ಕಾರ್ಖಾನೆಗೆ ಬೆಂಕಿ: 18 ಕೋಟಿ ಹಾನಿ

7

ಕಾರ್ಖಾನೆಗೆ ಬೆಂಕಿ: 18 ಕೋಟಿ ಹಾನಿ

Published:
Updated:
ಕಾರ್ಖಾನೆಗೆ ಬೆಂಕಿ: 18 ಕೋಟಿ ಹಾನಿ

ನರಗುಂದ (ಗದಗ ಜಿಲ್ಲೆ): ಇಲ್ಲಿಯ ಛಾಯಾ ಜಿನ್ನಿಂಗ್ ಕಾರ್ಖಾನೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಕೋಟ್ಯಂತರ ರೂಪಾಯಿ ಮೌಲ್ಯದ ಹತ್ತಿ, ಕಾಳು, ಯಂತ್ರೋಪಕರಣಗಳು ಸುಟ್ಟು ಭಸ್ಮವಾದ ಘಟನೆ ಬುಧವಾರ ನಡೆದಿದೆ.

ಹುಬ್ಬಳ್ಳಿ - ಸೊಲ್ಲಾಪುರ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಶ್ಯಾಮಸುಂದರ ರಾಟಿ ಎಂಬುವವರಿಗೆ ಸೇರಿದ ಈ ಜಿನ್ನಿಂಗ್ ಕಾರ್ಖಾನೆಯಲ್ಲಿದ್ದ ಸಾವಿರಾರು ಹತ್ತಿ ಅಂಡಿಗೆಗಳು, ಹತ್ತಿ ಕಾಳು ಮತ್ತು ಹತ್ತಿ ಹಾಗೂ ಯಂತ್ರೋಪಕರಣಗಳು ಸುಟ್ಟುಹೋಗಿದ್ದು ಸುಮಾರು 18 ರಿಂದ 20 ಕೋಟಿ ರೂಪಾಯಿಯಷ್ಟು ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ. ಬೆಳಿಗ್ಗೆಯಿಂದ ರಾತ್ರಿವರೆಗೂ ಐದು ಅಗ್ನಿಶಾಮಕ ದಳದ ವಾಹನಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದರೂ ಪೂರ್ಣವಾಗಿ ಬೆಂಕಿ ಆರಿಸಲು ಆಗಿರಲಿಲ್ಲ.

ಘಟನೆ ವಿವರ: ಮುಂಜಾನೆ 10.30ರ ಸುಮಾರಿಗೆ ಕಾರ್ಖಾನೆಯಲ್ಲಿ ಆಕಸ್ಮಿಕವಾಗಿ ಬೆಂಕಿ ಹೊತ್ತಿಕೊಂಡಿದೆ. ಆಗಷ್ಟೇ ಕಾರ್ಖಾನೆಯಲ್ಲಿ 8-10 ಕಾರ್ಮಿಕರು ಕೆಲಸ ಆರಂಭಿಸ್ದ್ದಿದರು. ಕಾರ್ಖಾನೆಯೊಳಗೆ ಬೆಂಕಿಯನ್ನು ಕಂಡ ಮಹಿಳಾ ಕಾರ್ಮಿಕರು ಭಯಭೀತರಾಗಿ ಹೊರಗೆ ಓಡಿ ಬಂದರು. ಕ್ಷಣಾರ್ಧದಲ್ಲಿ ಇಡೀ ಕಾರ್ಖಾನೆಗೆ ಬೆಂಕಿ ವ್ಯಾಪಿಸಿತು.  ಅಲ್ಲದೆ ಆವರಣದಲ್ಲಿನ ಗೋದಾಮಿಗೂ ಬೆಂಕಿ ತನ್ನ ಕೆನ್ನಾಲಿಗೆಯನ್ನು ಚಾಚಿತು. ಸುಮಾರು ಎರಡು ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಕಾರ್ಖಾನೆ ಮತ್ತು ಗೋದಾಮು ಧಗಧಗನೇ ಉರಿಯಲಾರಂಭಿಸಿತು.

ಅವಘಡ ಸಂಭವಿಸುವ ಮೊದಲೇ ಕಾರ್ಮಿಕರು ಹೊರಗೆ ಬಂದಿದ್ದರಿಂದ ಯಾವುದೇ ಜೀವಹಾನಿಯಾಗಿಲ್ಲ.

ಸುದ್ಧಿ ತಿಳಿಯುತ್ತಿದ್ದಂತೆಯೇ ಅಗ್ನಿಶಾಮಕ ದಳದ ಒಂದು ವಾಹನವು ಸ್ಥಳಕ್ಕೆ ಧಾವಿಸಿತು. ಆದರೆ ಕಾರ್ಖಾನೆಗೆ ಹೋಗಲು ಸರಿಯಾದ ದಾರಿ ಇಲ್ಲದ ಕಾರಣ ಜೆಸಿಬಿ ಯಂತ್ರದ ಮೂಲಕ ಹಿಂಭಾಗದ ಕಾಂಪೌಂಡ್ ನೆಲಸಮಗೊಳಿಸಿದ ನಂತರವಷ್ಟೇ ಅಗ್ನಿಶಾಮಕ ವಾಹನ ಕಾರ್ಖಾನೆ ಆವರಣ ಪ್ರವೇಶಿಸಿತು. ಅಷ್ಟೊತ್ತಿಗಾಗಲೇ ಬೆಂಕಿಯ ಕಾವು ಇಡೀ ಪ್ರದೇಶವನ್ನು ಆವರಿಸಿತ್ತು. ಇದರಿಂದಾಗಿ ಒಂದೇ ವಾಹನದಿಂದ ಬೆಂಕಿಯನ್ನು ತಹಬದಿಗೆ ತರಲು ಸಾಧ್ಯವಾಗಲಿಲ್ಲ. ನಂತರ ಅಧಿಕಾರಿಗಳು ಅಣ್ಣಿಗೇರಿ, ರೋಣ, ಹುಬ್ಬಳ್ಳಿ ಹಾಗೂ ಸವದತ್ತಿಯಿಂದಲೂ ಹೆಚ್ಚುವರಿಯಾಗಿ ಐದು ಅಗ್ನಿಶಾಮಕ ವಾಹನಗಳನ್ನುತರಿಸಿಕೊಂಡು ಬೆಂಕಿ ಶಮನ ಮಾಡಲು ಮುಂದಾದವು. ಆದರೂ ರಾತ್ರಿಯವರೆಗೂ ಬೆಂಕಿ ನಿಯಂತ್ರಣಕ್ಕೆ ಬಂದಿರಲಿಲ್ಲ.

ಸಂಚಾರ ವ್ಯತ್ಯಯ: ಹೆದ್ದಾರಿಗೆ ಹೊಂದಿಕೊಂಡಿರುವ ಕಾರ್ಖಾನೆಯಲ್ಲಿ ಈ ದುರ್ಘಟನೆ ಸಂಭವಿಸಿದ್ದರಿಂದ ಸುಮಾರು ಒಂದು ತಾಸಿಗೂ ಅಧಿಕ ಕಾಲ ಸಂಚಾರ ಸ್ಥಗಿತಗೊಂಡಿತ್ತು. ಬೆಂಕಿಯ ಉರಿ ಹೆಚ್ಚಾಗಿ, ಹೊಗೆಯು ಸುತ್ತಮುತ್ತಲ ಪ್ರದೇಶಕ್ಕೂ ಹಬ್ಬಿದ್ದರಿಂದ ವಾಹನಗಳು ಮುಂದಕ್ಕೆ ಚಲಿಸಲು ಸಾಧ್ಯವಾಗದೇ  ಸ್ಥಳದಲ್ಲಿಯೇ ನಿಂತಿದ್ದವು. ಕಾವು ಸ್ವಲ್ಪ ಇಳಿದ ಮೇಲೆ ವಾಹನ ಸಂಚಾರ ಪ್ರಾರಂಭವಾಯಿತು.

ಬೆಂಕಿ ಹೊತ್ತಿಕೊಂಡ ಸುದ್ದಿ ತಿಳಿಯುತ್ತಿದ್ದಂತೆಯೇ ಪಟ್ಟಣದ ಜನರು ಹಾಗೂ ಸುತ್ತಮುತ್ತಲ ಗ್ರಾಮದ ಜನರು ತಂಡೋಪತಂಡವಾಗಿ ಘಟನಾ ಸ್ಥಳಕ್ಕೆ ಬಂದು ಭಯಭೀತರಾಗಿ ವೀಕ್ಷಣೆ ಮಾಡುತ್ತಿದ್ದರು. ಅಪಾರ ಸಂಖ್ಯೆಯಲ್ಲಿ ಜನ ಸೇರಿದ್ದರಿಂದಾಗಿ ಬೆಂಕಿ ನಂದಿಸುವ ಕಾರ್ಯಕ್ಕೂ ಸ್ವಲ್ಪ ಅಡಚಣೆ ಆಯಿತು.

`ಸುಮಾರು 12 ಸಾವಿರ ಹತ್ತಿ ಅಂಡಿಗೆಗಳು, 500 ಟನ್ ಹತ್ತಿ ಕಾಳು ಹಾಗೂ  9,000 ಗೋಣಿಚೀಲದಲ್ಲಿದ್ದ  ಹತ್ತಿ ಹಾಗೂ ಕೋಟ್ಯಂತರ ಮೌಲ್ಯದ ಯಂತ್ರೋಪಕರಣಗಳು ಬೆಂಕಿಗೆ ಆಹುತಿಯಾಗಿವೆ. ಒಟ್ಟು 18-20 ಕೋಟಿ ರೂ.ಗಳಷ್ಟು ಹಾನಿ ಸಂಭವಿಸಿದೆ~ ಎಂದು ಕಾರ್ಖಾನೆಯ ದಿಲೀಪ ರಾಟಿ ತಿಳಿಸಿದ್ದಾರೆ.

`ನಮ್ಮ ಪುಣ್ಯ ಚೆನ್ನಾಗಿತ್ತು. ಬೆಂಕಿಯ ಕಾವು ಗೊತ್ತಾಗದೇ ಇದ್ದರೆ ನಾವೆಲ್ಲ ಸುಟ್ಟು ಕರಕಲಾಗಬೇಕಾಗಿತ್ತು. ದೇವರು ನಮ್ಮನ್ನು ಕಾಪಾಡಿದ~ ಎಂದು ಮಹಿಳಾ ಕಾರ್ಮಿಕರು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry