ಕಾರ್ಮಿಕರಿಗೆ ಉಚಿತ ಆರೋಗ್ಯ ಶಿಬಿರ

7

ಕಾರ್ಮಿಕರಿಗೆ ಉಚಿತ ಆರೋಗ್ಯ ಶಿಬಿರ

Published:
Updated:

ಮಹದೇವಪುರ: ಕಾರ್ಮಿಕರು ಮತ್ತು ಅವರ ಕುಟುಂಬದ ಆರೋಗ್ಯ ಕಾಪಾಡುವ ಉದ್ದೇಶದಿಂದ ರಾಜ್ಯದಲ್ಲಿ ಪ್ರತಿ ವರ್ಷ 75ಕ್ಕೂ ಹೆಚ್ಚು ಉಚಿತ ಆರೋಗ್ಯ ತಪಾಸಣಾ ಶಿಬಿರಗಳನ್ನು ಸಂಘಟಿಸಲಾಗುತ್ತಿದೆ ಎಂದು ಕಾರ್ಮಿಕ ಸಚಿವ ಬಿ.ಎನ್.ಬಚ್ಚೇಗೌಡ ಹೇಳಿದರು.ಮಹದೇವಪುರ ಸಮೀಪದ ದೊಡ್ಡನೆಕ್ಕುಂದಿ ಕೈಗಾರಿಕಾ ಪ್ರದೇಶದಲ್ಲಿನ ಇ.ಎಸ್.ಐ ಚಿಕಿತ್ಸಾಲಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ಉಚಿತ ಕುಟುಂಬ ವೈದ್ಯಕೀಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು. `ಪ್ರತಿ ಕಾರ್ಖಾನೆಯಲ್ಲಿ ವರ್ಷಕ್ಕೊಮ್ಮೆ ತಪ್ಪದೇ ಸುರಕ್ಷತಾ ಸಪ್ತಾಹವನ್ನು ಏರ್ಪಡಿಸಬೇಕು. ಆ ಮೂಲಕ ಕಾರ್ಮಿಕರಲ್ಲಿ ಸುರಕ್ಷತೆಯ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಮಾಡಬೇಕು~ ಎಂದು ಅವರು ಕೈಗಾರಿಕೋದ್ಯಮಿಗಳಿಗೆ ಕಿವಿಮಾತು ಹೇಳಿದರು.`ರಾಜ್ಯದ ಕೆಲವು ವಿಮಾ ಚಿಕಿತ್ಸಾಲಯಗಳಲ್ಲಿ ವೈದ್ಯರ ಕೊರತೆ ಇರುವುದು ಗಮನಕ್ಕೆ ಬಂದಿದೆ. ಅಂತಹ ಚಿಕಿತ್ಸಾಲಯಗಳಿಗೆ ನುರಿತ ಮತ್ತು ತಜ್ಞ ವೈದ್ಯರನ್ನು ತಾತ್ಕಾಲಿಕ ಸೇವೆಗೆಂದು ನೇಮಕ ಮಾಡಿಕೊಳ್ಳಲಾಗುತ್ತಿದೆ.ಅಂತಹ ವೈದ್ಯರಿಗೆ 45ರಿಂದ 50 ಸಾವಿರ ರೂಪಾಯಿಗಳ ಹೆಚ್ಚಿನ ಸಂಬಳವನ್ನು ನೀಡಲಾಗುತ್ತಿದೆ~ ಎಂದು ಅವರು ತಿಳಿಸಿದರು.ವೈಟ್‌ಫೀಲ್ಡ್ ಏರಿಯಾ ಕಾರ್ಮಸ್ ಅಂಡ್ ಇಂಡಸ್ಟ್ರೀಸ್ ಅಸೋಸಿಯೇಶನ್ (ವಾಸಿಯಾ) ಮತ್ತು ಇ.ಎಸ್.ಐ ಚಿಕಿತ್ಸಾಲಯದ ಸಹಯೋಗದಲ್ಲಿ ಏರ್ಪಡಿಸಿದ್ದ ಈ ಶಿಬಿರದಲ್ಲಿ ಹಲ್ಲು, ಚರ್ಮ, ಕಿವಿ, ಮೂಗು, ಎದೆ, ಮೂಳೆ, ಕಣ್ಣುಗಳ ಪರೀಕ್ಷೆ, ರಕ್ತ ಪರೀಕ್ಷೆ, ರಕ್ತದ ಒತ್ತಡ ಹಾಗೂ ಇ.ಸಿ.ಜಿ. ಪರೀಕ್ಷೆಗಳನ್ನು ಸಹ ಸ್ಥಳದಲ್ಲಿಯೇ ಮಾಡಿ ಸೂಕ್ತ ಸಲಹೆ ಸೂಚನೆ ನೀಡಲಾಯಿತು.ಅಗತ್ಯವಾದ ಔಷಧಿಯನ್ನು ವಿತರಿಸಲಾಯಿತು. ಅಲ್ಲದೆ, ಹೆಚ್ಚಿನ ಚಿಕಿತ್ಸೆಗಾಗಿ ನಗರದ ಇ.ಎಸ್.ಐ ಆಸ್ಪತ್ರೆಗೆ ರೋಗಿಗಳನ್ನು ಕಳುಹಿಸುವ ಕಾರ್ಯವೂ ನಡೆಯಿತು.ಇ.ಎಸ್.ಐ ವೈದ್ಯಕೀಯ ಸೇವೆಗಳ ನಿರ್ದೇಶಕಿ ಡಾ. ರಹಿಮುನಿಯಾ,      ಇ.ಎಸ್.ಐ ವೈದ್ಯಕೀಯ ಆಯುಕ್ತರಾದ ಡಾ.ಬಿ.ಆರ್.ಕವಿ ಶೆಟ್ಟಿ, ಮುಖಂಡರಾದ ಜಯಚಂದ್ರರೆಡ್ಡಿ, ಕೆ.ಎಸ್.ಎನ್.ಭಟ್, ಪಾಂಡುರಾವ್ ಮಂಜುನಾಥ ಶೆಟ್ಟಿ ಉಪಸ್ಥಿತರಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry