ಗುರುವಾರ , ಮೇ 19, 2022
21 °C

ಕಾರ್ಮಿಕರ ಮುಷ್ಕರ: ಗಬ್ಬೆದ್ದು ನಾರುತ್ತಿರುವ ಪಟ್ಟಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬ್ಯಾಡಗಿ: ವೇತನ ಪರಿಷ್ಕರಿಸುವಂತೆ ಆಗ್ರಹಿಸಿ ಪುರಸಭೆಯ ಗುತ್ತಿಗೆ ಪೌರಕಾರ್ಮಿಕರು ಕಳೆದ ಒಂದು ವಾರದಿಂದ ಕೆಲಸ ಸ್ಥಗಿತಗೊಳಿಸಿದ ಹಿನ್ನೆಲೆಯಲ್ಲಿ ಪಟ್ಟಣದಲ್ಲಿ ಕಸದ ರಾಶಿ ತುಂಬಿಕೊಂಡಿದ್ದು, ಚರಂಡಿಗಳು ದುರ್ವಾಸನೆ ಬೀರುತ್ತಿವೆ.ಪಟ್ಟಣದಲ್ಲಿ ಇದುವರೆಗೆ ಶಂಕಿತ ಡೆಂಗೆ ಜ್ವರದಿಂದ ಇಬ್ಬರು ಬಾಲಕರು ಬಲಿಯಾಗಿದ್ದರೂ ಸ್ವಚ್ಛತೆಗೆ ಗಮನ ನೀಡಿದ ಸ್ಥಳೀಯ ಪುರಸಭೆ ಹಾಗೂ ತಾಲ್ಲೂಕು ಆಡಳಿತ ಕಣ್ಮುಚ್ಚಿ ಕುಳಿತಿದೆ ಎಂಬುದು ಸ್ಥಳೀಯರ ಆರೋಪ. ಕಳೆದ ಒಂದು ವಾರದಿಂದ ಪಟ್ಟಣದ ಬಡಾವಣೆಗಳಲ್ಲಿ ಶೇಕರಣೆಯಾಗಿರುವ ತ್ಯಾಜ್ಯ ವಿಲೇವಾರಿಯಾಗದೇ ಜನರಿಗೆ ತೀವ್ರ ಕಿರಿಕಿರಿಯನ್ನುಂಟು ಮಾಡುತ್ತಿದೆ.ಪುರಸಭೆಯ ನೈರ್ಮಲ್ಯ ನಿರ್ವಹಣೆಗೆ ಕಾಯಂ ಸಿಬ್ಬಂದಿ ನೇಮಕ ಮಾಡಿಕೊಳ್ಳಲು ಪೌರಾಡಳಿತ ಇಲಾಖೆ ಅನುಮತಿ ನೀಡದ ಹಿನ್ನೆಲೆಯಲ್ಲಿ ಹೊರ ಗುತ್ತಿಗೆಯಲ್ಲಿ ಪೌರಕಾರ್ಮಿಕರನ್ನು ನೇಮಕ ಮಾಡಿಕೊಳ್ಳಲಾಗಿದೆ. ಆದರೆ ಹೊರ ಗುತ್ತಿಗೆ ಪೌರಕಾರ್ಮಿಕರು ಸಮರ್ಪಕ ವೇತನ ಇಲ್ಲದೆ ಪರದಾಡುವಂತಾಗಿದ್ದು, ಇದರ ಪರಿಣಾಮ ಪಟ್ಟಣದಲ್ಲಿ ಸಾಂಕ್ರಾಮಿಕ ರೋಗ ಆವರಿಸುವ ಭೀತಿ ಎದುರಾಗಿದೆ. ಗುತ್ತಿಗೆದಾರ ಕಡಿಮೆ ವೇತನ ನೀಡುತ್ತಿದ್ದಾರೆ ಎಂಬುದು ಕಾರ್ಮಿಕರ ಆರೋಪ. ಹಿಂದಿನ ಗುತ್ತಿಗೆದಾರನ ಅವಧಿ ಮುಗಿದಿದ್ದರೂ ಅವರನ್ನೇ ಮುಂದುವರಿಸಿ ಗುತ್ತಿಗೆ ನೀಡಿರುವುದು ಅನುಮಾನಗಳಿಗೆ ಕಾರಣವಾಗಿದೆ ಎಂದು ಕುಮಾರ ಮಾಳಗಿ ಆರೋಪಿಸಿದ್ದಾರೆ.ಪ್ರಸ್ತುತ ನಿಯಮದಂತೆ ಗುತ್ತಿಗೆ ಪೌರಕಾರ್ಮಿಕರಿಗೆ ತಿಂಗಳಿಗೆ ರೂ 6080 ನೀಡಬೇಕಾಗಿದೆ. ಆದರೆ ಗುತ್ತಿಗೆದಾರನ ಕೈಗೊಂಬೆಯಂತೆ ವರ್ತಿಸುತ್ತಿರುವ ಪುರಸಭೆಯ ಅಧಿಕಾರಿಗಳು ಕಳೆದೆರಡು ವರ್ಷಗಳಿಂದ ವೇತನ ಪರಿಷ್ಕರಿಸದೆ ಮಾಸಿಕ ರೂ 4650 ವೇತನ ನಿಗದಿಗೊಳಿಸಲಾಗಿದೆ. ಆದರೆ ಗುತ್ತಿಗೆದಾರ ಮಾತ್ರ ಕಾರ್ಮಿಕರಿಗೆ ಕೇವಲ 4000 ನೀಡುತ್ತಿದ್ದಾರೆ. ಇದಕ್ಕೆ ಸಹಕರಿಸುತ್ತಿರುವ ಮುಖ್ಯಾಧಿಕಾರಿಯನ್ನು ಅಮಾನತ್ತುಗೊಳಿಸುವಂತೆ ಗುತ್ತಿಗೆ ಪೌರಕಾರ್ಮಿಕರ ಸಂಘದ ಅಧ್ಯಕ್ಷ ನಾಗರಾಜ ಚಿಕ್ಕಣ್ಣನವರ ಒತ್ತಾಯಿಸಿದ್ದಾರೆ.ಕಾರ್ಮಿಕ ಇಲಾಖೆಯ ನಿಯಮದಂತೆ ಪೌರಕಾರ್ಮಿಕರು ಪ್ರತಿದಿನ 8 ಗಂಟೆ ಕೆಲಸ ನಿರ್ವಹಿಸಬೇಕೆನ್ನುವ ನಿಯಮವಿದ್ದರೂ, ಗುತ್ತಿಗೆದಾರ ಮಾತ್ರ 10-12 ಗಂಟೆಗಳವರೆಗೆ ದುಡಿಸಿಕೊಳ್ಳುತ್ತಿದ್ದಾರೆ. ಆರೋಗ್ಯವಿಮೆ, ಭವಿಷ್ಯನಿಧಿ ಸೇರಿದಂತೆ ಇನ್ನಿತರ ಸೌಲಭ್ಯಗಳು ಪೌರಕಾರ್ಮಿಕರಿಗೆ ಸಿಗದೆ ಕೌಟುಂಬಿಕ ಭದ್ರತೆ ಇಲ್ಲದೆ ಅವರ ಕುಟುಂಬದ ಸದಸ್ಯರು ಅತಂತ್ರರಾಗಿದ್ದಾರೆ. ವಾರದಲ್ಲಿ ಒಂದು ದಿನ ರಜೆ ನೀಡಬೇಕು. ರಾಷ್ಟ್ರೀಯ ಹಬ್ಬಗಳು ಸೇರಿದಂತೆ ಇನ್ನಿತರ ರಜಾ ದಿನಗಳಲ್ಲಿ ಕೆಲಸ ನಿರ್ವಹಿಸುವ ಗುತ್ತಿಗೆ ಪೌರಕಾರ್ಮಿಕರಿಗೆ ಆ ದಿನದ ಎರಡು ಪಟ್ಟು ಹೆಚ್ಚು ವೇತನವನ್ನು ನೀಡಬೇಕೆನ್ನುವ ನಿಯಮ ಪಾಲನೆಯಾಗುತ್ತಿಲ್ಲ. ಹೊರ ಗುತ್ತಿಗೆ ಪೌರಕಾರ್ಮಿಕರ ಸಮಸ್ಯೆಯನ್ನು ಪರಿಹರಿಸುವಂತೆ ನಾಗರಾಜ ಚಿಕ್ಕಣ್ಣನವರ ಆಗ್ರಹಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.