ಕಾರ್ತೀಕ ಕಡೆ ಸೋಮವಾರ ವಿಶೇಷ ಶಿವ ಪೂಜೆ

7

ಕಾರ್ತೀಕ ಕಡೆ ಸೋಮವಾರ ವಿಶೇಷ ಶಿವ ಪೂಜೆ

Published:
Updated:

ಚಿಂತಾಮಣಿ: ಕಾರ್ತೀಕ ಕಡೆ ಸೋಮವಾರದ ಪ್ರಯುಕ್ತ ನಗರ ಹಾಗೂ ತಾಲ್ಲೂಕಿನ ವಿವಿಧ ದೇವಾಲಯಗಳಲ್ಲಿ ವಿಶೇಷ ಅಲಂಕಾರ, ಪೂಜೆ ಹಾಗೂ ಲಕ್ಷದೀಪೋತ್ಸವ ಕಾರ್ಯಕ್ರಮ ಶ್ರದ್ಧಾ, ಭಕ್ತಿಯಿಂದ ನಡೆದವು.ಶಿವ ದೇವಾಲಯಗಳಲ್ಲಿ ಭಕ್ತರು ಸಾಲಾಗಿ ನಿಂತು ದೇವರ ದರ್ಶನ ಮಾಡುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಎಲ್ಲೆಲ್ಲೂ ಈಶ್ವರನ ಆರಾಧನೆ, ಭಜನೆ, ಪೂಜೆ, ದೀಪೋತ್ಸವಗಳಲ್ಲಿ ಜನರು ಮಗ್ನರಾಗಿದ್ದರು.

ಕೈವಾರ: ನಾಡಿನ ಪ್ರಸಿದ್ಧ ಯಾತ್ರಾಕ್ಷೇತ್ರ ಕೈವಾರದ ಭೀಮಲಿಂಗೇಶ್ವರಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜಾ ಕೈಂಕರ್ಯ ಹಮ್ಮಿಕೊಳ್ಳಲಾಗಿತ್ತು. ದೂರದ ಊರುಗಳಿಂದ ಆಗಮಿಸಿದ ಭಕ್ತರು ಬೆಳಗಿನಿಂದಲೇ ಪೂಜೆಯಲ್ಲಿ ಭಾಗವಹಿಸಿ, ಹಣ್ಣು ಕಾಯಿ ಮಾಡಿಸುವ ದೃಶ್ಯ ಸಾಮಾನ್ಯವಾಗಿತ್ತು. ಕಾರ್ತೀಕ ಮಾಸದಲ್ಲಿ ಶಿವನ ಆರಾಧನೆಗೆ ಪ್ರಾಮುಖ್ಯತೆ ಹಿನ್ನೆಲೆಯಲ್ಲಿ ಈಶ್ವರ ಲಿಂಗಕ್ಕೆ ಮಹನ್ಯಾಸಪೂರ್ವಕ ರುದ್ರಾಭಿಷೇಕ ಅರ್ಪಿಸಲಾಯಿತು. ಪಾರ್ವತಿ ಅಮ್ಮನವರಿಗೆ ವಿಶೇಷ ಅಭಿಷೇಕ ಲಲಿತಾ ಸಹಸ್ರನಾಮಾರ್ಚನೆ ಮಾಡಲಾಯಿತು. ದೇವಾಲಯವನ್ನು ವಿಶೇಷ ಹೂಗಳಿಂದ ಅಲಂಕರಿಸಲಾಗಿತ್ತು. ಭೀಮಲಿಂಗೇಶ್ವರ ಲಿಂಗಕ್ಕೆ ಮಾಡಿದ್ದ ಅಲಂಕಾರದಿಂದ ಭಕ್ತರು ಭಾವಪರವಶರಾದರು. ದ್ವಾಪರಯುಗದಲ್ಲಿ ಬಕಾಸುರನನ್ನು ಸಂಹರಿಸಿದ ಭೀಮನು ಭೀಮಲಿಂಗೇಶ್ವರ ಲಿಂಗವನ್ನು ಸ್ಥಾಪಿಸಿದ ಎಂಬ ಐತಿಹ್ಯವಿದೆ. ಹಾಗೆಯೇ ಪಂಚ ಪಾಂಡವರು ಸ್ಥಾಪಿಸಿರುವ ಲಿಂಗಗಳನ್ನು ದೇವಾಲಯದ ಆವರಣದಲ್ಲಿ ಕಾಣಬಹುದು. ಇದರಿಂದಲೇ ಕೈವಾರಕ್ಕೆ ಪಂಚಲಿಂಗ ಕ್ಷೇತ್ರವೆಂದು ಕರೆಯುತ್ತಾರೆ.

ನಾಗನಾಥೇಶ್ವರ ದೇವಾಲಯ:  ನಗರದಲ್ಲಿರುವ ನಾಗನಾಥೇಶ್ವರಸ್ವಾಮಿ ದೇವಾಲಯದಲ್ಲಿ ಲಕ್ಷ ದೀಪೋತ್ಸವ ಕಾರ್ಯಕ್ರಮ ವಿಜೃಂಭಣೆಯಿಂದ ನಡೆಯಿತು. ಭಕ್ತರು ದೀಪಗಳನ್ನು ಹಚ್ಚು ಮೂಲಕ ಭಕ್ತಿಪರವಶತೆಗೆ ಒಳಗಾಗಿದ್ದರು.ಮುರುಗಮಲೆ: ಮುಕ್ತೀಶ್ವರ ದೇವಾಲಯದಲ್ಲೂ ವಿಶೇಷ ಪೂಜೆ ಅಲಂಕಾರ, ದೀಪೋತ್ಸವ ನಡೆದವು. ಬೆಳಿಗ್ಗೆಯಿಂದಲೇ ನೂರಾರು ಜನರು ಸಾಲು ಸಾಲಾಗಿ ಮುಕ್ತೀಶ್ವರನ ದರ್ಶನ ಪಡೆದರು.

ಕೈಲಾಸಗಿರಿ: ನಗರ ಹೊರವಲಯದಲ್ಲಿರುವ ಕೈಲಾಸಗಿರಿಯ ಗಂಗಾಧರೇಶ್ವರಸ್ವಾಮಿ ಗುಹಾಂತರ ದೇವಾಲಯದಲ್ಲೂ ವಿಶೇಷ ಪೂಜೆ, ಅಲಂಕಾರ ಮತ್ತಿತರ ಧಾರ್ಮಿಕ ಕಾರ್ಯಕ್ರಮಗಳು ನಡೆದವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry