ಕಾರ್ಗಿಲ್ ಹುತಾತ್ಮ ಪ್ರಕರಣ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟಿಸ್

6

ಕಾರ್ಗಿಲ್ ಹುತಾತ್ಮ ಪ್ರಕರಣ: ಕೇಂದ್ರ ಸರ್ಕಾರಕ್ಕೆ ಸುಪ್ರೀಂ ನೋಟಿಸ್

Published:
Updated:

ನವದೆಹಲಿ (ಐಎಎನ್ಎಸ್): 1999ರ ಕಾರ್ಗಿಲ್ ಸಮರದ ಕಾಲದಲ್ಲಿ ಸೆರೆಯಾಳಾದ ಭಾರತೀಯ ಸೇನಾ ಅಧಿಕಾರಿ ಕ್ಯಾಪ್ಟನ್ ಸೌರಭ್ ಕಲಿಯಾ ಅವರಿಗೆ ಪಾಕಿಸ್ತಾನಿ ಸೇನೆ ನೀಡಿದ ಚಿತ್ರಹಿಂಸೆ ವಿಚಾರವನ್ನು ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ ಗೆ (ಐಸಿಜೆ) ಒಪ್ಪಿಸಬೇಕು ಎಂಬ ಮನವಿ ಸಂಬಂಧವಾಗಿ ಸುಪ್ರಿಂಕೋರ್ಟ್ ಶುಕ್ರವಾರ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿತು.ಸೆರೆ ಹಿಡಿದ ಬಳಿಕ ಯೋಧನನ್ನು ನಡೆಸಿಕೊಂಡ ಪಾಕಿಸ್ತಾನಿ ಸೇನೆಯ ವರ್ತನೆ ಸಮರಕೈದಿಗಳನ್ನು ನಡೆಸಿಕೊಳ್ಳಬೇಕಾದ ಬಗ್ಗೆ ಅಂತರರಾಷ್ಟ್ರೀಯ ಸಮಾವೇಶದ ನಿರ್ಣಯವನ್ನು ಉಲ್ಲಂಘಿಸಿರುವ ಹಿನ್ನೆಲೆಯಲ್ಲಿ ವಿಷಯವನ್ನು ಇಂಟರ್ ನ್ಯಾಷನಲ್ ಕೋರ್ಟ್ ಆಫ್ ಜಸ್ಟೀಸ್ ಗೆ (ಐಸಿಜೆ) ಒಪ್ಪಿಸುವಂತೆ ಕೋರಿ ಹುತಾತ್ಮ ಯೋಧನ ಕುಟುಂಬ ಸದಸ್ಯರು ರಕ್ಷಣಾ ಸಚಿವಾಲಯಕ್ಕೆ ಮನವಿ ಮಾಡಿದ್ದಾರೆ ಎಂಬುದಾಗಿ ವಕೀಲ ಅರವಿಂದ ಕುಮಾರ್ ಶರ್ಮ ಅವರು ನ್ಯಾಯಾಲಯಕ್ಕೆ ತಿಳಿಸಿದ ಬಳಿಕ ನ್ಯಾಯಮೂರ್ತಿ ಆರ್.ಎಂ. ಲೋಧಾ ಮತ್ತು ನ್ಯಾಯಮೂರ್ತಿ ಅನಿಲ್ ಆರ್. ದವೆ ಅವರನ್ನು ಒಳಗೊಂಡ ಪೀಠವು ಕೇಂದ್ರಕ್ಕೆ ನೋಟಿಸ್ ನೀಡಿತು.ಕ್ಯಾಪ್ಟನ್ ಸೌರಭ್ ಕಲಿಯಾ ಅವರ ತಂದೆ ಎನ್.ಕೆ. ಕಲಿಯಾ ಅವರು ಈ ಅರ್ಜಿಯನ್ನು ಸಲ್ಲಿಸಿದ್ದಾರೆ.

ವಿಷಯ ಎರಡು ರಾಷ್ಟ್ರಗಳಿಗೆ ಸಂಬಂಧ ಪಟ್ಟದ್ದಾಗಿದೆ ಎಂಬ ಕಾರಣಕ್ಕಾಗಿ ಈ ವಿಚಾರದಲ್ಲಿ ನೋಟಿಸ್ ಜಾರಿಮಾಡಲು ಸುಪ್ರೀಂಕೋರ್ಟ್ ಮೊದಲಿಗೆ ಹಿಂಜರಿಯಿತು. ಭಾರತ ಸರ್ಕಾರವೇ ವಿಷಯವನ್ನು ಐಸಿಜೆಯಲ್ಲಿ ಎತ್ತಬೇಕು ಎಂದು ಪೀಠ ಹೇಳಿತು.ಈ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ವಸ್ತು ಸ್ಥಿತಿಯನ್ನು ವಿವರಿಸಿದ ವಕೀಲರು, ಕ್ಯಾಪ್ಟನ್ ಸೌರಭ್ ಕಲಿಯಾ ಅವರ ಕುಟುಂಬವು ನ್ಯಾಯಕ್ಕಾಗಿ ಸರ್ವ ಯತ್ನವನ್ನೂ ಮಾಡಿದೆ. ಕುಟುಂಬವು ರಕ್ಷಣಾ ಸಚಿವಾಲಯಕ್ಕೆ ಮನವಿ ಮಾಡಿದಾಗ ವಿಷಯವನ್ನು ಪ್ರಧಾನ ಮಂತ್ರಿಗಳ ಸಚಿವಾಲಯಕ್ಕೆ ಒಪ್ಪಿಸಲಾಗಿದೆ ಎಂದು ತಿಳಿಸಲಾಯಿತು, ಪ್ರಧಾನಿ ಸಚಿವಾಲಯವು ವಿಷಯವನ್ಉ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಪರಿಶೀಲನೆಯಲ್ಲಿದೆ ಎಂದು ತಿಳಿಸಿದೆ ಎಂದು ವಿವರಿಸಿದರು.

ನೋಟಿಸ್ ಗೆ ಉತ್ತರ ನೀಡಲು ನ್ಯಾಯಾಲಯವು ಕೇಂದ್ರಕ್ಕೆ 10 ದಿನಗಳ ಕಾಲಾವಕಾಶ ನೀಡಿತು.4 ಜಾಟ್ ರೆಜಿಮೆಂಟಿನ ಕ್ಯಾಪ್ಟನ್ ಕಲಿಯಾ ಅವರು ಜಮ್ಮು ಕಾಶ್ಮೀರ ವಿಭಾಗದ ಕಾರ್ಗಿಲ್ ರಂಗದಲ್ಲಿ ನಿಯಂತ್ರಣ ರೇಖೆಯಲ್ಲಿ ಭಾರತೀಯ ಭೂಭಾಗಕ್ಕೆ ಪಾಕಿಸ್ತಾನಿ ಸೇನೆ ದೊಡ್ಡ ಪ್ರಮಾಣದಲ್ಲಿ ಅತಿಕ್ರಮಿಸಿಕೊಂಡು ಬಂದಿದೆ ಎಂಬುದನ್ನು ಗಮನಿಸಿ ವರದಿ ಮಾಡಿದ್ದ ಮೊತ್ತ ಮೊದಲನೆಯ ಭಾರತೀಯ ಸೇನಾ ಅಧಿಕಾರಿ.1999ರ ಮೇ 15ರಂದು ಕಲಿಯಾ ಮತ್ತು ಇತರ ಐವರು ಯೋಧರನ್ನು ಪಾಕಿಸ್ತಾನಿ ಸೇನೆ ಸೆರೆ ಹಿಡಿದು 22ಕ್ಕೂ ಹೆಚ್ಚು ದಿನಗಳ ಕಾಲ ತನ್ನ ವಶದಲ್ಲಿ ಇಟ್ಟುಕೊಂಡಿತ್ತು. 1999ರ ಜೂನ್ 9ರಂದು ಯೋಧರ ಪಾರ್ಥಿವ ಶರೀರಗಳನ್ನು ಭಾರತೀಯ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿತ್ತು.ಕ್ಯಾಪ್ಟನ್ ಮತ್ತು ಇತರ ಐವರು ಯೋಧರ ಶವಪರೀಕ್ಷೆ ವರದಿಯಿಂದ ಅವರಿಗೆ ಅತ್ಯುಗ್ರ ಚಿತ್ರಹಿಂಸೆ ನೀಡಲಾಗಿತ್ತು ಎಂಬುದು ಬೆಳಕಿಗೆ ಬಂದಿತ್ತು. ಅವರ ದೇಹದಲ್ಲಿ ಸಿಗರೇಟಿನಿಂದ ಸುಟ್ಟ ಗುರುತುಗಳು, ಬಿಸಿ ಕಬ್ಬಿಣ ತುರುಕಿದ್ದರಿಂದ ಕಿವಿ ತಮ್ಮಟೆ ಒಡೆದು ಹೋಗಿದ್ದುದು, ಅಂತಿಮವಾಗಿ ಗುಂಡಿಟ್ಟು ಕೊಲ್ಲುವ ಮುನ್ನ ಗುಪ್ತಾಂಗಗಳನ್ನು ಕತ್ತರಿಸಿದ್ದು ಶವಪರೀಕ್ಷೆ ವರದಿಯಿಂದ ಬಹಿರಂಗ ಗೊಂಡಿತ್ತು.1999ರ ಮೇ- ಜುಲೈ ಅವಧಿಯಲ್ಲಿ ಕಾರ್ಗಿಲ್ ಹಿಮ ಪ್ರದೇಶದಲ್ಲಿ ಭಾರತ- ಪಾಕಿಸ್ತಾನ ಮಧ್ಯೆ ಭೀಕರ ಸಮರ ನಡೆದಿತ್ತು. ಪಾಕಿಸ್ತಾನವು ಅತಿಕ್ರಮಿಸಿಕೊಂಡಿದ್ದ ಭಾರತದ ಎಲ್ಲಾ ಭೂಭಾಗವನ್ನು ಮರಳಿ ವಶಪಡಿಸಿಕೊಳ್ಳುವಲ್ಲಿ ಭಾರತ ಸಫಲವಾಗಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry