ಗುರುವಾರ , ಜೂನ್ 24, 2021
29 °C
ನಗರ ಸಂಚಾರ

ಕಾರ್ಮಿಕರ ಆರೋಗ್ಯಕ್ಕೆ ಬೆಲೆ ಇಲ್ಲವೇ?

ಪ್ರಜಾವಾಣಿ ವಾರ್ತೆ/ಉ.ಮ.ಮಹೇಶ್‌ Updated:

ಅಕ್ಷರ ಗಾತ್ರ : | |

ಬೀದರ್‌: ಒಳ ಚರಂಡಿ, ತ್ಯಾಜ್ಯವನ್ನು ಬರಿ ಕೈನಿಂದ ಸ್ವಚ್ಛಗೊಳಿಸಬಾರದು; ಕಡ್ಡಾಯವಾಗಿ ಯಂತ್ರದಿಂದಲೇ ಸ್ವಚ್ಛಗೊಳಿಸಬೇಕು ಎನ್ನುತ್ತದೆ ನಿಯಮ. ಆದರೆ ನಿಯಮಗಳು ಕಡ್ಡಾಯವಾಗಿ ಜಾರಿಗೆ ಬರುವುದಿಲ್ಲ. ನಗರದ ಜನ ನಿಬಿಡ ಬಸವೇಶ್ವರ ವೃತ್ತದಲ್ಲಿಯೇ ಮೂರು ನಾಲ್ಕು ದಿನ ಸತತವಾಗಿ ಇಂಥ ಪ್ರಕರಣ ನಡೆದಿದ್ದು, ಅಧಿಕಾರಿಗಳ ಎಚ್ಚರಿಕೆಯ ನಡುವೆಯೂ  ಮುಂದುವರಿದಿದೆ ಎಂಬುದು ಗಮನಾರ್ಹ.ನಗರದಲ್ಲಿ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‌ಗೆ ಹೊಂದಿಕೊಂಡಿರುವ ಸ್ಥಳದಲ್ಲಿ ಒಳಚರಂಡಿಯ ಸ್ವಚ್ಛತಾ ಕಾರ್ಯ ಸತತ ನಾಲ್ಕು ದಿನ ನಡೆದಿದ್ದು, ಮೊದಲ ಎರಡು ದಿನ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ಇಲ್ಲಿ ನಾಗರಿಕರು ಹತ್ತಿರ ಹೋಗಲು ಯೋಚಿಸಬೇಕಾದ ವಾತಾವರಣದಲ್ಲಿ ಮೂರು ನಾಲ್ಕು ಕಾರ್ಮಿಕರು ಬರಿ ಕೈ ಮತ್ತು ಕಾಲಿನಲ್ಲಿ ಕೆಲಸ ಮಾಡುತ್ತಿದ್ದರು.ಹೀಗೆ ಕೆಲಸ ಮಾಡಿಸುವುದು ಅಮಾನವೀಯ ಎಂದು ಸುಪ್ರೀಂ ಕೋರ್ಟ್‌ ಕೂಡಾ ಅಭಿಪ್ರಾಯ ಪಟ್ಟಿದ್ದು, ನಗರ ಸ್ಥಳೀಯ ಸಂಸ್ಥೆಗಳು ಇದಕ್ಕೆ ಅವಕಾಶ ನೀಡಬಾರದು. ಕಡ್ಡಾಯವಾಗಿ ಯಂತ್ರದ ಮೂಲಕವೇ ಒಳಚರಂಡಿ ಸ್ವಚ್ಛಗೊಳಿಸಬೇಕು.  ಕಾರ್ಮಿಕರಿಗೆ ಕೈ ಗವುಸು ಮತ್ತು ಕಾಲಿಗೆ ಬೂಟ್ ಅನ್ನು ನೀಡಬೇಕು ಎಂದು ಸೂಚಿಸಿತ್ತು.ಪೂರಕವಾಗಿ ಬೀದರ್‌ ನಗರಸಭೆ ಕೂಡಾ ಈಚೆಗೆ ಈ ಸಂಬಂಧ ಪ್ರಕಟಣೆಯನ್ನು ಹೊರಡಿಸಿದ್ದು,  ಇಂಥ ಪ್ರಕರಣಗಳಲ್ಲಿ ಕಡ್ಡಾಯವಾಗಿ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿತ್ತು. ಈ ಕುರಿತು ಸಂಪರ್ಕಿಸಿದಾಗ ನಗರಸಭೆ ಆಯುಕ್ತ ಜಗದೀಶ್ ನಾಯಕ್, ‘ಈ ಪ್ರಕರಣ ತಮ್ಮ ಗಮನಕ್ಕೂ ಬಂದಿದೆ. ಸ್ಥಳಕ್ಕೆ ಭೇಟಿ ನೀಡಿ ಅದನ್ನು ನಿಲ್ಲಿಸಲು ಮತ್ತು ಮುಂಜಾ­ಗ್ರತೆ ಕ್ರಮ ಕೈಗೊಳ್ಳಲು ಸೂಚನೆ ನೀಡಲಾಗಿತ್ತು’ ಎಂದು ತಿಳಿಸಿದರು. ಆ ಕಾಮಗಾರಿಯನ್ನು ಖಾಸಗಿಯಾಗಿ ರಾಜ್ಯ ಹಣಕಾಸು ಯೋಜನೆಯಡಿ ಗುತ್ತಿಗೆ ನೀಡಲಾಗಿದ್ದು, ಗುತ್ತಿಗೆದಾರನ ಲೋಪದಿಂದಾಗಿ ಇದು ನಡೆದಿದೆ. ಗುತ್ತಿಗೆದಾರರರಿಗೆ ಎಚ್ಚರಿಕೆ ನೀಡ­ಲಾಗಿದೆ ಎಂದು ಹೇಳಿದರು.ಇನ್ನು ಮುಂದೆ ಇಂಥ ಪ್ರಕರಣಗಳು ವರದಿಯಾದರೆ, ಸಂಬಂಧಿ­ಸಿದವರ ವಿರುದ್ಧ ಮೊಕದ್ದಮೆ ದಾಖಲು ಮಾಡುವುದು ಸೇರಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.