ಕಾರ್ಕಳ: ವೀಸಾ ವಂಚನೆ ಆರೋಪಿ ಬಂಧನ

ಭಾನುವಾರ, ಜೂಲೈ 21, 2019
26 °C

ಕಾರ್ಕಳ: ವೀಸಾ ವಂಚನೆ ಆರೋಪಿ ಬಂಧನ

Published:
Updated:

ಕಾರ್ಕಳ: ವೀಸಾ ಕೊಡಿಸುವುದಾಗಿ ಹಲವರನ್ನು ನಂಬಿಸಿ ಲಕ್ಷಾಂತರ ರೂಪಾಯಿ ಹಣ ಪಡೆದು ನಂತರ ವಂಚಿಸಿದ ಆರೋಪಿಯೊಬ್ಬನನ್ನು ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಉಡುಪಿ ತಾಲ್ಲೂಕು ಶಂಕರಪುರದ ನಿವಾಸಿ ಪ್ರಸ್ತುತ ಗೋವಾ ನಿವಾಸಿ ಅರುಣ್ ರೋಶನ್ ಯಾನೆ ಸಿದ್ಧಾರ್ಥ (30) ಬಂಧಿತ ಆರೋಪಿ.ಈ ಹಿಂದೆ ತಾಲ್ಲೂಕಿನ ಈದು ಗ್ರಾಮದ ಜೈಸನ್ ಮಿರಾಂಡ ಎನ್ನುವವರಿಗೆ ದಕ್ಷಿಣ ಆಫ್ರಿಕಾದ ವೀಸಾ ಕೊಡಿಸುವುದಾಗಿ ನಂಬಿಸಿ ರೂ. 49ಸಾವಿರವನ್ನು ಈತ ತನ್ನ ಮಿತ್ರ ಫ್ರಾನ್ಸಿಸ್ ಡಿಕುನ್ಹಾರ ಖಾತೆಗೆ ಜಮಾ ಮಾಡಿಕೊಂಡಿದ್ದಲ್ಲದೇ ಕೆಲವು ಸಮಯದ ಹಿಂದೆ ಪಟ್ಟಣದ ಪುಲ್ಕೇರಿ ಎಂಬಲ್ಲಿಯ ಪಾಯಸ್ ಗ್ಯಾರೇಜ್‌ನಲ್ಲಿ ಮಾಲೀಕರ ಎದುರು ರೂ. 51 ಸಾವಿರ ರೂಪಾಯಿ ಹಾಗೂ ಪಾಸ್‌ಪೋರ್ಟ್ ಅನ್ನು ಪಡೆದುಕೊಂಡು, ನಂತರ ಸಂಪರ್ಕಿಸಲು ಪ್ರಯತ್ನಿಸಿದಾಗ ಮೊಬೈಲ್ ಸ್ವಿಚ್‌ಆಫ್ ಮಾಡಿರುವುದಾಗಿ ಪ್ರಕರಣ ದಾಖಲಾಗಿತ್ತು. ಇದೀಗ ನಗರ ಠಾಣಾ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.ಲಕ್ಷಾಂತರ ಮೌಲ್ಯದ ನಗ ನಗದು ಕಳವು

ಬ್ರಹ್ಮಾವರ: ವಡ್ಡರ್ಸೆ ಗ್ರಾಮದ ಮಧುವನದ ಹಂಝ ಬ್ಯಾರಿ ಅವರ ಮನೆಗೆ ಗುರುವಾರ ರಾತ್ರಿ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ನಗದು ಮತ್ತು ಚಿನ್ನಾಭರಣಗಳನ್ನು ಕಳವು ಮಾಡಿದ್ದಾರೆ.

ಹಂಝ ಅವರ ಪತ್ನಿ ಮತ್ತು ಮಗಳು ಕೋಣೆಯಲ್ಲಿ ಮಲಗಿದ್ದ ಸಮಯದಲ್ಲಿ ಇನ್ನೊಂದು ಕೋಣೆಯಲ್ಲಿದ್ದ ಗೋದ್ರೇಜಿನಿಂದ ರೂ. 20 ಸಾವಿರ ನಗದು, ಸೂಟ್‌ಕೇಸಿನ ಒಳಗಿದ್ದ ಐದು ಪವನ್ ಚಿನ್ನದ ನೆಕ್ಲೇಸ್, ಮೂರು ಪವನ್ ಕಿವಿಯ ಆಭರಣ, ಓಲೆ ಒಂದು ಜೊತೆ, ಬ್ರೇಸ್‌ಲೆಟ್, ಉಂಗುರ ಕಳವು ಮಾಡಿದ್ದಾರೆ.ಕಳವಾದ ಸ್ವತ್ತುಗಳ ಒಟ್ಟು ಮೌಲ್ಯ 1.20 ಲಕ್ಷ ಎಂದು ಅಂದಾಜಿಸಲಾಗಿದೆ. ಕೋಟ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಜ್ಪೆ: ಟಿಪ್ಪರ್ ಕಳವು

ಬಜ್ಪೆ:
ಇಲ್ಲಿಗೆ ಸಮೀಪ ಎಂಆರ್‌ಪಿಎಲ್ ಸಂಸ್ಥೆಯ ಕಾಮಗಾರಿ ನಡೆಯುತ್ತಿದ್ದ ಸ್ಥಳದಲ್ಲಿ ನಿಲ್ಲಿಸಿದ್ದ ಟಿಪ್ಪರ್ ಇತ್ತೀಚೆಗೆ ಕಳವಾಗಿದೆ.ಉಡುಪಿಯ ಅಲೆವೂರು ನಿವಾಸಿ ಜಗದೀಶ್ವರ ಅವರಿಗೆ ಸೇರಿದ ಟಿಪ್ಪರ್ ಇದಾಗಿದ್ದು, ಚಾಲಕ ಮೇ 25ರಂದು ಸ್ಥಳದಲ್ಲಿ ಟಿಪ್ಪರ್ ನಿಲ್ಲಿಸಿದ್ದರು. ಸಾಕಷ್ಟು ಹುಡುಕಾಟ ನಡೆಸಿದ ಬಳಿಕವೂ ಟಿಪ್ಪರ್ ಪತ್ತೆಯಾಗದ ಹಿನ್ನಲೆಯಲ್ಲಿ ಮಾಲೀಕರು ಭಾನುವಾರ ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಟಿಪ್ಪರ್ ಮೌಲ್ಯ ರೂ. 1.25 ಲಕ್ಷ ಎಂದು ಅಂದಾಜಿಸಲಾಗಿದೆ.ಆತ್ಮಹತ್ಯೆಗೆ ಯತ್ನಿಸಿದ್ದ ವ್ಯಕ್ತಿ ಸಾವು

ಮಂಗಳೂರು: ಕೆಲದಿನಗಳ ಹಿಂದೆ ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಯಲ್ಲಿ ಜೀವನ್ಮರಣ ಸ್ಥಿತಿಯಲ್ಲಿದ್ದ ನೀರುಮಾರ್ಗದ ವ್ಯಕ್ತಿಯೊಬ್ಬರು ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಕೊನೆಯುಸಿರೆಳೆದರು.

ನೀರುಮಾರ್ಗ ಪಡುಮಜಲು ಮನೆಯ ಯೋಗೇಶ್ ಬುಧವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸಾವು ಬದುಕಿನ ಹೋರಾಟ ನಡೆಸುತ್ತಿದ್ದ ಅವರನ್ನು ನಗರದ ಫಾ.ಮುಲ್ಲರ್ಸ್‌ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಕಂಕನಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.ಬಜಗೋಳಿ: ಜುಗಾರಿ ನಗದು ವಶ

ಕಾರ್ಕಳ: ತಾಲ್ಲೂಕಿನ ಮುಡಾರು ಗ್ರಾಮದ ಬಜಗೋಳಿ ಎಂಬಲ್ಲಿನ ಚಿರಾಗ್ ಹೋಟೆಲ್‌ನಲ್ಲಿ ಜುಗಾರಿ ನಿರತ 12 ಮಂದಿಯನ್ನು  ಬಂಧಿಸಿದ ಪೊಲೀಸರು ಅವರಿಂದ ನಗದು ರೂ.16700ನ್ನು ವಶ ಪಡಿಸಿಕೊಂಡಿದ್ದಾರೆ.

ಇಸ್ಪೀಟ್  ಆಟವಾಡುತ್ತಿದ್ದ ಶರತ್ ಶೆಟ್ಟಿ, ಪ್ರವೀಣ ಕುಮಾರ್, ಸುಧೀರ ಪೂಜಾರಿ, ಜಯರಾಮ ಶೆಟ್ಟಿ,ಪ್ರಶಾಂತ ಶೆಟ್ಟಿ, ಮುಕ್ಬುಲ್, ಯತೀಶ್ ಶೆಟ್ಟಿ, ಸಾಧು, ಪ್ರವೀಣ ಕುಮಾರ್, ಪ್ರಸನ್ನ ಶೇರಿಗಾರ್, ಗುರುಪ್ರಸಾದ್ ಶೆಟ್ಟಿ,ವಿರಿಜು ಬಂಧಿತರಾದವರು. ಗ್ರಾಮಾಂತರ ಠಾಣೆಯ ಎಸ್‌ಐ ಅಜ್ಮತ್ ಆಲಿ ಹಾಗೂ ಸಿಬ್ಬಂದಿ ಆರೋಪಿಗಳನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.ಕೂಲಿ ಕಾರ್ಮಿಕ ಆತ್ಮಹತ್ಯೆ


ಕಾಸರಗೋಡು: ಕೂಲಿ ಕಾರ್ಮಿಕನೊಬ್ಬ ಮೀನು ಮಾರುಕಟ್ಟೆಯಲ್ಲಿ ನೇಣು ಹಾಕಿ ಆತ್ಮಹತ್ಯೆ ಮಾಡಿದ ಘಟನೆ ಮೇಲ್ಪರಂಬರದಲ್ಲಿ ಶನಿವಾರ ಮುಂಜಾನೆ ನಡೆದಿದೆ. ಚಳಯಂಗೋಡು ಮೊಯ್ದು (47) ಎಂದು ಗುರುತಿಸಲಾಗಿದೆ. ಅವರು ಪತ್ನಿ ಆಲಿಮಾ ಮತ್ತು  ಐವರು ಮಕ್ಕಳನ್ನು ಅಗಲಿದ್ದಾರೆ.ಬೈಕ್ ಗುದ್ದಿ ಪಾದಚಾರಿ ಸಾವು

ನರಸಿಂಹರಾಜಪುರ: ವೇಗವಾಗಿ ಬಂದ ಬೈಕೊಂದು ಪಾದಚಾರಿಗೆ ಗುದ್ದಿದ ಪರಿಣಾಮವಾಗಿ ಪಾದಚಾರಿ ಮೃತಪಟ್ಟ ಘಟನೆ ತಾಲ್ಲೂಕಿನ ಸೀತೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗರಮಕ್ಕಿ ಗ್ರಾಮದಲ್ಲಿ ಭಾನುವಾರ ನಡೆದಿದೆ.ನಾಗರಮಕ್ಕಿ ಗ್ರಾಮದ ರಂಗದಾಸಮಯ್ಯ (72) ಅಪಘಾತದಲ್ಲಿ ಮೃತಪಟ್ಟ ದುರ್ದೈವಿ. ಇವರು ಗ್ರಾಮದಲ್ಲಿ ನಡೆದು ಕೊಂಡು ಹೋಗುತ್ತಿದ್ದಾಗ ವೇಗವಾಗಿ ಬಂದ ಬೈಕ್ ಗುದ್ದಿದ ಪರಿಣಾಮವಾಗಿ ಇವರ ತಲೆ ಮತ್ತು ಕಾಲಿಗೆ ತೀವ್ರ ಗಾಯಗಳಾಗಿದ್ದು ಕೂಡಲೇ ಕೊಪ್ಪ ಆಸ್ಪತ್ರೆಗೆ ಸಾಗಿಸಲಾಗಿತ್ತು ಆದರೆ ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಮೃತಪಟ್ಟರು. ಅರುಣ್‌ಕುಮಾರ್ ಎಂಬುವರು ನೀಡಿದ ದೂರಿನನ್ವಯ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry