆ ತೆಗೆದುಕೊಂಡು ಪಟ್ಟಣದ ರಸ್ತೆ ವಿಸ್ತರಣೆಯ ಅವಶ್ಯಕತೆಯನ್ನು ಹೇಳಿದ್ದರು.ರಸ್ತೆ ವಿಸ್ತರಣೆಗೆ ತಾವಾಗಿ ಮುಂದೆ ಬಂದವರಿಗೆ ಮೊದಲ ಪ್ರಾಶಸ್ತ್ಯ ನೀಡಿ ಕಟ್ಟಡ ತೆರವುಗೊಳಿಸಲು ಆದೇಶ ನೀಡುವುದಾಗಿಯೂ, ಅಗತ್ಯವುಳ್ಳವರ ಬೇಡಿಕೆಗಳನ್ನು ಪರಿಶೀಲಿಸುವುದಾಗಿಯೂ ತಿಳಿಸಿದ್ದರು. ಅಗತ್ಯವಿದ್ದರೆ 200 ಅಡಿಗಳ ಉದ್ದಕ್ಕೂ ಇರುವ ಅಂಗಡಿಯವರನ್ನು ಪ್ರತ್ಯೇಕವಾಗಿ ಕರೆದು ಚರ್ಚಿಸುವುದಾಗಿಯೂ ತಿಳಿಸಿದ್ದರು. ಅದರಂತೆ ಸೋಮವಾರ ಒಂದು ತಂಡ ಪುರಸಭೆಯ ಆಡಳಿತ ಸಿಬ್ಬಂದಿ ಜತೆಗೆ ಜಿಲ್ಲಾಧಿಕಾರಿಯವರನ್ನು ಭೇಟಿ ಮಾಡಿ ಚರ್ಚೆ ನಡೆಸಿತ್ತು.ಪಟ್ಟಣದ 20 ಮಂದಿ ಸ್ವಯಂಪ್ರೇರಿತರಾಗಿ ತಮ್ಮ ಸ್ವಂತ ಕಟ್ಟಡಗಳನ್ನು ತೆರವು ಮಾಡಿಕೊಡುವುದಾಗಿ ತಿಳಿಸಿದ್ದರು. ಪಟ್ಟಣದ ರಥಬೀದಿಯಲ್ಲಿ ಮಂಗಳವಾರ ಐದು ಕಡೆ ತೆರವು ಕಾರ್ಯಾಚರಣೆ ಆರಂಭಗೊಂಡಿದೆ. ಬುಧವಾರ ಉಳಿದೆಡೆ ಮುಂದುವರಿಯಲಿದೆ.ಪಟ್ಟಣದಲ್ಲಿ ಸರ್ಕಾರಿ ಆಕ್ರಮಿತ ಪ್ರದೇಶ ಹೊರತುಪಡಿಸಿ 7 ಅಡಿಗಳಷ್ಟು ಜಾಗ ಬಿಟ್ಟು ಕೊಡಲು 20ಮಂದಿ ಈಗಾಗಲೇ ಒಪ್ಪಿಗೆ ನೀಡಿದ್ದಾರೆ. ಸ್ವಯಂಪ್ರೇರಿತರಾಗಿ ಮುಂದೆ ಬಂದಿರುವುದರಿಂದ ಅವರಿಗೆ ಪರಿಹಾರ ನೀಡುವ ಪ್ರಶ್ನೆ ಉದ್ಭವಿಸುವುದಿಲ್ಲ.ಮುಂದಿನ ದಿನಗಳಲ್ಲಿ ಇದೇ ರೀತಿಯಲ್ಲಿ ಇತರರೂ ಮುಂದೆ ಬರಬಹುದು. ಇಲ್ಲದಿದ್ದರೆ ಜಿಲ್ಲಾಧಿಕಾರಿ ಆದೇಶದಂತೆ ಪುರಸಭಾ ಆಡಳಿತ ಮುಂದುವರಿಯಲಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಪ್ರಜಾವಾಣಿಗೆ ತಿಳಿಸಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.