ಕಾರ್ಮಿಕರು ಕಾಯಂಗೆ ಅರ್ಹ

7
ಸಹಾಯಕ ಆಯುಕ್ತರ ವರದಿ- ರಾಜಶ್ರೀ ಸಿಮೆಂಟ್ ಗುತ್ತಿಗೆ ಕಾರ್ಮಿಕರ ಪ್ರಕರಣ

ಕಾರ್ಮಿಕರು ಕಾಯಂಗೆ ಅರ್ಹ

Published:
Updated:

ಗುಲ್ಬರ್ಗ: ಸೇಡಂನ ಮಳಖೇಡದಲ್ಲಿರುವ ರಾಜಶ್ರೀ ಸಿಮೆಂಟ್ ಕಾರ್ಖಾನೆಯಲ್ಲಿ ಕೆಲಸ ಮಾಡುವ ಕಾರ್ಮಿಕರ ಬೇಡಿಕೆ ಹಾಗೂ ಆಡಳಿತ ಮಂಡಳಿ ಧೋರಣೆ ಕುರಿತು ತನಿಖೆ ನಡೆಸಿರುವ ಸೇಡಂ ಸಹಾಯಕ ಆಯುಕ್ತರು, ಗುತ್ತಿಗೆ ಕಾರ್ಮಿಕರನ್ನು ಕಾಯಂಗೊಳಿಸಬೇಕು ಮತ್ತು ಅವರಿಗೆ ಸಿಮೆಂಟ್ ವೇತನ ಮಂಡಳಿ ಶಿಫಾರಸಿನಂತೆ ವೇತನ ನೀಡಬೇಕು ಎಂದು ವರದಿ ನೀಡಿದ್ದಾರೆ.ಶ್ರಮಜೀವಿಗಳ ವೇದಿಕೆ ಅಧ್ಯಕ್ಷ ಚಂದ್ರಶೇಖರ ಎಸ್. ಹಿರೇಮಠ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತ ವಿವರ ನೀಡಿ, “ಸಹಾಯಕ ಆಯುಕ್ತ ರವಿ ಅವರು ಪ್ರಾದೇಶಿಕ ಆಯುಕ್ತರಿಗೆ ಸಲ್ಲಿಸಿದ ವರದಿಯಲ್ಲಿ ರಾಜಶ್ರೀ ಕಂಪೆನಿಯು ಉಲ್ಲಂಘಿಸಿದ ಕಾನೂನುಗಳ ಬಗ್ಗೆಯೂ ನಮೂದಿಸಿದ್ದಾರೆ. ಇದಕ್ಕಾಗಿ ಅವರನ್ನು ಅಭಿನಂದಿಸುತ್ತೇವೆ” ಎಂದು ಹೇಳಿದರು.ಕಾರ್ಖಾನೆಯಲ್ಲಿ ಸುಮಾರು ಒಂದು ಸಾವಿರ ನೌಕರರು 8ರಿಂದ 18 ವರ್ಷಗಳಿಂದಲೂ ಕೆಲಸ ಮಾಡುತ್ತಿದ್ದಾರೆ. ಆದರೆ ಇವರಿಗೆ ಕೇಂದ್ರ ಸರ್ಕಾರ ಹಾಗೂ ಸಿಮೆಂಟ್ ವೇತನ ಮಂಡಳಿ ನಿಗದಿಪಡಿಸಿದ ವೇತನವನ್ನು ಕೊಡದೇ ಗುತ್ತಿಗೆ ಆಧಾರದಲ್ಲಿ ದುಡಿಸಿಕೊಳ್ಳಲಾಗುತ್ತಿದೆ. ಗುತ್ತಿಗೆ ಕೆಲಸ ನಿಷೇಧ ಕಾಯ್ದೆ ವ್ಯಾಪ್ತಿಗೆ ಈ ಕಾರ್ಮಿಕರು ಬರುವುದರಿಂದ ಇವರನ್ನು ಕಾಯಂಗೊಳಿಸಬೇಕು ಎಂದು ಆಗ್ರಹಿಸಿ ಕಾರ್ಮಿಕ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಇಲಾಖೆಯು ಗುಲ್ಬರ್ಗದ ಉಪ ಕಾರ್ಮಿಕ ಆಯುಕ್ತರಿಗೆ ವರದಿ ನೀಡಲು ಕೇಳಿತ್ತು. ಅದರಂತೆ ಉಪ ಆಯುಕ್ತರು ಆಡಳಿತ ಮಂಡಳಿ ಮತ್ತು ಕಾರ್ಮಿಕರ ಜತೆ ಸಭೆ ನಡೆಸಿದರೂ ಯಾವುದೇ ಕ್ರಮ ಕೈಗೊಳ್ಳದೇ ನುಣುಚಿಕೊಂಡರು. ಹೀಗಾಗಿ ಅಂದಿನ ಪ್ರಾದೇಶಿಕ ಆಯುಕ್ತೆ ಕೆ.ರತ್ನಪ್ರಭಾ ಅವರಿಗೆ ಮನವಿ ಸಲ್ಲಿಸಿದಾಗ, ಅವರು ಸಮಗ್ರ ತನಿಖೆ ನಡೆಸಿ ವರದಿ ನೀಡಲು ಸೇಡಂ ಸಹಾಯಕ ಆಯುಕ್ತರಿಗೆ ಸೂಚಿಸಿದರು. ಈಗ ಅವರು ವರದಿ ನೀಡಿದ್ದು, ಕಾರ್ಖಾನೆಯಲ್ಲಿ ನಡೆಯುತ್ತಿರುವ ತಾರತಮ್ಯ ಬಯಲಿಗೆ ಎಳೆದಿದ್ದಾರೆ ಎಂದು ಹಿರೇಮಠ ವಿವರಿಸಿದರು.ವರದಿಯಲ್ಲಿ ಏನಿದೆ?

2863.73 ಎಕರೆ ಸ್ವಾಧೀನಪಡಿಸಿಕೊಂಡ ಕಂಪೆನಿಯು ಈ ಪೈಕಿ 1555 ಎಕರೆಯನ್ನು ಮಾತ್ರ ಕೆಐಡಿಬಿಯಿಂದ ಪಡೆದಿದೆ. ಉಳಿದಿದ್ದು ರೈತರಿಂದ ಪಡೆದಿರುವುದು ಕಂದಾಯ ಕಾಯ್ದೆ ಉಲ್ಲಂಘನೆಯಾಗಿದೆ. 558 ಗುತ್ತಿಗೆ ಕಾರ್ಮಿಕರು ಇದ್ದಾರೆ ಎಂದು ಕಂಪೆನಿ ಹೇಳಿದ್ದರೂ 984ಕ್ಕೂ ಹೆಚ್ಚು ಕಾರ್ಮಿಕರು ಕೆಲಸ ಮಾಡುತ್ತಿದ್ದಾರೆ. ಹೊರ ರಾಜ್ಯಗಳಿಂದ ಬಂದು ಕೆಲಸ ಮಾಡುತ್ತಿರುವವರು ಕಾರ್ಮಿಕ ಇಲಾಖೆಯಲ್ಲಿ ನೋಂದಣಿ ಮಾಡಿಸಿಲ್ಲ ಎಂದು ವರದಿಯಲ್ಲಿ ತಿಳಿಸಲಾಗಿದೆ.ಆಡಳಿತ ಮಂಡಳಿ ಹಾಗೂ ಕಾರ್ಮಿಕರ ಸಭೆ ಕರೆದ ಕಾರ್ಮಿಕ ಉಪ ಆಯುಕ್ತರು ತಮ್ಮ ಕಾರ್ಯಾಲಯದಿಂದ ಯಾವುದೇ ಆದೇಶ ಹೊರಡಿಸಲು ಅಧಿಕಾರವಿಲ್ಲ ಎಂಬುದಾಗಿ ಹೇಳಿ ಕಣ್ಣುಮುಚ್ಚಿ ಕೂತಿದ್ದಾರೆ. ಆಡಳಿತ ಮಂಡಳಿ ಮತ್ತು ಟ್ರೇಡ್ ಯೂನಿಯನ್ ಜತೆಗೂಡಿ ಬೈಲಾ ಉಲ್ಲಂಘಿಸಲಾಗಿದೆ. ಕಾರ್ಮಿಕರು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿದರೆ ಅವರನ್ನು ವರ್ಗಾವಣೆ ಮಾಡುವುದು, ವೇತನ ಕಡಿತ, ಕ್ರಿಮಿನಲ್ ಮೊಕದ್ದಮೆ ದಾಖಲಿಸುವ ಕ್ರಮ ಜರುಗಿಸಲಾಗುತ್ತಿದೆ ಎಂದು ಸಹಾಯಕ ಆಯುಕ್ತರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.

ಒತ್ತಾಯ

“10ರಿಂದ 17 ವರ್ಷಗಳಿಂದಲೂ ಕಂಪೆನಿಯಲ್ಲಿ ಕೆಲವು ಗುತ್ತಿಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದು, ಅವರು ಕಾಯಂಗೊಂಡು ಸಮಾನ ಕೆಲಸಕ್ಕೆ ಸಮಾನ ವೇತನ ಪಡೆಯಲು ಅರ್ಹರಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ. ಬೇಡಿಕೆ ಈಡೇರಿಸುವಂತೆ ಆಡಳಿತ ಮಂಡಳಿಗೆ 15 ದಿನಗಳ ಗಡುವು ಕೊಡುತ್ತಿದ್ದೇವೆ. ಒಂದು ವೇಳೆ ಆಡಳಿತ ಮಂಡಳಿ ಇದಕ್ಕೆ ಸ್ಪಂದಿಸದೇ ಇದ್ದರೆ ಮತ್ತೆ ಹೋರಾಟ ಶುರು ಮಾಡಲಿದ್ದೇವೆ” ಎಂದು ಚಂದ್ರಶೇಖರ ಹಿರೇಮಠ ಎಚ್ಚರಿಸಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry