ಕಾರ್ಟೂನ್ ಕಾಂಡದ ಆಳ

7

ಕಾರ್ಟೂನ್ ಕಾಂಡದ ಆಳ

Published:
Updated:

ದೇಸಿ ಗರ್ಲ್, ದೇಸಿ ಫ್ಯಾಶನ್ ಮುಂತಾದ ದೇಸಿ ಟ್ರೆಂಡ್‌ನಲ್ಲೆಗ `ದೇಸಿ ಟೂನ್~ ಸಹ ಸೇರ್ಪಡೆಯಾಗಿದೆ. ಕಾರ್ಟೂನ್ ನೆಟ್‌ವರ್ಕ್ ಈ ಪರಿಕಲ್ಪನೆಯನ್ನು ಪರಿಚಯಿಸಿ ಆಗಲೇ ಎಂಟು ವರ್ಷಗಳು ಕಳೆದುಹೋಗಿವೆ. ಜನರ ಪ್ರತಿಕ್ರಿಯೆ ಬಗ್ಗೆ ಟೂನ್ ಪ್ರಯೋಗದ ಬಗ್ಗೆ ಇಂಟರ್‌ನ್ಯಾಶನಲ್ ಇಂಡಿಯಾ ಪ್ರೈ.ಲಿ.ಕಂಟೆಂಟ್ ನಿರ್ದೇಶಕ ಕೃಷ್ಣ ದೇಸಾಯಿ ಮಾತನಾಡಿದ್ದಾರೆ.ದೇಸಿ ಟೂನ್ಸ್ ಪರಿಕಲ್ಪನೆ ಹುಟ್ಟಿದ್ದು ಹೇಗೆ?


ಕಾರ್ಟೂನ್ ನೆಟ್‌ವರ್ಕ್ ಮೊದಲ ಮಕ್ಕಳ ವಾಹಿನಿಯಾಗಿದೆ. ಮಕ್ಕಳಿಗೆ ಮನರಂಜನೆಗಾಗಿ ಅಂತರರಾಷ್ಟ್ರೀಯ ಕಾರ್ಯಕ್ರಮಗಳನ್ನು ಮೊದಲು ಪ್ರದರ್ಶಿಸಲಾಗುತ್ತಿತ್ತು. ಆದರೆ ಭಾರತೀಯ ಮಕ್ಕಳನ್ನು ಸೆಳೆಯುವ ತಂತ್ರವಾಗಿ ದೇಸಿ ಟೂನ್ಸ್ ಪರಿಚಯಿಸಲಾಯಿತು.

 

2003ರಲ್ಲಿ `ಛೋಟಾ ಬೀರ್‌ಬಲ್~ ಹಾಗೂ `ತೆನಾಲಿರಾಮನ್~ ಕಾರ್ಯಕ್ರಮಗಳನ್ನು ಆರಂಭಿಸಿದೆವು. ಈ ಕಾರ್ಯಕ್ರಮಗಳಿಗೆ ದೊರೆತ ಅಭೂತಪೂರ್ವ ಪ್ರತಿಕ್ರಿಯೆಯೇ `ದೇಸಿ ಟೂನ್~ ಕಾರ್ಯಕ್ರಮ ಮುಂದುವರಿಯುವಂತಾಯಿತು.ಪೊಗೊ ವಾಹಿನಿಯಲ್ಲಿ ಬರುವ `ಛೋಟಾ ಭೀಮ್~ ಇದೀಗ ದೇಶದ ಅತ್ಯಂತ ಜನಪ್ರಿಯ ಕಾರ್ಯಕ್ರಮ ಹಾಗೂ ನೆಚ್ಚಿನ ಪಾತ್ರವಾಗಿದೆ.`ಛೋಟಾಭೀಮ್~ ಎಂದು ಹೆಸರಿಡಲು ಕಾರಣ?

ಇದಕ್ಕೂ ಮಹಾಭಾರತದ ಭೀಮನಿಗೂ ಯಾವುದೇ ಸಂಬಂಧವಿಲ್ಲ. ಹಳ್ಳಿಯ ಪುಟ್ಟ ಹುಡುಗನೊಬ್ಬನಿಗೆ ಇರುವ ವಿಶೇಷ ಶಕ್ತಿಗಳಿಂದ ಗ್ರಾಮದ ಜನರನ್ನು ರಕ್ಷಿಸುವ ಪಾತ್ರ ಇದು. ಭೀಮ ಎಂದರೆ `ಬಲಭೀಮ~ ಎಂಬ ಮಾತಂತೂ ಗೊತ್ತೇ ಇದೆ. ಅಜ್ಜ ಅಜ್ಜಿ ಹೇಳುವ ಬಲಭೀಮನ ಕತೆಗಳೊಂದಿಗೆ ಈ ಪಾತ್ರ ಹೆಣೆಯುವುದನ್ನು ಮಕ್ಕಳು ಕಲಿಯುತ್ತಾರೆ ಎಂದೇ ಈ ಹೆಸರನ್ನು ಆಯ್ಕೆ ಮಾಡಿದೆವು.ಇದಲ್ಲದೆ, ರೋಲ್ ನಂ. 21 ಕಾರ್ಯಕ್ರಮದ ಕ್ರಿಸ್, ಕುಂಭ್‌ಕರಣ್ ಈ ಎಲ್ಲ ಪಾತ್ರಗಳೂ ಮಕ್ಕಳನ್ನು ಸೆಳೆದಿಟ್ಟಿವೆ. ಭಾರತೀಯ ಹೆಸರುಗಳನ್ನು ಪಾತ್ರಗಳಿಗೆ ಇಡುವುದರಿಂದ ಎಲ್ಲ ಮಕ್ಕಳೂ ತಮ್ಮನ್ನು ಪಾತ್ರದೊಂದಿಗೆ ಗುರುತಿಸಿಕೊಳ್ಳುವುದು ಸರಳವಾಗುತ್ತದೆ ಎಂದು ಇಂಥ ಹೆಸರುಗಳನ್ನು ಆಯ್ಕೆ ಮಾಡಿಕೊಂಡೆವು.ಮನರಂಜನೆ ಮಾತ್ರ ಈ ಕಾರ್ಯಕ್ರಮಗಳ ಉದ್ದೇಶವೇ?

ಹೌದು. ಸಾಹಸ, ಹಾಸ್ಯ, ಆ್ಯಕ್ಷನ್ ಏನೇ ಇರಲಿ; ಮನರಂಜನೆಯೇ ಪ್ರಧಾನ ಅಂಶವಾಗಿರುವುದು ಸತ್ಯ. ಆದರೆ ಈ ಕಾರ್ಯಕ್ರಮಗಳ ಪ್ರಭಾವ ಅಥವಾ ಪರಿಣಾಮ ಪುಟ್ಟ ಮಕ್ಕಳ ಮನಸಿನ ಮೇಲೆ ಯಾವ ರೀತಿ ಆಗಬಹುದು ಎಂಬ ಪ್ರಜ್ಞೆಯೂ ಇದ್ದೇ ಇದೆ. ಪ್ರಜ್ಞಾಪೂರ್ವಕವಾಗಿಯೇ ಇಡೀ ಕಾರ್ಯಕ್ರಮದಲ್ಲಿ ಸುರಕ್ಷಿತ ಎನ್ನಿಸುವಂಥದ್ದನ್ನೇ ಪ್ರಸಾರ ಮಾಡುತ್ತೇವೆ.ಮನರಂಜನೆಯೊಂದಿಗೆ ಶಿಕ್ಷಣ ಅಡಕವಾಗಿದೆಯೇ?


ಸೂಕ್ಷ್ಮವಾಗಿ ನೈತಿಕ ಮೌಲ್ಯಗಳನ್ನು ಹೇಳಿಕೊಡುವ ಯತ್ನವನ್ನು ಮಾಡುತ್ತಲೇ ಇದ್ದೇವೆ. ಆದರೆ ಯಾವುದೇ ಕಾರ್ಯಕ್ರಮಗಳಲ್ಲೂ ಉಪದೇಶಗಳನ್ನು ಬಲವಂತವಾಗಿ ಹೇರುವ ಪ್ರಯತ್ನದಿಂದ ದೂರವಾಗಿದ್ದೇವೆ. ಪ್ರತಿಯೊಂದು ಕಾರ್ಯಕ್ರಮದಲ್ಲೂ ದುಷ್ಟ ಶಕ್ತಿಯ ವಿರುದ್ಧ ಒಳಿತಿನ ಗೆಲುವು, ಅನ್ಯರಿಗೆ ಸಹಾಯ ಮಾಡುವುದು, ಅಗತ್ಯವಿದ್ದವರ ಸಹಾಯಕ್ಕೆ ಧಾವಿಸುವುದು ಮುಂತಾದವು ಮಕ್ಕಳ ಮನಸಿನಾಳಕ್ಕೆ ಇಳಿಯುವಂತೆ ಮಾಡುತ್ತಿದ್ದೇವೆ. ಹಾಸ್ಯ, ಮನರಂಜನೆಯೊಂದಿಗೆ ಮೌಲ್ಯಗಳೂ ಮಿಳಿತವಾಗಿವೆ.ಕೆಲವೊಂದು ಕಾರ್ಯಕ್ರಮಗಳಲ್ಲಿ ಹಿಂಸೆ ಅಥವಾ ಪ್ರತಿಕಾರಗಳೇ ವಿಜೃಂಭಿಸುತ್ತವೆ ಎಂಬ ದೂರು ಇದೆ. `ಟಾಮ್ ಅಂಡ್ ಜೆರ‌್ರಿ~ಯೂ ಇದಕ್ಕೆ ಹೊರತಾಗಿಲ್ಲ. ಇಂಥ ದೂರುಗಳಿಗೆ ಸಮರ್ಥನೆ ಇದೆಯೇ?

ಹಿಂಸೆ ಅಥವಾ ಪ್ರತೀಕಾರ ಇವೆರಡೂ ಸೂಕ್ತ ಶಬ್ದಗಳಾಗುವುದಿಲ್ಲ. `ಟಾಮ್ ಅಂಡ್ ಜೆರ‌್ರಿ~ ಅಂತೂ ಅಪ್ಪಟ ಮನರಂಜನೆಯ ಕಾರ್ಯಕ್ರಮ. ಅದನ್ನು ಹಿರಿಯರೂ ನೋಡಿ ಆನಂದಿಸುತ್ತಾರೆ. ನಮ್ಮಲ್ಲಿ `ಕಾರ್ಟೂನ್ ನೆಟ್‌ವರ್ಕ್ ನ್ಯೂ ಜನರೇಶನ್ಸ್~ ಎಂಬ ಸಂಶೋಧನಾ ತಂಡವಿದೆ.ಇದು ವರ್ಷದಿಂದ ವರ್ಷಕ್ಕೆ ಬದಲಾಗುತ್ತಿರುತ್ತದೆ. ಜೊತೆಗೆ ಪಾಲಕರು ಹಾಗೂ ಮಕ್ಕಳ ಸಮೀಕ್ಷೆ ನಡೆಸುತ್ತದೆ. ಮಕ್ಕಳ ಅಗತ್ಯಗಳೇನು, ಪಾಲಕರ ಟೀಕೆಗಳಾವುವು, ಅವರ ಕಾಳಜಿ ಏನು ಮೊದಲಾದವುಗಳ ಬಗ್ಗೆ ಅಧ್ಯಯನ ಮಾಡುತ್ತದೆ. ಕಾರ್ಯಕ್ರಮಗಳಲ್ಲಿ ಅಂಥ ಯಾವುದೇ ಅಂಶಗಳಿರದಂತೆ ಗಮನವಹಿಸುತ್ತೇವೆ.ಪಾಲಕರು ನಿರಾತಂಕವಾಗಿ ತಮ್ಮ ಮಕ್ಕಳನ್ನು ಪೊಗೊ ಹಾಗೂ ಕಾರ್ಟೂನ್ ನೆಟ್‌ವರ್ಕ್ ವಾಹಿನಿಗಳನ್ನು ನೋಡುವಂತಾಗಲಿ ಎಂಬ ಉದ್ದೇಶದಿಂದ ಈ ಅಧ್ಯಯನ ತಂಡ ಕೆಲಸ ಮಾಡುತ್ತದೆ.ನಿಮ್ಮ ವಾಹಿನಿಯ ಜನಪ್ರಿಯ ಕಾರ್ಯಕ್ರಮಗಳಾವುವು?

ಮಕ್ಕಳ ಕಾರ್ಯಕ್ರಮಗಳನ್ನು ಹಿರಿಯರೂ ಆನಂದಿಸುವ ವಿಶ್ವದ ಮೊದಲ 3 ಕಾರ್ಯಕ್ರಮಗಳಲ್ಲಿ `ಟಾಮ್ ಅಂಡ್ ಜೆರ‌್ರಿ~, `ಆಗ್ಗಿ ಅಂಡ್ ಕಾಕ್ರೋಚಸ್~ ಸಹ ಸೇರಿವೆ. `ರೋಲ್ ನಂ. 21~, `ಕುಂಭ್‌ಕರಣ್~, `ಛೋಟಾ ಭಿಮ್~ ಇತರ ಕಾರ್ಯಕ್ರಮಗಳಾಗಿವೆ.ಸಾಹಸ ಹಾಗೂ ಮನರಂಜನೆಯೊಂದಿಗೆ ಇನ್ನಾವ ವಿಷಯದತ್ತ ಗಮನ ಹರಿಸುತ್ತೀರಿ?

ಸಮಕಾಲೀನ ತಂತ್ರಜ್ಞಾನ ಹಾಗೂ ಪ್ರಚಲಿತ ವಿದ್ಯಮಾನಗಳನ್ನು ಗಮನದಲ್ಲಿರಿಸಿಕೊಂಡು ಕಾರ್ಯಕ್ರಮದ ಕತೆಗಳನ್ನು ಹೆಣೆಯಲಾಗುತ್ತದೆ. ಅನ್ಯಗ್ರಹದ ನಿವಾಸಿಗಳು, ಹಾರುವ ತಟ್ಟೆ, ರಾಡಾರ್ ಮುಂತಾದವುಗಳ `ಬೆನ್10~ ಸಹ ಜನಪ್ರಿಯ ಕಾರ್ಯಕ್ರಮ ಹಾಗೂ ಪಾತ್ರವಾಗಿದೆ.ಸಾಧ್ಯವಿದ್ದಷ್ಟೂ ಮಕ್ಕಳಿಗೆ ವಿಜ್ಞಾನ ಹಾಗೂ ತಂತ್ರಜ್ಞಾನ, ಬಾಹ್ಯಾಕಾಶಗಳಂಥ ವಿಷಯಗಳನ್ನು ದಾಟಿಸುವ ಯತ್ನ ನಡೆಸುತ್ತಿದ್ದೇವೆ.ಮಕ್ಕಳ ಜ್ಞಾನ ಕ್ಷಿತಿಜವನ್ನು ವಿಸ್ತರಿಸುತ್ತಲೇ ಮನರಂಜನೆ ನೀಡುವ ನಿಟ್ಟಿನಲ್ಲಿ ನಮ್ಮ ವಾಹಿನಿಗಳು ಶ್ರಮಿಸುತ್ತಿವೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry