ಗುರುವಾರ , ಅಕ್ಟೋಬರ್ 17, 2019
22 °C

ಕಾರ್ಮಿಕರ ಕೊರತೆ: ಮಂದಗತಿಯಲ್ಲಿ ಕಾಫಿ ಕೊಯ್ಲು

Published:
Updated:

ನಾಪೋಕ್ಲು: ಕೊಡಗಿನಲ್ಲಿ ಈಗ ಕಾಫಿಯ ಹಂಗಾಮು. ಪ್ರಮುಖ ವಾಣಿಜ್ಯ ಬೆಳೆಯಾದ ರೊಬಸ್ಟಾ ಕಾಫಿ ಕೊಯ್ಲಿಗೆ ಬಂದಿರುವ ಸಮಯ. ಹೆಚ್ಚಿನ ತೋಟಗಳಲ್ಲಿ ಉತ್ತಮ ಫಸಲು, ಕೈತುಂಬಾ ಕೆಲಸ. ಆದರೆ, ಕೆಲಸ ಮಾಡುವ ಜನರ ಕೊರತೆ ಎದ್ದು ಕಾಣುತ್ತಿದೆ.ಉತ್ತಮ ಫಸಲಿದ್ದರೂ, ಕಾಫಿಯ ತೋಟಗಳಲ್ಲಿ ಸಂಭ್ರಮವಿಲ್ಲ. ಬೆಳೆಗಾರರಲ್ಲಿ ಉತ್ಸಾಹವಿಲ್ಲ. ಕೂಲಿ ಕಾರ್ಮಿಕರ ಅಭಾವ ಕೊಡಗಿನ ಬೆಳೆಗಾರರನ್ನು ಕಂಗೆಡಿಸಿದೆ. ಕಾರ್ಮಿಕರ ಕೊರತೆ ನಡುವೆ ಕೊಯ್ಲು ಪೂರೈಸುವ ಬೃಹದಾಕಾರದ ಸಮಸ್ಯೆ ಮುಂದೆ ನಿಂತಿದೆ.ಈಚಿನ ವರ್ಷಗಳಲ್ಲಿ ತೋಟ-ಗದ್ದೆಗಳಲ್ಲಿ ದುಡಿಯುವ ಕೈಗಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಈ ವರ್ಷ ಬಹುತೇಕ ಕಾಫಿ ಬೆಳೆಗಾರರಿಗೆ ಕೆಲಸಗಾರರ ಅಭಾವದ ಬಿಸಿ ತೀವ್ರವಾಗಿ ತಟ್ಟಿದೆ. ತೋಟ ಸ್ವಚ್ಛಗೊಳಿಸುವ `ಹೆರತ~ ಕೆಲಸ ಸೇರಿದಂತೆ ಮಾಗಿದ ಹಣ್ಣು ಕುಯ್ದು ತರುವ ಕೆಲಸಕ್ಕೂ ಜನರಿಲ್ಲದೆ ಪರದಾಡುವಂತಾಗಿದೆ.ಸಾಮಾನ್ಯವಾಗಿ ಡಿಸೆಂಬರ್ ಕೊನೆಯವಾರದಿಂದ ಕಾಫಿ ಕೊಯ್ಲಿನ ಭರಾಟೆ ಆರಂಭ. ಜನವರಿಯಿಂದ ಫೆಬ್ರವರಿ ಅಂತ್ಯದವರೆಗೂ ಸಾವಿರಾರು ಕೂಲಿ ಕಾರ್ಮಿಕರು ತೋಟಗಳಲ್ಲಿ ಕಾಫಿ ಕೊಯ್ಲಿನಲ್ಲಿ ನಿರತರಾಗಿರುತ್ತಾರೆ. ಆದರೆ, ಈ ಬಾರಿ ಎಷ್ಟೋ ತೋಟಗಳಲ್ಲಿ ಹೆರತೆ ಕೆಲಸವೇ ಪೂರೈಸಿಲ್ಲ. ಕಾರ್ಮಿಕರ ಅಭಾವದಿಂದಾಗಿ ಕೊಯ್ಲು ನಿಧಾನಗತಿಯಲ್ಲಿ ಸಾಗುತ್ತಿದೆ. ಕೃಷಿ ಕೆಲಸಕ್ಕೆ ಜನ ಸಿಗುತ್ತಿಲ್ಲ ಎಂಬುದು ಸಾರ್ವತ್ರಿಕವಾಗಿ ಕೇಳಿ ಬರುತ್ತಿರುವ ಮಾತು.ಕೊಡಗಿನ ಪರಿಸ್ಥತಿ ಮತ್ತಷ್ಟು ಭಿನ್ನ. ಒಂದೆರಡು ಎಕರೆ ಕಾಫಿ ತೋಟ ಇದ್ದರೂ ಕೊಯ್ಲನ್ನು ಒಂದಿಬ್ಬರು ಮಾಡಿ ಮುಗಿಸುವಂತದ್ದಲ್ಲ. ಕಾಫಿ ಕೆಲಸಕ್ಕೆ ಕಾರ್ಮಿಕರು ಬೇಕೇ ಬೇಕು. ಕೊಡಗು ಜಿಲ್ಲೆಯೊಂದರಲ್ಲೇ ಎರಡು ಲಕ್ಷ ಹೆಕ್ಟೇರ್ ತೋಟಗಳಿವೆ. ದೊಡ್ಡ ಮತ್ತು ಸಣ್ಣ ತೋಟ ಸೇರಿದಂತೆ ಅಂದಾಜು 30,000 ಕಾರ್ಮಿಕರು ಜಿಲ್ಲೆಯಲ್ಲಿದ್ದಾರೆ. ಕೊಡಗಿನ ಹಳ್ಳಿಗಳಲ್ಲಿ ಕಾರ್ಮಿಕರ ಸಂಖ್ಯೆ ದಿನದಿಂದ ದಿನಕ್ಕೆ ಇಳಿಮುಖವಾಗುತ್ತಿದೆ.ಕೂಲಿ ಕಾರ್ಮಿಕರ ಅಭಾವದಿಂದ ತತ್ತರಿಸಿ ಹೋಗಿರುವ ಕಾಫಿ ಬೆಳೆಗಾರರು ಕೆಲಸಕ್ಕೆ ಬಂದವರಿಗೆ ತೋಟಗಳಲ್ಲಿ ರಾಜಾತಿಥ್ಯವನ್ನೇ ನೀಡುತ್ತಿದ್ದಾರೆ. ನಾಪೋಕ್ಲು ವ್ಯಾಪ್ತಿಯಲ್ಲಿ ಅಸ್ಸಾಂನಿಂದ ಬಂದ ಕಾರ್ಮಿಕರು ಈ ವರ್ಷ ತೋಟದ ಕೆಲಸ ನಿರ್ವಹಿಸುತ್ತಿದ್ದಾರೆ. ಕೂಲಿಕಾರರು ಕೇಳಿದಷ್ಟೂ ಕೊಟ್ಟು ಮಾಡಿದಷ್ಟೂ ಕೆಲಸಕ್ಕೆ ತೃಪ್ತಿಪಡಬೇಕಾಗಿದೆ.`ವರ್ಷಗಳ ಹಿಂದೆ ಪರಿಸ್ಥಿತಿ ಇಷ್ಟು  ಬಿಗಡಾಯಿಸಿರಲಿಲ್ಲ, ಕೃಷಿ ಕೆಲಸಕ್ಕೆ ಜನ ಸಾಕಷ್ಟು ಸಿಗುತ್ತಿದ್ದರು. ಹೊತ್ತಿಗೆ ಸರಿಯಾಗಿ ಕೆಲಸ ಆರಂಭವಾಗುತ್ತಿದ್ದರೆ ಸಂಜೆ 5ರವರೆಗೂ    ದುಡಿಯುತ್ತಿದ್ದರು. ಹೊತ್ತು ಮುಳುಗಿದ ಮೇಲೂ ಹೆಚ್ಚಿನ ಕೆಲಸವಿದ್ದರೆ ಕರೆದರೆ ಬರುವವರಿದ್ದರು. ಈಗ ಒಂಭತ್ತು ಗಂಟೆಗೆ ಕಾಫಿ ತೋಟಕ್ಕೆ ಕಾಲಿರಿಸಿದರೆ ಸಂಜೆ 3-4ಗಂಟೆಯ ವೇಳೆಗೆ ಕೆಲಸ ನಿಲ್ಲಿಸಿಬಿಡುತ್ತಾರೆ. ಎಲ್ಲಾ ನಷ್ಟವನ್ನು ಬೆಳೆಗಾರರೇ ಸಹಿಸಬೇಕಾಗಿದೆ~ ಎಂಬುದು ನಾಪೋಕ್ಲುವಿನ ಕಾಫಿ ಬೆಳೆಗಾರರೊಬ್ಬರ ಅಳಲು.ಕಾಫಿ ಕೊಯ್ಲಿಗೆ ಕಾರ್ಮಿಕರ ವೇತನದಲ್ಲಿ  ತೋಟದಿಂದ ತೋಟಕ್ಕೆ ಅಪಾರ ವ್ಯತ್ಯಾಸವಿದೆ. ಕೆಲವು ಬೆಳೆಗಾರರು ಕಾಫಿ ಕೊಯ್ಲಿಗೆ ಚೀಲದ ಲೆಕ್ಕ ನೀಡಿದರೆ   ಇನ್ನು ಕೆಲವು ಬೆಳೆಗಾರರು ಟನ್ ಲೆಕ್ಕದಲ್ಲಿ ನೀಡುತ್ತಾರೆ. ಕೆ.ಜಿ.ಗೆ ಇಂತಿಷ್ಟು ಎಂದು ಕಾಫಿ ಕೀಳುವ ವ್ಯವಸ್ಥೆಯೂ     ಇದೆ. ಹಣ್ಣು ಕೀಳುವ ಕೂಲಿಯ ಜತೆಗೆ ವಾಹನ ಬಾಡಿಗೆ    ಇನ್ನಿತರ ಖರ್ಚುಗಳನ್ನು ಬೆಳೆಗಾರರು ಭರಿಸುವಂತಾಗಿದೆ. ಕೂಲಿ ಕಾರ್ಮಿಕರ ಅಭಾವದಿಂದ ಕೆಲಸ ಪೂರೈಸಲಾಗದ ಕೆಲವೊಂದು ಬೆಳೆಗಾರರು ಇತ್ತೀಚೆಗೆ ಇಡೀ ತೋಟವನ್ನೇ ಗುತ್ತಿಗೆಗೆ ನೀಡುವ ವ್ಯವಸ್ಥೆಗೆ ಮೊರೆಹೋಗಿದ್ದಾರೆ. ಕಾರ್ಮಿಕರ ಸಮಸ್ಯೆಯಿಂದ ತತ್ತರಿಸಿರುವ ಬೆಳೆಗಾರರಿಗೆ ಈಗ ಹಣ್ಣಾಗುತ್ತಿರುವ ಕಾಫಿ ಹಣ್ಣನ್ನು ಕಿತ್ತು ಅಂಗಳಕ್ಕೆ ಸಾಗಿಸುವುದು ಸವಾಲಿನ ಪ್ರಶ್ನೆಯಾಗಿದೆ.

 

Post Comments (+)