ಬುಧವಾರ, ನವೆಂಬರ್ 13, 2019
21 °C
ಸುಪ್ರೀಂ ಕೋರ್ಟ್‌ಗೆ ಐಐಟಿಆರ್ ವರದಿ

ಕಾರ್ಬೈಡ್ ಕಾರ್ಖಾನೆ ಸುತ್ತ ಅಂತರ್ಜಲ ಕಲುಷಿತ

Published:
Updated:

ನವದೆಹಲಿ(ಪಿಟಿಐ): ಇಪ್ಪತ್ತೆಂಟು ವರ್ಷಗಳ ಹಿಂದೆ ವಿಷ ಅನಿಲವನ್ನು ಪಸರಿಸಿ 15 ಸಾವಿರ ಜನರ ಸಾವಿಗೆ ಕಾರಣವಾಗಿದ್ದ ಭೋಪಾಲ್‌ನ ಯೂನಿಯನ್ ಕಾರ್ಬೈಡ್ ಕಾರ್ಖಾನೆಯ ವ್ಯಾಪ್ತಿ ಪ್ರದೇಶದಲ್ಲಿರುವ ಅಂತರ್ಜಲ ಕಲುಷಿತಗೊಂಡಿದೆ ಎಂದು ಭಾರತೀಯ ನಂಜುಶಾಸ್ತ್ರ ಸಂಶೋಧನಾ ಸಂಸ್ಥೆ (ಐಐಟಿಆರ್) ಸಂಸ್ಥೆ ಸುಪ್ರೀಂ ಕೋರ್ಟ್‌ಗೆ ತಿಳಿಸಿದೆ.ಕಾರ್ಖಾನೆಯ ಸುತ್ತಲಿನ ನೀರಿನ ಮಾದರಿಗಳನ್ನು ಪರೀಕ್ಷೆಗೊಳಪಡಿಸಿರುವ ಐಐಟಿಆರ್, ಈ ಪ್ರದೇಶದ ಅಂತರ್ಜಲದಲ್ಲಿ ಸತು, ನೈಟ್ರೇಟ್ ಮತ್ತು ನಿಕ್ಕಲ್ ಪ್ರಮಾಣ ನಿಗದಿತ ಮಟ್ಟಕ್ಕಿಂತ ಹೆಚ್ಚಾಗಿದೆ ಎಂದು ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ವರದಿಯಲ್ಲಿ ವಿವರಿಸಿದೆ. ಪರೀಕ್ಷೆಗೊಳಪಡಿಸಿರುವ 30 ನೀರಿನ ಮಾದರಿಗಳಲ್ಲಿ 9ರಲ್ಲಿ ನೈಟ್ರೇಟ್ ಅಂಶ ಹೆಚ್ಚಾಗಿದ್ದರೆ, 24 ಮಾದರಿಗಳಲ್ಲಿ ಸತುವಿನ ಅಂಶ ಹೆಚ್ಚಿದೆ. ಇವೆಲ್ಲ ಭಾರತೀಯ ಮಾನಕ ಸಂಸ್ಥೆ (ಬಿಐಎಸ್) ನಿಗದಿಪಡಿಸಿರುವ ಮಟ್ಟಕ್ಕಿಂತ ಹೆಚ್ಚಾಗಿದೆ ಎಂದು ಮುಖ್ಯ ನ್ಯಾಯಮೂರ್ತಿ ಅವರ ನೇತೃತ್ವದ ಪೀಠಕ್ಕೆ ಈ ವರದಿಯನ್ನು ಸಲ್ಲಿಸಲಾಗಿದೆ.ಅಂತರ್ಜಲ ಕಲುಷಿತಗೊಂಡಿರುವುದರಿಂದ ಈ ಭಾಗದ ಜನತೆ ಭೀತಿಪಡುವ ಅಗತ್ಯವಿಲ್ಲ. ಏಕೆಂದರೆ ಇಲ್ಲಿನ ಜನರಿಗೆ ಕುಡಿಯುವ ನೀರಿನ್ನು ಕೊಳವೆಗಳ ಮೂಲಕ ಪೂರೈಸಲಾಗುತ್ತಿದೆ ಎಂದು ವರದಿಯಲ್ಲಿ ವಿವರಿಸಲಾಗಿದೆ.`ಭೌತ-ರಾಸಾಯನಿಕ, ಭಾರಲೋಹಗಳು ಹಾಗೂ ಸಾವಯವ ವಸ್ತುಗಳು' ಎಂಬ ಮೂರು ಮಾನದಂಡಗಳನ್ನು ಆಧರಿಸಿ ಸಂಗ್ರಹಿಸಿದ ನೀರಿನ ಮಾದರಿಗಳನ್ನು ಐಐಟಿಆರ್ ಸಂಸ್ಥೆ ಪರೀಕ್ಷೆಗೆ ಒಳಪಡಿಸಿದೆ. ಆದರೆ ಈ ಸಮಯದಲ್ಲಿ ಸಾವಯವ ಅಂಶಗಳನ್ನಿಟ್ಟುಕೊಂಡು ಪರೀಕ್ಷೆ ನಡೆಸಲು ಸಾಧ್ಯವಾಗಿಲ್ಲ. ಏಕೆಂದರೆ ಅದು ಸಾಕಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂದು ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

ಇನ್ನು ಮೂರು ತಿಂಗಳೊಳಗೆ ನಮ್ಮ ಸಂಸ್ಥೆ ಈ ಪರೀಕ್ಷೆಗಳನ್ನು ಪೂರ್ಣಗೊಳಿಸಿ, ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸುತ್ತದೆ ಎಂದು ಸಂಸ್ಥೆಯ ಅಧಿಕಾರಿಗಳು ನ್ಯಾಯಾಲಯಕ್ಕೆ ಭರವಸೆ ನೀಡಿದ್ದಾರೆ.

ಪ್ರತಿಕ್ರಿಯಿಸಿ (+)