ಬುಧವಾರ, ನವೆಂಬರ್ 20, 2019
20 °C

ಕಾರ್ಕಳ: ಶಿಲ್ಪಿ ಶ್ಯಾಮರಾಯ ಆಚಾರ್ಯ ಇನ್ನಿಲ್ಲ

Published:
Updated:

ಕಾರ್ಕಳ: ಶಿಲ್ಪಕಲಾ ಅಕಾಡೆಮಿ ಮಾಜಿ ಅಧ್ಯಕ್ಷ, `ಜಕಣಾಚಾರಿ~ ಪ್ರಶಸ್ತಿ ಪುರಸ್ಕೃತ ಹಿರಿಯ ಶಿಲ್ಪಿ ಶ್ಯಾಮರಾಯ ಆಚಾರ್ಯ ಅವರು ಬುಧವಾರ ರಾತ್ರಿ ಕಾರ್ಕಳದಲ್ಲಿ ನಿಧನರಾದರು.ಖ್ಯಾತ ಶಿಲ್ಪಿ ರೆಂಜಾಳ ಆರ್.ಗೋಪಾಲಕೃಷ್ಣ ಶೆಣೈ ಅವರ ಶಿಷ್ಯರಾದ ಶ್ಯಾಮರಾಯ ಆಚಾರ್ಯ ಅವರು 700ಕ್ಕೂ ಅಧಿಕ ವಿಭಿನ್ನ ಶೈಲಿಯ ಶಿಲ್ಪಗಳನ್ನು ಕೆತ್ತಿದ್ದಾರೆ.ಅವರು ಕೆತ್ತಿದ 13.5 ಅಡಿ ಎತ್ತರದ ಮಹಾವೀರನ ಬೃಹತ್ ಶಿಲಾಮೂರ್ತಿ ದೆಹಲಿಯ ಕುತುಬ್ ಮಿನಾರ್ ಪಕ್ಕದಲ್ಲಿ ರಾರಾಜಿಸುತ್ತಿದೆ. 17 ಅಡಿ ಎತ್ತರದ ಕುಳಿತ ಭಂಗಿಯ ಚಂದ್ರಪ್ರಭಾ ತೀರ್ಥಂಕರ ಮೂರ್ತಿ ಅವರ ಅಪೂರ್ವ ಕಾಣಿಕೆಗಳಲ್ಲೊಂದು. ದೇಶದಾದ್ಯಂತ ಹಲವು ದೇವಾಲಯಗಳಿಗೆ ಇವರು ವಾಸ್ತುಶಿಲ್ಪಿಯಾಗಿದ್ದರು.

ಕರ್ನಾಟಕ ರಾಜ್ಯ ಶಿಲ್ಪಕಲಾ ಅಕಾಡೆಮಿ ಸದಸ್ಯರಾಗಿ, ಬಳಿಕ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು.

1999ರಲ್ಲಿ ಶಿಲ್ಪಕಲೆಯ ಅತ್ಯುನ್ನತ ಪ್ರಶಸ್ತಿಯಾದ `ಜಕಣಾಚಾರಿ~ ಪ್ರಶಸ್ತಿ ಪುರಸ್ಕೃತರಾದರು. `ಕಾಶ್ಯಪ ಶಿಲ್ಪ ಶಾಸ್ತ್ರಂ~ ಎಂಬ ಕನ್ನಡ ಗ್ರಂಥ ಪ್ರಕಟಿಸಿದ್ದರು.ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ, ಲಲಿತಾಕಲಾ ಅಕಾಡೆಮಿ ಪ್ರಶಸ್ತಿ, ಕರ್ನಾಟಕ ರಾಜ್ಯ ಪ್ರಶಸ್ತಿ, ಇಂಗ್ಲೆಂಡ್‌ನಲ್ಲಿ ಭಾರತ ಉತ್ಸವ ಪ್ರಶಸ್ತಿ, ದೆಹಲಿಯ ಫೈನ್ ಆರ್ಟ್ಸ್ ಸೊಸೈಟಿಯ ಪ್ರಶಸ್ತಿ ಸೇರಿದಂತೆ ನೂರಾರು ಪ್ರಶಸ್ತಿಗಳು  ಶಿಲ್ಪಿ ಶ್ಯಾಮರಾಯ ಆಚಾರ್ಯ ಅವರಿಗೆ ಶಿಲ್ಪಸೇವೆಗೆ ಸಂದಿದೆ. ಅವರು  ಕೆತ್ತಿದ ಅನೇಕ ಮೂರ್ತಿಗಳು ಇಟಲಿ, ಜಪಾನ್, ಕೆನಡಾ ಮತ್ತು  ಇಂಗ್ಲೆಂಡ್‌ಗೂ ರವಾನೆಯಾಗಿವೆ.

ಪ್ರತಿಕ್ರಿಯಿಸಿ (+)