ಕಾರ್ಪೊರೇಟ್ ಕಪಿಮುಷ್ಟಿಗೆ ಸಾವಯವ ಮಾರುಕಟ್ಟೆ?

7

ಕಾರ್ಪೊರೇಟ್ ಕಪಿಮುಷ್ಟಿಗೆ ಸಾವಯವ ಮಾರುಕಟ್ಟೆ?

Published:
Updated:

ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆದ ಅಂತರರಾಷ್ಟ್ರೀಯ ಸಾವಯವ ಮೇಳ `ಬಯೋಫ್ಯಾಕ್' ನೋಡಿದವರಿಗೆ ಹಲವು ಪ್ರಶ್ನೆ ಕಾಡಿರಬಹುದು. ನಿಜಕ್ಕೂ ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾವಯವ ಉತ್ಪನ್ನಗಳಿಗೆ ಮಾರುಕಟ್ಟೆ ಇದೆಯಾ?

ಉತ್ಪನ್ನಗಳಿಗೆ ಇಷ್ಟೊಂದು ಅಧಿಕ ದರ ನಿಗದಿ ಮಾಡಬಹುದೇ? ಎಲ್ಲ ಬಿಟ್ಟು ಕಾರ್ಪೊರೇಟ್ ಕಂಪೆನಿಗಳು ಸಾವಯವ ಮಾರುಕಟ್ಟೆಯತ್ತ ಧಾವಿಸುತ್ತಿರುವುದೇಕೆ? ಕಂಪೆನಿಗಳೇ ಅಗ್ರಸ್ಥಾನದಲ್ಲಿದ್ದು, ರೈತ ಗುಂಪುಗಳು ಅಲ್ಲೆಲ್ಲೋ ಮೂಲೆಯಲ್ಲಿ ಇರುವುದೇಕೆ? ವಾಸ್ತವವಾಗಿ ಇಂಥ ಮೇಳದಿಂದ ಲಾಭವಾಗುತ್ತಿರುವುದು ಯಾರಿಗೆ?

ಸಾವಯವ ಕೃಷಿ ಎಂಬುದು ಇತ್ತೀಚಿನ ದಿನಗಳಲ್ಲಿ ಹೆಚ್ಚುಹೆಚ್ಚಾಗಿ ಕೇಳಿ ಬರುತ್ತಿದೆ. ಹಸಿರು ಕ್ರಾಂತಿಯ ಅಬ್ಬರದಲ್ಲಿ ನೆಲಕ್ಕೆ ವಿಷ ಸುರಿದು, ಸುರಿದು ಫಸಲು ಹೆಚ್ಚಿಸಲು ಪ್ರೇರೇಪಿಸಿ ರೈತರನ್ನು ರಾಸಾಯನಿಕದ ಜಾಲಕ್ಕೆ ದೂಡಿದವರೇ ಈಗ ಸಾವಯವದ ಬಗ್ಗೆ ಮಾತಾಡುತ್ತಿದ್ದಾರೆ.`...ಅರೆ! ಇವರೇನಾ ಈವರೆಗೆ ರಸವಿಷ ಮಂತ್ರ ಜಪಿಸುತ್ತಿದ್ದವರು' ಎಂದು ಬೆರಗಾಗುವಷ್ಟರಲ್ಲಿಯೇ ಧುತ್ತೆಂದು ಕಾರ್ಪೊರೇಟ್ ಕಂಪೆನಿಗಳು ಇವರ ಸಾಲಿಗೆ ನಿಂತುಬಿಟ್ಟಿವೆ. ಅಲ್ಲಿಗೆ ಸಾವಯವ ಎಂಬುದು ಲಾಭಕೋರರ ದಂಧೆಯಾಗಿ ಮಾರ್ಪಟ್ಟಿದೆ.

ಹಾಗೆ ನೋಡಿದರೆ, ಸಾವಯವ ಕೃಷಿಯನ್ನು ಜನಪ್ರಿಯಗೊಳಿಸಿದ್ದು ರೈತರು ಹಾಗೂ ಸ್ವಯಂಸೇವಾ ಸಂಸ್ಥೆಗಳು. ಕಳೆದು ಹೋಗಿದ್ದ ರೈತರ ಜ್ಞಾನವನ್ನು ಹುಡುಕಿ, ವೈವಿಧ್ಯಮಯ ತಳಿಗಳನ್ನು ಪತ್ತೆಹಚ್ಚಿ ಮತ್ತೆ ಕೃಷಿ ಲೋಕಕ್ಕೆ ಕೊಟ್ಟಿದ್ದು ಕಡಿಮೆ ಸಾಧನೆಯಲ್ಲ.

ಅಂದಿನ ಕೃಷಿ ಸಚಿವ ಎಚ್.ಕೆ.ಪಾಟೀಲ ಆಸಕ್ತಿಯಿಂದಾಗಿ ಕರ್ನಾಟಕದಲ್ಲಿ `ಸಾವಯವ ಕೃಷಿ ನೀತಿ' ಜಾರಿಗೆ ಬಂದು, ಇತರ ರಾಜ್ಯಗಳೂ ಈ ದಾರಿ ಅನುಸರಿಸಲು ಪ್ರೇರೇಪಣೆ ನೀಡಿದಂತಾಯಿತು. ಮಧ್ಯಪ್ರದೇಶ, ಜಾರ್ಖಂಡ, ಸಿಕ್ಕಿಂ, ಬಿಹಾರ ಇತರ ರಾಜ್ಯಗಳೂ ಈಗ ಈ ಸಾಲಿಗೆ ಸೇರಿವೆ.

ಸರ್ಕಾರಗಳ ಆಸಕ್ತಿ ಅಭಿನಂದನಾರ್ಹವಂತೂ ಹೌದು.ಆದರೆ, ಸಾವಯವ ಅಥವಾ ವಿಷಮುಕ್ತ ಉತ್ಪನ್ನಗಳ ಮಾರುಕಟ್ಟೆ ಬಗ್ಗೆ ಚಿಂತನೆ ನಡೆಸದೇ ಇರುವುದು ದೊಡ್ಡ ವೈಫಲ್ಯ ಎಂಬಂತಾಗಿದೆ. ರೈತ ಬೆಳೆದ ಪದಾರ್ಥಕ್ಕೆ ಮಾರುಕಟ್ಟೆ ಕಲ್ಪಿಸಬೇಕು; ಆಗಲೇ ಯೋಜನೆಯೊಂದು ಪರಿಪೂರ್ಣವಾದಂತೆ. ಮಾರುಕಟ್ಟೆ ಎಂಬುದೊಂದು ದೀರ್ಘ ಪ್ರಕ್ರಿಯೆ. ವಹಿವಾಟು ನೀಲನಕ್ಷೆ, ಬ್ರ್ಯಾಂಡ್‌ನೇಮ್, ಬ್ಯಾಂಕ್ ಸಂಪರ್ಕ ಇತ್ಯಾದಿ ಮೊದಲೇ ಮಾಡಿರಬೇಕು.

ಇಷ್ಟೇ ಅಲ್ಲ; ರೈತನೊಬ್ಬ ಉತ್ಪನ್ನ ಪೂರೈಸಿದಾಗ ಆತನಿಗೆ ತಕ್ಷಣ ಹಣ ಕೊಡಲು ಒಂದಷ್ಟು ಮೂಲಬಂಡವಾಳ ಇರಲೇಬೇಕು. ಮಾರುಕಟ್ಟೆಯ ಈ ಮೂಲಮಾಹಿತಿ ಇಲ್ಲದೇ ಹೋದ ಪರಿಣಾಮ, ರಾಜ್ಯ ಸರ್ಕಾರ ತಾಲ್ಲೂಕಿಗೆ ಒಂದರಂತೆ ತೆರೆಯಬೇಕಿದ್ದ ಸಾವಯವ ಉತ್ಪನ್ನ ಮಳಿಗೆಗಳ ಪೈಕಿ ಎಷ್ಟೋ ಹುಟ್ಟುವ ಮುಂಚೆಯೇ ಕಣ್ಮುಚ್ಚಿದವು. ಒಂದೆರಡು ಕಡೆಗಳಲ್ಲಷ್ಟೇ ಅವು ಉಸಿರಾಡುತ್ತಿವೆ.

ನಮ್ಮ ರಾಜ್ಯ ಸರ್ಕಾರದ ಇನ್ನೊಂದು ದ್ವಂದ್ವ ನೀತಿ ಎಂದರೆ, ಜನರಿಗೆ ಉಪಯೋಗವಾಗುವ ವಿಧಾನಕ್ಕೆ ಪ್ರೋತ್ಸಾಹ ನೀಡದೇ ಎಲ್ಲೆಲ್ಲೋ ಹಣದ ಸುರಿಮಳೆಗೈಯುವುದು! ಗ್ರಾಹಕ- ಉತ್ಪಾದಕರನ್ನು ನೇರವಾಗಿ ಬೆಸೆಯುವ ಸಾವಯವ ಸಂತೆಗೆ ನಯಾ ಪೈಸೆ ಅನುದಾನ ಕೊಡುವುದಿಲ್ಲ.

ಇನ್ನು ಮಹತ್ವಾಕಾಂಕ್ಷೆಯ `ಸಾವಯವ ಗ್ರಾಮ' ಯೋಜನೆಯಲ್ಲಿ ಇದಕ್ಕಾಗಿ ಮೀಸಲಿಟ್ಟಿರುವುದು ಕವಡೆ ಕಾಸು. ಆದರೆ `ಬಯೋಫ್ಯಾಕ್'ಗೆ ಕೊಟ್ಟಿದ್ದು 60 ಲಕ್ಷ ರೂಪಾಯಿಗಳು! ಪ್ರತಿ ಜಿಲ್ಲೆಯಿಂದ ಬಸ್ ತುಂಬ ರೈತರನ್ನು `ಬಯೋಫ್ಯಾಕ್'ಗೆ ಕರೆತರಲಾಯಿತು. ಯಾವ ರೈತರಿಗೆ ಎಷ್ಟರ ಮಟ್ಟಿಗೆ ರಫ್ತಿನ ಮುಂಗಡ ಆರ್ಡರ್ ಸಿಕ್ಕಿತೋ, ಗೊತ್ತಿಲ್ಲ!

ರಾಷ್ಟ್ರೀಯ ಅಥವಾ ಅಂತರರಾಷ್ಟ್ರೀಯ ಸಾವಯವ ಮೇಳಗಳಲ್ಲಿ ಕಾರ್ಪೊರೇಟ್ ಕಂಪೆನಿಗಳೇ ಮುಖ್ಯಸ್ಥಾನ (ಪ್ರಮುಖ ಮಳಿಗೆ) ಗಿಟ್ಟಿಸಿ ಬಿಡುತ್ತವೆ. ರೈತಗುಂಪುಗಳಿಗೆ ಮೂಲೆಯಲ್ಲಿ ಜಾಗ ಸಿಕ್ಕರೆ ಪುಣ್ಯ. ಕಂಪೆನಿಗಳ ಮಳಿಗೆಗಳಲ್ಲಿ ವ್ಯಾಪಕ ಬಗೆಯ ಉತ್ಪನ್ನಗಳು `ಪ್ರಮಾಣೀಕೃತ' (ಸರ್ಟಿಫೈಡ್ ಪ್ರಾಡಕ್ಸ್) ಎಂಬ ಮೊಹರಿನೊಂದಿಗೆ ರಾಶಿರಾಶಿಯಾಗಿ ಬಂದು ಬಿದ್ದಿರುತ್ತವೆ.

ಇವುಗಳ ದರ ಕೇಳಿದರೆ ಸಾಮಾನ್ಯ ಗ್ರಾಹಕ ಬೆಚ್ಚಿ ಬೀಳುತ್ತಾನೆ. ಹಾಗಿದ್ದರೆ ಇಷ್ಟೊಂದು ಬೃಹತ್ ಪ್ರಮಾಣದ ಉತ್ಪನ್ನ ಬಂದುದಾದರೂ ಎಲ್ಲಿಂದ? ಇಷ್ಟು ಬೆಲೆ ನಿಗದಿ ಮಾಡಿದಾಗ ರೈತನಿಗೆ `ತುಸು ಹೆಚ್ಚು' ಆದಾಯ ಸಿಕ್ಕಿದೆಯೇ? ತನಿಖೆಗೆ ಯೋಗ್ಯವಾದ ಸಂಗತಿ.

ಇದನ್ನೆಲ್ಲ ತಡೆಯಲು ಗ್ರಾಹಕ- ರೈತರ ಜತೆಗಿನ ಬಾಂಧವ್ಯ ಬೆಸೆಯುವ ಮಾರುಕಟ್ಟೆ ರೂಪುಗೊಳ್ಳಬೇಕಿದೆ. ಚೆನ್ನೈನಲ್ಲಿರುವ `ರಿಸ್ಟೋರ್' ಇಂಥದೊಂದು ವಿನೂತನ ಯತ್ನ. ಹತ್ತಾರು ಗ್ರಾಹಕರು ಸೇರಿ ರಚಿಸಿದ ಇದರ `ಕನ್‌ಸ್ಯೂಮರ್ ಕೌನ್ಸಿಲ್', ರೈತರಿಂದ ನೇರವಾಗಿ ಉತ್ಪನ್ನ ಖರೀದಿಸುತ್ತದೆ; ಅದನ್ನು ಮಳಿಗೆಯಲ್ಲಿ ವಿತರಿಸುತ್ತದೆ. ಇದರ ಎಲ್ಲ ನಿರ್ವಹಣೆಯನ್ನು ಗ್ರಾಹಕರೇ ಹಂಚಿಕೊಂಡು ಮಾಡುತ್ತಾರೆ.ಪ್ಯಾಕಿಂಗ್ ಇನ್ನಿತರ ಅಲಂಕಾರ ಇಲ್ಲವೇ ಇಲ್ಲ. ರೈತರ ಮೇಲಿನ ನಂಬಿಕೆಯೇ ವಹಿವಾಟಿಗೆ ಆಧಾರ. ಇಲ್ಲಿ ರೈತರಿಗೆ ಒಳ್ಳೆಯ ದರ; ಗ್ರಾಹಕರಿಗೂ ಕಡಿಮೆ ಬೆಲೆಯಲ್ಲಿ ಉತ್ಪನ್ನ ಲಭ್ಯ.

ಅಂತರರಾಷ್ಟ್ರೀಯ ಸಾವಯವ ಮೇಳ ಅಂದರೆ ನಮ್ಮ ಹಳ್ಳಿಗಳಲ್ಲಿ ನಡೆಯುವ ಸಂತೆಯ ಅತ್ಯಾಧುನಿಕ ರೂಪ. ಅಲ್ಲಿ ನಂಬಿಕೆಯೇ ಮುಖ್ಯವಾದರೆ, ಇಲ್ಲಿ ಪ್ಯಾಕಿಂಗ್ ಹಾಗೂ ಲೇಬಲಿಂಗ್‌ಗೆ ಆದ್ಯತೆ.

ಬಣ್ಣಬಣ್ಣದ ಅತ್ಯಾಕರ್ಷಕ ಪ್ಯಾಕ್‌ಗಳಲ್ಲಿ `ಸಾವಯವ' ಉತ್ಪನ್ನಗಳು ಟೇಬಲ್ ಮೇಲೆ ಮುದ್ದಾಗಿ ಕುಳಿತಿರುತ್ತವೆ.  ನೆಲದ ಫಲವತ್ತತೆ ನಾಶವಾಗಬಾರದು; ವಿಷಯುಕ್ತ ಆಹಾರವನ್ನು ಇನ್ನೊಬ್ಬರಿಗೆ ಕೊಡಬಾರದು ಎಂಬ ಉದಾತ್ತ ಉದ್ದೇಶದೊಂದಿಗೆ ಕಷ್ಟಪಟ್ಟು ಆ ಧಾನ್ಯ ಬೆಳೆದ ರೈತ, ಇಂಥ ಹೈಟೆಕ್ ಪ್ರದರ್ಶನಕ್ಕೆ ಬಂದಿರುವುದೇ ಇಲ್ಲ ಎಂಬುದು ವಿಪರ್ಯಾಸ.

`ರಾಸಾಯನಿಕ ಇಲ್ಲದೇ ಕೃಷಿ ಅಸಾಧ್ಯ' ಎಂಬುದನ್ನು ರೈತರ ಮಿದುಳಿಗೆ ತುಂಬುತ್ತಿದ್ದ ಸಮಯದಲ್ಲಿ, ಅದರ ಅನಾಹುತ ತಡೆಯಲು ಸ್ವಯಂಸೇವಾ ಸಂಸ್ಥೆಗಳು ಹಾಗೂ ಕೆಲವು ರೈತಪರ ಸಂಘಟನೆಗಳು ಸಾವಯವ ಕೃಷಿ ಜನಪ್ರಿಯಗೊಳಿಸಲು ಶ್ರಮಿಸಿದವು.ಆದರೆ ಈಗ ಕೃಷಿ ವಿಧಾನಕ್ಕಿಂತ ಅದರ ಉತ್ಪನ್ನ ಮಾರಾಟ (ಹಾಗೂ ರಫ್ತು) ಕ್ಷೇತ್ರದಲ್ಲೇ ಲಾಭ ಇದೆ ಎಂಬುದು ಗೊತ್ತಾಗುತ್ತಿದ್ದಂತೆ ಕಾರ್ಪೊರೇಟ್ ವಲಯ ಇತ್ತ ತನ್ನ ಕಬಂಧ ಬಾಹು ಚಾಚತೊಡಗಿದೆ.

 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry