ಕಾರ್ಖಾನೆಗೆ ಅನುಮತಿ ಬೇಡ: ಒತ್ತಾಯ

7

ಕಾರ್ಖಾನೆಗೆ ಅನುಮತಿ ಬೇಡ: ಒತ್ತಾಯ

Published:
Updated:

ಗೋಕಾಕ-: ತಾಲ್ಲೂಕಿನ ಯಾದವಾಡ ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ದಾಲ್ಮೀಯಾ ಸಿಮೆಂಟ್ ಕಾರ್ಖಾನೆಗೆ ಅನುಮತಿ  ನೀಡದಂತೆ ಒತ್ತಾಯಿಸಿ ತಹಶೀಲ್ದಾರ್‌ ಉದಯಕುಮಾರ ಕುಂಬಾರ ಅವರಿಗೆ  ಕರ್ನಾಟಕ ರಕ್ಷಣಾ ವೇದಿಕೆಯ ಪ್ರವೀಣ ಶೆಟ್ಟಿ ಬಣದ  ಕಾರ್ಯಕರ್ತರು ಸೋಮವಾರ ಮನವಿ ಸಲ್ಲಿಸಿದರು.  ತಾಲ್ಲೂಕು ಘಟಕದ ಅಧ್ಯಕ್ಷ ಕಿರಣ್‌ ಡಮಾಮಗರ ಅವರ ನೇತೃತ್ವದಲ್ಲಿ ಜಮಾಯಿಸಿದ ನೂರಾರು ಕಾರ್ಯಕರ್ತರು ಜಿಲ್ಲಾಡಳಿತ, ದಾಲ್ಮೀಯಾ ಸಿಮೆಂಟ್ ಭಾರತ್‌ ಪ್ರೈ. ಲಿ.. ಸಂಸ್ಥೆಯ ವಿರುದ್ದ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಮನವಿ ಸಲ್ಲಿಸಿ ಮಾತನಾಡಿದ ಕಿರಣ ಡಮಾಮಗರ, 2008ರಲ್ಲಿ ಕಾರ್ಖಾನೆ ನಿರ್ಮಾಣಕ್ಕೆ ರಾಜ್ಯ ಸರ್ಕಾರ ರತ್ನಗಂಬಳಿ ಹಾಸಿ ಕರೆತಂದು ಪರವಾನಗಿ ನೀಡಿದ್ದು. ಬರಗಾಲ ಪೀಡಿತ ಪ್ರದೇಶದಲ್ಲಿ ಸರ್ಕಾರ ಕೃಷಿ ಚಟುವಟಿಕೆಗಳಿಗೆ ಅನೂಕೂಲವಾಗಲು ₨ 1,350 ಕೋಟಿ ವೆಚ್ಚದಲ್ಲಿ  ಘಟಪ್ರಭಾ ಬಲದಂಡೆ ಕಾಲುವೆ ಮೂಲಕ ನೀರಾವರಿ ಕ್ಷೇತ್ರವನ್ನಾಗಿಸಿ ಇದೀಗ ಅದೇ ಸರ್ಕಾರ ಕಾರ್ಖಾನೆ ನಿರ್ಮಾಣಕ್ಕೆ ಅನುಮತಿ ನೀಡುತ್ತಿರುವುದು ವಿಷಾಧದ ಸಂಗತಿ ಎಂದರು.ಜಿಲ್ಲಾಧಿಕಾರಿಗಳು ಕಾರ್ಖಾನೆ ನಿರ್ಮಾಣಕ್ಕೆ ಅಧಿಕೃತವಾಗಿ ಪರವಾನಿಗೆ ನೀಡಬಾರದು ಮತ್ತು ಅರಭಾವಿ  ಶಾಸಕ ಬಾಲಚಂದ್ರ ಜಾರಕಿಹೊಳಿ ಅವರು ಈ ವಿಷಯದಲ್ಲಿ ಮಧ್ಯಸ್ತಿಕೆ ವಹಿಸಿ ರೈತರ ಹಿತವನ್ನು ಕಾಪಾಡಲು ಮುಂದಾಗುವಂತೆ ಮನವಿ ಮಾಡಿದರು. ಇಲ್ಲದಿದ್ದಲ್ಲಿ ವಿವಿಧ ಸಂಘ–ಸಂಸ್ಥೆಗಳೊಂದಿಗೆ ಅನಿರ್ಧಿಷ್ಟಾವಧಿ ಕಾಲ ತಾಲ್ಲೂಕು ಬಂದ್‌ಗೆ ಕರೆ ನೀಡುವ ಮುನ್ನೆಚ್ಚರಿಕೆ ನೀಡಿದರು.ಈ ಸಂದರ್ಭದಲ್ಲಿ ಸಮರಸೇನೆ ಅಧ್ಯಕ್ಷ ವಿಠ್ಠಲ್ ಗೊಂಧಳಿ, ಅಜೀತ್‌ ವಾಖುಡೆ, ಗೋಪಾಲ ಮೀಸಿ, ಯಲ್ಲಪ್ಪ ಗೌಡರ, ಕಲ್ಲಯ್ಯ ಮಠಪತಿ, ಬಸವರಾಜ ಕೊಳಕಿ ಮತ್ತು ನಾಗೇಶ ಕೊಲ್ಲಾಪುರ, ಧೀರಜ ಕಠಾರೆ, ಸಾಯಿ ಕೊಸಂದಲ ಸೇರಿದಂತ ಇನ್ನು ಅನೇಕ ಕರವೇ ಕಾರ್ಯಕರ್ತರು ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry