ಕಾರ್ಖಾನೆಗಳಿಂದ ರೈತರಿಗೆ ವಂಚನೆ: ಆರೋಪ

ಭಾನುವಾರ, ಜೂಲೈ 21, 2019
26 °C

ಕಾರ್ಖಾನೆಗಳಿಂದ ರೈತರಿಗೆ ವಂಚನೆ: ಆರೋಪ

Published:
Updated:

ಸಿಂದಗಿ: ಕಬ್ಬು ಬೆಳೆಗೆ ಸಕ್ಕರೆ ಕಾರ್ಖಾನೆಗಳು ಯೋಗ್ಯ ದರ ನೀಡದೇ ರೈತರನ್ನು ವಂಚಿಸುತ್ತಿವೆ. ಈ ಬಗ್ಗೆ ಕೂಡಲೇ ಕ್ರಮ ಜರುಗಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಘಟಕದ ಪದಾಧಿಕಾರಿಗಳು ಸೋಮವಾರ ನಗರದ ಮಿನಿವಿಧಾನಸೌಧ ಆವರಣದಲ್ಲಿ ತಹಶೀಲ್ದಾರರಿಗೆ ಮನವಿ ಪತ್ರ ಸಲ್ಲಿಸಿದರು.ರೈತ ಸಂಘದ ಜಿಲ್ಲಾಧ್ಯಕ್ಷ ಸಿದ್ರಾಮಪ್ಪ ರಂಜಣಗಿ, ಜಿಲ್ಲಾ ಪ್ರಧಾನಕಾರ್ಯದರ್ಶಿ ಅರವಿಂದ ಕುಲಕರ್ಣಿ ಮಾತನಾಡಿ, ಜಿಲ್ಲೆಯ ರೈತರು ಬೆಳೆದ ಕಬ್ಬಿಗೆ ರೂ.3ಸಾವಿರ ಯೋಗ್ಯ ದರ ನೀಡುವಂತೆ ಜಿಲ್ಲಾಧಿಕಾರಿಗಳು ಸಕ್ಕರೆ ಕಾರ್ಖಾನೆ ಮಾಲೀಕರ ಸಭೆಯನ್ನು ಕಟ್ಟುನಿಟ್ಟಾಗಿ ಆದೇಶ ನೀಡಿದ್ದರು.

ಮೊದಲು ಕಂತು 2500 ರೂಪಾಯಿ ನೀಡಿ ನಂತರ ರೂ.500 ಎರಡನೇ ಕಂತಿನಲ್ಲಿ ನೀಡುವುದಾಗಿಯೂ ಕಾರ್ಖಾನೆ ಆಡಳಿತ ಮಂಡಳಿ ಒಪ್ಪಿಕೊಂಡಿದ್ದರು. ಆದರೆ ಜಿಲ್ಲಾಧಿಕಾರಿಗಳ ಆದೇಶವನ್ನು ಗಾಳಿಗೆ ತೂರಿ ಮನಸ್ಸಿಗೆ ಬಂದಂತೆ ಕಬ್ಬಿಗೆ ದರ ನೀಡುತ್ತಿದ್ದಾರೆ ಎಂದು ಆರೋಪಿಸಿದರು.ರೇಣುಕಾ ಶುಗರ್ಸ್‌ ಕಾರ್ಖಾನೆ ರೂ.2300, ಕೊಕಟನೂರ ಕಾರ್ಖಾನೆ ರೂ.2500, ಜಮಖಂಡಿ ಶುಗರ್ಸ್‌ ರೂ.2500 ನೀಡಿದರೆ ಇದೇ ಕಾರ್ಖಾನೆಗೆ ಸಂಬಂಧಿಸಿದ ನಾದ ಕೆ.ಡಿ ಶುಗರ್ಸ್‌ನಲ್ಲಿ ರೂ.2300 ನೀಡಿದ್ದಾರೆ. ಬೇವನೂರ ಶುಗರ್ಸ್‌ ರೂ.2200, ಹಾವಿನಾಳ ಕಾರ್ಖಾನೆ ರೂ.2300, ನಂದಿ ಶುಗರ್ಸ್‌ ರೂ.2500, ಮಲಘಾಣ ಮನಾಲಿ ಶುಗರ್ಸ್‌ ರೂ.2300 ದರ ನಿಗದಿ ಮಾಡಿದ್ದಾರೆ ಎಂದು ತಿಳಿಸಿದರು.  ಈ ಎಲ್ಲ ಸಕ್ಕರೆ ಕಾರ್ಖಾನೆಗಳು ಪ್ರಭಾವಿ ರಾಜಕೀಯ ವ್ಯಕ್ತಿಗಳ ಮಾಲೀಕತ್ವದಲ್ಲಿವೆ. ಅವರು ರೈತರಿಗೆ ವಂಚನೆ ಮಾಡುತ್ತಿದ್ದರೂ ಯಾವುದೇ ರೀತಿಯ ಕ್ರಮ ಜರುಗಿಸಿಲ್ಲ ಎಂದು ಅವರು ವಿಷಾದ ವ್ಯಕ್ತಪಡಿಸಿದರು.ಇದೇ ರೀತಿ ರೈತರಿಗೆ ವಂಚನೆ ಮುಂದುವರಿದರೆ ರೈತ ಸಂಘ ಎಲ್ಲ ಸಕ್ಕರೆ ಕಾರ್ಖಾನೆಗಳಿಗೆ ಬೀಗ ಜಡಿದು ಉಪವಾಸ ಸತ್ಯಾಗ್ರಹ ಮಾಡಬೇಕಾ ಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.ರೈತ ಸಂಘದ ತಾಲ್ಲೂಕು ಅಧ್ಯಕ್ಷ ಶಿವಶರಣಪ್ಪಗೌಡ ಬಿರಾದಾರ, ಪರುಶರಾಮ ಹುಡೇದ, ಬಸನಗೌಡ ಧರ್ಮಗೊಡ, ಕುಮಾರಸ್ವಾಮಿ ಹಿರೇಮಠ, ಮಲ್ಲಿಕಾರ್ಜುನ ಹಂದ್ರಾಳ, ಶರಣಪ್ಪಗೌಡ ಬಿರಾದಾರ ಬಮ್ಮನಜೋಗಿ, ಭೀಮಾಶಂಕರ ನಾವಿ, ಛಾಯಪ್ಪ ಹೊಸಮನಿ, ಚನ್ನಪ್ಪಗೌಡ ಪಾಟೀಲ, ಶಿವಕುಮಾರ ಮಾಡಬಾಳಮಠ ಕೊಂಡಗೂಳಿ, ಈರಣ್ಣ ಬಡಿಗೇರ ಕೊಂಡಗೂಳಿ, ಗೊಲ್ಲಾಳಪ್ಪ ಚೌಧರಿ ಕನ್ನೊಳ್ಳಿ, ಅಶೋಕ ಅಲ್ಲಾಪೂರ, ಇಮಾಮಸಾಬ ನಧಾಫ್, ಭೀಮಶ್ಯಾ ಜಗದಾಳಕರ ಉಪಸ್ಥಿತರಿದ್ದರು.

ತಹಶೀಲ್ದಾರ್ ಅಶ್ವಥನಾರಾಯಣಶಾಸ್ತ್ರೀ ಮನವಿ ಪತ್ರ ಸ್ವೀಕರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry