ಮಂಗಳವಾರ, ಜುಲೈ 14, 2020
27 °C

ಕಾರ್ಖಾನೆ ವಿರುದ್ಧ ಗೌಡರ ಪ್ರತಿಭಟನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಖಾನೆ ವಿರುದ್ಧ ಗೌಡರ ಪ್ರತಿಭಟನೆ

ಬಾಗಲಕೋಟೆ: ಜಿಲ್ಲೆಯ ಮುಧೋಳ ಪಟ್ಟಣದ ಸಮೀಪದಲ್ಲಿರುವ ನಿರಾಣಿ ಸಕ್ಕರೆ ಕಾರ್ಖಾನೆಯಿಂದ ಪರಿಸರ ಮಾಲಿನ್ಯ ಉಂಟಾಗುತ್ತಿದೆ ಆರೋಪಿಸಿ ಹಲವು ದಿನಗಳಿಂದ ನಡೆಯುತ್ತಿರುವ ಹೋರಾಟಕ್ಕೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಕೈಜೋಡಿಸಿದ್ದಾರೆ.ಮುಧೋಳ ತಹಸೀಲ್ದಾರ ಕಚೇರಿ ಎದುರು ನಡೆಯುತ್ತಿರುವ ಧರಣಿ ಸ್ಥಳಕ್ಕೆ ಗುರುವಾರ ಭೇಟಿ ನೀಡಿದ  ಅವರು ಈ  ಹೋರಾಟಕ್ಕೆ ಬಲ ತುಂಬಿದರು.ನಂತರ ನಡೆದ ಬೃಹತ್ ಬಹಿರಂಗ ಸಭೆಯಲ್ಲಿ ಮಾತನಾಡಿದ ಅವರು, `ಬಿಜೆಪಿ ಆಡಳಿತಾವಧಿಯಲ್ಲಿ ಕೆಲವು ಸಚಿವರು ಕೈಗಾರಿಕೆ ಹೆಸರಿನಲ್ಲಿ ಫಲವತ್ತಾದ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು `ವ್ಯಾಪಾರಿ ಉದ್ದೇಶ~ಕ್ಕೆ ಬಳಸಿಕೊಳ್ಳುತ್ತಿದ್ದಾರೆ. ಯಾವುದೇ ಕಾರಣಕ್ಕೂ ಇದನ್ನು ಸಹಿಸಲಾಗದು~ ಎಂದರು.ಸೋರಗಾವಿ ಗ್ರಾಮಕ್ಕೆ ಇದೇ 18ರಂದು ಭೇಟಿ ನೀಡಿ, ಸಕ್ಕರೆ ಕಾರ್ಖಾನೆಯಿಂದ ಉಂಟಾಗುತ್ತಿರುವ ಮಾಲಿನ್ಯವನ್ನು ಪರಿಶೀಲಿಸಿ ಹೋರಾಟವನ್ನು ಮತ್ತೆ ಮುಂದುವರಿಸುವುದಾಗಿ ಹೇಳಿದರು.ರನ್ನ ಸಹಕಾರಿ ಸಕ್ಕರೆ ಕಾರ್ಖಾನೆ ಅಧ್ಯಕ್ಷರೂ ಆಗಿರುವ ಬಿಜೆಪಿ ಮುಖಂಡ ರಾಮಣ್ಣ ತಳೇವಾಡ ನೇತೃತ್ವದಲ್ಲಿ ನಿರಾಣಿ ಕಾರ್ಖಾನೆ ವಿರುದ್ಧ ನಡೆಯುತ್ತಿರುವ ಹೋರಾಟಕ್ಕೆ ಕಾಂಗ್ರೆಸ್ ಪಕ್ಷದ ಕೆಲ ಮುಖಂಡರು ಬೆಂಬಲ ವ್ಯಕ್ತಪಡಿಸಿದ್ದಾರೆ.ದೇವೇಗೌಡರ ನೇತೃತ್ವದಲ್ಲಿ ನಡೆದ ಪ್ರತಿಭಟನಾ ಮೆರವಣಿಗೆಯಲ್ಲಿ ಸಾವಿರಾರು ಜನರು ಪಾಲ್ಗೊಂಡಿದ್ದರು. ಜೆಡಿಎಸ್ ವಕ್ತಾರ ವೈ.ಎಸ್.ದತ್ತ, ವಿಧಾನಪರಿಷತ್ ಸದಸ್ಯ ಬಸವರಾಜ ಹೊರಟ್ಟಿ, ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ಯತ್ನಾಳ್, ಜಿಲ್ಲಾ ಜೆಡಿಎಸ್ ಅಧ್ಯಕ್ಷ ಬಸವಪ್ರಭು ಸರನಾಡಗೌಡ ಸೇರಿದಂತೆ ಅನೇಕ ಮುಖಂಡರು ಉಪಸ್ಥಿತರಿದ್ದರು.ಇದಾದ ಬಳಿಕ ಸುದ್ದಿಗೋಷ್ಠಿ ನಡೆಸಿದ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ ನಿರಾಣಿ, `ತಮ್ಮ ಕಾರ್ಖಾನೆ ವಿರುದ್ಧ ನಡೆಯುತ್ತಿರುವ ಹೋರಾಟ ರಾಜಕೀಯ ಪ್ರೇರಿತವಾಗಿದೆ. ಬೆರಳೆಣಿಕೆಯಷ್ಟು ಜನರು ಇದನ್ನು ಬೆಂಬಲಿಸಿದ್ದಾರೆ~ ಎಂದು ಹೇಳಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.