ಶುಕ್ರವಾರ, ಮೇ 14, 2021
27 °C

ಕಾರ್ನಾಕ್ ಮಂದಿರಗಳ ಸರಪಳಿ

-ಡಿ.ಜಿ. ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

ಕಾರ್ನಾಕ್ ಮಂದಿರಗಳ ಸರಪಳಿ

ಈಜಿಪ್ಟ್‌ನ ಕಾರ್ನಾಕ್ ವಾಸ್ತುಶಿಲ್ಪ ಶಾಸ್ತ್ರದ ಅಚ್ಚರಿಗಳಲ್ಲೊಂದು. ಪ್ರಪಂಚದ ಅತ್ಯಂತ ವಿಶಾಲ ಹಾಗೂ ದೊಡ್ಡ ದೇವಾಲಯಗಳ ಸಮುಚ್ಚಯ ಎನ್ನುವುದು ಅದರ ಅಗ್ಗಳಿಕೆ.ಫೆರೊ ದೊರೆಗಳ ವೈಭವ ಹಾಗೂ ಆ ಕಾಲದ ಅತ್ಯುತ್ತಮ ಶಿಲ್ಪಿಗಳ ಸೃಜನಶೀಲತೆಯ ಉತ್ತುಂಗದ ಅನಾವರಣವನ್ನು ಕಾರ್ನಾಕ್ ದೇಗುಲ ಸಮುಚ್ಚಯದಲ್ಲಿ ಕಾಣಬಹುದು. `ಕಾರ್ನಾಕ್‌ನ ಮೂಲಕ, ಪ್ರಾಚೀನ ಈಜಿಪ್ಟಿನ ಜನರು ವಾಸ್ತುಶಿಲ್ಪಕಲೆಯಲ್ಲಿ ಸಾಧಿಸಿದ ಸಿದ್ಧಿ ಆಧುನಿಕ ಜನಾಂಗ ಸೇರಿದಂತೆ ಯಾವ ಕಾಲದ ಜನರಿಗೂ ಸಾಧ್ಯವಾಗಿಲ್ಲ' ಎನ್ನುವುದು ಈಜಿಪ್ಟಾಲಜಿ ಶಾಸ್ತ್ರದ ಸ್ಥಾಪಕ ಶಾಂಪೊಲಿಯಾನ್ ಅವರ ಉದ್ಘಾರ.ನೈಲ್ ನದಿಯ ಪೂರ್ವ ದಂಡೆಯಲ್ಲಿ ಲಕ್ಸಾರ್ ಎನ್ನುವ ಪ್ರದೇಶವಿದೆ. ಕಾರ್ನಾಕ್ ಮಂದಿರ ಸಮೂಹ ಇರುವುದು ಅಲ್ಲಿಯೇ. ಗೀಜಾದ ಬೃಹತ್ ಪಿರಮಿಡ್ಡುಗಳಂತೆಯೇ ಇಲ್ಲಿನ ಮಂದಿರಗಳ ಕಲ್ಲಿನ ಕಂಬಗಳು ಕೂಡ ಬೃಹದಾಕಾರ ಮತ್ತು ಭವ್ಯತೆಗೆ ಪ್ರಸಿದ್ಧವಾಗಿವೆ. ಇಲ್ಲಿ ಈಜಿಪ್ಟಿಯನ್ನರ ದೇವರುಗಳಾದ ಅಮುನ್, ಮಖ್, ಕೊಂನ್ಸು ಹಾಗೂ ಯುದ್ಧದೇವತೆ ಮೊಂಟು ಸೇರಿದಂತೆ ಹಲವಾರು ದೇವರುಗಳ ದೇಗುಲಗಳಿವೆ.ಅಂದಹಾಗೆ, 60 ಎಕರೆ ಪ್ರದೇಶದಲ್ಲಿ ಹರಡಿಕೊಂಡಿರುವ ಈ ಮಂದಿರಗಳ ಸರಪಳಿಯನ್ನು 1500 ವರ್ಷಗಳ ಕಾಲ ನಿರಂತರವಾಗಿ ಕಟ್ಟುತ್ತಾ ಹೋಗಲಾಗಿದೆ. ಸುಮಾರು ಐವತ್ತು ಮಂದಿ ಫೆರೊ ದೊರೆಗಳು ಇವುಗಳ ನಿರ್ಮಾಣದಲ್ಲಿ ಕೈಜೋಡಿಸಿದ್ದರು. ತಲೆಮಾರಿನಿಂದ ತಲೆಮಾರಿಗೆ ಈ ನಿರ್ಮಾಣಗಳು ಬೆಳೆಯುತ್ತಾ ಹೋದವು.`ಕಾರ್ನಾಕ್' ಎನ್ನುವುದು ಅರಬರು ಕರೆದ ಹೆಸರು. ಈಜಿಪ್ಟಿಯನ್ನರು ಇದನ್ನು `ಇಪೆಟ್ ಇಸೂಟ್' ಎನ್ನುತ್ತಿದ್ದರು. `ಶ್ರೇಷ್ಠವಾದ ಪ್ರದೇಶ' ಎನ್ನುವುದು ಇದರರ್ಥ. ಕ್ರಿ.ಪೂ. 1550ರಿಂದ 1069ವರೆಗೂ ಈಜಿಪ್ಟಿನ ರಾಜಧಾನಿಯಾಗಿ ಕಂಗೊಳಿಸಿದ್ದ ಥೀಬ್ಸ್ (ಈಗಿನ ಲಕ್ಸಾರ್) ನಗರದ ಹೃದಯಭಾಗದಂತೆ ಇದ್ದ ಕಾರ್ನಾಕ್- ಧಾರ್ಮಿಕ, ರಾಜಕೀಯ, ಆಡಳಿತ, ಸಂಪತ್ತಿನ ಸಂಗ್ರಹಣೆಯ ಕೇಂದ್ರಸ್ಥಾನವಾಗಿತ್ತು.ಕ್ರಿ.ಪೂ.1900ರಲ್ಲಿ ನಿರ್ಮಾಣವಾದ ಆಮುನ್ ದೇಗುಲ ಕಾರ್ನಾಕ್ ಸಮುಚ್ಛಯದಲ್ಲಿ ಪ್ರಸಿದ್ಧವಾದುದು. ಈ ದೇಗುಲ ಒಂದು ಸಾವಿರ ಅಡಿ ಉದ್ದ ಮತ್ತು ಮುನ್ನೂರು ಅಡಿ ಅಗಲದ ವಿಸ್ತೀರ್ಣ ಹೊಂದಿದೆ. ಈ ದೇವಾಲಯ ಒಳಗೊಂಡ ಮುಖ್ಯ ಕಟ್ಟಡಗಳ ಸಮುಚ್ಛಯದಲ್ಲಿ ಹಿಂದೆ 86 ಸಾವಿರ ಮೂರ್ತಿಗಳು ಇದ್ದವಂತೆ.ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹೋಗಲು ಹೆಬ್ಬಾಗಿಲುಗಳಿವೆ. ಮುಮ್ಮಡಿ ಥಟ್‌ಮೋಸ್ ನಿರ್ಮಿಸಿದ, ನಾಜೂಕಿನ ಕೆತ್ತನೆಗಳನ್ನೂ ಚಿತ್ತಾರಗಳನ್ನೂ ಒಳಗೊಂಡಿರುವ ವಂಶಲಾಂಛನ ಸ್ತಂಭಗಳು ಬೆರಗುಹುಟ್ಟಿಸುವಷ್ಟು ಸೊಗಸಾಗಿವೆ. ಪ್ಯಾಪಿರಸ್ ಮರಗಳಿಗೆ ಪ್ರತಿಸ್ಪರ್ಧಿ ಎನ್ನಿಸುವ ಲಾವಣ್ಯಪೂರ್ಣ ಕಂಬಗಳು ಪ್ಟಾ ದೇವತೆಯ ಮಂದಿರದಲ್ಲಿವೆ.ಸೊಗಸು ಮತ್ತು ಭವ್ಯತೆಯಲ್ಲಿ ಹೈಪೋಸ್ಟೈಲ್ ಹಜಾರಕ್ಕೆ ಅದುವೇ ಸಾಟಿ. ಇದು 134 ದೈತ್ಯಸ್ತಂಭಗಳ ಶಿಲಾ ಅರಣ್ಯ. ಸೂರ್ಯಕಿರಣಗಳು ಒಳಬರಲು ಕಷ್ಟಪಡುವಂತೆ ಒಂದಕ್ಕೊಂದು ಬಹು ಹತ್ತಿರದಲ್ಲಿರುವ, 80ರಿಂದ 85 ಅಡಿಗಳೆತ್ತರದ ಕಂಬಗಳು. ಕಲ್ಲಿನ ತಾಳೆಮರಗಳಂತೆ ಹರಡಿ ವಿಕಸನಗೊಂಡಂತಿರುವ ಈ ಕಂಬಗಳ ಬೋದಿಗೆಯಿಂದ ಬೋದಿಗೆಗೆ ದಪ್ಪ ಕಲ್ಲಿನ ಚಪ್ಪಡಿಗಳಿರುವ ಮೇಲ್ಛಾವಣಿಯಿದೆ.ಈ ಕಂಬಗಳ ಮೇಲೆ ಕಮಲ, ಗಿಡಬಳ್ಳಿಗಳು ಹಾಗೂ ಹೈರೊಗ್ಲಿಫ್‌ನ ಕೆತ್ತನೆಯಿದೆ. 16 ಸಾಲುಗಳಲ್ಲಿರುವ 134 ಕಂಬಗಳಲ್ಲಿ, 122 ಕಂಬಗಳು 15 ಮೀಟರ್ ಎತ್ತರವಿದ್ದರೆ, 12 ಕಂಬಗಳು 21 ಮೀಟರ್ ಎತ್ತರ ಇದ್ದು, ಮೂರು ಮೀಟರ್ ಸುತ್ತಳತೆ ಹೊಂದಿವೆ. ಸುಮಾರು ಎಪ್ಪತ್ತು ಟನ್ ಭಾರದ ಕಲ್ಲಿನ ಚಪ್ಪಡಿಗಳನ್ನು ಅಷ್ಟೆತ್ತರದ ಕಂಬಗಳ ಮೇಲೆ ಇರಿಸಿರುವ ಸಾಹಸವನ್ನು ಹೇಗೆ ಕಲ್ಪಿಸಿಕೊಳ್ಳುವುದು?ಹೈಪೋಸ್ಟೈಲ್ ಹಜಾರಕ್ಕೆ ಹತ್ತಿರದಲ್ಲೇ ನಮ್ಮಲ್ಲಿಯ ಗರುಡಗಂಬದಂತೆ ಏಕಶಿಲೆಯ ಚೂಪುತುದಿಯ ಎರಡು ಶಿಲಾಕಂಬಗಳು ಬೆಳಕಿನ ಕಂಬಗಳಂತೆ ಪ್ರತಿಮೆಗಳು ಮತ್ತು ದೇವಾಲಯಗಳ ನಡುವೆ ನಿಂತಿವೆ. ಇವನ್ನು ಆಬ್ಲಿಸ್ಕ್ ಎನ್ನುತ್ತಾರೆ. ಈಜಿಪ್ಟಿನ ಏಕೈಕ ಮಹಿಳಾ ಫೆರೋ ಆಗಿದ್ದ ಹಾಟ್‌ಷೇಪ್‌ಸುಟ್ ರಾಣಿ ನಿರ್ಮಿಸಿರುವ ಈ ಚೂಪು ಕಂಬಗಳ ಮೇಲೆ ಆಕೆಯ ಸಂದೇಶವನ್ನು ಕೆತ್ತಲಾಗಿದೆ. ಆ ಬರಹ ಹೀಗಿದೆ:`ದಕ್ಷಿಣದ ಕಲ್ಲುಗಣಿಗಳಿಂದ ತಂದ ಗಟ್ಟಿ ಕಲ್ಲಿನಿಂದ ಇವುಗಳನ್ನು ನಿರ್ಮಿಸಲಾಗಿದೆ. ಇವುಗಳ ಮೇಲ್ಭಾಗವನ್ನು ವಿದೇಶಗಳಲ್ಲಿ ಹುಡುಕಿ ಸಿಗುವ ಅತ್ಯುತ್ತಮ ಚಿನ್ನದಿಂದ ರೂಪಿಸಲಾಗಿದೆ. ದೂರದ ನದಿಯ ಮೇಲಿಂದಲೇ ಕಾಣುವ ಇವುಗಳ ವೈಭವ ಎರಡು ನಾಡುಗಳನ್ನೂ ತುಂಬುತ್ತದೆ. ಇವುಗಳ ನಡುವೆ ಸೂರ್ಯಬಿಂಬ ಬಂದಾಗ ನಿಜಕ್ಕೂ ಇವು ಆಗಸದ ದಿಗಂತದಿಂದ ಮೇಲೆ ಎದ್ದಂತೆ ಕಾಣುತ್ತವೆ. ಅದೆಷ್ಟೋ ವರ್ಷಗಳ ಅನಂತರ ಇವುಗಳನ್ನು ನೋಡುವ ನೀವು ಸುವರ್ಣದ ಪರ್ವತವನ್ನೇ ಆ ಜನರು ಕಡೆದಿದ್ದಾರೆಂದು ವರ್ಣಿಸುವಿರಿ. ಇದರ ಚಿನ್ನದ ಲೇಪನಕ್ಕೆಂದು ಮೂಟೆಗಳಲ್ಲಿದ್ದ ಧಾನ್ಯದಂತೆ ಬಂಗಾರವನ್ನು ಕೊಳಗಗಳಲ್ಲಿ ಅಳೆದುಕೊಟ್ಟಿದ್ದೇನೆ. ಏಕೆಂದರೆ ಭೂಮಿ ಮೇಲಿನ ದಿವ್ಯದಿಗಂತವೇ ಕಾರ್ನಾಕ್ ಎಂಬುದು ನನಗೆ ತಿಳಿದಿದೆ'.ತಿಳಿಗೊಳದ ಬಳಿಯಿರುವ, ಕಲ್ಲಿನಲ್ಲಿ ಕೆತ್ತಲಾಗಿರುವ ಬೃಹತ್ ಜೀರುಂಡೆ (ಸ್ಕಾರಬ್) ಇದೆ. ಇದನ್ನು ಮೂರು ಬಾರಿ ಪ್ರದಕ್ಷಿಣೆ ಹಾಕಿದರೆ ಇಷ್ಟಾರ್ಥ ನೆರವೇರುತ್ತದೆ ಎನ್ನುವುದು ನಂಬಿಕೆ.ಉಬ್ಬರದ ಸಮಯದಲ್ಲಿ ನೈಲ್ ನದಿ ಕಾರ್ನಾಕ್ ಮೇಲೆ ತನ್ನ ಪ್ರಭಾವ ತೋರಿಸಿದೆ. ದಾಳಿಕೋರರಿಂದಲೂ ಕಾರ್ನಾಕ್ ಶಿಥಿಲಗೊಂಡಿದೆ. ಈ ದೇಗುಲ ಸಮೂಹ ಯೂರೋಪಿಯನ್ನರ ಕಣ್ಣಿಗೆ ಬಿದ್ದುದು 16 ನೇ ಶತಮಾನದಲ್ಲಿ. ನೆಪೋಲಿಯನ್ ಜೊತೆ ಬಂದ ವಿಜ್ಞಾನಿಗಳು, ಕಲಾವಿದರು, ವಾಸ್ತುಶಾಸ್ತ್ರಜ್ಞರು ಕಾರ್ನಾಕ್ ಖ್ಯಾತಿಯನ್ನು ಪ್ರಚುರಪಡಿಸಿದರು.

 

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.