ಸೋಮವಾರ, ಏಪ್ರಿಲ್ 12, 2021
32 °C

ಕಾರ್ಮಿಕರ ಅಳಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಕಾರ್ಮಿಕರ ಅಳಲು

* ನನ್ನ ಹೆಸರು ಕಮಲಮ್ಮ. ನಮ್ಮದು ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕು. ಈಗ ಇರುವುದು ಬೆಂಗಳೂರಿನ ಬ್ಯಾಟರಾಯನಪುರ. ನನ್ನ ವಯಸ್ಸು 38. ಕೆಲಸಕ್ಕೆ ಸೇರಿ 12 ವರ್ಷಗಳಾಯಿತು. ನನಗೆ 2 ಮಕ್ಕಳು. ಬೆಳಿಗ್ಗೆ 5.30ಕ್ಕೆ ಎದ್ದು, ಅಡುಗೆ ಮಾಡಿ, ಪಾತ್ರೆ ತೊಳೆದು, ನಮ್ಮ ಮನೆಯವರಿಗೆ ಮತ್ತು ಮಗನಿಗೆ ಬಾಕ್ಸ್ ರೆಡಿಮಾಡಿ ನಾನು ರೆಡಿ ಆಗಿ 8.30ಕ್ಕೆ ನಡೆದುಕೊಂಡು ಹೊರಟರೆ  9ಗಂಟೆಗೆ ಕಂಪೆನಿ ತಲುಪುತ್ತೇನೆ.ಸಂಜೆ 5.35 ಕ್ಕೆ ಬಿಡುತ್ತಾರೆ, `ಒ.ಟಿ' ಇದ್ದರೆ, 7  ಗಂಟೆಗೆ ಬಿಡುತ್ತಾರೆ, ಅಲ್ಲಿಂದ ಬಂದು ರಾತ್ರಿ ಊಟಕ್ಕೆ ರೆಡಿ ಮಾಡಿ, ಪಾತ್ರೆ ತೊಳೆದು, ಬಟ್ಟೆ ತೊಳೆದು ನೀರು ಹಿಡಿದು ಮಲಗಲು 11 ಗಂಟೆ ಆಗುತ್ತದೆ.

ಕಂಪೆನಿಗೆ 5 ನಿಮಿಷ ತಡವಾದರೂ `ಲೇಟ್ ಕಮಿಂಗ್' ಅಂತ ಹೇಳಿ ಪಂಚಿಂಗ್ ಕಾರ್ಡ್ ತೆಗೆದುಕೊಂಡು, ಸಂಜೆ ಮನೆಗೆ ಕಳುಹಿಸಲು ಲೇಟ್ ಮಾಡುತ್ತಾರೆ. 9 ಗಂಟೆಗೆ ಕೆಲಸಕ್ಕೆ ಹೋಗಿ ಕುಳಿತರೆ ಮಧ್ಯಾಹ್ನವೇ ಏಳುವುದು. ಊಟಕ್ಕೆಂದು ಅರ್ಧ ಗಂಟೆ ಇದ್ದರೂ 10 ನಿಮಿಷದಲ್ಲಿ ಮಾಡಿ ಬಂದು ಕೆಲಸ ಮಾಡುತ್ತೇವೆ.

ಕೆಲವು ಸಲ ಊಟಕ್ಕೂ ಹೋಗಲು ಆಗುವುದಿಲ್ಲ,  ಪ್ರೊಡಕ್ಷನ್ ಕಡಿಮೆ ಆದರೆ ಸೂಪರ್‌ವೈಸರ್ ಬಂದು ಮಿಷಿನ್ ಆ್ ಮಾಡಿ ಫ್ಲೋರ್ ಇನ್‌ಚಾರ್ಜ್ ಹತ್ತಿರ ಕರೆದುಕೊಂಡು ಹೋಗಿ ನಿಲ್ಲಿಸುತ್ತಾರೆ. `ಬೇರೆ ಕಡೆ ಕೆಲಸ ಮಾಡಲು ಯೋಗ್ಯತೆ ಇಲ್ಲ. ಅದಕ್ಕೆ ಇ್ಲ್ಲಲಿಯೇ ಬಂದು ಸಾಯುತ್ತವೆ' ಎಂದೆಲ್ಲ ಅವರು ಕೆಟ್ಟದಾಗಿ ಬಯ್ದು ಸಂಜೆ 6ರಿಂದ 6.30 ರವರೆಗೂ ಹೆಚ್ಚುವರಿ ಕೆಲಸ ಮಾಡಿಸುತ್ತಾರೆ.'

* ನನ್ನ ಹೆಸರು ಸಾಕಮ್ಮ, ನಮ್ಮದು ಸ್ವತಃ ಕನಕಪುರ, ನನಗೆ 42 ವರ್ಷ ವಯಸ್ಸು, ನಾನು ಕೆಲಸಕ್ಕೆ ಹೋಗಲು ಶುರು ಮಾಡಿ 25 ವರ್ಷವಾಯಿತು, ನನಗೆ 2 ಮಕ್ಕಳು, ಮನೆ ಬಾಡಿಗೆ  1700 ರೂಪಾಯಿ. ನಮ್ಮ ಮನೆಯಲ್ಲಿ ದುಡಿಯುವವಳು ನಾನೊಬ್ಬಳೆ.

ಬೆಳಿಗ್ಗೆ 5.30ಕ್ಕೆ ಎದ್ದು  ಅಡುಗೆ ಮಾಡಿ, ನೀರು ಹಿಡಿದು, ಪಾತ್ರೆ ತೊಳೆದು, ಪೂಜೆ ಮಾಡಿ  ರೆಡಿ ಆಗಿ  8.15 ಕ್ಕೆ ಮನೆ ಬಿಟ್ಟರೆ ಬಸ್ ಹಿಡಿದು  9 ಗಂಟೆಗೆ ಫ್ಯಾಕ್ಟರಿ ತಲುಪುತ್ತೇನೆ. ಸಂಜೆ  5.30 ಕ್ಕೆ ಕೆಲಸ ಮುಗಿಸಿ  ಮನೆ ಕೆಲಸ ಮಾಡಲು ಹೋಗುತ್ತೇನೆ. ರಾತ್ರಿ ಮನೆಗೆ ಹೋಗಲು 10 ಗಂಟೆ ಆಗುತ್ತದೆ, ಮತ್ತೆ ಸ್ವಂತ ಮನೆ ಕೆಲಸ. ನನ್ನ ಮಗನಿಗೆ ಹುಷಾರಿಲ್ಲ. ಕಷ್ಟವಾದರೂ ಕೆಲಸವನ್ನು ಮಾಡಲೇಬೇಕು.'

* ಒಂದು ದಿನ ರಜೆ ಹಾಕಿದರೂ ಪಿ,ಎಂ. ಇಲ್ಲವೇ ಫ್ಲೋರ್ ಇನ್‌ಚಾರ್ಜ್ ಬರುವವರೆಗೂ ಗೇಟ್ ಹತ್ತಿರ ನಿಲ್ಲಿಸಿ `ಅಪಾಲಜಿ ಲೆಟರ್' ಬರೆಸಿಕೊಳ್ಳುತ್ತಾರೆ, ಬೇರೆ ಕೆಲಸ ಕೊಟ್ಟು ಪ್ರೊಡಕ್ಷನ್ ಕೇಳುತ್ತಾರೆ. ಪ್ರೊಡಕ್ಷನ್  ಕೊಡಲು ಆಗದಿದ್ದರೆ ಎಲ್ಲರ ಹತ್ತಿರ ಕರೆದುಕೊಂಡು ಹೋಗಿ ಬೈಯಿಸುತ್ತಾರೆ.

ಕತ್ತೆ, ಗೂಬೆ ಹೊಟ್ಟೆಗೆ ಏನು ತಿನ್ನುತ್ತೀರಾ ಎಂದು ಟೇಬಲ್ ಹತ್ತಿರ ನಿಲ್ಲಿಸಿ ಎಲ್ಲರ ಎದುರು ಹೀಯಾಳಿಸುತ್ತಾರೆ. ಭಾನುವಾರವೂ ಸಹ ಕೆಲಸ ಮಾಡಿಸಿಕೊಂಡು ಅವರಿಗೆ ಬೇಕಾದಾಗ ರಜೆ ಕೊಡುತ್ತಾರೆ..',  

* ಒಂದು ದಿನವೂ ರಜೆ ಹಾಕದೆ ಹೋದರೆ ನಮಗೆ 4100 ರಿಂದ 4300 ರೂಪಾಯಿ ಸಂಬಳ ಬರುತ್ತದೆ, ಮನೆ ಬಾಡಿಗೆ, ಕರೆಂಟ್ ಬಿಲ್, ನೀರಿನ ಬಿಲ್, ದಿನಸಿ, ಮಕ್ಕಳ ಸ್ಕೂಲ್ ಫಿೀಸ್ ಬಸ್ ಚಾರ್ಜ್‌ಗೆ ಸಾಕಾಗುವುದಿಲ್ಲ, ಈ ಸಂಬಳದಲ್ಲಿ ನಮ್ಮ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಿಸಲು ಆಗುತ್ತಿಲ್ಲ, ಒಳ್ಳೆಯ ಬಟ್ಟೆ, ಊಟವೂ ಸಾಧ್ಯವಾಗುವುದಿಲ್ಲ.  ಕಷ್ಟದಲ್ಲೇ ಹುಟ್ಟಿ ಕಷ್ಟದಲ್ಲೇ ಬೆಂದು ಸಾಯುತ್ತೇವೆ. ಸಂಬಳ ಸಾಕಾಗದೆ ಪ್ರತಿ ತಿಂಗಳು ಸಾಲದಲ್ಲಿ ಬೀಳುತ್ತೇವೆ. ಈ ಸಮಸ್ಯೆಗಳಿಗೆ ಪರಿಹಾರವೇ ಇಲ್ಲವೇ?..'

(ರಾಷ್ಟ್ರೀಯ ಜನ ನ್ಯಾಯಮಂಡಳಿ ಮುಂದೆ ಗಾರ್ಮೆಂಟ್ ಮಹಿಳಾ ಕಾರ್ಮಿಕರು ತೋಡಿಕೊಂಡ ಬವಣೆಯ ಕತೆಗಳು)

 

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.